ಕನ್ನಡಕದ ಹುಡುಗಿ
ಪೇಟೆಬೀದಿಯಲ್ಲಿ
ಗೋಟಿ ಅಂಗಡಿಯ ತಿರುವಿನಲಿ
ಸೂರ್ಯ ಇಳಿಯೋ ವೇಳೇಲಿ
ದಿನವೂ ಪ್ರತಿದಿನವೂ
ಒಬ್ಬಾಕಿ ವೈಯ್ಯಾರದಿ ನಡೆದಾಡ್ತಿದ್ಲು
ಕನಸಿನಲ್ಲಿ ಬಂದು ಕಾಡೋ
ನನ್ನವಳಂಗೆ ಕಾಣ್ತಿದ್ಲು
ತುಂಬು ಕೂದಲ ಮೋಟು ಜಡೆಗಳು
ಕೈಯ ತುಂಬೆಲ್ಲಾ ಹಸಿರು ಬಳೆಗಳು
ಗಲ್ ಎಂದು ಗುಯ್ ಗುಡುವ ಕಾಲ್ಗೆಜ್ಜೆಗಳು
ಇವುಗಳ ಸದ್ಧನ್ನು ಅಡಗಿಸುವಂತೆ
ಅದೊಂದು ಕನ್ನಡಕ ಆಗಾಗ ಅಡ್ಡಿಯಾಗುತ್ತಿತ್ತು
ಕನ್ನಡಕವಿಲ್ಲದಿದ್ದರೆ
ಅವಳೊಂದು ಮುಗ್ಧ ಬೆಕ್ಕಿನ ಮರಿ
ಮುಖವೇ ಸಣ್ಣದಾಗಿ ಕಾಣುತ್ತದೆ
ಕಣ್ಣುಗಳನ್ನು ತಿಂದುಕೊಂಡ ಗುಳಿಗಳು
ಎಲ್ಲಾ ಬೋಳು ಬೋಳು
ನನಗೂ ಕನ್ನಡಕ ಬೇಕೆನಿಸಿತು
ಅಯ್ಯೋ.. ಡೆಡ್ಲಿ ಕಾಂಬಿನೇಶನ್
ಮಾಸ್ಕಿನ ಜೊತೆ ಕನ್ನಡಕ
ಒಮ್ಮೊಮ್ಮೆ
ಹಿಮಾಲಯದಂತೆ ಫಾಗ್ ಕಟ್ಟುತ್ತದೆ
ಇನ್ನೊಮ್ಮೆ
ಮೂಗಿನ ಮೇಲೆ ಅಚ್ಚೆ ಬೀಳುತ್ತದೆ
ಕನ್ನಡಕವಿಲ್ಲದಿದ್ದರೆ
ಅವಳ ಸಾಲಿನಲ್ಲಿ ನಾನೂ ಒಂದು ಮುಗ್ಧ ಜೀವ
ಕುಡಿದವರ ಹಾಗೆ ಹುಡುಕಾಡುವೆ
ಅವಳ ಗುರುತು ಸಿಗದೆ ಪರದಾಡುವೆ
ಈಗ ನನಗೂ ಕನ್ನಡಕ ಆಪ್ತ
ಯಾರಾದರೂ ಹುಡುಗಿಯರು ಹುಡುಕುತಿರಬಹುದು
ನನ್ನಂತೆಯೇ ಕನ್ನಡಕ ಧರಿಸಿದ ಹುಡುಗರನ್ನು..
ಅನಂತ್ ಕುಣಿಗಲ್