ಒಲವಿನ ನೋಟದುಯ್ಯಾಲೆ
ಸವಿಕಂಗಳ ನೋಟವು ಒಂದಾಗಿರಲು
ಅಂಕುರಿಸಿತು ಒಲವಿನ ಸೆಲೆ!
ಜೀವಭಾವಗಳು ಜತೆಯಲಿ ಮಿಡಿದಿರಲು..
ಅನುಭಾವದಲಿ ಕಂಡಿದೆ ನೆಲೆ!!
ಕಾಡುವಾ ಸಂಪ್ರೀತಿಯ ಸೆಳೆತಕೆ
ಭಾವತರಂಗಗಳ ನಿತ್ಯ ನರ್ತನ..!
ಮೂಡುವಾ ಭಾವದ ಅಗ್ಗಿಷ್ಟಿಕೆಗೆ..
ಪ್ರೀತಿಯಲೆಯ ಪನ್ನೀರ ಸಿಂಚನ!!
ಸುಪ್ತಮನದ ಸಂತಸದೊಲುಮೆಗೆ
ಮನದಂಗಳದಿ ಬಣ್ಣಗಳ ಚಿತ್ತಾರ!
ಅಪ್ಪಳಿಸುವ ಅನುರಾಗದಲೆಗೆ..
ಮಿಡಿದ ಹೃದಯವಾಗಿದೆ ಹಗುರ!!
ಸರಿಸಾಟಿ ಜಗದಲಿ ಯಾವುದಿದೆ
ಬಳ್ಳಿ ಮರವನು ಅಪ್ಪುವ ರೀತಿಗೆ..!
ಸಂಕಟದಿ ನೊಂದ ಜೀವವರಳಿದೆ..
ದೊರೆತಾಗ ಜನ್ಮದ ಪ್ರೀತಿಗೆ ಅದರ ನೀತಿಗೆ!!
ಸುಮನಾ ರಮಾನಂದ