ಓರ್ಕಾ – ಕೊಲೆಗಾರ ತಿಮಿಂಗಿಲ

ಓರ್ಕಾ – ಕೊಲೆಗಾರ ತಿಮಿಂಗಿಲ

ಡಾಲ್ಫಿನ್ ಜಾತಿಗೆ ಸೇರಿದ ಸಮುದ್ರದಲ್ಲಿನ ಪರಭಕ್ಷಕಗಳ ಪೈಕಿ ಓರ್ಕಾ ತಿಮಿಂಗಿಲಗಳು ಅಗ್ರಪರಭಕ್ಷಕಗಳು ( ಅಪೆಕ್ಸ್ ಪ್ರಿಡೇಟರ್ ). ಕಿಲ್ಲರ್ ವೇಲ್ಸ್ ಎಂದು ಕರೆಯುವ ಈ ತಿಮಿಂಗಿಲಗಳು 6 ರಿಂದ 8 mt ಉದ್ದ , 3500 ಯಿಂದ 5500 ಸಾವಿರ ಕೇಜಿ ತೂಗುತ್ತವೆ. ಇವು ಡಾಲ್ಫಿನ್ ಗಳು. ಎಲ್ಲಾ ಡಾಲ್ಫಿನ್ ಗಳು ತಿಮಿಂಗಿಲಗಳೆ, ಎಲ್ಲಾ ತಿಮಿಂಗಿಲಗಳು ಡಾಲ್ಫಿನ್ ಗಳಲ್ಲ.

ತಿಮಿಂಗಿಲಗಳನ್ನ (Cetacea) ಅನೇಕ ಕುಟುಂಬಗಳಲ್ಲಿ ವಿಭಾಗಿಸಿದ್ದಾರೆ. ಅವುಗಳಲ್ಲಿ Delphinidae ಎನ್ನುವುದು ಡಾಲ್ಫಿನ್ ಗಳ ಕುಟುಂಬ. ಡಾಲ್ಫಿನ್ ಗಳಿಗೂ ತಿಮಿಂಗಿಲಗಳಿಗೂ ತೀರಾ ಹತ್ತಿರದ ಸಂಬಂದವಿದೆ. ಸಮುದ್ರದಲ್ಲಿ ಸಂಚರಿಸುವ ನಾವಿಕರು ಇವು ತಿಮಿಂಗಿಲಗಳನ್ನ ಬೇಟೆಯಾಡುವುದನ್ನ ನೋಡಿ ಇವನ್ನ ಕಿಲ್ಲರ್ ವ್ಹೇಲ್ಸ್ ಎಂದು ಕರೆದರಾದ್ದರಿಂದ ಇವಕ್ಕೆ ಆ ಹೆಸರು ಬಂದಿದೆ.

ಈ ಓರ್ಕಾಗಳು ದೃವ ಸಾಗರಗಳಿಂದ ಹಿಡಿದು ಸಮಭಾಜಕ ವೃತ್ತದ ಎಲ್ಲಾ ಸಾಗರಗಳಲ್ಲಿ ವಾಸಿಸುತ್ತವೆ. ಮೀನು, ಪೆಂಗ್ವಿನ್‌‌, ಸೀಲ್ಸ್ , ಸ್ಕ್ವೀಡ್ , ಸೀಬರ್ಡ್, ಸಮುದ್ರಸಿಂಹ, ವಾಲರೂಸ್, ಸೇರಿದಂತೆ ನೀಲಿ ಮತ್ತು ಸ್ಪರ್ಮ್ ವ್ಹೇಲಗಳನ್ನ ಬೆನ್ನುಹತ್ತಿ ಬೇಟೆಯಾಡಿ ತಮ್ಮ ನಾಲ್ಕು ಇಂಚಿನ ಹಲ್ಲುಗಳಿಂದ ಸಿಗಿದು ತಿನ್ನುತ್ತವೆ. 30 ರಿಂದ 40 ರ ಗುಂಪಿನಲ್ಲಿ ವಾಸಿಸುವ ಇವು ಗಂಟೆಗೆ 38 km ವೇಗದಲ್ಲಿ ಈಜುತ್ತವೆ. ಬೇರೆ ತಿಮಿಂಗಿಲಗಳಂತೆ ಇವು ವಲಸೆ ಹೋಗುವುದಿಲ್ಲ‌, ಆಹಾರಕ್ಕಾಗಿ ದಿನಕ್ಕೆ 30 ರಿಂದ 40 km ಸಂಚರಿಸುತ್ತವೆ. ತಮ್ಮ ತಲೆಯ ಮುಂಬಾಗದಿಂದ ಬಲವಾದ ಅಲ್ಟ್ರಾಸಾನಿಕ್ ಕ್ಲಿಕ್ ಶಬ್ದ ಹೊರಡಿಸಿ ಎಕೋಲೊಕೇಶನ್ ಮುಖಾಂತರ, ಪರಸ್ಪರ ಸಂಪರ್ಕಿಸುತ್ತಾ ಭೇಟೆಯ ಆಕಾರ ಗಾತ್ರ, ದೂರವನ್ನ ಗ್ರಹಿಸುತ್ತವೆ. ಸಹಜ ನಿಸರ್ಗದಲ್ಲಿ 50 ರಿಂದ 80 ವರ್ಷ ಬದುಕುತ್ತವೆ.

17 ತಿಂಗಳವರೆಗೆ ಗರ್ಭದರಿಸುವ ಹೆಣ್ಣು ಓರ್ಕಾ ಐದು ವರ್ಷಕ್ಕೊಮ್ಮೆ ಒಂದು ಮರಿ ಹಾಕಿ ಎರಡು ವರ್ಷಗಳವರೆಗೆ ಪೋಷಿಸುತ್ತದೆ. ಮೆನೋಪಾಸ್ ನಂತರ ಹೆಣ್ಣು ಓರ್ಕಾ ಗುಂಪಿನ ಮುಂದಾಳತ್ವವನ್ನ ವಹಿಸುತ್ತದೆ. ಇವುಗಳ ಮಿದುಳು 15 pounds ( 7.5 kg) ಗಳಷ್ಟು ಬಾರವಿದ್ದು ಮಾನವರ ಮಿದುಳಿನ ಐದುಪಟ್ಟು ದೊಡ್ಡದಿದೆ. ಇವು ನೋಡಲು ಬಾಟಲ್ನೋಜ್ ಡಾಲ್ಫಿನ್ ( Bottlenose dolphin ) ಗಳನ್ನ ಹೋಲುತ್ತವೆ. ಹೊಟ್ಟೆ ಮತ್ತು ಎದೆಯ ಬಾಗ ಬಿಳುಪಾಗಿದ್ದು ತಲೆ ಮತ್ತು ಬೆನ್ನಿನ ಬಾಗವು ನಸುಗಪ್ಪು ಅಥವಾ ಕಪ್ಪು ವರ್ಣದಿಂದ ಕೂಡಿದೆ. ಪ್ರತಿಯೊಂದು ಓರ್ಕಾ ತನ್ನ ಡಾರ್ಸಲ್ ಫಿನ್ ಹತ್ತಿರ ತನ್ನದೇ ಆದ ಪ್ರತ್ಯೇಕ ಚಿನ್ನೆಯನ್ನ ಹೊಂದಿರುತ್ತದೆ. ಸಾಗರ ಜೀವ ವಿಜ್ಞಾನಿಗಳು (Marine biologist ) ಆ ಚಿನ್ನೆಯನ್ನ ಚಿತ್ರೀಕರಿಸಿ ಇವುಗಳಿಗೆ ಪ್ರಥ್ಯೇಕ ಸಂಖ್ಯೆಗಳನ್ನು ಕೊಟ್ಟು ಗುರುತಿಸುತ್ತಾರೆ. ಸಾಗರ ಜೀವವಿಜ್ಞಾನಿಗಳು ಇವುಗಳ ಮಿದುಳಿನ ಬಗ್ಗೆ ಅಭ್ಯಸಿಸುತ್ತಿದ್ದಾರೆ.

ಇವು ಭೇಟೆಯಾಡುವುದು ನಮಗೆ ಚೂರು ಕ್ರೂರವೆನಿಸಬಹುದು, ಆದರೆ ಅದು ಅವುಗಳ ಸ್ವಭಾವ. ಇವು ಸಹ ಭೂಮಿಯ ಮೇಲಿನ ಹುಲಿ ಸಿಂಹಗಳಂತೆ ಭೇಟೆಯಾಡುತ್ತವೆ. ಅಪೆಕ್ಸ್ ಪ್ರಿಡೇಟರ್ಗಳು ಜೀವಿಗಳನ್ನ ಸಮತೋಲನದಲ್ಲಿಡಲು ಪ್ರಕೃತಿ ತನ್ನಷ್ಟಕ್ಕೆ ತಾನೇ ಏರ್ಪಡಿಸಿಕೊಂಡಿರುವ ವ್ಯವಸ್ಥೆ.

ಮನುಷ್ಯ ಇವುಗಳ ಊಟದ ಮೆನುವಿನಲ್ಲಿಲ್ಲ, ಇವು ಮನುಷ್ಯರ ಮಾಂಸವನ್ನು ಇಷ್ಟಪಡುವುದಿಲ್ಲ. ತಾಯಿ ಓರ್ಕಾ ಬೇಟೆಯಾಡಲು ಕಲಿಸಿದ ಪ್ರಾಣಿಗಳನ್ನ ಮಾತ್ರವೇ ಇವು ಭೇಟೆಯಾಡಿ ಭಕ್ಷಿಸುತ್ತವೆ. ಇವುಗಳ ತಾಯಿ ಮನುಷ್ಯರನ್ನ ಬೇಟೆಯಾಡುವದನ್ನ ಕಲಿಸುವುದಿಲ್ಲ. ಇದುವರೆಗೂ ಅವಾಗಿಯೇ ಮಾನವರ ಮೇಲೆ ದಾಳಿ ಮಾಡಿದ ಪ್ರಕರಣಗಳು ಎಲ್ಲೂ ವರದಿಯಾಗಿಲ್ಲ. ಐರೋಪ್ಯ ದೇಶಗಳಲ್ಲಿ ಪ್ರದರ್ಶನಕ್ಕೋಸ್ಕರ ಇವುಗಳನ್ನ ಸೆರೆ ಹಿಡಿದು ಬಂದನದಲ್ಲಿರಿಸುತ್ತಾರೆ. ಹಾಗೆ ಬಂದನದಲ್ಲಿರಿಸಿ ಒಮ್ಮೆ ಇವುಗಳಿಗೆ ತರಬೇತಿ ಕೊಡಲು ಪ್ರಯತ್ನಿಸಿದಾಗ ನಾಲ್ಕು ಜನರ ಮೇಲೆ ದಾಳಿ ನಡೆಸಿ ಕೊಂದು ಹಾಕಿವೆ. ಆ ಘಟನೆಯನ್ನ ಬಿಟ್ಟರೆ ಬೇರೆ ಯಾವುದೇ ರೀತಿಯಲ್ಲಿ ನಿಸರ್ಗ ಸಹಜವಾಗಿ ದಾಳಿ ನಡೆಸಿದ ಘಟನೆ ವರದಿಯಾಗಿಲ್ಲ. ಮೀನುಗಾರರು ಸಮುದ್ರ ತೀರದಿಂದ ಹಿಡಿದು ಆಳಸಮುದ್ರದವರೆಗೂ ಮೀನುಗಳನ್ನ ಹಿಡಿಯಲು ದೋಣಿಗಳಲ್ಲಿ ತೆರಳುವುದಿದೆ. ಇದುವರೆಗೂ ಮೀನುಗಾರರ ಮೇಲೆ ಇವು ದಾಳಿ ಮಾಡಿದ ಪ್ರಕರಣಗಳು ವರದಿಯಾಗಿಲ್ಲ.

ಆಗಾಗ ಮಾನವರೇ ಇವುಗಳ ಚರ್ಮ, ಕೊಬ್ಬು, ಮಾಂಸ ಇವುಗಳ ದೇಹದ ಅವಯವಗಳಿಗೋಸ್ಕರ ಬೇಟೆಯಾಡುವುದಿದೆ. ಬೇರೆ ತಿಮಿಂಗಿಲಗಳಷ್ಟು ಹೆಚ್ಚಾಗಿ ಇವುಗಳನ್ನ ಭೇಟೆಯಾಡುವುದಿಲ್ಲ. ಹಾಲಿವುಡ್ ಚಿತ್ರ Deep blue sea ನಲ್ಲಿ ಇವು ಮಾನವರ ಮೇಲೆ ಬುದ್ದಿವಂತಿಕೆಯಿಂದ ದಾಳಿ ಮಾಡುತ್ತವೆ ಎಂಬಂತೆ ಚಿತ್ರಿಸಲಾಗಿದೆ. ಅದು ಸುಳ್ಳು, ಅದಕ್ಕೆ ಯಾವುದೇ ಸಾಕ್ಷಾದಾರವಿಲ್ಲ.

ಮೃತ್ಯುಂಜಯ ನ. ರಾ.

Related post