ಕಂಬನಿಯ ಬೆಲೆ
ಮನದಿ ನೋವು ಮಡುಗಟ್ಟಿರೆ
ನಿರತ ಹರಿವುದು ಕಂಬನಿಧಾರೆ!
ಮನದ ಭಾವ ತಟಸ್ಥವಾಗಿರೆ..
ನೋವೆಲ್ಲ ಕಂಗಳಲಿ ಸೆರೆ!!
ಹೆಣ್ಣಿನ ಕಂಬನಿಯ ಬೆಲೆಯ
ಅರಿತವರಾರು ಈ ವಿಶಾಲ ಜಗದಿ!
ಕಣ್ಣೊರೆಸುವವರು ಕೃತಕತೆಯಲಿ..
ತಿಳಿವರೇನವಳ ಹೃದಯದ ಬೇಗುದಿ!!
ಕಂಗಳ ಅಂಚಲಿ ಜಾರಿದ ಕಂಬನಿ
ಹೇಳಿದೆ ನೂರೊಂದು ಕಥೆಯ!
ಪುಟದಲಿ ಬರೆಯಲಾರದು ಲೇಖನಿ..
ಅವಳ ಮನದಲಿರುವ ವ್ಯಥೆಯ!!
ಅಶ್ರುಧಾರೆ ಕೆನ್ನೆಗಿಳಿಯಲು
ಇಹುದು ನೂರು ದಾರಿ!
ಕಂಬನಿ ಒರೆಸುವ ಕರಗಳಿರಲು..
ನೋವು ಕಲಿವುದು ನಗುವ ಪರಿ!!
ಸುಮನಾ ರಮಾನಂದ