ಕತ್ತಲಿಂದ ಬೆಳಕಿನೆಡೆಗೆ
ಅಂಧಕಾರ ಎತ್ತಲೆತ್ತಲೂ ಅಂಧಕಾರ
ಕಾಣುವ ಕಣ್ಣಿಗೆ ಎಲ್ಲವೂ ಅಗೋಚರ
ಸಕಲ ದೈವವೂ ಈ ಜೀವಕೆ ನಿರಾಕಾರ
ಆಕಾರ ನಿರಾಕಾರದ ನಿಖರ ಸಾಕಾರದ ಗ್ರಹಚಾರ
ಹೇ ದೇವನೇ ನೀನೇಕೆ ದೃಷ್ಟಿ ಕಿತ್ತುಕೊಂಡೆ
ಪರವಾಗಿಲ್ಲ ಬಿಡು ಅಂತರ್‌ದೃಷ್ಟಿ ಕೊಟ್ಟೆ
ನೋಡಲು ನೋಟವಿಲ್ಲದಿದ್ದರೇನು
ಸ್ಪರ್ಷಾನುಭವದ ಜ್ಞಾನಚಕ್ಷುವನ್ನು ಕೊಟ್ಟೆ
ಎಲ್ಲರೂ ಪತ್ಯೂಷ ಸಂಧ್ಯೆ ಅಂತೆಲ್ಲಾ ಕೂಗಾಡಿದ್ರೆ
ನಮ್ಮ ಪಾಲಿಗೆ ಎಲ್ಲವೂ ಕಾವಳವೇ
ಬದುಕೇ ದುಸ್ತರ ಅಂದರಂತೆ ಎಲ್ಲರೂ
ನಮಗ್ಯಾವುದೂ ಹಾಗನ್ನಿಸದಂತೆ ಮಾಡಿಟ್ಟೆ
ಪಂಚೇಂದ್ರಿಯಗಳಲ್ಲಿ ಒಂದಂನಂತೂ ಕಿತ್ತುಬಿಟ್ಟೆ
ಮಿಕ್ಕ ನಾಲ್ಕು ಇಂದ್ರಿಯಗಳನ್ನು ಹರಿತ ಮಾಡಿಬಿಟ್ಟೆ
ಕಣ್ಣಿದ್ದೂ ಕುರುಡರಂತಿರುವವರ ನಡುವೆ ನಮ್ಮನ್ನಿಟ್ಟೆ
ಎಲ್ಲರ ಡೋಂಗೀತನವ ನೀ ತೋರಿಸಿಬಿಟ್ಟೆ
ಪ್ರಭುವೇ ನಿನಗೆಷ್ಟು ಸಲ್ಲಿಸಲಿ ನನ್ನ ನಮನವಾ
ಬದುಕಲು ಅದೆಷ್ಟು ಆಸೆ ನನ್ನಲ್ಲಿ ತುಂಬಿಸಿದೆ
ಎಲ್ಲವೂ ಸರಿಯಿರುವವರಲ್ಲೊ ನಿರಾಶಾಭಾವ
ಪರಿಹರಿಸು ಅವರ ಮನದ ಕಾವಳವಾ
ಮೊಗೆಮೊಗೆದು ತುಂಬಿಸು ಆಶಾಭಾವವಾ….
ಸಿ. ಎನ್. ಮಹೇಶ್