ಕಂಬನಿಯ ಲಹರಿಯಲಿ…
ಕಂಬನಿ ಯ ಹನಿಯೊಂದು ಕಂಗಳಿಂದ
ಜಾರುತಾ ದಿಂಬಿನಲಿ ಇಂಗಿತು!
ಮನದಲಿ ಅವಿತ ಕಹಿನೆನಪುಗಳಿಂದ..
ಕಣ್ಣೀರದು ಕಟುಸತ್ಯವ ಅರುಹಿತು!!
ಕಂಬನಿ ಯು ಕಂಗಳ ತೆರೆ ಜಾರಿಸಿ
ಕೆನ್ನೆಗಳ ಕಿನಾರೆಗಳನು ಮೀಟಿದೆ!
ಮಾತಿರದ ಮೌನದಲಿ ಮನವಿರಿಸಿ..
ನೋವುಗಳ ಪರಿಮಿತಿಯನದು ದಾಟಿದೆ!!
ಕಂಬನಿ ಗೆ ಮಿಡಿಯುವಾ ಮನವದು
ದೂರದಲೆಲ್ಲೋ ಮಾಗಿ ತಿಳಿಯಾಗಿದೆ!
ಕ್ರಮೇಣ ಕಾಡುವ ಬೇಸರವು ಕಳೆದು..
ಹೃದಯದಲಿ ಶಾಂತಿಯು ನೆಲೆಯಾಗಿದೆ!!
ಕಂಬನಿ ಯಲಿ ತೇಲುವ ಹನಿಯು ತಾ
ನೊಂದರೂ ಜಾರಲೊಲ್ಲದು ಕಂಗಳಿಂದ!
ನೋಯುವ ಮನವು ಸದಾ ಮಿಡಿದಿದೆ…
ಬಿಂದುವ ಪಟ್ಟನೆ ಒರೆಸುವ ಒಲವ ಕರಗಳಿಂದ!!
ಕಂಬನಿ ಯಿಂದ ತೋಯುವ ಕಂಗಳಲೂ
ಮಿನುಗಿದೆ ಸವಿ ದಿಗಂತದ ಬೆಳಕು!
ಹೃದಯವು ಮಿಡಿದು ಮನಸುಗಳೊಂದಾಗಿ…
ಒಲಿದರೆ ತಾನೇ ನಿಜದಿ ಬದುಕು!!
ಕಂಬನಿ ಯೊಳು ಅರುಹಿರಲು ಮೌನವಾಗಿ
ತಿಳಿದಿರಲು ಅದುವೇ ಭಾವಬಂಧನ!
ಮಾತಿರದ ಮೌನವದು ಲಹರಿಯಾಗಿ..
ಆತ್ಮಸೋಕಿರಲದುವೇ ಆತ್ಮಬಂಧನ!!
ಸುಮನಾ ರಮಾನಂದ