‘ಒನ್ ವುಮೆನ್ ಶೋ’ ಮಾಡಬೇಕೆಂಬ ರಂಗಕರ್ಮಿ ಮಾಧುರಿ ಕೆ ಶಿವಣಗಿ

ರಂಗಭೂಮಿಯು ಒಮ್ಮೆ ಸೆಳೆಯಿತೆಂದರೆ ಸಾಕು. ಅದರಿಂದ ಹೊರ ಬರಲು ಸಾಧ್ಯವೇ ಇಲ್ಲಾ. ಕುಟುಂಬದಲ್ಲಿನ ಒಬ್ಬ ವ್ಯಕ್ತಿಯು ಈ ರಂಗಕ್ಕೆ ಪ್ರವೇಶ ಕೊಟ್ಟರೆ ಆ ವ್ಯಕ್ತಿಯ ಮುಂದಿನ ಎರಡು ಮೂರು ಪೀಳಿಗೆಯೂ ಇದರಲ್ಲಿ ಸಕ್ರಿಯರಾಗುತ್ತಾರೆ. ಅದು ಖಚಿತ. ರಂಗಕ್ಕೆ ಅಷ್ಟು ಸೆಳೆತವಿದೆ!

ಈ ನಿಟ್ಟಿನಲ್ಲಿ ಮಹಿಳಾ ರಂಗಕರ್ಮಿ ಮಾಧುರಿ ಕೆ ಶಿವಣಗಿ ಅವರೂ ಇಂತಹ ಸೆಳೆತಕ್ಕೆ ಒಳಗಾಗಿದ್ದಾರೆ. ಓದಿದ್ದೇ ಬೇರೆ ವೃತ್ತಿಯೇ ಬೇರೆ. ಆದರೆ ತಮ್ಮ ತಂದೆಯಲ್ಲಿದ್ದ ರಂಗದ ನಂಟು ಮತ್ತೆ ಈಕೆಯಲ್ಲಿ ತುಡಿತವನ್ನು ಉಂಟು ಮಾಡಿ ಈ ರಂಗದ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿದೆ. ರಂಗದ ಹಿಂದೆ ಹಾಗೂ ರಂಗದ ಮೇಲೆ ಹಲವಾರು ವರ್ಷಗಳು ಕೆಲಸ ಮಾಡಿದ್ದರೂ ತೃಪ್ತವಾಗದೇ ರಂಗಭೂಮಿಯ ವಿಷಯದಲ್ಲೇ ಸ್ನಾತಕೋತ್ತರವನ್ನೂ ಓದುತ್ತಿದ್ದು ರಂಗಭೂಮಿಯ ಇತಿಹಾಸವನ್ನೂ ಅದರಲ್ಲಿನ ಹಲವು ಮಜಲುಗಳನ್ನು ಆಳಕ್ಕೆ ಹೋಗಿ ಕಲಿಯುತ್ತಿದ್ದಾರೆ. ಸಂದರ್ಶನ ರೂಪದಲ್ಲಿಈಕೆಯ ರಂಗ ಚಟುವಟಿಕೆಯ ಒಂದು ವಿಹಂಗಮ ನೋಟವು ಹೀಗಿದೆ.

ಮಾಧುರಿ ಕೆ ಶಿವಣಗಿ

ಈ ರಂಗಭೂಮಿಯ ಸೆಳೆತವು ತಮ್ಮಲ್ಲಿ ಮೂಡಲು ಕಾರಣರಾರು?

ನನ್ನ ತಂದೆ ಕೆ ವಿ ಶಿವಣಗಿ ಅವರು. ಅವರು ಕಿರ್ಲೋಸರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಂಸ್ಥೆಯು ಇವರ ಈ ರಂಗಭೂಮಿಯ ಪ್ರೀತಿಯನ್ನು ಪೋಷಿಸಿತ್ತು. ಅವುಗಳಿಂದ ಹಲವಾರು ಪ್ರತಿಭೆಗಳು ಹೊರ ಹೊಮ್ಮಲು ಸಹಕಾರಿಯಾಯ್ತು. ಹಲವಾರು ಕಲಾವಿದರು ನಮ್ಮ ಮನೆಗೆ ಬರುತ್ತಿದ್ದರು. ಮನೆಯೇ ಕಲಾ ಚಟುವಟಿಕೆಯ ಕೇಂದ್ರವಾಗಿತ್ತು. ಅದೇ ನನ್ನಲ್ಲಿ ಈ ರಂಗವನ್ನು ಆತುಕೊಳ್ಳಲು ಅನುಮಾಡಿಕೊಟ್ಟಿತ್ತು.

ಕೆ ವಿ ಶಿವಣಗಿ

ಬಾಲ್ಯದಲ್ಲೇ ಬಣ್ಣ ಹಚ್ಚಿದಿರಾ ಹೇಗೆ?

  • ಅಪ್ಪನ ನಾಟಕಗಳನ್ನು ನೋಡುತ್ತಿದ್ದೆನಾದರೂ ನಾಟಕದಲ್ಲಿ ಅಭಿನಯಿಸಿದ್ದು ಇರಲಿಲ್ಲಾ. ರಾಜ್ಯಮಟ್ಟದಲ್ಲಿ ಥ್ರೋಬಾಲ್, ಶಾಟ್‍ಪುಟ್, ಡಿಸ್ಕಸ್ ಥ್ರೋ ಹೀಗೆ ಎಲ್ಲಾ ಆಟಗಳಲ್ಲೂ ಭಾಗವಹಿಸುತ್ತಿದ್ದೆ. ಭಾವಗೀತೆಗಳನ್ನು ಕಲಿಯುತ್ತಿದ್ದೆ ಹಾಗೂ ಶಾಲೆಯಲ್ಲಿ ಹಾಡುತ್ತಿದ್ದೆ ಆದರೆ ನಾಟಕದಲ್ಲೇನು ಮಾಡಿರಲಿಲ್ಲ. ಬೆಂಗಳೂರಿನ ವಿದ್ಯಾವರ್ಧಕ ಸಂಘದ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿದ್ದಾಗ ‘ಭಾರತ ಯಾತ್ರಾ ಕೇಂದ್ರ’ದವರು ಬಂದು ರಂಗ ತರಬೇತಿಯನ್ನು ಕೊಟ್ಟು ನಾಟಕಗಳನ್ನು ಮಾಡಿಸುತ್ತಿದ್ದರು. ಆ ದಿನಗಳಲ್ಲಿಯೇ ನಾಟಕದಲ್ಲಿ ಅಭಿನಯಿಸಬೇಕೆಂಬ ಆಸಕ್ತಿ ಬಂದದ್ದು. ಅಲ್ಲಿಂದ ಈ ನಾಟಕದ ಗೀಳು ಅಂಟಿಕೊಂಡಿತು. ‘ಮಾರೀಚನ ಬಂಧುಗಳು’ ನಾಟಕಕ್ಕೆ ಬ್ಯಾಕ್ ಸ್ಟೇಜ್ ವರ್ಕ್ ಮಾಡಿದ್ದೆ. ಆನಂತರ ವರ್ಷದಲ್ಲಿ ‘ನೀಗಿಕೊಂಡ ಸಂಸ’ ಅಭಿನಯಿಸಲು ಅವಕಾಶ ಸಿಕ್ತು. ಅಲ್ಲಿಂದ ನನ್ನ ರಂಗ ನಂಟು ಇಲ್ಲಿಯವರೆಗೂ ಕರೆತಂದಿದೆ.

ಮತ್ತೆ ರಂಗಭೂಮಿಯಲ್ಲಿ ಹೇಗೆಲ್ಲಾ ಅವಕಾಶ ಸಿಕ್ತು?

  • ಡಿಗ್ರಿ ಓದುವಾಗಲೂ ರಂಗದ ನಂಟು ಹೆಚ್ಚಾಯ್ತು. ಆಗ ಸುಧೀಂದ್ರ ಶರ್ಮ ಅವರ ‘ಆಷಾಡದ ಒಂದು ದಿನ‘ ನಾಟಕಕ್ಕೆ ಬ್ಯಾಕ್ ಸ್ಟೇಜ್ ವರ್ಕ್ ಮಾಡಿದ್ದೆ. ಮಕ್ಕಳ ರಂಗಭೂಮಿಯ ತಜ್ಞೆ ಶಾಂತಾ ನಾಗರಾಜ್ ಅವರು ‘ಅಧ್ವಾನ ಪುರ‘ ನಾಟಕ ಮಾಡಿಸಿದ್ದರು. ಪೆದ್ದು ರಾಜನ ಪಾತ್ರದಲ್ಲಿ ಮಾಡಿದ್ದೆ ಆ ಪಾತ್ರಕ್ಕೆ ನನಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಿತ್ತು. ಮೊದಲ ಬಾರಿಗೆ ನಟನೆಗೆ ಪ್ರಶಸ್ತಿ ಸಿಕ್ಕ ಪಾತ್ರವದು. ಕೃಷ್ಣಮೂರ್ತಿ ಕವತ್ತಾರ್ ಅವರ ‘ಗೌಡ್ರಮಲ್ಲಿ‘ ನಾಟಕದಲ್ಲಿ ಯಕ್ಷಗಾನ ವೇಷದಲ್ಲಿದ್ದ ಯಮನ ಪಾತ್ರದಲ್ಲಿ ಮಾಡಿದ್ದೆ. ಆಗ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ ಸಾರ್ ಅವರು ನಮಗೆ ಪ್ರಾಂಶುಪಾಲರಾಗಿದ್ದರು, ಉತ್ತಮ ಪ್ರೋತ್ಸಾಹ ಕೊಡುತ್ತಿದ್ದರು. ಹಲವಾರು ಶಿಬಿರಗಳನ್ನು ನಡೆಸುತ್ತಿದ್ದರು.

ನಿರಂತರವಾಗಿ ನಾಟಕಗಳಲ್ಲಿ ಅಭಿನಯ ಮಾಡಲು ಸಾದ್ಯವಾಗಿದ್ದು ಹೇಗೆ?

  • ಹೀಗೆ ಕಾಲೇಜು ದಿನಗಳಲ್ಲಿ ಅಭಿನಯಿಸಲು ಪ್ರಾರಂಭವಾದ ಮೇಲೆ ನನ್ನ ತಂದೆಗೂ ಒಳಗೊಳಗೆ ಖುಷಿ ಇತ್ತು. ತನ್ನ ಆಸಕ್ತಿಯು ತನ್ನ ಮಗಳಲ್ಲಿ ಬಂತಲ್ಲ ಎಂದು. ಅವರು ನಿವೃತ್ತಿಯಾದ ನಂತರವೂ ಸಂಸ್ಥೆಯ ರಂಗ ಚಟುವಟಿಕೆಯನ್ನು ಹೊರಗಿದ್ದು ಪ್ರೋತ್ಸಾಹಿಸುತ್ತಿದ್ದರು. ಹೀಗಿದ್ದ ಸಂದರ್ಭದಲ್ಲಿ ಒಮ್ಮೆ ನಾಟಕ ಸ್ಪರ್ಧೆಗಾಗಿ ತಾಲೀಮು ನಡೆಸುವಾಗ ಸ್ತ್ರೀ ಪಾತ್ರ ಮಾಡುವವರು ಬೇಕಿತ್ತು. ಅದರಲ್ಲೂ ಉತ್ತರಕರ್ನಾಟಕದ ಭಾಷೆ ಮಾತಾಡುವ ಸ್ತ್ರೀ ಪಾತ್ರ ಮಾಡಲು ಒಬ್ಬರು ಬೇಕಿತ್ತು. ನಾವು ಮೂಲತಃ ಉತ್ತರಕರ್ನಾಟಕದವರಾಗಿದ್ದು ಅಲ್ಲಿನ ಭಾಷೆಯನ್ನು ನಮ್ಮ ಮನೆಯಲ್ಲಿ ಮಾತಾಡುವುದನ್ನು ಗಮನಿಸಿದ್ದ ಹಾಗೂ ನಾನೂ ನಾಟಕಗಳಲ್ಲಿ ನಟಿಸಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಪಡೆದದ್ದು ಗೊತ್ತಿದ್ದರಿಂದ ಆ ಪಾತ್ರವನ್ನು ನಾನು ಮಾಡಬಹುದೆಂದು ನನ್ನ ತಂದೆಯ ಹತ್ರ ಬಂದು ಸತ್ಯ ಅಂಕಲ್ ಹಾಗೂ ವೆಂಕಟಾದ್ರಿ ಸಾರ್ ಬಂದು ಕೇಳಿದರು. ನನ್ನ ತಂದೆಯೂ ಪಾತ್ರ ಮಾಡಲು ಹೇಳಿದರು. ಆದರೆ ನನಗೆ ನಟಿಸಲು ಇಷ್ಟವಿರಲಿಲ್ಲ. ಅಪ್ಪನಿಗೆ ಇಷ್ಟವಿದ್ದ ಕಾರಣ ಒಪ್ಪಿದೆ. ಅಲ್ಲಿಂದ ಆರಂಭವಾಗಿದ್ದು ಎಲ್ಲಾ ಕಾರ್ಖಾನೆಗಳ ಅಂತರ ನಾಟಕ ಸ್ಪರ್ಧೆಗಳಲ್ಲಿ ನಟಿಸಲು ದಾರಿ ಮಾಡಿಕೊಟ್ಟಿತ್ತು. ಆಗ ಸ್ತ್ರೀ ಪಾತ್ರ ಮಾಡುವವರು ಕಡಿಮೆಯಿದ್ದರು. ಅಲ್ಲದೇ ನನಗೆ ನಟಿಸುವ ಆಸಕ್ತಿ ಇದ್ದ ಕಾರಣ ಎಲ್ಲವೂ ಕೂಡಿ ಬಂತು. ಆಗಿನ ಕಿರ್ಲೋಸ್ಕರ್ ತಂಡದ ಮೂರೂ ಯುನಿಟ್‍ಗಳಲ್ಲೂ ನಟಿಸುವ ಅವಕಾಶಗಳು ಸಿಕ್ಕಿತು. ನಮ್ಮ ತಂದೆಗೆ ಅಲ್ಲಿ ‘ಸಾಹೇಬ್ರು‘ ಎಂಬ ಒಳ್ಳೆಯ ಹೆಸರಿತ್ತು. ಅದು ನನಗೆ ಪ್ಲಸ್ ಆಯ್ತು.

ರಂಗ ಪ್ರಯೋಗದ ನಾಟಕಗಳಲ್ಲಿ ತೊಡಗಿದ್ದು ಹಾಗೆ?

  • ಬೆಳಕು ತಜ್ಞರಾಗಿದ್ದ ಪ್ರಭಾಕರ್ ಬಾಬು ಅವರು ನನಗೆ ರಾಜೇಂದ್ರ ಕಾರಂತರನ್ನು ಪರಿಚಯಿಸಿದರು. ಅವರ ‘ಸಂಜೆ ಹಾಡು‘ ನಾಟಕದಲ್ಲಿ ಪಾತ್ರ ಮಾಡ್ದೆ. ಇದೇ ಮೊದಲು ಹೊರಗಿನ ತಂಡಕ್ಕೆ ನಟಿಸಿದ್ದು. ನಾಗರಾಜ ಮೂರ್ತಿ ಅವರ ಸಲಹೆಯಂತೆ ಆರ್ಗನೈಜರ್ ಆಗಿ ಕೆಲಸ ಮಾಡಿದೆ. ಭಾರತ ಯಾತ್ರಾ ಕೇಂದ್ರದಲ್ಲಿ ನಟಿಸಿದೆ. ಪ್ರಯೋಗ ರಂಗದಲ್ಲಿ ನಟಿಸಿದೆ, ಅಲ್ಲದೇ ರಿಪ್ಲೇಸ್ ಆರ್ಟಿಸ್ಟ್ ಆಗಿ ಕೂಡ ನಟಿಸಿದ್ದೀನಿ. ಬ್ಯಾಕ್ ಸ್ಟೇಜ್ ವರ್ಕ್‍ಗಳನ್ನೂ ಮಾಡಿದ್ದೀನಿ. ಮಂಟೇಸ್ವಾಮಿಯಂತೂ ನೂರಾರು ಪ್ರದರ್ಶನಗಳನ್ನು ಕಂಡಿತ್ತು. ವಾಲ್ಟರ್ ಡಿಸೋಜ ನಿರ್ದೇಶನದ ‘ಮಹಿಪತ ಕ್ವಾಣನ ತಂಬ್ಗಿ‘ ನಾಟಕದಲ್ಲಿ ನಟಿಸಿದ್ದೆ. ನಾಗೇಂದ್ರ ಶಾ ನಿರ್ದೇಶನದಲ್ಲಿ ‘ನಮ್ಮ ನಿಮ್ಮೊಳಗೊಬ್ಬ‘ದಲ್ಲಿ ಬ್ಯಾಕ್ ಸ್ಟೇಜ್ ಹಾಗೂ ನಟನೆ ಎರಡೂ ಮಾಡಿದ್ದೀನಿ. ಸುನೇತ್ರಾ ಪಂಡಿತ್, ಪವನ್ ಹೀಗೆ ಹಲವರ ನಿರ್ದೇಶನಗಳಲ್ಲೂ ಮಾಡಿದ್ದೀನಿ. ರಾಜೇಂದ್ರ ಕಾರಂತರ ಚಿತ್ತಾರದಲ್ಲಿ ಹಲವಾರು ನಾಟಕಗಳಲ್ಲಿ ನಟಿಸಿದೆ. ಕಲಾಗಂಗೋತ್ರಿ ತಂಡದಲ್ಲಿ ನಟಿಸಿದ್ದೀನಿ. ಹೀಗೆ ಬೆಂಗಳೂರಿನ ಸಾಕಷ್ಟು ತಂಡಗಳಲ್ಲಿ ನಟಿಸಿದ್ದೀನಿ.

ಎಂ.ಕಾಮ್ ಓದಿ ಕೆಲಸ ಮಾಡುತ್ತಿದ್ದರೂ ಇಷ್ಟೆಲ್ಲಾ ಹೇಗೆ ಸಾಧ್ಯವಾಯ್ತು?

  • ಆಸಕ್ತಿಯೆ ಮುಖ್ಯ. ರಂಗದ ಚಟುವಟಿಕೆಯ ಸೆಳೆತವಷ್ಟೇ. ಮನೆಯಲ್ಲೂ ಪ್ರೋತ್ಸಾಹವಿತ್ತು. ಇಷ್ಟವಿದ್ದ ಕಾರಣ ಕಷ್ಟ ಎನಿಸುವುದಿಲ್ಲ ಅಲ್ವಾ? ನಟನೆಯೇ ಅಲ್ಲದೇ ನಾಟಕ ನಿರ್ದೇಶನವನ್ನೇನಾದರು ಮಾಡಿದ್ರಾ?
  • ಸ್ವಲ್ಪ ಧೈರ್ಯ ಬಂದ ಮೇಲೆ ನಿರ್ದೇಶನವನ್ನೂ ಮಾಡಿದೆ. ಕಾರಂತರ ‘ನಮ್ಮ ನಿಮ್ಮೊಳಗೊಬ್ಬ’ ಹಾಗೂ ‘ಗಂಗಾವರಣ ‘ನಾಟಕಗಳನ್ನು ನಿರ್ದೇಶಿಸಿದೆ.

ಇಲ್ಲಿಯವರೆಗೆ ನಟಿಸಿದ ಪಾತ್ರಗಳಲ್ಲಿ ಯಾವ ಪಾತ್ರ ಇಷ್ಟವಾಗಿದೆ, ಕಾಡಿದೆ?

  • ಸುಮಾರು ವರ್ಷಗಳ ಹಿಂದೆ ನಾಗರಾಜ ಮೂರ್ತಿ ನಿರ್ದೇಶನದಲ್ಲಿ ಲಂಕೇಶರ ‘ಟಿ ಪ್ರಸನ್ನನ ಗೃಹಸ್ಥಾಶ್ರಮ‘ ನಾಟಕದ ಲಕ್ಷ್ಮೀ ಪಾತ್ರ, ಪ್ರಸನ್ನನ ಹೆಂಡತಿ ಪಾತ್ರದಲ್ಲಿ ನಟಿಸಿದ್ದೆ. ಅದನ್ನೆ ಮತ್ತೆ ಇತ್ತೀಚಿಗೆ ಜಗದೀಶ್ ಜಾಲ ಅವರ ನಿರ್ದೇಶನದಲ್ಲಿ ಅದೇ ಲಕ್ಷ್ಮೀ ಪಾತ್ರದಲ್ಲೇ ನಟಿಸಿದ್ದೆ. ಆಗ ತಿಳಿಯದಿದ್ದ ಪಾತ್ರದ ಆಳ ಇತ್ತೀಚಿಗೆ ಮತ್ತೆ ನಟಿಸಿದಾಗ ಅದರ ಆಯಾಮವೇ ಬೇರೆಯಾಗಿತ್ತು. ಹೀಗೆ ಒಂದೇ ಪಾತ್ರವು ನಮ್ಮಲ್ಲಿ ಹೇಗೆ ಬದಲಾವಣೆಯನ್ನು ತರುತ್ತೆ ಎಂಬುದು ಅರ್ಥವಾಯ್ತು. ಹಲವಾರು ಪಾತ್ರಗಳನ್ನು ಮಾಡಿದ ಮೇಲೆ ಈ ಪಾತ್ರವು ವಿಭಿನ್ನವಾದ ಅನುಭವ ಕೊಟ್ಟಿದೆ. ಮತ್ತೊಂದು ಚಾಲೆಂಜಿಗ್ ಪಾತ್ರವೆಂದರೆ ನಾಗೇಂದ್ರ ಶಾ ಅವರ ‘ಬಣ್ಣದ ರಾಣಿ‘ ನಾಟಕದಲ್ಲಿ ನಟಿಸಿದ್ದು. ಅದರಲ್ಲಿ ವೃತ್ತಿ ರಂಗಭೂಮಿಯ ದಿಗ್ಗಜರಾದ ಪ್ರತಿಭಾ ನಾರಾಯಣ್ ನಟಿಸಿದ್ದರು. ಆ ಮಹಾನ್ ನಟಿಯ ಎದುರು ನೆಗೆಟೀವ್ ಶೇಡ್‍ನಲ್ಲಿ ನಟಿಸಬೇಕಿತ್ತು. ನನಗೆ ಹೇಗೆಲ್ಲಾ ನಟಿಸಬೇಕೆಂದು ಹೇಳಿಕೊಟ್ಟಿದ್ದರು. ಮೂರು ಪ್ರದರ್ಶನಗಳಾದವು. ಅವರೊಂದಿಗೆ ಪಾತ್ರ ಮಾಡಿದ್ದು ಮರೆಯಾಗದು. ಇದೇ ವರ್ಷದ ಮಾರ್ಚ್‍ನಲ್ಲಿ ಡಾ ರಾಮಕೃಷ್ಣಯ್ಯ ಅವರು ‘ಈಡಿಪಸ್‘ ನಾಟಕ ಮಾಡಿಸಿದ್ದರು. ಅದರಲ್ಲಿ ಕುರುಡನ ಪಾತ್ರ ಹಾಗೂ ದಾಸಿಯ ಪಾತ್ರ, ಪುರುಷ ಹಾಗೂ ಸ್ತ್ರೀ ಪಾತ್ರಗಳೆರಡನ್ನೂ ಮಾಡಿದ್ದೆ ಎರಡೂ ವಿಭಿನ್ನವಾದವೂ ಚಾಲೆಂಜಿಂಗ್ ಆಗಿದ್ದವು. ಧ್ವನಿಯ ಏರಿತಗಳಿಗೂ ಸಾಕಷ್ಟು ಅವಕಾಶವಿದ್ದ ಪಾತ್ರಗಳವು.
  • ಅಲ್ಲದೇ ಎಚ್‍ ಆರ್ ಎಮ್ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೆ. ಅಲ್ಲಿನ ಜಿ ಎಸ್ ಲಕ್ಷ್ಮೀ ಪ್ರಸಾದ್ ಅವರೇ ಇದರ ರುವಾರಿ. ‘ಸಾನೆಟ್ ಲುಮೇನಾರ್’ ಎಂಬ ಶೀರ್ಷಿಕೆಯಲ್ಲಿ ಇಡೀ ಭಾರತದ ಪ್ರಮುಖ ಸ್ಥಳಗಳಲ್ಲಿ ಅವರ ಸಂಸ್ಥೆಯಲ್ಲಿ 1996ರಿಂದ ಈ ವರ್ಷದವರೆಗೂ ಕೆಲಸ ಮಾಡಿದ್ದೆ. ಸ್ಕಿಟ್‍ಗಳಲ್ಲಿ ಹಲವಾರು ಪಾತ್ರ ಮಾಡಿದ್ದ ಆ ಅನುಭವ ಅದ್ಭುತ. ದಾಕ್ಷಾಯಿಣಿ ಭಟ್ ಅವರ ‘ಅಭಿಯಾನ‘ ನಾಟಕದಲ್ಲಿ ಇತ್ತೀಚಿಗೆ ನಾಟಕ ಮಾಡಿದ್ದೆ. ಮೂರೇ ದಿನಗಳಲ್ಲಿ ತಾಲೀಮು ನಡೆಸಿ ಅಭಿನಯಿಸಿದ್ದೆ. ದಾಕ್ಷಾಯಿಣಿ ಭಟ್ ಅವರೇ ಪೂರ್ಣ ಪ್ರಮಾಣದಲ್ಲಿ ಹೇಳಿಕೊಟ್ಟು ಮಾಡಿಸಿದ್ದರು. ಇದು ಕೂಡ ನನಗೆ ಹೊಸ ಅನುಭವ ನೀಡಿದ ಪಾತ್ರ. ತುಳು ನಾಟಕಗಳಲ್ಲೂ ಕೆಲಸ ಮಾಡಿದ್ದೇನೆ. ಮುದ್ರಾಡಿ ಊರಲ್ಲಿ ನಾಟಕ ಪ್ರದರ್ಶನ ಮಾಡಿದ್ದೆವು. ಮರಾಠಿ ನಾಟಕಗಳೊಂದಿಗೆ ಸಂಪರ್ಕವಿದೆ. ಅನುವಾದಗಳಲ್ಲಿ ಕೆಲಸ ಮಾಡಿದ್ದೂ ಹೊಸ ಅನುಭವ.

ಜಯಶ್ರೀ ಅವರ ನಾಟಕದಲ್ಲಿ ನಟಿಸಿದ್ದೀರಾ?

  • ಅದೊಂದು ಕನಸು, ಅದೇನು ಇಲ್ಲಿಯವರೆಗೂ ಅದು ಆಗಿಲ್ಲ. ರಂಗಭೂಮಿಯಲ್ಲಿ ದೊಡ್ಡ ನಕ್ಷತ್ರ ಅವರೊಂದಿಗೆ ಅಭಿನಯಿಸಬೇಕೆಂಬ ಆಸೆ ಇದ್ದೇ ಇದೆ. ಕಾಯುತ್ತೇನೆ.

ಏನಾದರೂ ಹೊಸ ಪ್ರಯೋಗವನ್ನು ಮಾಡಬೇಕೆಂಬ ಆಸೆಯಿದೆಯೇ?

  • ಏಕವ್ಯಕ್ತಿ ನಾಟಕ ಮಾಡಬೇಕೆಂಬ ಆಸೆಯಿದೆ. ಅದರಲ್ಲೂ ಕೃಷ್ಣಮೂರ್ತಿ ಕವತ್ತಾರ್, ಶಶಿಧರ್ ಭಾರಿಘಾಟ್ ಹಾಗೂ ನಾಗೇಂದ್ರ ಶಾ ಅವರ ನಿರ್ದೇಶನಗಳಲ್ಲಿ ಈ ಪ್ರಯೋಗ ಮಾಡಬೇಕಿದೆ. ‘ಹಿಂಡಿಭಾ‘ ಹಾಗೂ ‘ಭಾನುಮತಿ‘ ಪಾತ್ರಗಳನ್ನು ಮಾಡಬೇಕೆಂಬ ಬಯಕೆಯಿದೆ. ನೋಡೋಣ ಕಾದು ನೋಡಬೇಕಿದೆ.

ತುಂಕೂರ್ ಸಂಕೇತ್

Related post

8 Comments

  • Thank you to Gurudatta sir & the publishers

  • Glad to know your journey from the beginning. Well done all these years. Wishing you more and more laurels, including mono drama.

  • I knew very little about your professional journey Madhuri, although we r friends since long. May you accomplish your mono acting drama very soon and scale greater heights in your theatre journey. All the best Dear 👍👍🤗

  • ಲೇಕನ ಚನ್ನಾಗಿ ಮೂಡಿಬಂದಿದೆ
    ಮುಂದಿನ ದಾರಿ ಇನ್ನಷ್ಟು ಸಂತೋಷ ಹಾಗು ಯಶಸ್ಸುಗಳನ್ನು ತರಲಿ
    ಒಳಿತಾಗಲಿ ಮಾಧುರಿ
    ಶುಭಾಶಯಗಳು💐👍

    ದನ್ಯವಾದಗಳು
    ತುಂಕೂರ್ ಸಂಕೇತ್ ಸರ್

  • Very glad to know your journey iin the field that you have chosen and the success you have achieved..I am sure you will get many more awards &earn Name &Fame…Wishing you all the best &success in your Master’s studies & also PhD..Best wishes from Vinumama..

  • Very nice write up Madhuri .. wish you all the best for your dreams ,👍

  • ಅಭಿನಂದನೆಗಳು ಮಾಧುರಿ.
    ನಿಮ್ಮ ರಂಗಭೂಮಿಯ ಪಯಣ ಓದಿ
    ಸಂತೋಷವಾಯಿತು. ನಿಮ್ಮ ಎಲ್ಲಾ ರಂಗಭೂಮಿಯ ಕನಸುಗಳು ನನಸಾಗಲಿ.

  • Excellent Madhuri, Wonderful journey of yours in theatre field is very interesting and inspiring. Stay blessed always with a meaningful life. Wishing you all the best in all your endeavours.

Leave a Reply

Your email address will not be published. Required fields are marked *