ಕಂಟಕದ ಸಮಯದಲ್ಲಿನ ತಾಳ್ಮೆ – ಸಂಯಮ
ಮಹಾಭಾರತ ಮಹಾಯುದ್ಧದಲ್ಲಿ ಕೌರವರ ಮತ್ತು ಪಾಂಡವರ ಬಿಲ್ವಿದ್ಯೆಯ ಗುರುಗಳಾದ ದ್ರೊಣಾಚಾರ್ಯರು ಕೊಲ್ಲಲ್ಪಟ್ಟಾಗ ಅವರ ಮಗ ಅಶ್ವತ್ಥಾಮನಿಗೆ ಸಹಿಸಲು ಅಸಾಧ್ಯವಾದ ನೋವು, ದುಃಖ, ಕ್ರೋಧ ಮತ್ತು ದ್ವೇಷ ಉಂಟಾಗಿತ್ತು.
ಆ ಕೋಪದ ಆವೇಶದಲ್ಲಿ ಪಾಂಡವರನ್ನೆಲ್ಲರನ್ನು ಸಂಹರಿಸಲು ಅಶ್ವತ್ಥಾಮನು ಅತ್ಯಂತ ಭಯಾನಕ ಮತ್ತು ವಿಧ್ವಂಸಕಾರಿಯಾದ ನಾರಾಯಣ ಅಸ್ತ್ರವನ್ನು ಪಾಂಡವರ ಸೈನ್ಯದ ಮೇಲೆ ಪ್ರಯೋಗಿಸಿದನು.ಒಮ್ಮೆ ಪ್ರಯೋಗಿಸಲ್ಪಟ್ಟ ನಾರಾಯಣ ಅಸ್ತ್ರವನ್ನು ನಿಷ್ಕ್ರಿಯಗೊಳಿಸುವುದು ಯಾರಿಂದಲೂ ಸಾಧ್ಯವಿರಲಿಲ್ಲ. ಶಸ್ತ್ರಸಜ್ಜಿತರಾದ ಹಾಗೂ ಆಯುಧಗಳನ್ನು ಹಿಡಿದುಕೊಂಡು ಎದುರಾಳಿಯ ಮೇಲೆ ಧಾಳಿಮಾಡಲು ಪ್ರಯತ್ನಿಸುವವರನ್ನು ನಾರಾಯಣ ಅಸ್ತ್ರವು ತಕ್ಷಣವೇ ಸುಟ್ಚು ಸಂಹಾರ ಮಾಡಲು ಆ ಅಸ್ತ್ರವನ್ನು ಬಳಸಲಾಗುತ್ತಿತ್ತು.
ಅಶ್ವತ್ಥಾಮನು ನಾರಾಯಣಾಸ್ತ್ರವನ್ನು ಪ್ರಯೋಗಿಸಿದ ವಿಚಾರವನ್ನು ತಿಳಿದ ಸರ್ವಾಂತರ್ಯಾಮಿ ಭಗವಾನ್ ಶ್ರೀಕೃಷ್ಣನು ಪಾಂಡವ ಸೈನ್ಯಕ್ಕೆ ಯಾವುದೇ ಆಯುಧಗಳನ್ನು ತಮ್ಮ ಕೈಗೆತ್ತಿಕೊಳ್ಳದೆ ಶಾಂತರೀತಿಯಿಂದ ಕೈ ಕಟ್ಚಿ ನಿಂತುಕೊಳ್ಳುವಂತೆ ಆದೇಶಿಸಿ, ಒಂದು ವೇಳೆ ನೀವುಗಳು ಯುದ್ಧ ಮಾಡಬೇಕು ಎಂಬ ಯೋಚನೆಯನ್ನು ಮನಸ್ಸಿನಲ್ಲಿ ತಂದುಕೊಂಡರೂ ಕೂಡ ನೀವೆಲ್ಲರೂ ಸರ್ವನಾಶವಾಗುತ್ತೀರಾ ಎಂದು ಎಚ್ಚರಿಕೆ ನೀಡಿದ. ಕೃಷ್ಣನ ಆಜ್ಞೆಗೆ ತಲೆಬಾಗಿ ಎಲ್ಲರೂ ತಮ್ಮ ಶಸ್ತ್ರಗಳನ್ನು ಬದಿಗಿಟ್ಟು, ಕೈಕಟ್ಚಿ ನಿಂತು ಬಿಟ್ಟರು. ನಾರಾಯಣಾಸ್ತ್ರದ ಪ್ರಖರತೆಯ ಅವಧಿ ಮುಗಿಯುತ್ತಿದ್ದಂತೆ ನಾರಾಯಣಾಸ್ತ್ರ ನಿಧಾನವಾಗಿ ತನ್ನ ಬಲವನ್ನು ಕಳೆದುಕೊಂಡು ತನ್ನಿಂದ ತಾನಾಗಿಯೇ ನಿಷ್ಕ್ರಿಯಗೊಂಡಿತು. ಈ ರೀತಿ ಕೃಷ್ಣ ಹೇಳಿಕೊಟ್ಟ ತಾಳ್ಮೆ ಮತ್ತು ಸಂಯಮದ ಕಾರಣದಿಂದಾಗಿ ಪಾಂಡವರ ಪೂರ್ತಿ ಸೈನ್ಯವು ರಕ್ಷಿಸಲ್ಲಿಟ್ಟಿತು.
ಮಹಾಭಾರತದ ಈ ಅಧ್ಯಾಯದಿಂದ ಎಲ್ಲಾ ಕಡೆಯಲ್ಲೂ ಎಲ್ಲ ಸಂದರ್ಭಗಳಲ್ಲೂ ಯುದ್ಧವೊಂದೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಲಾರದು. ಪ್ರಕೃತಿಯ ರೋಷಾವೇಷವನ್ನು ಶಾಂತಗೊಳಿಸಬೇಕೆಂದರೆ ಪ್ರಕೃತಿಯ ವಿರುದ್ಧ ಬಲಪ್ರಯೋಗ ಮಾಡಲು ಸಾಧ್ಯವಿಲ್ಲ. ಕೆಲವು ಬಾರಿ ನಾವೆಲ್ಲರೂ ಸಂಯಮದಿಂದ ವರ್ತಿಸಬೇಕಾಗುತ್ತದೆ. ನಮ್ಮ ದೈನಂದಿನ ಎಲ್ಲ ಕೆಲಸಕಾರ್ಯಗಳು, ವಿಚಾರಗಳನ್ನು ಕಟ್ಟಿ ಹಾಕಿಕೊಂಡು ಶಾಂತಚಿತ್ತರಾಗಿ ನಿಂತಲ್ಲೇ ಎಲ್ಲವನ್ನೂ ತ್ಯಜಿಸಿ ನಿಲ್ಲಬೇಕಾಗುತ್ತದೆ. ಆಗಲೇ ದೊಡ್ಡ ಗಂಡಾಂತರಗಳಿಂದ ತಪ್ಪಿಸಿಕೊಂಡು ಅದರಿಂದಾಗಬಹುದಾದ ಅನಾಹುತಗಳನ್ನು ತಡೆದು ಬದುಕುಳಿಯಲು ಸಾಧ್ಯ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160