ಒಲವಿನ ಮಜಲುಗಳು
ಬಾನಂಗಣದಿ ಮುಳುಗುತಾ
ಹೊಳೆವ ನೇಸರನ ಬಣ್ಣದಲಿ
ಕಣ್ಕೋರೈಸುವ ಕಾಮನಬಿಲ್ಲಿನಲಿ
ಕಂಡೆ ನಿನ್ನ ಒಲವಿನ ರಂಗು!!
ನೀಲಾಂಬರದ ಮೋಡಗಳು
ಕರಗುತಾ ಸುರಿದ ವರ್ಷಧಾರೆಯಲಿ
ಅರಳುತಿಹ ಮಲ್ಲಿಗೆಯ ಘಮಲಲಿ
ಸವಿದೆ ನಿನ್ನ ನೋಟದ ಗುಂಗು!!
ಕಡಲಕಿನಾರೆಯ ದಾರಿಯುದ್ದಕೂ
ಬಂಡೆಗಪ್ಪಳಿಸಿಹ ಅಲೆಅಲೆಗಳಲೂ
ಮರಳಲಿ ಮೂಡಿಹ ಬೆರಳ ಚಿತ್ತಾರದಲೂ
ಅರಿತೆ ನಿನ್ನ ಭಾವದ ರಂಗು!!
ಮುಗಿಲೆತ್ತರಕೇರಿಹ ಮರದಲೂ
ಬುವಿಯಾಳಕಿಳಿದಿಹ ಬೇರುಗಳಲೂ
ಗಾಳಿಗದುರುವ ತರುಲತೆಗಳಲೂ
ಕಂಡೆ ನಿನ್ನದೇ ಪ್ರೀತಿಯ ಗುಂಗು!!
ನಿತ್ಯ ಮಿಡಿಯುವ ಮನಸಲೂ
ಸತ್ಯ ಅಂತರಾಳದ ಕನಸಲೂ
ಅರಿತೆ ನಿನ್ನ ಆಸರೆಯ ರಂಗು
ಬೇಕಿಲ್ಲ ಅದಕೆ ಯಾರ ಹಂಗು!!
ಸುಮನಾ ರಮಾನಂದ