ಓಡಿ ಸಾಗುವ ಬದುಕು
ಕಣ್ ಬಿಡುವ ಮುಂಚೆಯೇ
ಕಲಿಯಬೇಕೋಡುವುದ
ದಿನನಿತ್ಯ ಕಣ್ಮುಂದೆ ಓಡು ಬದುಕು.
ಗುರಿಗಮ್ಯಗಳನೆಲ್ಲ ಬದಿಗಿಟ್ಟು ಸಾಗುತಿದೆ
ಗಂತವ್ಯದೆಡೆಗೆಮ್ಮ ಹೆಜ್ಜೆ ಮುಲುಕು.
ನಡಿಗೆಯೋ, ಓಟವೋ, ಬಂಡಿಯೋ, ವಾಹನವೊ
ಗಡಿಬಿಡಿಯ ಬಾಳಿನಲಿ ಅರಿಯಲಾರೆ
ಕಂಡದ್ದು ಕಂಡಂತೆ ಕಾಣ್ಕೆಯನು ಕಾಣಲದು
ಅಂದಿಗಂದಿಗೆ ಸುರಿಯೊ ಬೆವರಧಾರೆ.
ದುಡಿವವಗೆ ಕಾಲ ದೇಶಗಳ ಗಡಿ ಇಲ್ಲವೈ
ಮಡಿವತನಕವು ದಿನವು ದುಡಿಯಬೇಕು
ಕಾಲದಾ ಜೊತೆಯಲ್ಲಿ ಓಡಲಿಕ್ಕಾಗದಿರೆ
ಓಡುವಾ ಕಾಲ್ಗಳಡಿ ಮಡಿಯಬೇಕು.
ಕಾಲಕ್ಕೆ ತಕ್ಕಂತೆ ಓಟದಾ ಆಟವನು
ಬದಲಿಸುತ ಬಣ್ಣವನು ಓತಿಯಂತೆ
ಬದುಕಲೇ ಬೇಕಲ್ಲ ಸಾವು ಬರುವಾ ತನಕ
ಜೀತಕ್ಕೆ ತುತ್ತಾದ ತೊತ್ತಿನಂತೆ
ಅದೆ ಹಗಲು ಅದೆ ಇರುಳು ಅದೆ ಚಂದ್ರ ಅದೆ ತಾರೆ
ನೋವನುಣ್ಣುವ ಜನರು ಅವರೆ ಎಲ್ಲ
ನಮ್ಮ ಅನ್ನವ ನಾವು ಗಳಿಸಿಕೊಂಡರೆ ಅದುವೆ
ಸಾರ್ಥಕದ ಬದುಕಣ್ಣ ಸಿಹಿಯ ಬೆಲ್ಲ.
ತನಾಶಿ