ಕನ್ನಡಕ್ಕಾಗಿ ಕೈಲಾಸಂ
ಅದೊಂದು ಇಂಗ್ಲೆಂಡಿನ ನೈಟ್ ಕ್ಲಬ್, ಅಲ್ಲಿದ್ದ ಹಾಡುಗಾರನೊಬ್ಬ CONSTANTINOPLE ಎಂಬ ಪದವನ್ನೇ ರಾಗವನ್ನಾಗಿಸಿ ಪ್ರತೀ ಪದವನ್ನು C-O-N-S-T-A-N-T-I-N-O-P-L-E ಎಂದು ಬಿಡಿಸಿ ಬಿಡಿಸಿ ಆಕರ್ಷಕ ಶೈಲಿಯಲ್ಲಿ ಹಾಡಿ ಎಲ್ಲರ ಚಪ್ಪಾಳೆಯನ್ನು ಗಿಟ್ಟಿಸಿದ. ನಂತರ ಅಲ್ಲಿ ಸೇರಿದ್ದ ಜನರ ಕುರಿತು “ನಾನು ಹಾಡಿದ ಹಾಗೆ ಸ್ಥಳದಲ್ಲೇ ಯಾವುದಾದರೂ ಪದದ ಮೇಲೆ ರಾಗ ಹಾಕಿ ಹಾಡುವ ದೈರ್ಯ ಯಾರಿಗಾದರೂ ಇದೆಯಾ? ಎಂದು ಸವಾಲು ಹಾಕಿದನಂತೆ. ಆಗ ನಮ್ಮ ಬೆಂಗಳೂರಿನಿಂದ ಇಂಗ್ಲೆಂಡಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದ ಒಬ್ಬ ಉತ್ಸಾಯಿ ಯುವಕರು ಮುಂದೆ ಬಂದು ಸವಾಲು ಸ್ವೀಕರಿಸಿ ಆಶುಕವಿಯಾಗಿ C-O-N-S-T-A-N-T-I-N-O-P-L-E ಹಾಡಿನ ರಾಗದಲ್ಲೇ
“ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ“
ಎಂದು ಹಾಡಿ ಅಲ್ಲಿದ್ದ ಜನರ ಮೆಚ್ಚುಗೆ ಪಡೆದು ಬಹುಮಾನವನ್ನು ಸಹ ಸ್ವೀಕರಿಸಿದರಂತೆ. ಆ ಉತ್ಸಾಯಿ ಯುವಕರೇ ನಮ್ಮ ಕನ್ನಡದ ಕೈಲಾಸಂ – ತ್ಯಾಗರಾಜ ಪರಮಶಿವ ಐಯ್ಯರ್ ಕೈಲಾಸಂ.
ಕೈಲಾಸಂ ಜಸ್ಟಿಸ್ ಪರಮಶಿವ ಅಯ್ಯರ್ ಮತ್ತು ಕಮಲಮ್ಮ ದಂಪತಿಗಳಿಗೆ ಜನಿಸಿದವರು. ಹುಟ್ಟಿದಾಗಿನಿಂದಲೇ ಶ್ರೀಮಂತಿಕೆಯನ್ನು ನೋಡಿದ ಕೈಲಾಸಂ ಮದರಾಸಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡಿಗೆ ತೆರಳಿದವರು. ಮನೆಯಲ್ಲಿ ಶಿಸ್ತಿನ ಬಿಗು ವಾತಾವರಣವಿದ್ದರೂ ಸಹ ಚಿಕ್ಕಂದಿನಿಂದಲೇ ಕೈಲಾಸಂ ಪರಮ ತುಂಟರು ಹಾಗು ಪ್ರತಿಬಾವಂತರು. ತಮ್ಮ ಪ್ರೌಢ ಶಾಲೆಯಲ್ಲಿ ಓದುತ್ತಿದ್ದಾಗ ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ಕೊಟ್ಟು ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದಿದ್ದರು ಆಗ ಕೈಲಾಸಂ ಎಲ್ಲಾ ಹದಿನೈದು ಪ್ರಶ್ನೆಗಳಿಗೆ ಉತ್ತರಿಸಿ ಉತ್ತರ ಪತ್ರಿಕೆಯ ಕೆಳಗೆ “ಮಾನ್ಯ ಪರೀಕ್ಷಕರೇ, ಯಾವುದಾದರೂ ಹತ್ತು ಉತ್ತರಗಳಿಗೆ ಅಂಕಗಳನ್ನು ನೀಡಿ” ಎಂದು ಒಕ್ಕಣೆಯನ್ನು ಬರೆದು ಬಂದಿದ್ದರಂತೆ.
ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಾಲ ಕಳೆಯಲು ಅಲ್ಲಿನ ರಂಗಭೂಮಿಗಳ ನಾಟಕಗಳನ್ನು ನೋಡಲು ಹೋಗುತ್ತಿದ್ದ ಕೈಲಾಸಂ ಅವರಿಗೆ ಅಲ್ಲಿನ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳಿಂದ ಬಹಳವಾಗಿ ಪ್ರಭಾವಿತರಾದರು. ನಮ್ಮಲ್ಲಿ ನೆಡಯುತ್ತಿದ್ದ ನಾಟಕಗಳು ಎಂದರೆ ಬರಿಯ ಪೌರಾಣಿಕ ನಾಟಕಗಳು ಮಾತ್ರವೇ. ಆಗ ಕೈಲಾಸಂ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳ ಶೈಲಿಯಲ್ಲೇ ರಚಿಸಿದ “ಟೊಳ್ಳುಗಟ್ಟಿ” ಎಂಬ ನಾಟಕ ಯಶಸ್ವಿ ಪ್ರದರ್ಶಿತವಾಗಿ ರವೀಂದ್ರನಾಥ್ ಟಾಗೋರ್ ರವರು ಸಹ ವೀಕ್ಷಿಸಿ ಮೆಚ್ಚಿಕೊಂಡರಂತೆ. ಆ ನಾಟಕ ಪ್ರಥಮ ಬಹುಮಾನ ಗಳಿಸಿತಲ್ಲದೆ ಕನ್ನಡ ರಂಗಭೂಮಿಯಲ್ಲಿ ಹೊಸತನದ ಕಿಚ್ಚನ್ನೇ ಎಬ್ಬಿಸಿತು. ರಂಗಪ್ರೇಕ್ಷಕರು ಪೌರಾಣಿಕ ನಾಟಕದಿಂದ ಸಾಮಾಜಿಕ ನಾಟಕದೆಡೆಗೆ ಹೆಚ್ಚು ಒಲವನ್ನು ತೋರಿಸಲಾರಂಭಿಸಿದರು.
ಕನ್ನಡಾಂಗ್ಲಾ ಭಾಷೆಯಲ್ಲಿ ನಾಟಕಗಳನ್ನು ಬರೆಯುತ್ತಿದ್ದ ಕೈಲಾಸಂ ಅಂದಿನ ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರಿಸುತ್ತಿದ್ದಲ್ಲದೆ, ತಪ್ಪು ಮಾಡಿದವರಿಗೆ ಮುಟ್ಟಿ ನೋಡುಕೊಳ್ಳುವಂತೆ ಮಾಡುತ್ತಿದ್ದವು ಎಂದರೆ ಅತಿಶಯೋಕ್ತಿಯೇನಲ್ಲ. ಕನ್ನಡ ಪದಕ್ಕೆ ಆಂಗ್ಲ ಪದವನ್ನು ಜೋಡಿಸಿ ಮೇಡಂಉ, ಸಿಗರೇಟ್ಉ, ಕಂಪ್ನೀ, ಹೋಮ್ ರೂಲ್ಉ ಇನ್ನೂ ಅನೇಕ ಪದಗಳನ್ನು ನಾಟಕಗಳಲ್ಲಿ ಉಪಯೋಗಿಸಿ ಯಶಸ್ವಿಯಾದರು. ಅವರ ನಾಟಕದಲ್ಲಿ ಪಾತ್ರ ಮಾಡುತ್ತಿದ್ದವರಿಗೂ ಸಹ ಈ ಪದಗಳಿಗೆ ಒಗ್ಗಿಕೊಳ್ಳಲು ಸಾಕು ಬೇಕಾಗಿತ್ತು. ಕೈಲಾಸಂ ರವರ ಟೊಳ್ಳುಗಟ್ಟಿ ಅಥವಾ ಮಕ್ಕಳಸ್ಕೂಲ್ ಮನೇಲಲ್ವೇ!, ಹೋಂರೂಲು, ಬಹಿಷ್ಕಾರ, ಗಂಡಸ್ಕತ್ರಿ, ನಮ್ ಬ್ರಾಹ್ಮಣ್ಕೆ, ಬಂಡ್ವಾಳಿಲ್ಲದ ಬಡಾಯಿ, ನಮ್ ಕ್ಲಬ್ಬು, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ ಅಥವಾ ನಂಕಂಪ್ನಿ, ತಾಳಿ ಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ವೈದ್ಯನವ್ಯಾಧಿ, ಸೂಳೆ ಪ್ರಸಿದ್ಧ ನಾಟಕಗಳು. ಇದಲ್ಲದೆ ಅನೇಕ ಕಥೆಗಳನ್ನು ಹಾಗು ಕವನಗಳನ್ನು ಸಹ ರಚಿಸಿದ್ದಾರೆ. ಅವರ ತಿಪ್ಪಾರಳ್ಳಿ ಬಲು ದೂರ ಹಾಗು ಕೋಳಿಕೆ ರಂಗ ಇನ್ನೂ ಎಷ್ಟೋ ಕವನಗಳು ಹಾಡಾಗಿ ರೂಪುಗೊಂಡು ಜನರ ಬಾಯಲ್ಲಿ ಇನ್ನೂ ನಲಿದಾಡುತ್ತಿದೆ.
ಕೈಲಾಸಂ ತಮ್ಮ ಹಾಸ್ಯಪ್ರಜ್ಞೆಗೆ ಹಾಗು ನೇರ ಪಂಚಿಂಗ್ ಉತ್ತರಗಳಿಗೆ ಪ್ರಸಿದ್ದರು. ಕೈಲಾಸಂ ರವರು ಅವರ ತಂದೆಯ ಜೊತೆ ಮನಸ್ತಾಪದಿಂದ ಬಹಳ ಕಾಲ ಒಂಟಿಯಾಗಿ ಪರಿಚಿತರೊಬ್ಬರ ಮನೆಯ ಹೊರಗಡೆ ಇದ್ದ ಒಂದು ಚಿಕ್ಕ ಕೋಣೆಯಲ್ಲಿ ಇದ್ದಾಗ ಆ ಕೋಣೆಯು ಅಸ್ತವ್ಯಸ್ತವಾಗಿ ಶುಚಿಯಿಲ್ಲದೆ ಕಸ ತುಂಬಿದ್ದನ್ನು ಕಂಡು ಅಲ್ಲಿನ ಪರಿಚಾರಕರೊಬ್ಬರು ಕೈಲಾಸಂ ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಿ ಕಸವನ್ನೆಲ್ಲಾ ಗುಡಿಸಿಬಿಟ್ಟಿರುತ್ತಾರೆ. ಆಗ ಕೈಲಾಸಂ ಬಂದವರೇ ಕೋಣೆಯನ್ನು ನೋಡಿ ಕೋಪದಿಂದ ಆ ಪರಿಚಾರಕರನ್ನು ಇಲ್ಲಿದ್ದ ಕಸವೆಲ್ಲಾ ಏನಾಯ್ತು ಎಂದಾಗ ಅವರು ಗುಡಿಸಿಬಿಟ್ಟೆ ಸರ್ ಎಂದು ಹಲ್ಕಿರಿದು ನೀವೇಕೆ ಸದಾ ಕಸದ ಮಧ್ಯೆ ಇರುತ್ತೀರಿ ಎಂದು ಮರುಪ್ರಶ್ನಿಸಿದರಂತೆ. ಆಗ ಕೈಲಾಸಂ
“Do you know what is meant by ಕಸ…
Thing which was not supposed to be there,
but if it is there, it is called ಕಸ …for example You..ಇನ್ ಮೈ ರೂಮು”
ಎಂದು ಉತ್ತರಿಸಿದ್ದರಂತೆ.
ಇನ್ನೊಮ್ಮೆ ಅವರ ಪರಿಚಿತರೊಬ್ಬರು ನೀವು ಇರುವುದು ವೈಟ್ ಹೌಸಿನಲ್ಲೋ (ಅವರ ಮನೆಯ ಹೆಸರು ವೈಟ್ ಹೌಸ್ ಎಂದಿತ್ತು) ಎಂದಾಗ ಮನೆಯನ್ನು ತೋರಿಸುತ್ತ “You know this is ವೈಟ್ ಹೌಸ್ ಬಟ್ iam ಇನ್ ಔಟ್ ಹೌಸ್” ಎಂದರಂತೆ.
ಕೈಲಾಸಂ ಅವರು 1945 ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಆಗ ಅಲ್ಲಿ ಅವರು ಮಾಡಿದ್ದ ಪುಟ್ಟ ಭಾಷಣವು ಎಷ್ಟು ಮಾರ್ಮಿಕ ಹಾಗು ಜನರ ಮನಸ್ಸಿಗೆ ತಾಗಿತೆಂದರೆ ಆ ಭಾಷಣ ಈಗಲೂ ಫೇಮಸ್ಉ.
ಕನ್ನಡ ರಂಗಭೂಮಿಯಲ್ಲೇ ಕ್ರಾಂತಿಯೆಬ್ಬಿಸಿದ ಕೈಲಾಸಂ ರವರ ನಾಟಕಗಳು ಈಗಲೂ ಅಲ್ಲಲ್ಲಿ ಯಶಸ್ವಿ ಪ್ರದರ್ಶನಗೊಳ್ಳುತ್ತಿರುತ್ತದೆ. ಅವರು ಗತಿಸಿದ ಮೇಲೂ ಅವರನ್ನು ಜೀವಂತವಾಗಿರಿಸಿದ ಮತ್ತೊಬ್ಬ ವ್ಯಕ್ತಿಯೆಂದರೆ, ಶ್ರೀಯುತ ದಿವಂಗತ ಸಿ.ಆರ್.ಸಿಂಹ ರವರುಸುಮಾರು ವರ್ಷಗಳ ಕಾಲ ಟಿಪಿಕಲ್ ಟಿಪಿ ಕೈಲಾಸಂ ಎಂಬ ಏಕಪಾತ್ರಾಭಿನಯದ ಮುಖಾಂತರ ಸಿಂಹ ಅವರು ಕೈಲಾಸಂ ಅವರ ವ್ಯಕ್ತಿತ್ವವನ್ನು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿಯುವಂತೆ ಮಾಡುವುದರಲ್ಲಿ ಅತ್ಯಂತ ಯಶಸ್ವಿಯಗಿದ್ದರು. ಅವರ ಅಭಿನಯ ನೋಡುತ್ತಿದ್ದ ಜನರಿಗೆ ಕೈಲಾಸಂ ನವರನ್ನೇ ನೋಡುತ್ತಿದ್ದೇವೇನೋ ಎನ್ನಿಸಿ ರೋಮಾಂಚನಗೊಳ್ಳುತ್ತಿದ್ದರು.
ನಮ್ಮ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದಲ್ಲಿ ಕೈಲಾಸಂ ರವರನ್ನು ನೆನೆಯೋಣ, ಜೈ ಕನ್ನಡಾಂಬೆ….
ಚಂದ್ರಶೇಖರ್ ಕುಲಗಾಣ
ಮಾಹಿತಿ ಹಾಗು ಚಿತ್ರಗಳು: ಅಂತರ್ಜಾಲ