ಕಂದು ಮೀನು ಗೂಬೆ – Brown Fish Owl

ಕಳೆದ ಬಾರಿ ಜಗತ್ತಿನ ನಾನಾ ಭಾಗಗಳಲ್ಲಿ ಗೂಬೆಯನ್ನು ಅಪಶಕುನದ ದ್ಯೋತಕವಾಗಿಯೂ ಜ್ಞಾನದ ದ್ಯೋತಕವಾಗಿಯೂ ಕಾಣುವುದನ್ನು ನೋಡಿದ್ದೇವೆ. ಈ ಬಾರಿ ಈ ಪ್ರವೃತ್ತಿ ಕೇವಲ ಜನಸಾಮಾನ್ಯರಲ್ಲಿ ಮಾತ್ರವಲ್ಲ ಸಾಹಿತಿಗಳ, ಕಲಾವಿದರ ಕೃತಿಗಳಲ್ಲಿಯೂ ಇದು ಹಾಗೇ ಎಂಬುದನ್ನು ನೋಡೋಣ.

ಜಗತ್ತಿನ ಮಹಾನ್ ಕಾವ್ಯಗಳಲ್ಲಿ ಒಂದಾದ ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧದಲ್ಲಿನ ಕೊನೆಯ ಅಂಕ ದುರ್ಯೋಧನ ಕೊನೆಯ ಘಳಿಗೆಗಳನ್ನು ಎಣಿಸುತ್ತಿರುವಾಗ ಅಶ್ವತ್ಥಾಮ “ಪಾಂಡವರೈವರ ತಲೆಗಳನ್ನು ತರಿದು ತರುವೆ” ಎಂದು ಮಧ್ಯರಾತ್ರಿ ಅವರ ಪಾಳಯಕ್ಕೆ ಹೋಗುವುದನ್ನು ವಿವರಿಸುವಾಗ ವ್ಯಾಸ ಮಹರ್ಷಿಗಳು ಅಶ್ವತ್ಥಾಮ ಗೂಬೆಯನ್ನು ಕಂಡ ಎಂದು ಅದನ್ನು ವರ್ಣಿಸುತ್ತಾರೆ. ಅದು ಆ ಸಂದರ್ಭಕ್ಕೆ ಎಷ್ಟು ಸೊಗಸಾಗಿ ಹೊಂದುತ್ತದೆ ನೋಡಿ! ಮಧ್ಯರಾತ್ರಿ, ಆ ಹೀನಕಾರ್ಯಕ್ಕೆ ಕೈಹಾಕಿದ ಅಶ್ವತ್ಥಾಮ ಕಾಣುವುದು ಗೂಬೆಯನ್ನು! ಇನ್ನು ಗೂಬೆಯ ಆ ವರ್ಣನೆ ಯಥಾವತ್ ಗೂಬೆಯ ವರ್ಣನೆಯೇ ಆಗಿದೆ! ಮಧ್ಯರಾತ್ರಿ, ಹೀನಕಾರ್ಯ, ಗೂಬೆ ಈ ಸರಣಿ ಎಂತಹ ರೂಪಕ ನೋಡಿ! ಇದು ಕವಿಯ ಪ್ರತಿಭೆ ಅಲ್ಲವೆ?

ಹಾಗೆಯೇ, ಶೇಕ್‍ಸ್ಪಿಯರನ ನಾಟಕ ಮ್ಯಾಕ್‍ಬೆತ್ ಮತ್ತು ಜೂಲಿಯಸ್‍ ಸೀಸರ್‍ಗಳಲ್ಲಿ ಗೂಬೆ ಮರಣದ ಸೂಚಕ! ನಮ್ಮ ಪಂಚತಂತ್ರ ಕತೆಗಳಲ್ಲೇ ಗೂಬೆ ಬರುತ್ತದೆಯಲ್ಲವೆ?

ಆಕ್ಸ್‍ಫೋರ್ಡ್ ಮತ್ತು ವಿಂಬಲ್ಡನ್‍ ಹೈಸ್ಕೂಲು ಮಕ್ಕಳು ಆಕ್ಸ್‍ಫೋರ್ಡ್ ಮತ್ತು ವಿಂಬಲ್ಡನ್‍ ಲೀಡಿಂಗ್ ಸ್ಕಾಲರ್ಸ್‍ ಸಂಕ್ಷಿಪ್ತವಾಗಿ ಔಲ್ಸ್ ( Oxford and wimbledon Leading scholars –  OWLS) ಎಂಬ ಗುಂಪನ್ನು ರಚಿಸಿಕೊಂಡಿದ್ದಾರೆ. ಇವರು ಔಲ್ಸ್ ಎಂಬ ಪತ್ರಿಕೆಯನ್ನೇ ಹೊರಡಿಸುತ್ತಿದ್ದಾರೆ. ಆಸಕ್ತರು https://issuu.com/wimbledonhighschool/docs/owls_quarterly-first_edition__february_2018 ಈ ಕೊಂಡಿಯನ್ನು ಕ್ಲಿಕ್‍ ಮಾಡಿ ಓದಬಹುದು.

ಮರದ, ಲೋಹ ಗೂಬೆಗಳದ್ದೇ ಒಂದು ಜಗತ್ತು! ಔಲ್ ಆರ್ಟಿಫಾಕ್ಸ್ ಎಂದು ಗೂಗಲ್ ಮಾಡಿ ಆ ಕಲಾಕೃತಿಗಳ ಸೌಂದರ್ಯವನ್ನು ಸವಿಯಿರಿ!

ಇರಲಿ, ಹೀಗೆ ಬರೆಯುತ್ತಾ ಹೋದರೆ ನಮ್ಮ ಅಂಕಣ ಮಿತಿಮೀರಿ ಪುಸ್ತಕವಾಗಿ ನಾನು ಗೂಬೆ ಎನಿಸಿಕೊಳ್ಳಬೇಕಾಗುತ್ತದೆ! ಹೀಗೆ ಹತ್ತಾರು ಆಯಾಮಗಳು ಗೂಬೆಗಳನ್ನು ಕುರಿತಾಗಿ ಕಂಡುಬರುತ್ತದೆ. ಒಟ್ಟಾರೆ, ಗೂಬೆ ಎಂಬುದು ಒಂದು ಮಾಯೆ ಎಂಬಂತೆ ಕಾಣುತ್ತದೆ!

ನಮ್ಮ ಇಂದಿನ ಗೂಬೆಗೆ ಮರಳೋಣ. ಕಂದು ಮೀನು ಗೂಬೆ (Brown Fish-Owl Ketupa zeylonensis) ದೊಡ್ಡಗಾತ್ರದ ಕಂದು ಬಣ್ಣದ ಗೂಬೆ. ಎದೆಯ ಭಾಗ ಕಪ್ಪು ಅಥವಾ ಕಡುಗಂದು ಉದ್ದಗೆರೆಗಳಿಂದ ಕಿಕ್ಕಿರಿದಿರುತ್ತದೆ. ತಲೆಯ ಮೇಲೆ ಕಿವಿಯಂತೆ ಎದ್ದುಕಾಣುವ ಚೊಟ್ಟಿಗಳನ್ನು ಹೊಂದಿದೆ. ಕಣ್ಣುಗಳು ಹೊಂಬಣ್ಣದ್ದಾಗಿರುತ್ತವೆ. ಗಂಟಲ ಬಳಿ ಬಿಳಿಯ ಗರಿಗಳು ಉಬ್ಬಿದಂತೆ ಕಾಣುತ್ತವೆ. ಕಾಲುಗಳ ಮೇಲೆ ಗರಿಗಳು ಇರುವುದಿಲ್ಲ. ಮರಿ ಎರಡು ವರ್ಷಗಳವರೆಗೆ ಪ್ರೌಢಹಕ್ಕಿಗೆ ಹೋಲಿಸಿದರೆ ಪೇಲವವಾಗಿ ಕಾಣುತ್ತದೆ.

ಪ್ರಧಾನವಾಗಿ ಮೀನನ್ನು ಹಿಡಿದು ತಿನ್ನುವ ಇದು ಆ ಅಗತ್ಯಕ್ಕೆ ತಕ್ಕಂತಹ ಕಾಲಿನ ಬೆರಳು ಹಾಗೂ ಉಗುರುಗಳನ್ನು ಹೊಂದಿದ್ದು, ಆ ಹೊಂದಾಣಿಕೆಗಳು ಮೀನು ಜಾರಿಹೋಗದಂತೆ ತಡೆಯುತ್ತದೆ. ಮೀನು, ನೀರಿನಲ್ಲಿನ ಕೀಟಗಳು, ಕಪ್ಪೆಗಳು,  ಏಡಿಗಳು ಹಾಗೂ ಇತರ ಹಕ್ಕಿಗಳನ್ನು ತಿನ್ನುತ್ತದೆ. ಉಡವನ್ನು ಹಿಡಿದು ತಿಂದ ದಾಖಲೆಯೂ ಇದೆ. ಸತ್ತ ಮೊಸಳೆಯನ್ನು ತಿಂದ ಅಪರೂಪದ, ವಿಶಿಷ್ಟವಾದ ದಾಖಲೆಯಿದೆ. ಬಹುತೇಕ ನಿಶಾಚರಿ. ಕೆಲವು ಸಂಶೋಧಕರು ಹಗಲಲ್ಲಿಯೂ ಇದು ಬೇಟೆಯಾಡುವುದನ್ನು ದಾಖಲಿಸಿದ್ದಾರೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಇದರ ಪಳಿಯುಳಿಕೆಗಳು ದೊರೆತಿವೆ. ಅತಿ ಹಳೆಯ ಪಳಿಯುಳಿಕೆ ಐದು ದಶಲಕ್ಷ ವರ್ಷಗಳಷ್ಟು ಹಿಂದಿನದು ಎಂಬುದು ಉಸಿರುಗಟ್ಟಿಸುವ ವಿಷಯ. ಸುಮಾರು ನೂರಿಪ್ಪತ್ತು ಲಕ್ಷ ವರ್ಷಗಳ ಹಿಂದೆ ಇವುಗಳ ಹರವು ಸಾಕಷ್ಟು ದೊಡ್ಡದಾಗಿತ್ತು ಎಂದು ತಿಳಿದುಬರುತ್ತದೆ.

ಭಾರತದಾದ್ಯಂತ, ಪಾಕಿಸ್ಥಾನ, ಬಾಂಗ್ಲಾದೇಶ, ಮಾಯನ್ಮಾರ್ ಹಾಗೂ ಶ್ರೀಲಂಕಾಗಳಲ್ಲಿ ಕಂಡುಬರುತ್ತದೆ. ಎರಡು ಪಂಗಡಗಳಿವೆ. ಕಾಡುಗಳಲ್ಲಿನ  ನೀರಿನಾಸರೆಗಳಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಜನವಸತಿಗಳಿರುವೆಡೆ ಅಪರೂಪವಾದರೂ ಶ್ರೀಲಂಕಾದ ಅಂತಹ ಪ್ರದೇಶಗಳಲ್ಲಿ ಕಂಡುಬರುತ್ತದೆ.

(ಈ ಲೇಖನ ಹಾಗೂ ಕಳೆದ ವಾರ ಪ್ರಕಟವಾಗಿದ್ದ ಲೇಖನದಲ್ಲಿನ ವೇದ, ಪಾಶ್ಚಾತ್ಯ ಹಾಗೂ ಪೌರಾತ್ವಪುರಾಣಗಳಲ್ಲಿನ ಗೂಬೆಗಳನ್ನು ಕುರಿತ ವಿಷಯಗಳನ್ನು ತಿಳಿಸಿದವರು  ವಿಜ್ಞಾನ ಲೇಖಕರು, ಹಿರಿಯ ಪ್ರಾಣಿವಿಜ್ಞಾನಶಾಸ್ತ್ರಜ್ಞರೂ ಆದ ಪ್ರೊ ಎನ್ ಎಸ್‍ ಲೀಲಾ ಅವರು. ಅವರಿಗೆ ಧನ್ಯವಾದಗಳು)

ಇಷ್ಟು ಅದ್ಭುತಗಳಿರುವ ಈ ಹಕ್ಕಿಯನ್ನು ಕಂಡಾಂಗ ನಮಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ, ಕೃಷ್ಣ ಲಾಂಜೇವಾರ್ ಹಾಗು ಜೀತ್ಮನ್

Related post

Leave a Reply

Your email address will not be published. Required fields are marked *