ಒಂದು ಆನೆಯ ಕಥೆ
ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನ ಸೇನೆಯಲ್ಲಿ ಸಾವಿರಾರು ಆನೆಗಳಿದ್ದವು. ಆದರಲ್ಲಿ ಒಂದು ಆನೆ ಮಾತ್ರ ರಾಜನಿಗೆ ಬಲು ಪ್ರಿಯ. ರಾಜನಿಗೆ ಏಕೆ ರಾಜ್ಯದ ಎಲ್ಲಾ ಜನರು ಅದನ್ನು ಇಷ್ಟಪಡುತ್ತಿದ್ದರು. ಅದರ ನಡೆ, ಗಾಂಭೀರ್ಯ, ಯುದ್ದ ಕೌಶಲ್ಯ, ವಿಧೇಯತೆ, ಶಕ್ತಿಗೆ ಹೆಸರಾಗಿತ್ತು.

ಯುದ್ಧದಲ್ಲಿ ಅಪ್ರತಿಮವಾಗಿ ಹೋರಾಡುತ್ತಿತ್ತು. ಹಲವಾರು ಯುದ್ಧಗಳಿಗೆ ಈ ಆನೆಯನ್ನು ಕಳಿಸಿತ್ತು. ಎಲ್ಲಾ ಯುದ್ಧಗಳಲ್ಲೂ ಈ ಆನೆ ಜಯಶಾಲಿಯಾಗೆಯೇ ಹಿಂದಿರುಗುತ್ತಿತ್ತು. ಸೋಲು ಎಂಬ ಮಾತೆ ಇರಲಿಲ್ಲ. ಎಲ್ಲರೂ ಹೆಚ್ಚಾಗಿ ಇಷ್ಟಪಡುತ್ತಿದ್ದ ಆನೆಯಾಗಿತ್ತು. ದಿನಗಳು ಉರುಳುತ್ತಾ ಬಂತು, ಆನೆಗೆ ದಿನ ಕಳೆದಂತೆಲ್ಲಾ ವಯಸ್ಸಾಗುತ್ತಾ ಬಂತು. ಹಾಗಾಗಿ ರಾಜ ಇನ್ನು ಮೇಲೆ ಈ ಆನೆಯನ್ನು ಯುದ್ಧಕ್ಕೆ ಕಳಿಸಬಾರದೆಂದು ನಿರ್ಧರಿಸಿದ. ಯುದ್ಧಕ್ಕೆ ಹೋಗದಿದ್ದರು ಆನೆ ಸೇನೆಯ ಒಂದು ಭಾಗವಾಗಿ ರಾಜ್ಯದಲ್ಲಿಯೇ ಉಳಿದಿತ್ತು. ಏಕೆಂದರೆ ಆ ಆನೆಯನ್ನು ನೋಡಿದಾಗಲೆಲ್ಲಾ ರಾಜನಿಗೆ ಏನೊ ಒಂದು ರೀತಿಯ ಸಂತೋಷವಾಗುತ್ತಿತ್ತು ಮನಸ್ಸಿಗೆ ನೆಮ್ಮದಿ ಎನ್ನಿಸುತ್ತಿತ್ತು. ಹೀಗೆ ದಿನಗಳು ಕಳೆಯುತ್ತಿದ್ದವು. ಆನೆ ರಾಜ್ಯದಲ್ಲೆಲ್ಲ ನಿರ್ಭಯವಾಗಿ ಜನರ ನಡುವೆಯೇ ಓಡಾಡುತ್ತಿತ್ತು. ರಾಜ ಗಾಂಭೀರ್ಯದಿಂದ ರಾಜಬೀಧಿಯಲ್ಲಿ ಅದು ನಡೆಯುತ್ತಿದ್ದರೆ ಎಂತವರು ಆ ಆನೆಯೆಡೆಗೆ ಆಕರ್ಷಿತರಾಗುತ್ತಿದ್ದರು.
ಒಮ್ಮೆ ಅದು ಹೀಗೆ ಓಡಾಡುತ್ತಾ ರಾಜ್ಯದ ಕಾಡಿನಂಚಿನಲ್ಲಿ ವಿಹರಿಸುತ್ತಿತ್ತು. ಅದಕ್ಕೆ ಬಾಯಾರಿಕೆಯಾಗಿದ್ದ ಕಾರಣ ಒಂದು ಕೆರೆಗೆ ನೀರು ಕುಡಿಯಲೆಂದು ಹೋಯಿತು, ಆದರೆ ಕೆರೆಯಲ್ಲಿ ಉಸುಕು ತುಂಬಿದ್ದ ಕಾರಣ ಅದರ ಕಾಲುಗಳು ಹೂತು ಹೋದವು. ಏಷ್ಟೇ ಪ್ರಯತ್ನ ಪಟ್ಟರು ಮೇಲೆಳಲು ಸಾಧ್ಯವಾಗಲಿಲ್ಲ. ಕೊನೆಗೆ ಕೂಗುತ್ತಾ ನರಳಾಡತೊಡಗಿತು. ಇದರ ಕೂಗನ್ನು ಕೇಳಿ ಊರಿನಿಂದ ಪ್ರಜೆಗಳೆಲ್ಲಾ ಬರತೊಡಗಿದರು. ಆನೆ ತೊಂದರೆಯಲ್ಲಿ ಸಿಲ್ಲುಕಿಕೊಂಡಿದೆ ಎಂದು ಎಲ್ಲಾರಿಗೂ ಗೊತ್ತಾಯಿತು. ಇದು ರಾಜನ ಅತ್ಯಂತ ಪ್ರೀತಿಯ ಆನೆಯಾಗಿತ್ತು. ಸುದ್ದಿ ರಾಜನಿಗೂ ತಲುಪಿತು. ರಾಜ ಹಾಗೂ ಅತನ ಪರಿವಾರ ಕೆರೆಯ ಬಳಿ ಬಂದಿರು. ಸೈನಿಕರೆಲ್ಲರೂ ಸೇರಿ ಎಷ್ಟೇ ಪ್ರಯತ್ನ ಪಟ್ಟರೂ ಆನೆಯನ್ನು ಮೇಲೇಳಿಸಲು ಆಗಲಿಲ್ಲ. ಅಷ್ಟು ದೊಡ್ಡ ಆನೆಯನ್ನು ಎತ್ತುವುದು ಸುಲಭದ ಮಾತಾಗಿರಲಿಲ್ಲ. ಆನೆ ಸ್ವಲ್ಪ ಸ್ವಲ್ಪವೇ ಮಣ್ಣಿನ ಉಸುಕಿನಲ್ಲಿ ಮುಳುಗುತ್ತಿತ್ತು.
ಅದೇ ಹೊತ್ತಿನಲ್ಲಿ ಹಿಂದೆ ರಾಜನ ಧರ್ಬಾರಿನಲ್ಲಿದ್ದ ಹಳೆಯ ನಿವೃತ್ತ ಮಂತ್ರಿಯೊಬ್ಬರು ಆ ಹಾದಿಯಾಗಿಯೇ ಹೋಗುತ್ತಿದ್ದರು. ಅವನಿಗೂ ಈ ಆನೆಯ ಬಗ್ಗೆ ಗೊತ್ತಿತ್ತು. ರಾಜನಿಂದ ವಿಚಾರ ತಿಳಿದ ಮಂತ್ರಿ ಒಂದು ಸಲಹೆ ಕೊಟ್ಟ, ಅದೇನೆಂದರೆ ಕೆರೆಯ ಸುತ್ತ ನಗಾರಿ ಕಹಳೆಯನ್ನು ಊದುವಂತೆ ಸೂಚಿಸಿದ. ಅಲ್ಲಿ ನೆರದಿದ್ದವರಿಗೆಲ್ಲಾ ಆಶ್ಚರ್ಯವಾರ್ಯಿತು, ರಾಜನಿಗೂ ಕೂಡಾ, ಇದು ಒಂದು ಪ್ರಯತ್ನ ಮಾಡಿಯೇ ಬಿಡೋಣಾ ಎನ್ನಿಸಿ ರಾಜ ತಕ್ಷಣ ಕೆರೆಯ ಸುತ್ತಾ ಕಹಳೆ ನಗಾರಿ ಬಾರಿಸುವಂತೆ ಸೈನಿಕರಿಗೆ ತಿಳಿಸಿದ. ತಕ್ಷಣವೇ ಸೈನಿಕರು ಕಾರ್ಯ ಪ್ರವತ್ತರಾಗಿ ಕಹಳೆ ನಗಾರಿ ತಂದು ಬಾರಿಸಲಾರಂಭಿಸಿದರು. ಅರೆರೆ! ಏನಾಶ್ಚರ್ಯ ನಗಾರಿ, ಕಹಳೆಯ ಸದ್ದನ್ನು ಕೇಳುತ್ತಲೇ ಆನೆಯಲ್ಲಿ ಸ್ವಲ್ಪ ಬದಲಾವಣೆಗಳು ಕಂಡವು, ಮೇಲೇಳುವ ಪ್ರಯತ್ನ ಜಾಸ್ತಿಯಾಯಿತು. ನೋಡ ನೋಡುತ್ತಿದ್ದಂತೆ ತನ್ನ ಬಲವನೆಲ್ಲಾ ಹಾಕಿ ಹೆಜ್ಜೆಯಿಟ್ಟು ಆನೆ ಕೆರೆಯಿಂದ ತಾನೆ ತಾನಾಗಿ ಹೊರಬಂದಿತು. ಅಲ್ಲಿ ನೆರೆದಿದ್ದವರೆಲ್ಲರೂ ಆಶ್ಚರ್ಯವಾಯಿತು ಜೊತೆಗೆ ನಿಟ್ಟುಸಿರುಬಿಟ್ಟರು. ತನ್ನ ಪ್ರೀತಿಯ ಆನೆ ಪ್ರಾಣಾಪಾಯದಿಂದ ಪಾರಾಗಿದ್ದನ್ನು ಕಂಡು ರಾಜ ಹಾಗೂ ಆತನ ಪರಿವಾರ ಸಂತೋಷಗೊಂಡರು. ಆನೆ ಶಾರೀರಿಕವಾಗಿ ಸದೃಡವಾಗೆ ಇತ್ತು, ಆದರೆ ಅದಕ್ಕೆ ಮೇಲೆಳಲು ಸ್ವಲ್ಪ ಸ್ಪೂರ್ತಿ ಬೇಕಿತ್ತು, ಆ ಸ್ಪೂರ್ತಿ ಅದಕ್ಕೆ ನಗಾರಿ ಹಾಗೂ ಕಹಳೆಯ ಶಭ್ದ ಕೇಳುತ್ತಲೇ ಬಂದಿತು.
ನಮ್ಮ ಜೀವನದಲ್ಲೂ ಹಾಗೆಯೇ ಸಧಾ ಸ್ಪೂರ್ತಿಯ ಸೆಲೆ ನಮ್ಮ ಜೀವನದಲ್ಲಿ ತುಂಬಿರುಲು ಅದಷ್ಟು ನಮ್ಮ ಮನಸ್ಸಿನಲ್ಲಿ ಧನಾತ್ಮಕ ಯೋಚನಲಾಹರಿಗಳೆಂಬ ಕಹಳೆ ನಗಾರಿಗಳು ಬಾರಿಸುತ್ತಿರಬೇಕು, ಋಣಾತ್ಮಕ ಯೋಚನೆಗಳು ನಮ್ಮ ಮೇಲೆ ಸವಾರಿ ಮಾಡದೇ ಇರಲಿ. ಕಳೆದ ಒಂದು ವರ್ಷದಿಂದ ಪ್ರಪಂಚ ಸಂದಿಗ್ದ ಪರಿಸ್ಥಿತಿಯಲ್ಲಿ ಕಾಲ ನೂಕುತ್ತಿದೆ. ಇಂದಿನ ಸಂಧಿಗ್ಧ ಪರಿಸ್ಥಿತಿಯಲ್ಲಿ ಕೆಟ್ಟ ಯೋಚನೆಗಳು ನಮ್ಮತ್ತ ಹಾಗೂ ನಮ್ಮ ಸುತ್ತ ಇರುವ ಜನರತ್ತ ಬರದಂತೆ ನೋಡಿಕೊಳ್ಳಬೇಕು. ಧನಾತ್ಮಕ ಯೋಚನಾ ಲಹರಿಗಳೆಂಬ ನಗಾರಿ, ಕಹಳೆಗಳು ನಮ್ಮ ಮನದಲ್ಲಿ ಭಾರಿಸಲಿ, ಉತ್ತಮ ಆರೋಗ್ಯ, ಸುಖ, ಸಂತೋಷ ಸಂಭ್ರಮಿಸೋಣ, ನಮ್ಮ ಸುತ್ತಲೂ ಅನೇಕ ಸಂಭ್ರಮಿಸುವ ವಿಷಯಗಳಿವೆ ಅಂತಹ ವಿಷಯಗಳಿಗೆ ಸಾಕ್ಷಿಯಾಗೋಣ. ನಮ್ಮ ಸುತ್ತ ಅನೇಕ ಸಕಾರಾತ್ಮಕವಾದ ಘಟನೆಗಳು ನಡೆಯುತ್ತಿದೆ. ನಾವು ಎದುರಿಸುತ್ತಿರುವ ಕಷ್ಟದ ಸಮಯ ಹಾಗೂ ಅದು ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಯೋಚಿಸುವುದನ್ನು ಬಿಡೋಣಾ, ನಕಾರಾತ್ಮಕ ವಿಷಯಗಳಿಂದ ದೂರವಿರೋಣ ಅಲ್ಲವೇ?

ಡಾ. ಪ್ರಕಾಶ್ ಕೆ ನಾಡಿಗ್