ಕಥಾಭರಣ -ವಿಭಿನ್ನ ಭಾವಗಳ ಹೂರಣ
ಸಂಪಾದಕರು: ಡಾ. ಅಜಿತ್ ಹರೀಶಿ ಹಾಗು ವಿಠ್ಠಲ್ ಶೆಣೈ
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್
ಬೆಲೆ: 290/-
“ಇಂಡಿಯಾ ಗೆದ್ ಬಿಡ್ತು ಗೆದ್ ಬಿಡ್ತು” “ಎಂ ಕೆ. ಎಂ ಕೆ.” ಇದು ದಿನಗೂಲಿ ಮೇಸ್ತ್ರಿ ‘ಗಿರಿಯ’ ನ ಮಗಳಾದ ಪುಟ್ಟ ಭಾನುವಿನ ಖುಷಿಯ ಚೀರಾಟ. ಇಲ್ಲಿ “ಎಂ ಕೆ” ಅಂದರೆ ಸ್ಟಾರ್ ಬ್ಯಾಟ್ಸಮನ್, ಕೊನೆಯ ಓವರ್ ನಲ್ಲಿ ತನ್ನದೇ ಶೈಲಿಯಲ್ಲಿ ಸಿಕ್ಸರ್ ಎತ್ತಿ ವಿಶ್ವ ಕಪ್ ಗೆಲ್ಲಿಸಿದಾಗ ಪುಟ್ಟ ಭಾನು ಖುಷಿಯಿಂದ ಕೂಗಿಕೊಂಡಿದ್ದು. ಇದು “ಕಥಾಭರಣ” ಕಥಾಸಂಕಲನದಲ್ಲಿನ ವಿಠ್ಠಲ್ ಶೆಣೈ ರವರ “ಮುಗಿಲೆತ್ತರದ ಸೆಲ್ಫಿ” ಕಥೆಯ ಆರಂಭ.
ಈ ಕಥೆಯಲ್ಲಿ “ಎಂ ಕೆ” ಎಂಬ ಸ್ಟಾರ್ ಬ್ಯಾಟ್ಸಮನ್ ನನ್ನು ಪುಟ್ಟ ಭಾನು ಅದೆಷ್ಟು ಮನಸ್ಸಿಗೆ ಹಚ್ಚಿಕೊಂಡಿರುತ್ತಾಳೆಂದರೆ ಒಂದು ದಿನ ತನ್ನ ತಂದೆ ಗಿರಿಯನಿಗೆ ‘ಅಪ್ಪ “ಎಂ ಕೆ” ಜೊತೆ ಒಂದು ಸೆಲ್ಫಿ ಬೇಕು’ ಎಂದು ಮುಗ್ಧ ಮನಸ್ಸಿನಿಂದ ಕೇಳುತ್ತಾಳೆ. ಈ ಪುಟ್ಟ ಭಾನುವನ್ನು ತಂದೆ ಗಿರಿಯ ಅದೆಷ್ಟು ಹಚ್ಚಿಕೊಂಡಿರುತ್ತಾನೆಂದರೆ ಅದು ಓದುಗರು ಓದಿಯೇ ತಿಳಿಯಬೇಕು. ಕಥೆಯ ಪ್ರಾರಂಭದಲ್ಲಿ “ವಿಠ್ಠಲ್ ಶೆಣೈ” ಪುಟ್ಟ ಭಾನುವಿನ ಕನಸನ್ನು ಓದುಗರಿಗೆ ಹಚ್ಚಿ ಬಿಟ್ಟುಬಿಡುತ್ತಾರೆ ಆದರೆ ಕಥೆಯ ಅಂತ್ಯದವರೆಗೂ ತಂದೆ “ಗಿರಿಯ” ನದೇ ಹೋರಾಟ. ಭಾನುವಿಗೆ “ಎಂ ಕೆ” ಸೂಪರ್ ಸ್ಟಾರ್ ಆದರೆ ಗಿರಿಯನಿಗೆ ಭಾನುವೆ ಲಿಟಲ್ ಸ್ಟಾರ್.
ಗಿರಿಯ ದಿನಗೂಲಿ ಮೇಸ್ತ್ರಿ, ಆದರೂ ತನ್ನ ಮಗಳ ಆಸೆಯನ್ನು ಹೇಗಾದರೂ ಮಾಡಿ ತೀರಿಸಲೇಬೇಕು ಎಂಬ ಹಠ. ಇಂಡಿಯನ್ ಕ್ರಿಕೆಟ್ ಬೋರ್ಡ್, ಚಿನ್ನಸ್ವಾಮಿ ಸ್ಟೇಡಿಯಂ, ಐಪಿಎಲ್ ಇನ್ನೂ ಅದೆಷ್ಟೋ ಪಾತ್ರವಲ್ಲದ ಆದರೆ ಪುಟ್ಟ ಭಾನುವಿನ ಆಸೆಗೆ ಮೆಟ್ಟಲುಗಳು ಎನ್ನಬಹುದಾದವುಗಳನ್ನು ಓದುಗರು ಒಂದು ಕಥೆಯಲ್ಲಿ ಓದಬಹುದಾಗಿದೆ. ಎಂ ಕೆ ಯ ಜೊತೆ ಸೆಲ್ಫಿ ತೆಗೆದುಕೊಳ್ಳುವ ಭಾನುವಿನ ಕನಸನ್ನು ತಂದೆ ಗಿರಿಯ ನನಸಾಗಿಸುತ್ತಾನಾ? ಓದುಗರು ಓದಿಯೇ ತಿಳಿಯಬೇಕು. ಕಥೆಯ ಪ್ರಾರಂಭದಿಂದ ಅಂತ್ಯದವರೆಗೂ “ವಿಠ್ಠಲ್ ಶೆಣೈ” ರವರು ಓದುಗರನ್ನು ಕೊತೂಹಲದಲ್ಲಿ ತೊಡಗಿಸುತ್ತಾರೆ, ಆ ರೋಚಕತೆಗೆ ಇನ್ನಷ್ಟು ಮೆರಗು ತರುವುದು ಅವರು ಕಥೆಯ ಅಂತ್ಯದಲ್ಲಿ ಆಧುನಿಕ ಟೆಕ್ನಾಲಜಿಯನ್ನು ಕಥೆಗೆ ಉಪಯೋಗಿಸಿರುವುದು.
ಮೇಲಿನದು “ಕಥಾಭರಣ”ದ ಒಟ್ಟು 28 ಕಥೆಗಳಲ್ಲಿ ಒಂದಾದ “ಮುಗಿಲೆತ್ತರದ ಸೆಲ್ಫಿ”ಯ ಒಂದು ಕಿರು ಪರಿಚಯ. ಇದರಲ್ಲಿರುವ ಮಿಕ್ಕ 27 ಕಥೆಗಳು ವಿಭಿನ್ನ ಲೇಖಕ – ಲೇಖಕಿಯರದು. ಅಂಜನಾ ಹೆಗಡೆ ಯವರ “ಮಾರಿಜಾತ್ರೆಯ ದೋಣಿ” ಗುರುಪಾದ ಬೇಲೂರು ರವರ “ಯಾರವರು” ಡಾ. ಅಜಿತ್ ಹರೀಶಿ ಯವರ “ಉಪರಿ” ವಾಣಿ ಕಾಮತ್ ರವರ “ಅಪ್ಪ” ಆಶಾ ಜಗದೀಶ್ ರವರ “ನದಿ – ಪಾತ್ರ” ವಿದ್ಯಾ ಭರತನಹಳ್ಳಿ ಯವರ “ಪ್ರಕ್ಷೋಭೆ” (ಇಲ್ಲಿ 28 ಕಥೆಗಳ ಹೆಸರು ಹೇಳಲು ಜಾಗದ ಮಿತಿ ಇರುವುದರಿಂದ ಮಿಕ್ಕ ಲೇಖಕ ಲೇಖಕಿಯರು ಕ್ಷಮಿಸಬೇಕು) ಮುಂತಾದವು ಎಲ್ಲಾ ವಿಭಿನ್ನವೇ. 28 ಲೇಖಕರ ಕಥೆಗಳನ್ನು ಸಂಗ್ರಹಿಸಿ ಒಂದು ಪುಸ್ತಕ ರೂಪದಲ್ಲಿ ಹೊರತರುವ ಸಾಹಸವನ್ನು ಡಾ.ಅಜಿತ್ ಹರೀಶಿ ಹಾಗು ಶ್ರೀ ವಿಠ್ಠಲ್ ಶೆಣೈ ರವರು ಅದ್ಭುತವಾಗಿ ಮಾಡಿದ್ದಾರೆ. ಈ ಪುಸ್ತಕಕ್ಕೆ ವಸುಧೇಂದ್ರ ರವರು ಹಿನ್ನುಡಿ ಬರೆದಿದ್ದಾರೆ. ಸದಾ ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸುವ ಶ್ರೀ ರಘುವೀರ್ ಸಮರ್ಥ್ ರವರು ಇದನ್ನು ತಮ್ಮ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮೂಲಕ ಹೊರತಂದಿದ್ದಾರೆ.
ಎಲ್ಲಾ ಲೇಖಕರನ್ನು ಒಂದೇ ವೇದಿಕೆಯಲ್ಲಿ ಆಹ್ವಾನಿಸಿ “ಕಥಾಭರಣ” ಪುಸ್ತಕದ ಜೊತೆ ಲೇಖಕಿ ಶ್ರೀಮತಿ ವಸಂತ್ ಕಲ್ ಬಾಗಲ್ ರವರ “Some ದರ್ಶನ” ಹಾಗು “ಅಡ್ಡಿತುಷ ಬಕ್ಕಜಬಿನ್ನಿ” ಪುಸ್ತಕಗಳನ್ನು ಶ್ರೀಯುತ ಲೆಫ್ಟಿನೆಂಟ್ ಗೋಪಿನಾಥ್ ರವರು ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ” ಅಗ್ರಹಾರ ಕೃಷ್ಣಮೂರ್ತಿ, ಜೋಗಿ (ಗಿರೀಶ್ ಅತ್ವಾರ್), ಆಶಾ ರಘು, ವಸಂತ್ ಕಲ್ಬಾಗಲ್, ಅಲಕಾ ತೀರ್ಥಹಳ್ಳಿ, ಪ್ರಸಾದ್ ವಶಿಷ್ಠ, ಶ್ವೇತ ಭಿಡೆ, ಅನಂತ್ ಕುಣಿಗಲ್ ಇನ್ನು ಅನೇಕ ಲೇಖಕ – ಲೇಖಕಿಯರು, ಸಾಹಿತ್ಯಾಸಕ್ತರು, ಓದುಗರು ಉಪಸ್ಥಿತರಿದ್ದರು.
ಈ ವಿಭಿನ್ನ ಭಾವಗಳ ಹೂರಣವಾದ “ಕಥಾಭರಣ” ಕಥಾಸಂಕಲನವನ್ನು ಓದುಗರು ಓದಿ, ಡಾ. ಅಜಿತ್ ಅರೀಶಿ ಹಾಗು ಶ್ರೀ ವಿಠ್ಠಲ್ ಶೆಣೈ ರವರ ಇಂತಹದೊಂದು ಸೃಜನಶೀಲ ಪ್ರಯತ್ನಕ್ಕೆ ಕನ್ನಡಿಗರು ನೀರೆರೆದು ಪ್ರೋತ್ಸಾಹಿಸಬೇಕೆಂದು “ಸಾಹಿತ್ಯಮೈತ್ರಿ” ತಂಡ ಕೋರುತ್ತದೆ.
ಈ ಮೂರು ಪುಸ್ತಕಗಳನ್ನು ಓದಲು ಆಸಕ್ತಿಯುಳ್ಳವರು ರಘುವೀರ್ ಸಮರ್ಥ್ ರವರನ್ನು 9945939436 ಕ್ಕೆ ಸಂಪರ್ಕಿಸಿ್ದರೆ ಪುಸ್ತಕವನ್ನು ನಿಮ್ಮ ಮನೆ ಬಾಗಿಲಿಗೇ ತಲುಪುವ ವ್ಯವಸ್ಥೆ ಮಾಡುತ್ತಾರೆ.
ಕು ಶಿ ಚಂದ್ರಶೇಖರ್