ಒಂಟೆ ಮತ್ತು ನರಿ

ಒಂಟೆ ಮತ್ತು ನರಿ

ಒಂದು ದಟ್ಟಾರಣ್ಯದಲ್ಲಿ ಒಂದು ಒಂಟೆ ಮತ್ತು ನರಿ ಸ್ನೇಹಿತರಾಗಿದ್ದವು. ಇವುಗಳ ಸ್ನೇಹವು ಕಾಡಿನ ಇತರ ಪ್ರಾಣಿಗಳ ಅಸೂಯೆಗೆ ಕಾರಣವಾಗುವಷ್ಟು ಗಾಢವಾಗಿತ್ತು. ಇವೆರಡೂ ಒಬ್ಬರನ್ನೊಬ್ಬರು ಬಿಟ್ಟು ಎಲ್ಲೂ ಹೋಗುತ್ತಿರಲಿಲ್ಲ. ಆಹಾರವನ್ನು ಅರಸಿಕೊಂಡು ಇವುಗಳು ಜೊತೆಗೇ ಹೋಗಿ ಹಂಚಿಕೊಂಡು ತಿನ್ನುತ್ತಿದ್ದವು.

ಒಂದು ವರ್ಷ ಕಾಡಿನಲ್ಲಿ ಇವುಗಳಿಗೆ ತಿನ್ನಲು ಏನೂ ಸಿಗದಂತಹ ಪರಿಸ್ಥಿತಿ ಬಂದು ಪ್ರಾಣಿಗಳು ನಾಡಿನ ಕಡೆಗೆ ಆಹಾರ ಅರಸಿಕೊಂಡು ಹೋಗಲಾರಂಭಿಸಿದವು. ಮಿತ್ರರಾಗಿದ್ದ ಒಂಟೆ ಮತ್ತು ನರಿಯೂ ಆಹಾರವನ್ನು ಅರಸಿಕೊಂಡು ಕಾಡಿನ ಪಕ್ಕದಲ್ಲಿದ್ದ ಹೊಲಕ್ಕೆ ಹೋಗಲು ನಿರ್ಧಾರಿಸುತ್ತವೆ. ಆದರೆ ಕಾಡಿನಿಂದ ಹೊಲಕ್ಕೆ ಹೋಗಬೇಕಿದ್ದರೆ ಹೊಲದ ಸಮೀಪ ತುಂಬಿ ಹರಿಯುತ್ತಿದ್ದ ಗೋಮತೀ ನದಿಯನ್ನು ದಾಟಿ ಹೋಗಬೇಕಿತ್ತು. ಇದಕ್ಕೆ ಒಂಟೆಯು ನರಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿ ಅಲ್ಲಿನ ಹುಲುಸಾಗಿ ಬೆಳೆದಿದ್ದ ಕಬ್ಬಿನ ಗದ್ದೆಗೆ ನುಗ್ಗಿದವು.

ಕಬ್ಬಿನ ಗದ್ದೆಯಲ್ಲಿ ಒಂಟೆ ಮತ್ತು ನರಿ ಕಬ್ಬನ್ನು ತಿನ್ನಲಾರಂಭಿಸಿದವು. ಗಾತ್ರದಲ್ಲಿ ಸಣ್ಣದಾಗಿದ್ದ ನರಿಯ ಹೊಟ್ಟೆಯು ಬೇಗನೇ ತುಂಬಿದ್ದರಿಂದ, ಕೂಡಲೇ ಜೋರಾಗಿ ಊಳಿಡಲಾರಂಭಿಸಿತು. ಕಬ್ಬಿನ ಗದ್ದೆಗೆ ನರಿಗಳು ನುಗ್ಗಿವೆ ಎಂದು ತಿಳಿದ ರೈತರು ಕತ್ತಿ, ಬಡಿಗೆ ಮತ್ತು ಕಲ್ಲುಗಳನ್ನು ಹಿಡಿದು ಗದ್ದೆಯೆಡೆಗೆ ಓಡಿ ಬಂದರು. ಇದನ್ನು ನೋಡಿದ ನರಿಯು ಕಬ್ಬಿನ ನಡುವೆ ಅವಿತು ಕುಳಿತರೆ, ಗಾತ್ರದಲ್ಲಿ ಎತ್ತರವಾಗಿದ್ದ ಒಂಟೆಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ರೈತರಿಂದ ಸರಿಯಾಗಿ ದೊಣ್ಣೆಯೇಟು ತಿಂದು ನದಿಯ ಕಡೆಗೆ ಓಡಿತು.

ಒಂಟೆಯನ್ನು ಓಡಿಸಿದ ರೈತರು ತಮ್ಮ ಮನೆಗಳ ಕಡೆಗೆ ಸಾಗಿದ್ದನ್ನು ನೋಡಿದ ನರಿ ಕಬ್ಬಿನ ಹಿಂಡಿನಿಂದ ಹೊರಗೆ ಬಂದು ಒಂಟೆಯಣ್ಣಾ, ನಿನಗೆ ಬಹಳ ಏಟಾಯಿತೇ ಎಂದು ಕೇಳಿತು. ಅದಕ್ಕೆ ಹೌದೆಂದ ಒಂಟೆಯು, ನೀನೇಕೆ ಜೋರಾಗಿ ಊಳಿಟ್ಟೆ? ಎಂದು ನರಿಗೆ ಕೇಳಿತು. ಅದಕ್ಕೆ ನರಿಯು, ‘ಏನು ಮಾಡಲಿ ಒಂಟೆಯಣ್ಣಾ ನನಗೆ ಹೊಟ್ಟೆ ತುಂಬಿದ ಕೂಡಲೇ ಜೋರಾಗಿ ಊಳಿಡುವ ಕೆಟ್ಟ ಅಭ್ಯಾಸವೊಂದಿದೆ’ ಎಂದಿತು. ಇದನ್ನು ಕೇಳಿದ ಒಂಟೆಯು ಬೇಸರದಿಂದ ನರಿಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ನದಿಯನ್ನು ದಾಟಿಸಿತು. ಎರಡೂ ತಮ್ಮ ಕಾಡಿನೆಡೆಗೆ ಹೋದವು.

ಮಾರನೇ ದಿನ ಇವೆರಡೂ ಸೇರಿ ನದಿಯನ್ನು ದಾಟಿ ಪಕ್ಕದ ಹಳ್ಳಿಯ ಸೌತೆಕಾಯಿ ತೋಟಕ್ಕೆ ಲಗ್ಗೆಯಿಟ್ಟವು. ಈ ಬಾರಿ ಬಹಳ ವೇಗವಾಗಿ ಒಂದಷ್ಟು ಸೌತೆಕಾಯಿಯನ್ನು ತಿಂದ ಒಂಟೆಯು ಮೊದಲೇ ಹೋಗಿ ನದಿಯ ತೀರದಲ್ಲಿ ನಿಂತುಕೊಂಡಿತು. ಅಷ್ಟರಲ್ಲಿ ಹೊಟ್ಟೆ ತುಂಬಿದ ನರಿಯು ಮತ್ತೆ ಜೋರಾಗಿ ಊಳಿಟ್ಟಿತು. ನರಿಯ ಊಳಿನ ಸದ್ದನ್ನು ಕೇಳಿದ ರೈತರು ಹೊಲದೆಡೆಗೆ ದೊಣ್ಣೆ ಮತ್ತು ಕಲ್ಲುಗಳನ್ನೆತ್ತಿಕೊಂಡು ಬಂದರು. ಇದನ್ನು ನೋಡಿದ ನರಿಯು ನದಿಯ ಬಳಿ ನಿಂತಿದ್ದ ಒಂಟೆಯ ಕಡೆಗೆ ಓಡಿ ಒಂಟೆಯ ಬೆನ್ನೇರಿ ಕುಳಿತಿತು. ಒಂಟೆಯು ನಿಧಾನವಾಗಿ ನದಿಯನ್ನು ದಾಟಲಾರಂಭಿಸಿತು. ನರಿ ಮತ್ತು ಒಂಟೆ ನದಿಯಲ್ಲಿ ದಾಟುವುದನ್ನು ಕಂಡ ರೈತರು ತಮ್ಮ ತಮ್ಮ ಮನೆಗಳೆಡೆಗೆ ಹೋದರು. ನದಿಯ ಮಧ್ಯ ಭಾಗಕ್ಕೆ ತಲುಪಿದಾಗ ಒಂಟೆಯು, ‘ನರಿಯಣ್ಣಾ ನನಗೆ ಹೊಟ್ಟೆ ತುಂಬಿದ ಮೇಲೆ ನೀರಿನಲ್ಲಿ ಮುಳುಗುವ ಅಭ್ಯಾಸವಿದೆ. ಏನು ಮಾಡಲಿ?’ ಎಂದು ಎಂದು ನರಿಯಲ್ಲಿ ಕೇಳಿತು. ಒಂಟೆಯು ಪೂರ್ತಿಯಾಗಿ ನದಿಯಲ್ಲಿ ಮುಳುಗು ಹಾಕಿತು. ನರಿಯು ಮುಳುಗಿ ನೀರು ಕುಡಿದು ಅದರ ಪ್ರಾಣ ಹೋಗುವಷ್ಟರಲ್ಲಿ ಒಂಟೆಯು ನೀರಿನಿಂದ ಮೇಲೆ ಎದ್ದಿತು. ಇದರಿಂದ ಗಾಬರಿಗೊಂಡ ನರಿಯು, ಒಂಟೆಯಣ್ಣಾ ನನ್ನ ತಪ್ಪು ಅರಿವಾಯಿತು ನನ್ನ ದಯವಿಟ್ಟು ಕ್ಷಮಿಸು ಎಂದು ಒಂಟೆಯನ್ನು ಬೇಡಿಕೊಂಡಿತು. ಆಗ ಒಂಟೆಯು ನಗುತ್ತಾ ನರಿಯನ್ನು ದಡ ಮುಟ್ಟಿಸಿತು.

ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಉತ್ತಮ ಅಥವಾ ಕೆಟ್ಟ ಅಭ್ಯಾಸಗಳು ಇರಬಹುದು, ಆದರೆ ಈ ಅಭ್ಯಾಸಗಳು ಇತರರನ್ನು ಮತ್ತು ಒಂದು ವ್ಯವಸ್ಥೆಯನ್ನು ಎಂದೂ ಘಾಸಿಗೊಳಿಸಬಾರದು. ಸಮಯ, ಸಂದರ್ಭಗಳ ವಿವೇಚನೆ ಅತೀ ಅಗತ್ಯ.

ಸಂತೋಷ್ ರಾವ್ ಪೆರ್ಮುಡ

Related post

Leave a Reply

Your email address will not be published. Required fields are marked *