ಕಠಿಣ ಪರಿಶ್ರಮದ ಕೆಲಸಕ್ಕಿದೆ ಕಿಮ್ಮತ್ತು

ಕಠಿಣ ಪರಿಶ್ರಮದ ಕೆಲಸಕ್ಕಿದೆ ಕಿಮ್ಮತ್ತು

ದೇಶವು ಜಾಗತಿಕವಾಗಿ ಅಭಿವೃದ್ಧಿಯೆಡೆಗೆ ಸಾಗುತ್ತಿದ್ದಂತೆ ಮನುಷ್ಯನ ಆಯಸ್ಸು ಪ್ರತಿದಿನವೂ ಕಡಿಮೆಯಾಗುತ್ತಾ ಹೋಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಸಮರ್ಪಕ ಜೀವನಶೈಲಿ. ಸಾಮಾಜಿಕವಾಗಿ ಬೆಳೆದಂತೆ, ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭಿವೃದ್ಧಿ ಮತ್ತು ದಿನ ದಿನವೂ ಬದಲಾಗುತ್ತಿರುವ ಹವಾಮಾನದ ಕಾರಣದಿಂದ ಮನುಷ್ಯನ ಆರೋಗ್ಯ ಮತ್ತು ಜೀವಿತಾವಧಿಯು ಕಡಿಮೆಯಾಗುತ್ತಿದೆ. ಹಿಂದೆ 40-50 ವರ್ಷ ದಾಟಿದವರು ತಮ್ಮ ಪೋಷಕರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬರುತ್ತಿದ್ದರೆ, ಇಂದು ಅದೇ ವಯಸ್ಸಿನ ಹೆತ್ತವರು ತಮ್ಮ ಮಕ್ಕಳನ್ನು ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇಂದಿನ ಮಕ್ಕಳಂತೂ ಬಾಲ್ಯದಿಂದಲೇ ಟಿ.ವಿಯ ದಾಸರಾಗಿ ತಮ್ಮ ಆರೋಗ್ಯವನ್ನು ಎಳವೆಯಿಂದಲೇ ಕಳೆದುಕೊಳ್ಳುತ್ತಿದ್ದಾರೆ. ಇದು ದುಡ್ಡು ಕೊಟ್ಟು ಮಾರಿಯನ್ನು ಮನೆಗೆ ಕರೆತಂದಂತೆ.’ ಒಂದೆರಡು ಗಂಟೆಗಳ ಕಾಲ ನಿರಂತರವಾಗಿ ಟಿ.ವಿ ಯ ಮುಂದೆ ಕುಳಿತಿರುವುದು ಒಂದು ಸಿಗರೇಟು ಸೇದುವುದಕ್ಕೆ ಸಮಾನ ಎಂದು ಮತ್ತು ನಿರಂತರವಾಗಿ ನಾಲ್ಕು ಗಂಟೆ ಕುಳಿತಲ್ಲೇ ಕುಳಿತಿದ್ದರೆ ಆತನ ಜೀವನದ ಇಪ್ಪತ್ತು ನಿಮಿಷ ಆಯಸ್ಸು ಕಡಿಮೆಯಾದಂತೆ ಎಂದು ಹೃದ್ರೋಗ ತಜ್ಞ ಡಾ.ಮಂಜುನಾಥ್ ಹೇಳುತ್ತಾರೆ.

ಮೊಬೈಲ್, ಟಿವಿ ಮತ್ತು ಕಂಪ್ಯೂಟರ್‌ ನ ಅತಿಯಾದ ಗೀಳು ಒಂದು ರೀತಿಯಲ್ಲಿ ಖಾಯಿಲೆಯಲ್ಲದೆ ಇನ್ನೇನೂ ಅಲ್ಲ. ಇದೊಂದು ಖಾಯಿಲೆಯೆಂದು ಬಹುತೇಕ ರಾಷ್ಟ್ರಗಳು ಈಗಾಗಲೇ ಘೋಷಿಸಿವೆ. ಇದು ಭಾರತ ದೇಶದಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿದೆ. ಮಹಿಳೆಯರ ಜೀವಾಂಗ ರಚನೆ ಮತ್ತು ಜೀವಶಾಸ್ತ್ರದ ಪ್ರಕಾರ ಬಹುತೇಕ ಮಹಿಳೆಯರಿಗೆ ಹೃದಯ ಸಂಬಂಧಿ ರೋಗಗಳು ಬರುವುದಿಲ್ಲವೆಂದು ವಿಜ್ಞಾನ ಹೇಳುತ್ತದೆ. ಆದರೆ ಇಂದಿನ ಜೀವನ ಶೈಲಿ, ಆಹಾರ ಕ್ರಮಗಳು ಮತ್ತು ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡದ ಕಾರಣದಿಂದ ಮಹಿಳೆಯರಿಗೂ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದೆ. ಪಟ್ಟಣಗಳಲ್ಲಷ್ಟೇ ಬೀಡು ಬಿಟ್ಟಿದ್ದ ಹೃದಯಾಘಾತ ಮತ್ತು ಸಕ್ಕರೆ ಕಾಯಿಲೆಗಳು ಇಂದು ಹಳ್ಳಿಗಳಲ್ಲೂ ವ್ಯಾಪಿಸಿರುವುದು ದುರಂತವಲ್ಲದೆ ಮತ್ತೇನಲ್ಲ.

ಇಂದು ಪಟ್ಟಣಗಳಲ್ಲಂತೂ ವಾಯು ಮಾಲಿನ್ಯ ಮತ್ತು ಜಲಮಾಲಿನ್ಯದ ಪ್ರಭಾವವನ್ನು ಹೇಳತೀರದು. ಈ ಕಾರಣಗಳಿಂದ ನಿತ್ಯ ಪ್ರಾಪಂಚಿಕವಾಗಿ ಲೆಕ್ಕವಿಲ್ಲದಷ್ಟು ಮಕ್ಕಳು ಸಾಯುತ್ತಿದ್ದಾರೆ. ದೇಶದ ರಾಜಧಾನಿಯಾದ ದೆಹಲಿಯನ್ನಂತೂ ವಾಯಮಾಲಿನ್ಯದ ಕಾರಣದಿಂದ ಗ್ಯಾಸ್ ಛೇಂಬರ್ ಎಂದು ಸುಪ್ರೀಂ ಕೋರ್ಟ್ ಜರೆದಿದ್ದು ನಮಗೆಲ್ಲ ಗೊತ್ತೇ ಇದೆ. ನಮ್ಮ ದೇಶವು ಶ್ರಮರಹಿತ ಜೀವನದಿಂದಾಗಿ ಮತ್ತು ದೇಹಕ್ಕೆ ದೈಹಿಕ ವ್ಯಾಯಾಮಗಳಿಲ್ಲದೇ ಮಧುಮೇಹ ಖಾಯಿಲೆಯ ರಾಜಧಾನಿಯಾಗಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಜೀವನ ಶೈಲಿಯು ಹೀಗೇ ಮುಂದುವರೆದರೆ ಹೃದಯಾಘಾತದ ರಾಜಧಾನಿಯೂ ಆಗಿ ಹೊರಹೊಮ್ಮಲಿದೆ.

ಇಂದಿನ ಪೀಳಿಗೆ ಕಡಿಮೆ ಶ್ರಮ ಹೆಚ್ಚಿನ ಸಂಬಳಎನ್ನುವ ವ್ಯವಸ್ಥೆಗೆ ಜೋತುಬಿದ್ದಿದ್ದು, ಇದರಿಂದಾಗಿ ಒತ್ತಡದ ಕೆಲಸಗಳ ಹಿಂದೆ ಬಿದ್ದು ಗಳಿಸಿದ ಹಣವನ್ನೆಲ್ಲಾ ಆರೋಗ್ಯ ಸರಿಪಡಿಸಿಕೊಳ್ಳಲು ವ್ಯಯಿಸುತ್ತಿರುವುದು ದುರಂತವೇ ಸರಿ! ಬದಲಿಗೆ ಗಾಂಧೀಜಿ ಬೋಧಿಸಿ ಅನುಷ್ಠಾನಿಸಿದ ಶ್ರಮದ ಅನ್ನದ ಪರಿಕಲ್ಪನೆಯನ್ನು ನಾವೆಲ್ಲರೂ ಪಾಲಿಸಬೇಕಿದೆ. ಬೆವರು ಹರಿಸಿ ದುಡಿದರೆ ಮಾತ್ರ ಆ ದಿನ ತಾನು ಊಟ ಮಾಡುವೆ ಎಂಬ ನಿಯಮವನ್ನು ಪಾಲಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಮನುಷ್ಯನು ಆಲಸಿಯಾಗದೇ ಫಾಸ್ಟ್’ಫುಡ್ ವ್ಯಾಮೋಹದಿಂದ ಹೊರಬಂದು ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳಿರುವ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು, ಅತಿಯಾದ ಮಾಂಸಾಹಾರವೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ಅರಿಯಬೇಕು. ಇದ್ದುದ್ದರಲ್ಲಿ ಖುಷಿಯಾಗಿ ಜೀವಿಸಿ ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಾ, ಸರಳ ಜೀವನದ ಮೂಲಕ ತಕ್ಕಮಟ್ಟಿಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *