ಕತ್ತಲಿನಿಂದ ಬೆಳಕಿನೆಡೆಗೆ – ಉತ್ತರಕಾಶಿ ಕಾರ್ಯಾಚರಣೆ

ಕತ್ತಲಿನಿಂದ ಬೆಳಕಿನೆಡೆಗೆ – ಉತ್ತರಕಾಶಿ ಕಾರ್ಯಾಚರಣೆ

ಇದು ಬರೋಬರಿ ಹದಿನೇಳು ದಿನಗಳ ಕಾಲ ಪಾತಾಳದ, ಕಗ್ಗತ್ತಲಲ್ಲಿ ಸಿಲುಕಿದ 41 ಜನ ಕಾರ್ಮಿಕರ ಕಥೆ, ವ್ಯಥೆ ಹಾಗು ನಮ್ಮ ರಕ್ಷಣಾಪಡೆಯ ಯಶಸ್ವಿಗಾಥೆ. ಉತ್ತರಾಖಂಡದ ಉತ್ತರ ಕಾಶಿ ಜಿಲ್ಲೆಯ ಸಿಲ್ಕ್ಯಾರ ಬಡ್ ಕೊಟ್ ಸುರಂಗದಲ್ಲಿ ನಡೆದ ರಕ್ಷಣಾಪಡೆಯ ಕಾರ್ಯಾಚರಣೆ ನಿಜಕ್ಕೂ ರೋಚಕ.

ಹೈದರಾಬಾದ್ ಮೂಲದ ನವಯುಗ ಇಂಜಿನಿಯರಿಂಗ್ ಕಂಪನಿಯು ರಾಷ್ಟ್ರೀಯ ಹೆದ್ದಾರಿ ನಿಗಮದ ಸಹಯೋಗದಲ್ಲಿ ಉತ್ತರಾಖಂಡದಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಿಕರಿಗಾಗಿ ಸುಗಮ ಹೆದ್ದಾರಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದು; ಯಮುನೋತ್ರಿಯಿಂದ ದರಾಸು ಎಂಬ ನಗರಕ್ಕೆ ಸಂಪರ್ಕ ಏರ್ಪಡಿಸಲು 4531 ಮೀಟರ್ ಉದ್ದದ ಬೃಹತ್ ಸುರಂಗ ತೋಡಲು ಆರಂಭಿಸಿತ್ತು. ನವಂಬರ್ 12 ರ ಸಂಜೆ ಸುರಂಗದ ನಿರ್ಮಾಣ ಕಾರ್ಯ ನೆಡೆಯುತ್ತಿದ್ದಾಗ ಒಂದು ಭಾಗದಲ್ಲಿ ಗುಡ್ಡವು ಅಚಾನಕ್ಕಾಗಿ ಕುಸಿದು ಬಿತ್ತು. ಸುರಂಗದಲ್ಲಿನ ಕುಸಿತದಿಂದಾಗಿ ಅಲ್ಲಿದ್ದ 41 ಕಾರ್ಮಿಕರು ಪಾತಾಳದಲ್ಲೇ ಬಂದಿಯಾಗಿಬಿಟ್ಟರು. ಜಾರ್ಕಂಡ್, ಉತ್ತರ ಪ್ರದೇಶ, ಒಡಿಶಾ, ಹಿಮಾಚಲ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ, ಮತ್ತು ಸ್ಥಳೀಯ ಉತ್ತರಾಖಂಡ ಪ್ರದೇಶಕ್ಕೆ ಸೇರಿದ ಒಟ್ಟು 41 ಕಾರ್ಮಿಕರು ಒಳಗೆ ಸಿಕ್ಕಿಬಿದ್ದಿದ್ದರು. ಸುರಂಗದ ಕಾರ್ಯಾಚರಣೆಯಲ್ಲಿ ಕಾರ್ಮಿಕರ ಸುರಕ್ಷತೆಗಾಗಿ ತುರ್ತು ನಿರ್ಗಮನದ ಯಾವುದೇ ಮಾರ್ಗವನ್ನು ಸಹ ಸಂಸ್ಥೆಯು ನಿರ್ಮಿಸಿರಲಿಲ್ಲ ಎನ್ನುವುದು ವಿಷಾದದ ಸಂಗತಿ.

ಸುರಂಗದ ಬಾಗಿಲಿನಿಂದ ಸುಮಾರು 197 ಅಡಿ ದೂರದಲ್ಲಿ ಕಾರ್ಮಿಕರು ಸಿಕ್ಕಿಬಿದ್ದ ಕಾರಣ ಉಸಿರಾಡಲು ಗಾಳಿಯಿಲ್ಲದೆ, ತಿನ್ನಲು ಆಹಾರವಿಲ್ಲದೆ, ಅವರುಗಳು ಅನುಭವಿಸಿದ ಸಂಕಷ್ಟಗಳು ಹೇಳತೀರದು. ಅಲ್ಲಿನ ರಾಜ್ಯ ಸರ್ಕಾರವು ತಕ್ಷಣವೇ ಎಚ್ಚೆತ್ತುಕೊಂಡು ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಮೊದಲಿಗೆ ಭೂವಿಜ್ಞಾನಿಗಳ ತಂಡವನ್ನು ಕರೆಸಿ ಅಲ್ಲಿನ ಅವಘಡ ನೆಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರೀಕ್ಷಿಸಿತು, ನಂತರ 2018 ರಲ್ಲಿ ಥೈಲ್ಯಾಂಡಿನ ಗುಹೆಯೊಂದರಲ್ಲಿ ಸಿಕ್ಕಿಬಿದ್ದಿದ್ದ ಫುಟ್ ಬಾಲ್ ಆಟಗಾರರನ್ನು ರಕ್ಷಿಸಿದ ಕಾರ್ಯಪಡೆಯನ್ನು ಸಂಪರ್ಕಿಸಿ ಕಾರ್ಯಾಚರಣೆಯಲ್ಲಿ ಅವರು ಯಶಸ್ವಿಯಾಗಿದ್ದ ಮಾರ್ಗವನ್ನೇ ಅಳವಡಿಸಿಕೊಂಡು ಸುರಂಗಕ್ಕೆ ಅಡ್ಡವಾಗಿ ರಂದ್ರ ಕೊರೆಯುವ ಕೆಲಸವನ್ನು ಪ್ರಾರಂಭಿಸಲು ರಕ್ಷಣಾಪಡೆಯನ್ನು ನಿಯೋಜಿಸಿತು. ಆಮ್ಲಜನಕ ಪೂರೈಸಲು, ಆಹಾರ ಒದಗಿಸಲು ಹಾಗು ಎಂಡೋಸ್ಕೋಪಿಕ್ ಕ್ಯಾಮೆರಾ ಒಳಬಿಡಲು ಒಟ್ಟು ಮೂರು ರಂಧ್ರಗಳನ್ನು ಕೊರೆಯಲು ಶುರುಮಾಡಿದರು. ಇದು ಒಂದೆರಡು ದಿನಗಳ ಕೆಲಸವಲ್ಲ ಎರಡು ವಾರಗಳ ಕಾಲ ಅಮೇರಿಕಾದಿಂದ ಅತ್ಯುನ್ನತ ರಂದ್ರ ಕೊರೆಯುವ ಯಂತ್ರವನ್ನು ತರಿಸಿ ರಕ್ಷಣಾ ಪಡೆಗಳು ಕೊರೆಯಲು ಶುರುಮಾಡಿದವು. ಮುಕ್ಕಾಲು ದೂರ ರಂದ್ರ ಕೊರೆದಿದ್ದ ಜಾಗದ ಮೇಲ್ಭಾಗದಿಂದ ಕಾರ್ಮಿಕರ ಇರುವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮೆಗಾ ಫೋನ್ ಮತ್ತು ಎಂಡೊಸ್ಕೋಪಿಕ್ ಕ್ಯಾಮೆರಾ ಬಿಡಲಾಯಿತು. ಆದರೆ ಯಂತ್ರವು ಕೊರೆತ ಶುರುಮಾಡಿ ಮುಕ್ಕಾಲು ಭಾಗದಷ್ಟು ಯಶಸ್ವಿಯಾಗಿ ಒಳ ತಲುಪಿದಾಗ ದುರದೃಷ್ಟವಶಾತ್ ಆ ಯಂತ್ರದ ಕೊಂಡಿಗಳು ಮುರಿದುಬಿದ್ದವು.

ಅಲ್ಲಿಯವರೆಗೂ ರಾಜ್ಯ ಸರ್ಕಾರದ ಅಧಿಕಾರಿಗಳ ದಂಡು ಹಾಗು ಕೇಂದ್ರ ಸರ್ಕಾರದಿಂದ ನಿಯೋಜಿಸಲ್ಪಟ್ಟ ಪರಿಶೀಲನಾ ತಂಡವು ಜೊತೆಗೆ ಮಾಧ್ಯಮ ಮಿತ್ರ ಪಡೆಯು ಸುರಂಗದ ಬಾಗಿಲಲ್ಲೇ ಬೀಡು ಬಿಟ್ಟಿದ್ದವು. ಪ್ರಕೃತಿ ಮಡಿಲಲ್ಲಿ ಸಿಲುಕಿದ ಕಾರ್ಮಿಕರ ಜೀವ ರಕ್ಷಣೆಗೆ ದೇಶಾದ್ಯಂತ ಪ್ರಾರ್ಥನೆಗಳು ಶುರುವಾದವು. ರಂದ್ರ ಕೊರೆಯುವ ಯಂತ್ರವೇ ಮುರಿದು ಬಿದ್ದಾಗ ಎಲ್ಲರನ್ನು ನಿರಾಸೆಯ ಕಾರ್ಮೋಡ ಆವರಿಸಿತು, ಇಷ್ಟು ದಿವಸಗಳ ಕಾಲ ಬೆಳಕು, ಗಾಳಿ ಆಹಾರವಿಲ್ಲದೆ ಸಿಲುಕಿಕೊಂಡ ಕಾರ್ಮಿಕರು ಇನ್ನೂ ಬದುಕಿದ್ದಾರೆಯೇ ಇಲ್ಲವೇ ಎಂಬುದು ತಿಳಿಯದಾಯಿತು. ಅಷ್ಟರಲ್ಲಿ ಮುಂಚೆ ಕಳುಹಿಸಿದ್ದ ಎಂಡೊಸ್ಕೋಪಿಕ್ ಕ್ಯಾಮರಾ ತುಂಬ ತುಂಬಿಕೊಂಡಿದ್ದ ಮಣ್ಣನ್ನು ಬಟ್ಟೆ ಇಂದ ಒರೆಸುತ್ತಾ ಅದರ ಮುಂದೆ ಕಾಣಿಸಿಕೊಂಡ ವ್ಯಕ್ತಿಯೊಬ್ಬ ‘ನಾವೆಲ್ಲ ಚೆನ್ನಾಗಿದ್ದೇವೆ ‘ ಎಂದು ಪ್ರತಿಕ್ರಿಯಿಸಿದ, ಅವನ ಹೆಸರು ‘ಸಾಬಾ ಅಹಮದ್’ ಎಂದು. ಬಿಹಾರದ ಸಾಬಾ ಅಹಮದ್ ನನ್ನು ಕಂಡ ಕೂಡಲೇ ಅಲ್ಲಿನ ರಕ್ಷಣಾ ಪಡೆಗಳು ಮತ್ತಷ್ಟು ಹುರುಪಿನಿಂದ ಮುಂದಿನ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಶುರುಮಾಡಿದವು. ಆಹಾರ ಹಾಗು ಆಮ್ಲಜನಕಕ್ಕಾಗಿ ಕೊರೆದಿದ್ದ ಮಾರ್ಗದಲ್ಲಿ ಕಷ್ಟಪಟ್ಟು ಅಲ್ಲಿ ಸಿಲುಕಿದ್ದ ಕಾರ್ಮಿಕರಿಗೆ ಚಪಾತಿ, ರೊಟ್ಟಿ, ಪಲ್ಯ ಮುಂತಾದ ಲಘು ಆಹಾರವನ್ನು ಹಾಗು ವಿಟಮಿನ್ ಮಾತ್ರೆಗಳನ್ನು ತಲುಪಿಸಿ ಮೆಗಾ ಫೋನ್ ಮೂಲಕ ಅವರಿಗೆ ಧೈರ್ಯ ತುಂಬಲು ಶುರುಮಾಡಿತು ರಕ್ಷಣಾಪಡೆ.

ವಿದೇಶದಿಂದ ಕಾರ್ಯಾಚರಣೆಗೆ ತರಿಸಿದ್ದ ಯಂತ್ರವೇ ಸೋತುಬಿದ್ದಾಗ ರಕ್ಷಣಾ ಪಡೆಯು ಸ್ಥಳೀಯ ‘ಇಲಿ ರಂಧ್ರ ಗಣಿಗಾರಿಕೆ’ ಮೂಲಕ ಕಾರ್ಯಾಚರಣೆಯನ್ನು ಮುಂದುವರೆಸಲು ವಿಶೇಷ ಅನುಮತಿಯನ್ನು ಪಡೆದುಕೊಂಡಿತು. ಇಲಿ ರಂಧ್ರ ಗಣಿಗಾರಿಕೆ ( Rat Hole Mining) ಎಂದರೆ ಸುರಂಗ ನಿರ್ಮಾಣದಲ್ಲಿ, ವಿಶೇಷ ಕೌಶಲ್ಯ ಹೊಂದಿರುವ ವ್ಯಕ್ತಿಗಳಿಂದ ಇಲಿ ಹೆಗ್ಗಣಗಳು ಮಣ್ಣನ್ನು ತೋಡಿದಂತೆ ಸುರಂಗವನ್ನು ಕೊರೆಸಲಾಗುತ್ತದೆ. ಈ ಯೋಜನೆ ಅತ್ಯಂತ ಹಳೆಯ ಮಾದರಿಯಾಗಿದ್ದು ಗಣಿಗಾರಿಕೆಯಲ್ಲಿ ಮಾತ್ರ ಹಿಂದೆ ಉಪಯೋಗಿಸಲ್ಪಡುತ್ತಿತ್ತು ಹಾಗು ಇದರಿಂದ ಪ್ರಾಣಾಪಾಯವೇ ಜಾಸ್ತಿ ಇದ್ದುದ್ದರಿಂದ ಈ ಕ್ರಮವನ್ನು ನಿಷೇಧಿಸಲಾಗಿತ್ತು. ಆದರೂ ಸಹ ಮುಸುಕಿದ ಕತ್ತಲಲ್ಲಿ ಪ್ರಾಣ ಬಿಗಿಹಿಡಿದು, ಬೆಳಕು ನೋಡುವ ಆಸೆ, ಕಾತುರದಲ್ಲಿ ಕುಳಿತಿದ್ದ ಕಾರ್ಮಿಕರ ರಕ್ಷಣೆಗೆ ಕೊನೆಗೆ ನಿಷೇಧಕ್ಕೆ ಒಳಗಾಗಿದ್ದ ತಂತ್ರಜ್ಞಾನವೇ ವರದಾನವಾಯಿತು.

12 ರಿಂದ 14 ನಿಪುಣರು ಇಲಿ ರಂಧ್ರ ಗಣಿಗಾರಿಕೆ ಕ್ರಮದಲ್ಲಿ ತಮ್ಮ ಪ್ರಾಣಾಪಾಯವನ್ನು ಲೆಕ್ಕಿಸದೆ ಶುರುಮಾಡಿ ಕೊನೆಗೂ ನವೆಂಬರ್ 28 ರಂದು ಮಿಕ್ಕ ದಾರಿಯನ್ನು ಕೊರೆದು ಒಳಗಿದ್ದ ಕಾರ್ಮಿಕರು ಒಬ್ಬೊಬ್ಬರಾಗೆ ಹೊರಬರಲು ದೊಡ್ಡ ಪೈಪ್ ಒಂದನ್ನು ತೂರಿಸಿದರು. ಆ ಪೈಪಿನ ಮೂಲಕ ಹೊರಬಂದ ಮೊದಲ ಕಾರ್ಮಿಕನನ್ನು ಕಂಡು ಅಲ್ಲಿದ್ದ ಅಷ್ಟೂ ಜನರು ಹರ್ಷೋದ್ಗಾರ ಮಾಡಿದರು. ಮುಂಚೆಯೇ ತರಿಸಿಟ್ಟಿದ್ದ 41 ಪ್ರತ್ಯೇಕ ಆಂಬುಲೆನ್ಸ್ ಮೂಲಕ ಅಷ್ಟೂ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಜನತೆಯ ಹಾರೈಕೆಯಿಂದ ಹಾಗು ರಕ್ಷಣಾ ತಂಡದ ಅವಿರತ ಶ್ರಮದ ಫಲವಾಗಿ ಅಷ್ಟೂ ಕಾರ್ಮಿಕರ ಜೀವ ಉಳಿದು ಎಲ್ಲರೂ ಸಂತಸದಿಂದ ಅವರವರ ಊರಿಗೆ ಸರಕಾರದ ನೆರವಿನಿಂದ ಪ್ರಾಣಾಪಾಯವಿಲ್ಲದೆ ಸುಗುಮವಾಗಿ ತೆರಳಿದರು.

ಪ್ರಕೃತಿ ಮಾತೆ ಉಳಿವನ್ನೂ ಮಾಡಬಲ್ಲಳು ಹಾಗೇ ಅಳಿವನ್ನೂ ಸಹ. ಎಷ್ಟು ಸುಂದರವೋ ಅಷ್ಟೇ ಭೀಕರಳು ಆ ಪ್ರಕೃತಿ ಮಾತೆ. ತನ್ನೊಳಗೆ ಪ್ರೀತಿ, ಭೀತಿ ಎರಡನ್ನೂ ಅಡಗಿಸಿಕೊಂಡಿದ್ದಾಳೆ. ಈ ಅವಘಡದಿಂದ ಸಂಬಂಧಪಟ್ಟ ಸಂಸ್ಥೆಗಳು ಇನ್ನಾದರೂ ಬುದ್ದಿ ಕಲಿಯಲಿ, ಕಾರ್ಮಿಕರ ಸುರಕ್ಷತೆಯೇ ಪ್ರಥಮ ಆದ್ಯತೆಯಾಗಲಿ. ಒಂದು ದೊಡ್ಡ ದುರಂತವನ್ನು ಸುಖಾಂತ್ಯವಾಗಿಸಿದ ಸಾರ್ಥಕತೆ ನಮ್ಮ ರಕ್ಷಣಾ ತಂಡದ್ದು. ಸಧ್ಯಕ್ಕೆ ನಮ್ಮೆಲ್ಲರ ಹಾರೈಕೆ, ಅಭಿನಂದನೆಗಳು ಇಡೀ ದೇಶವೇ ಮೆಚ್ಚಿದ ಜೀವರಕ್ಷಕರಾದ ರಕ್ಷಣಾ ತಂಡಕ್ಕೆ ಮತ್ತು ರಕ್ಷಣಾ ಯೋಜನೆಯನ್ನು ಯಶಸ್ವಿಯಾಗಿಸಿದ ರಾಜ್ಯ ಹಾಗು ಕೇಂದ್ರ ಸರಕಾರಕ್ಕೆ.

ಶೈಲಾ
ಬೆಂಗಳೂರು
ಚಿತ್ರಗಳು: ಅಂತರ್ಜಾಲ

Related post

Leave a Reply

Your email address will not be published. Required fields are marked *