ಕಗ್ಗದ ಹಣತೆ – ಡಾ|| ಡಿ. ವಿ. ಗುಂಡಪ್ಪ

ಕಗ್ಗದ ಹಣತೆ – ಡಾ|| ಡಿ. ವಿ. ಗುಂಡಪ್ಪ

“ಡಿ. ವಿ. ಗುಂಡಪ್ಪ” ನವರ ಹೆಸರು ಕೇಳಿದರೆ ಸಾಕು ನಮ್ಮಲ್ಲಿನ ಅಭೂತಪೂರ್ವ ಚೈತನ್ಯವೊಂದು ನಮಗೇ ಗೊತ್ತಿಲ್ಲದ ಹಾಗೆ ನಮ್ಮ ಮನಸ್ಸಿನಲ್ಲಿ ಕ್ರಿಯಾಶೀಲವಾಗುತ್ತದೆ. ಅವರು ರಚಿಸಿದ ಮಂಕುತಿಮ್ಮನ ಕಗ್ಗಗಳು ಅದೆಷ್ಟೋ ಜನರ ಜೀವನದಲ್ಲಿ ನಿರಾಸೆ ಎಂಬ ಕಾರ್ಮೋಡ ಸರಿಸಿ ಬೆಳಕನ್ನು ಚೆಲ್ಲಿದೆ.

ನಮ್ಮ ಹಿಂದಿನ ಪೀಳಿಗೆಯ ಹಿರಿಯರು ಹಾಗು ಇಂದಿನ ಕಿರಿಯರು ಎಲ್ಲರಿಗೂ ಡಿ.ವಿ.ಜಿ.  ಹಾಗು ಅವರ ಕಗ್ಗಗಳ ಶಕ್ತಿಯೇನೆಂಬುದು ಗೊತ್ತು. ನಮ್ಮ ಹಿಂದಿನ ತಲೆಮಾರಿನವರು ಅದೆಷ್ಟೋ ಜನರು ಕಗ್ಗಗಳ ಮೂಲಕ ಅಧ್ಯಾತ್ಮಕ್ಕೆ ಪರಿಚಿತವಾಗಿ ಸರಳ ಜೀವನ ನೆಡಿಸಿ ಹಿಂದಿಗೂ ನಮಗೆ ದಾರಿ ದೀಪವಾಗಿದ್ದಾರೆ. ಕಗ್ಗ ವಾಚನವನ್ನು ಅದೆಷ್ಟೋ ಪುಟ್ಟ ಮಕ್ಕಳು ಸುಲಲಿತವಾಗಿ ಮುದ್ದು ಮುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹಾಡುತ್ತಿದ್ದರೆ ಖುಷಿಯಿಂದ ಮುದ್ದಾಡಬೇಕೆನಿಸುತ್ತದೆ ಹಾಗು ಅವರ ಪೋಷಕರ ಮೇಲೆ ಗೌರವ ಭಾವನೆ ಮೂಡುತ್ತದೆ.

ಇಂತಹ ಕಗ್ಗಗಳನ್ನು ರಚಿಸಿ ಜನಮಾನಸದಲ್ಲಿ ನೆಲೆಸಿರುವ ಡಿ. ವಿ. ಗುಂಡಪ್ಪನವರು ಜನಿಸಿದ್ದು ಮಾರ್ಚ್ 7 1887 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ. ಡಿವಿಜಿಯವರು ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷು ಹಾಗು ಸಂಸ್ಕೃತವನ್ನು ಕಲಿತವರು. ಡಿ. ವಿ. ಜಿ ಯವರು ಆಗಿನ ಸೂರ್ಯೋದಯ ಪ್ರಕಾಶಿಕಾ ಮೂಲಕ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಆರಂಭಿಸಿದರು. ಒಂದೆರಡು ವರ್ಷದ ನಂತರ ನವರತ್ನ ಕೃಷ್ಣಸ್ವಾಮಿ ಯವರೊಡನೆ ‘ಭಾರತಿ’ ಎಂಬ ದಿನಪತ್ರಿಕೆಯೊಂದನ್ನು ತಾವೇ ಹೊರಡಿಸುವ ಸಾಹಸ ಮಾಡಿದರು. 1908ರಲ್ಲಿ ಪತ್ರಿಕಾ ವಾಗ್ಬಂಧನ ಜಾರಿಯಾದಾಗ ಮದರಾಸಿಗೆ ವಲಸೆ ಹೋಗಿ ಅಲ್ಲಿ ‘ಹಿಂದೂ’, ‘ಇಂಡಿಯನ್ ಪೇಟ್ರೀಯಟ್’ ಮುಂತಾದ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು.   1913ರಲ್ಲಿ ‘ಕರ್ನಾಟಕ’ ಅರ್ಧವಾರಪತ್ರಿಕೆಯನ್ನು ಆರಂಭಿಸಿ ಏಳೆಂಟು ವರ್ಷ ನಡೆಸಿದರು ನಂತರ ‘ಇಂಡಿಯನ್ ರೆವ್ಯೂ ಆಫ್ ರೆವ್ಯೂಸ್’ ಇಂಗ್ಲಿಷ್ ಮಾಸಪತ್ರಿಕೆಯನ್ನು ಸಹ ಆರಂಭಿಸಿದರು.

ದೇಶೀಯ ಸಂಸ್ಥಾನಗಳ ವಿಶಿಷ್ಟ ಸಮಸ್ಯೆಗಳನ್ನು ಕುರಿತ ಅವರ ಬರಹಗಳು ಪ್ರೊ. ಬೇರಿಡೇಲ್ ಕೀತ್ ಮೊದಲಾದ ಜಗದ್ವಿಖ್ಯಾತ ರಾಜ್ಯಶಾಸ್ತ್ರಜ್ಞರ ಹಾಗೂ ಸರ್ ಪಿ.ಎಸ್. ಶಿವಸ್ವಾಮಿ ಅಯ್ಯರ್ ಮೊದಲಾದ ಭಾರತೀಯ ಸಂವಿಧಾನತಜ್ಞರ ಗಮನವನ್ನೂ ಸೆಳೆದಿದ್ದವು. ಸಾಹಿತ್ಯ ಮಾತ್ರವಲ್ಲದೆ ಚರಿತ್ರೆ, ರಾಜನೀತಿ, ತತ್ವಜ್ಞಾನ, ಪ್ರಜಾಪ್ರಭುತ್ವ, ಸಮಾಜ ವಿಜ್ಞಾನ, ಸಾರ್ವಜನಿಕ ಜೀವನ, ಮುಂತಾದ ಹಲವಾರು ವಿಷಯಗಳನ್ನು ಕುರಿತು ಅವರು 66 ಕನ್ನಡ ಕೃತಿಗಳನ್ನು ರಚಿಸಿರುವುದರ ಜೊತೆಗೆ, ಇಂಗ್ಲಿಷ್ – ಕನ್ನಡ  ಭಾಷೆಗಳೆರಡರಲ್ಲಿಯೂ ನೂರಾರು ಉಪಯುಕ್ತ ಲೇಖನಗಳನ್ನೂ ಬರೆದಿದ್ದಾರೆ.

ಹಸ್ತಕ್ಕೆ ಬರಿ ನಕ್ಕೆ ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರನಾದೆ ।
ವಿಸ್ತರದ ದರುಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ ।।

ಎಂದು ಕಗ್ಗದ ಬಗ್ಗೆ ಕುವೆಂಪುರವರ ಅಭಿಪ್ರಾಯ. ಕನ್ನಡದ ಭಗವದ್ಗೀತೆ ಎಂದೇ ಹೆಸರುವಾಸಿಯಾಗಿರುವ ಮಂಕುತಿಮ್ಮನ ಕಗ್ಗಗಳಲ್ಲಿ ಡಿ. ವಿ. ಜಿ ಯವರು ಜೀವನದ ವಿಶಿಷ್ಟ ಆಯಾಮಗಳನ್ನು, ಜೀವನದ ರೀತಿ ನೀತಿಗಳನ್ನು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಕಗ್ಗಗಳನ್ನು ಅನೇಕರು ವೇದೋಪನಿಷತ್ತು, ಗೀತೆಗಳಂತೆ ಕಂಡು ಅದಕ್ಕೆ ಭಾಷ್ಯ ವ್ಯಾಖ್ಯಾನ, ವಿವರಣೆ ಕೊಟ್ಟಿದ್ದಾರೆ. ಇನ್ನೂ ಅನೇಕರು ಗಮಕ, ಸುಗಮ ಸಂಗೀತದಂಥ ಸಾಧನಗಳ ಮುಖಾಂತರ ಅದರ ಜನಪ್ರಿಯತೆಯನ್ನು ಇನ್ನಷ್ಟು ಸದೃಢಗೊಳಿಸಿದ್ದಾರೆ. ಅನೇಕರ ಭಾಷಣಗಳಲ್ಲಿ ಇದರ ಅನೇಕ ಸಾಲುಗಳು ಸಾಮಾನ್ಯವಾಗಿ ಪದೇ ಪದೇ ಉದ್ಧೃತವಾಗುತ್ತವೆ. ಒಂದೊಂದು ಪದ್ಯವೂ ವೇದದ ಒಂದೊಂದು ಋಕ್ ಇದ್ದಂತೆ ಎನ್ನುವವರೂ ಇದ್ದಾರೆ. ಕಗ್ಗದ ಪದ್ಯಗಳು ಶಾಸ್ತ್ರಾಧ್ಯಯನ ಮಾತ್ರವಲ್ಲದೆ ಗಾಢವಾದ ಜೀವನಾನುಭವದಿಂದ ಡಿವಿಜಿಯವರಿಗೆ ದಕ್ಕಿರುವ ಸ್ವೋಪಜ್ಞ ಚಿಂತನೆಗಳೆನ್ನುವ ಅರಿವು ತಾನಾಗಿಯೇ ಮೂಡುತ್ತದೆ.

ಮಂಕುತಿಮ್ಮನ ಕಗ್ಗಗಳನ್ನು ಉಪನ್ಯಾಸಗಳಲ್ಲಿ ಹಾಗೂ ಪುರಾಣದ ಚರ್ಚೆಗಳಲ್ಲಿ ಧೀಮಂತ ಜನರು ಉಪಯೋಗಿಸುತ್ತಾರೆ ಮತ್ತು  ಇಂಗ್ಲಿಷ್, ಫ್ರೆಂಚ್ ಹಾಗೂ ಹಲವಾರು ಭಾಷೆಗಳಲ್ಲಿ ಅನುವಾದಗೊಂಡಿದೆ.

ಡಿ. ವಿ. ಗುಂಡಪ್ಪನವರಂತಹ ಧೀಮಂತರನ್ನು ದಾರ್ಶನಿಕರನ್ನು ಈ ಕನ್ನಡ ಮಾಸದಲ್ಲಿ ನೆನೆಯುತ್ತಾ ಕಗ್ಗದ ಹಣತೆಯನ್ನು ಹಚ್ಚೋಣ. ಜೈ ಕನ್ನಡಾಂಬೆ…..

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *