ಕಥೆ ಬರೆಯಬೇಕು! ಹೀಗೊಂದು ಚಡಪಡಿಕೆ, ಸುಮಾರು ಎರಡು ತಿಂಗಳಿಂದಲೂ ನನ್ನನ್ನು ಹಿಂಡುತ್ತಿದೆ. ನಾನು ಕಥೆಗಾರನಾ? ನನಗೆ ಗೊತ್ತಿಲ್ಲ. ಕಥೆ ಬರೆಯುವುದು ನನ್ನ ಚಟವೇ ಇರಬಹುದು ಎಂದುಕೊಂಡಿದ್ದೇನೆ. ನಾನು ಇದಕ್ಕೂ ಮುಂಚೆ ಹಲವು ಕಥೆ ಬರೆದಿದ್ದೇನೆ. ಆದರೆ ಅವು ‘ಕಥೆ’ ಎಂಬ ದೃಷ್ಟಿಯಿಂದ ಪರಿಪೂರ್ಣವಾಗಿವೆಯೇ ? ಗೊತ್ತಿಲ್ಲ.
ಮುಖ್ಯವಾಗಿ ಕಥೆ ಎಂದರೆ ಏನೆಂದೇ ನನಗೆ ಗೊತ್ತಿಲ್ಲ. ‘ಒಳ್ಳೆಯ ಕಥೆ’ ಎಂಬುದು ನನಗಿನ್ನು ಅರ್ಥವೇ ಆಗಿಲ್ಲ. ಸಾಹಿತ್ಯಾಸಕ್ತರು ಮೆಚ್ಚಿಕೊಂಡಿದ್ದನ್ನೇ ನಾನು ಮುಗುಮ್ಮಾಗಿ ಒಪ್ಪಿಕೊಂಡಿದ್ದೇನೆ. ಹೀಗೆ ನನ್ನ ಕಥೆಗಳು ಕಥೆಗಳಾ? ಎಂಬ ಭಯದಿಂದಲೆ ನಾನು ಈ ಹಿಂದೆ ಬರೆದವುಗಳನ್ನು ಎಲ್ಲರ ಮುಂದೂ ಇಟ್ಟಿಲ್ಲ.
ಆದರೂ ಈ ತುಡಿತವನ್ನು ತಣಿಸಲಾಗುತ್ತಿಲ್ಲ. ನಾನು ಕಥೆ ಬರೆಯಲೇಬೇಕು. ಈ ನಿರ್ಧಾರ ಗಟ್ಟಿಯಾಗಿ, ನಾನು ಪೆನ್ನು ಹಿಡಿದು ಕುಳಿತುಬಿಟ್ಟಿದ್ದೇನೆ!
‘ಒಂದೂರಿನಲ್ಲಿ ಅನುಪಮ ಸುಂದರಿಯಾದ ರಾಜಕುಮಾರಿಯಿದ್ದಳು…’ ಹೀಗಂತ ಶುರುಮಾಡುವುದು…. ಉಹುಂ… ಇದು ಈಗಿನ ವಾತಾವರಣವೇ ಅಲ್ಲ. ಹಿಂಗೆಲ್ಲ ಶುರುಮಾಡಿದರೆ ನಾನು ಮುದಿಕಥೆಗಾರನೋ ಅಥವಾ ನನ್ನ ಕಥೆ ನೂರಾರುವರ್ಷ ಹಳೆಯದೋ ಆಗಿಬಿಡುತ್ತದೆ!
ಸರಿ, ಮೊದಲು ನನ್ನ ಪರಿಸರವನ್ನು ಹೊಂದಿಸೋಣ ಅನಿಸುತ್ತದೆ. ಯಾವುದಕ್ಕೂ ಒಂದು ಉತ್ತಮ ವಾತಾವರಣವು ಉತ್ತಮ ಆರಂಭವನ್ನು ಒದಗಿಸಿಕೊಡುತ್ತದೆ. ಈ ಮೇಜಿನ ಧೂಳು ಝಾಡಿಸುತ್ತೇನೆ. ಒಂದು ಸುತ್ತು ಪೇಟೆಯನ್ನು ಸುತ್ತಿಬಂದರೆ ಈಗಿನ ಪರಿಸ್ಥಿತಿ ವಾತಾವರಣದ ಅಂದಾಜಾಗಬಹುದು. ಮೊದಲು ಈ ಹಳೇ ಕನ್ನಡಕನ್ನು ತೆಗೆದಿಟ್ಟು, ಬರಿಗಣ್ಣಿಗೆ ಕಾಣುವುದೇನು ಅಂತ ನೋಡಬೇಕು.
ಓಹೋ! ಇದಂತೂ ನಮ್ಮೂರ ಪೇಟೆ. ಪೂರ್ತಾ ಗಜಿಬಿಜಿ. ಗಜಿಬಿಜಿ ಅಂದೆ, ಅಲ್ವಾ! ಯಾಕೆಂದರೆ ಇಲ್ಲಿ ಏನನ್ನೋ ಕೊಳ್ಳಲು ಬಂದು ಬೇಡದ್ದನ್ನು ಕೊಂಡವರೇ ಹೆಚ್ಚು. ಪೇಟದಿಂದ ಹಿಡಿದು ಪುಟಗೋಸಿಯವರೆಗೂ, ಪುಟಾಣಿಯಿಂದ ಹಿಡಿದು ಬಟಾಣಿಯವರೆಗೂ, ಪಾತ್ರೆ-ಪಗಡಿಗಳಿಂದ ಹಿಡಿದು ಪಟ್ಟೆ-ಪೀತಾಂಬರದವರೆಗೂ ಇಲ್ಲಿ ಏನುಂಟು ಏನಿಲ್ಲ! ಇಲ್ಲಿ ಬಿಕರಿಯಾಗುವುದೆಲ್ಲ ಹೊಸದಲ್ಲ. ಹೊಸದೆಲ್ಲ ಬಿಕರಿಯಾಗಬೇಕೆಂದೂ ಇಲ್ಲ. ಕೆಲವೊಮ್ಮೆ ಹಳೆಯ ಮಾಲಿಗೇ ಬೆಲೆ ಹೆಚ್ಚು! ಅಸಲಿಗೆ ಪದಾರ್ಥವೊಂದು ಮಾರಾಟವಾಗಲು ಏನು ಬೇಕು? ಅದು ಉಪಯುಕ್ತವಾಗಿರಬೇಕಾ? ಹಾಗೇನಿಲ್ಲ. ನಾನು ಅರ್ಥಮಾಡಿಕೊಂಡ ಹಾಗೆ ಕೊಳ್ಳುವುದಕ್ಕೆ ಅಂತಲೇ ಯಾವ ಪದಾರ್ಥವೂ ಇಲ್ಲ. ಕೊಳ್ಳುವವ ಇದ್ದಾನೆ ಎಂಬುದಕ್ಕೇ ಸಗಣಿಯೂ ಮಾರಾಟವಾಗುತ್ತಿದೆ. ಅದಕ್ಕೇ ಪೇಟೆ ಯಾವಾಗಲೂ ತುಂಬಿದೆ ಅನ್ನಿಸುವುದು ಮಾಲು-ಮಾರಾಟಗಾರರು ಹೆಚ್ಚಿದ್ದಾಗ ಅಲ್ಲ, ಕೊಳ್ಳುವವ ಇದ್ದಾಗ. ಪೇಟೆಯಲ್ಲಿ ದಿನವೂ ಬದಲಾಗುವುದು ಏನೂ ಇಲ್ಲ. ಹೆಚ್ಚೆಂದರೆ ಇವತ್ತಿನ ಧಾರಣೆ ಅಷ್ಟೇ.
ನಾನಂತೂ ಈಗ ಇದನ್ನು ಸರಿಯಾಗಿ ನೋಡುತ್ತಿದ್ದೇನೆ. ಇಷ್ಟು ದಿನವೂ ನಡೆದ, ಮುಂದೆ ನಡೆವ ಹಾದಿ ಇದೇ ಆದರೂ, ಇಂದು ಇವುಗಳ ಅಸ್ತಿತ್ವದ ಕಡೆಗೆ ನನ್ನ ಮನ, ಗಮನ ಹರಿದಿದ್ದು ಸೋಜಿಗವಾಯಿತು! ಈಗಂತೂ ಸಮಯ ಸಂಜೆಯಾಗುತ್ತಾ ಬಂದಿರುವ ಮಧ್ಯಾಹ್ನ. ಎಲ್ಲರೂ ದುಡಿಯುವವರೇ, ಕಥೆ ಬರೆಯುವವನೊಬ್ಬನನ್ನು ಬಿಟ್ಟು!
ಈ ನಮ್ಮೂರ ಪೇಟೆಯನ್ನು ಸುತ್ತುವಾಗ ನನಗೆ ಮೂರು ಅಂಶಗಳು ಪ್ರಮುಖವಾಗಿ ಗಮನಕ್ಕೆ ಬಂದವು. ಕೆಲವರು ವ್ಯಾಪಾರಿಗಳು, ಕೆಲವರು ಗ್ರಾಹಕರು, ಕೆಲವರು ನಿದ್ರಕರು. ಹೌದು, ನವು ದಿನದ ಯಾವುದೇ ವೇಳೆಯಲ್ಲೂ ವರ್ತಕರನ್ನೂ, ಗ್ರಾಹಕರನ್ನೂ, ನಿದ್ದೆಹೊಡೆಯುವವರನ್ನೂ ನೋಡಬಹುದು, ಪೇಟೆಯಲ್ಲಿ ; ಬಹುಶಃ ಜಗತ್ತಿನ ಯಾವುದೇ ಮಾರುಕಟ್ಟೆಯಲ್ಲಿ.
ನನಗೆ ನಿರಾಸೆಯಾಗಿಹೋಯಿತು. ಯಾವುದೇ ಸಂತೆಯನ್ನೂ ಎಷ್ಟೇ ತಿರುಗಿದರೂ ಕಾಣುವುದಿದೇ! ಇದಂತೂ ನನಗೆ ಬರೆಯಬಹುದಾದ ವಿಷಯದ ಬಿಂದು ಅಂತ ಅನಿಸಲೇ ಇಲ್ಲ. ಪೆಚ್ಚುಮೋರೆ ಹಾಕಿ ನಾನು ಮನೆಗೇ ನಡೆದೆ. ಕನ್ನಡಕವಿಲ್ಲದ ಕಾರಣ ನನಗೆ ಎಲ್ಲವೂ ಅಸ್ಪಷ್ಟವಾಗಿಯೇ ಕಂಡಿತ್ತು, ಆದರೆ ನಾನು ಇವತ್ತು ಅರ್ಥಮಾಡಿಕೊಂಡದ್ದು ಸ್ಪಷ್ಟವಾಗಿಯೇ ಇದೆ. ನನಗೆ ನನ್ನ ದಪ್ಪ ಕನ್ನಡಕವೇ ಸರಿಯಾದುದು ಎನ್ನಿಸಿತು. ಮನೆಗೆ ಬಂದವನೇ ಎಂದಿನ ಮೋಹದಿಂದ ಅದನ್ನು ಧರಿಸಿಬಿಟ್ಟೆ.
ಅದು ನನ್ನ ಕನ್ನಡಕ, ಪ್ರೀತಿಯಿಂದ ಸುಲೋಚನ ಅನ್ನುತ್ತೇನೆ. ಅದೂ ಅದರ ಹೆಸರೇ ಅಲ್ಲವೇ! ಅದರೊಡನೆ ನನ್ನ ಒಡನಾಟ ತುಂಬಾ ಹಳೆಯದು. ನಾನು ಸ್ವತಂತ್ರವಾಗಿ ವ್ಯವಹರಿಸುವುದಕ್ಕೂ ಮುನ್ನ ನನ್ನನ್ನು ಹುಡುಕಿಕೊಂಡು ಬಂದ ಸಂಗಾತಿ ಅದು. ನಿಜ ಹೇಳಬೇಕೆಂದರೆ, ವಸ್ತುಗಳು ಇದ್ದದ್ದು ಇದ್ದಂತೆ ಮಾತ್ರ- ಅರ್ಥವಾಯಿತಲ್ಲ! ವಸ್ತುಗಳು, ಅವು ಹೇಗಿವೆಯೋ ಹಾಗೆ ಮಾತ್ರ ನೋಡಲು- ನನ್ನ ಮಟ್ಟಿಗೆ- ಈ ಕನ್ನಡಕ ಬೇಕೇ ಬೇಕು. ಇಂಥದ್ದೊಂದು ಕನ್ನಡಕ ಎಲ್ಲರಿಗೂ ಬೇಕೆಂದು ನನಗೆ ಯಾವಾಗಲೂ ಅನಿಸುವುದು. ಯಾಕೆಂದರೆ ನಾವು ಇದ್ದದ್ದನ್ನು ಇದ್ದಂತೆ ಮಾತ್ರ ನೋಡಬೇಕಿದೆ; ಆಗ ಅವು ಹೇಗಿವೆಯೋ ಹಾಗೆ ಮಾತ್ರ ನಮಗೆ ಕಂಡು ಅರ್ಥವಾಗುತ್ತವೆ. ಅದಕ್ಕಾಗಿ ಎಲ್ಲರಿಗೂ ಒಂದು ಕನ್ನಡಕ ಬೇಕು; ಬಣ್ಣದ್ದಲ್ಲ, ಯಾವ ಬಣ್‌ಣವೂ ಇಲ್ಲದ್ದು!
ಅಥವಾ, ನಿಜ ಹೇಳಬೇಕೆಂದರೆ, ಕನ್ನಡಕದಿಂದ ಏನೂ ಹೆಚ್ಚಿನ ಲಾಭವಿಲ್ಲ. ಅದಂತೂ ಪಾರದರ್ಶಕವೆ ಇದೆ. ನಿಮ್ಮ ಕಣ್ಣು ಸರಿ ಇದ್ದರೆ ಕನ್ನಡಕ ಬೇಕಿಲ್ಲ. ಕಣ್ಣು ಸರಿ ಇದ್ದರೂ ಧರಿಸಿದರೆ- ಗೇಣುದ್ದದ್ದು ಮೂರುದ್ದ ಮೂರುದ್ದದ್ದು ಗೇಣುದ್ದ ಕಂಡೀತೇನೋ! ಅಷ್ಟೇ. ಅಗತ್ಯಕ್ಕೆ ತಕ್ಕಂತೆ ಧರಿಸಿದರೆ ಇದ್ದದ್ದು ಇದ್ದಂತೆ ಕಾಣುವುದು. ಹೆಚ್ಚಿನದ್ದೇನೂ ಇಲ್ಲ. ಕಣ್ಣು ಸರಿ ಇದ್ದರೆ ಅಂದೆನಲ್ಲ ; ಅದೇ ಕಷ್ಟವಾಗಿರೋದು. ಎಲ್ಲವೂ ಕಾಣುತ್ತೆ; ಕಣ್ಣು ಸರಿ ಇರೋದಿಲ್ಲ ಅಷ್ಟೇ.
ಹೀಗೆ ನಾನು ‘ನೋಡಲು’ ಮಾತ್ರ ಸಾಧನವಾದ ಕನ್ನಡಕವನ್ನು ‘ತಿಳಿಯಲು’ ಉಪಯೋಗಿಸಿ, ಸೋತು, ಮತ್ತೆ- ಅದು ತನ್ನ ಕೆಲಸವನ್ನಾದರೂ ಮಾಡಲಿ- ಎಂದು ಧರಿಸಿಬಿಟ್ಟಿರುವೆ.
ಇರಲಿ, ಈಗ ಮುಖ್ಯವಿಷಯ- ನನ್ನ ಕಥೆ ಮತ್ತದರ ವಸ್ತು- ಇದಕ್ಕೆ ಬರೋಣ. ನಾನೀಗ ಕಥೆಯನ್ನಂತೂ ಬರೆಯಲೇಬೇಕಿದೆ. ನಾನೀಗ ಕಥೆಯನ್ನಂತೂ ಬರೆಯಲೇಬೇಕಿದೆ. ವಿಚಿತ್ರವೆಂದರೆ ನಾನು ದಿನವೂ ಅನುಭವಿಸುತ್ತಿರುವ ವಸ್ತುಗಳು ಬರೆಯಬಹುದಾದ ಕಥೆಗೆ ಮಾತ್ರ ವಸ್ತುಗಳಾಗುತ್ತಿಲ್ಲ.
ನನಗೆ ಹುಚ್ಚು ಹತ್ತಿಬಿಟ್ಟಿತ್ತು. ರೊಚ್ಚು ಹೆಚ್ಚಿಬಿಟ್ಟಿತ್ತು. ನಾಲ್ಕಾರು ಸಾಲುಗಳನ್ನು ಬರೆದೆ; ನಾಟಕೀಯವೆನಿಸಿತು, ನನ್ನ ಧಾರೆಯಿದಲ್ಲವೆನಿಸಿತು; ಅಳಿಸಿದೆ. ಹೀಗೆ ಬರೆದೆ-ಹಾಗೆ ಬರೆದೆ, ಬರೆದೆ-ಅಳಿಸಿದೆ, ಬರೆದೆ-ಅಳಿಸಿದೆ ಕೊನೆಗೆ ನನಗೆ ಅಳು ಬಂತು. ನಾನು ಬರೆಯುವುದು ಏನನ್ನು? ದೈನಂದಿನ ನನ್ನ ಎಲ್ಲ ಅನುಭವಗಳನ್ನು ಬರೆದರೆ ಅದರಲ್ಲಿ ಹೊಸತೇನು? ಅದೊಂದು ಸಾಹಿತ್ಯಿಕ ದಿನಚರಿಯಷ್ಟೇ! ಅವುಗಳಲ್ಲಿನ ದುಃಖ-ದುಮ್ಮಾನ, ಸುಖ-ಸಂತೋಷಗಳು ಯಾರಿಗೂ ತಿಳಿಯದ, ಯಾರೂ ಅನುಭವಿಸದ ವಿಷಯಗಳೇನಲ್ಲ. ಅವರವರ ತೂಕ, ಅವರವರ ಹಗುರ, ಇಷ್ಟೇ ತಾನೇ ವ್ಯತ್ಯಾಸ ? ನನ್ನದ್ದಲ್ಲದ ಬೇರೊಂದು ರೂಪದಿಂದ ಎಲ್ಲರಿಗೂ ಅದು ದಕ್ಕೇ ಇರುತ್ತದೆ. ಏನು ಬರೆಯಲಿ? ಹಾಗಾದರೆ ನಾನು ಬರೆಯುವುದೆಲ್ಲಾ ಕಲ್ಪನೆಗಳಾ ?
ಇಷ್ಟು ಆಲೋಚಿಸುವಾಗ ನಾನು ಬರೆಯುವುದು ಇನ್ನೊಬ್ಬರಿಗಾ? ಎಂಬ ಪ್ರಶ್ನೆ ಧುತ್ತೆಂದು ನನ್ನೆದುರು ನಿಂತುಬಿಟ್ಟಿತು. ನನಗೆ ಬೇರೇನೂ ಕಾಣುತ್ತಿಲ್ಲ. ‘‘ಅಯ್ಯೋ ಮಂಕೇ, ಸಾಪೇಕ್ಷವಾಗಿ ಯಾಕೆ ಎಲ್ಲವನ್ನೂ ಯೋಚಿಸುತ್ತಿದ್ದೀ? ನಿನ್ನ ಬರೆಹವು ಸಾಪೇಕ್ಷವಾಗಬೇಕಿಲ್ಲ, ಹಾಗಿದ್ದರೆ ಎಲ್ಲ ಕಥೆಗಾರರೂ ಒಬ್ಬೊಬ್ಬರಿಗೆ ಒಂದೊಂದು ಕಥೆ ಬರೆಯಬೇತ್ತು. ನಿನಗೆ ಹತ್ತಿರುವುದು ಕೇವಲ ಬರೆಯಬೇಕೆಂಬ ಹುಚ್ಚು ಹೊರತು, ಯಾರಿಗಾಗಿ ಏನನ್ನೋ ಬರೆಯಬೇಕು ಅಂತಲ್ಲ’’ ಎಂಬ ದನಿ ಜೋರಾಗಿ ಕೇಳಿಸಿತು! ಯಾರಪ್ಪ ಇದು ಹೇಳಿದ್ದು? ಓಹೋ ಚಿತ್ತ! ನನ್ನೊಳಗೆ ನಾನೇ ಮಾತಾಡಿತ್ತಿದ್ದೇನೆ! ಆದರೆ ಇದು ವಿಚಾರ ಮಂಥನದಳತೆಗೆ ನಿಲುಕುತ್ತಿಲ್ಲ, ಕಾಣುತ್ತಿಲ್ಲ. ಜಂಭದ ಕೋಳಿಯ ಕೂಗಿನಂತೆ ಭಾಸವಾಗುತ್ತಿದೆ.
ಹಾಗಾದರೆ ನಾನು ಬರೆದು ಸಾಧಿಸುವುದೇನು ? ಅರೆ ಇದೆಂಥ ಹುಚ್ಚು! ಸಾಧನೆಗಾಗಿ ಯಾರಾದರೂ ಬರೀತಾರಾ? ನನ್ನ ಬರವಣೆಗೆ ಇರೋದು ಭಾವನೆಗಳ ಅಭಿವ್ಯಕ್ತಿಗಾಗಿ ಮಾತ್ರ; ವ್ಯಕ್ತಿಯ ಅವಲಂಬನೆ ಇದಕ್ಕೆ ಇಲ್ಲವೇ ಇಲ್ಲ. ಯಾರಿಗಾಗಿ? ಅದು ಪ್ರಶ್ನೆಯೇ ಅಲ್ಲ- ನನಗಾಗಿಯೇ ನಾನು ಬರೆಯುವುದು! ಅಷ್ಟೇ! ಹಾಗಾಗಿ ನಾನು ಕಥೆ ಬರೆಯಲೇಬೇಕು!
ಸರಿಯಪ್ಪ, ನಾನು ಬರೆಯಲೇ ಬೇಕು ಅಂತ ಘೋರ ನಿರ್ಧಾರ ಮಾಡೇಬಿಟ್ಟಿರುವುದರಿಂದ ಈ ಕ್ಷಣಕ್ಕೆ ತೋಚಿದಂಥ, ಅರ್ಥವಾಯಿತಲ್ಲ- ಸುಮ್ಮನೆ ತೋಚಿದಂಥದ್ದು ಅಷ್ಟೇ- ವಿಷಯವೊಂದನ್ನು ಆರಿಸಿಕೊಂಡು ಬರೆಯಹತ್ತಿದೆ-
‘‘ಅದೊಂದು ಹೂವು. ಅದರ ಹೆಸರು ಅದಕ್ಕೆ ಗೊತ್ತಿಲ್ಲ. ಗೊತ್ತಾದರೆಷ್ಟು? ಆಗದಿದ್ದರೆಷ್ಟು? ಅದರ ಸೊಗಡಿನಲ್ಲೇನಾದರೂ ಗುಳಿಬೀಳುತ್ತದೆಯೇ? ಅದೇನು ಕೆಡುತ್ತದೆಯೇ? ಕರಗುತ್ತದೆಯೇ? ಕರೆಯುವವರು ಯಾವ ಹೆಸರಿಟ್ಟದರೂ ಕರೆಯಲಿ, ಹೂಂಗಿಟ್ಟಿದರಷ್ಟೇ ಆಯಿತು. ಹೀಗೆ ಅದು ಸಾವಿರಾರು ವರ್ಷಗಳಿಂದ ಆದೊಂದು ಬೀಜದೊಳಗೆ ಅವಿತುಕೊಂಡು ಕಾಯುತ್ತಿತ್ತು. ಬೀಜವೂ ಕೂಡಾ ಯಾರಕಣ್ಣುಗೂ ಬೀಳದೇ ಬಚ್ಚಿಟ್ಟುಕೊಂಡಿತ್ತು ಬಿಡಿ. ಅಂತೂ ಬಹಳದಿನ ಕಾದ ಕಾವಿಗೆ ಒಣಗಿ ವಟರಿಟ್ಟು ಬಾಯಾರಿಹೋಗಿದ್ದ ಬೀಜಕ್ಕೆ ಎಲ್ಲಿಂದಲೋ ನಾಕು ಹನಿ ನೀರು ಸಿಕ್ಕಿತು; ಯಾರದ್ದೋ ಬೆವರಿರಬೇಕು ಅದು, ಬಿಡಿ. ದಕ್ಕಿದ್ದು ನೀರು! ಅದು ದಾಹ ಮಾತ್ರ ತಣಿಸಿತಾ? ಇಲ್ಲ! ಬೀಜಕ್ಕೆ ಹೊಸತೇನೋ ಸಿಕ್ಕಿತ್ತು. ಬೆದರಿ ಬಚ್ಚಿಟ್ಟುಕೊಂಡಿದ್ದ ಬೀಜ ಜಿಗಿದು ಚಿಗಿತು ಹೊರಬಿತ್ತು! ನಂತರ ಹುಲುಸಾಗಿ ಬೆಳೆದು, ಬಸಿರಾಗಿ-ಹಸಿರಾಗಿ, ಉಸಿರಾಗಿ ಹಬ್ಬಿನಿಂತ ಬೀಜಕ್ಕೆ ಹತ್ತಾರು ಟಿಸಿಲು, ನೂರಾರು ಕೊಂಬೆ, ಹಲವಾರು ಮಕ್ಕಳು! ನವಿರಾಗಿ ಚಿಗುರಿನಿಂತ ಅಂಚಿನ ಜೊತೆಗೆ ಮುಗಿಲಾಗಿ ನಕ್ಕ ಸಾವಿರಾರು ಹೂವುಗಳು! ಅರ್ಧ ಹೂವುಗಳು ಮತ್ತೆ ಬೀಜವಾದರೆ ಇನ್ನರ್ಧ ಒಣಗಿ ಉದುರಿ ಮಣ್ಣಾದವು. ಅದು…. ಆ…. ಹೂವುಗಳು…..
ಅರೆರೆ! ನಿಲ್ಲಿ! ಹೂವಿನಿಂದ ಪ್ರಾರಂಭವಾಗಿ ಮತ್ತೆ ಹೂವಿನಲ್ಲೇ ನಿಂತಿತಲ್ಲ ನನ್ನ ಕಥೆ! ಮತ್ತೆ ‘‘ಅದೊಂದು ಹೂವು’’ ಅಂತ ಬರೆಯೋದಾ?
ಥತ್! ಕ್ಷಮಿಸಿ, ನನಗೆ ಕಥೆ ಬರೆಯಲಿಕ್ಕೆ ಬರಲ್ಲ. ನನ್ನ ಹುಚ್ಚು ನನ್ನೊಂದಿಗೇ ಸಾಯಲಿ ಬಿಡಿ.
ಹಯವಧನ ಬಿ ಎಸ್