ಕನ್ನಡಿಯ ಬಿಂಬದ ನೈಜತೆ
ಚಿತ್ತಾರವದು ಮನವನು ಇಣುಕಿ
ಸವಿಭಾವಕೆ ಹೃದಯವದು ಸಿಲುಕಿ..
ಕಂಡೂ ಕಾಣದ ನೋಟವದು ಕೆಣಕಿ..
ಮೂಡಿದೆ ಮನದ ಕನ್ನಡಿಯಲಿ ನಿನ್ನ ಬಿಂಬ!!
ಬಿಮ್ಮನೆ ಅದು ಮನವನಾವರಿಸಿದೆ ತುಂಬಾ!!
ಮನವು ಕಣ್ಮುಚ್ಚಿ ಮಾಡುತಿದೆ ದುಂಬಾಲು
ಕನಸಿನ ರಾಶಿಗಳದೇ ಸಿಂಹಪಾಲು..
ಕಾಣದಿರೆ ನೀ ಮನವೇತಕೋ ಕಂಗಾಲು..
ಕಂಡಿದೆ ಹೃದಯದ ಚಿಪ್ಪಿನಲಿ ನಿನ್ನ ಬಿಂಬ!!
ನಿಖರ ಜ್ಯೋತಿ ಬೆಳಗುತಿದೆ ಮನದ ತುಂಬ!!
ಮನದ ಕಣ್ತರೆದು ನೋಡಲು ಮರೀಚಿಕೆ
ಪಡೆದು ಕಳೆದೇನೆಂಬ ಅಂಜಿಕೆ..
ಸಿಧ್ಧವಾಗುತಿದೆ ಕಾಣದ ಮನೋಭೂಮಿಕೆ..
ಅಂತರ್ಮನದಿ ಸಾರ್ಥಕತೆ ಕಾಣಲು ನಿನ್ನ ಬಿಂಬ!!
ಮನದ ಬಾಂದಳದಿ ಮಿನುಗಿ ಅದರ ಪ್ರತಿಬಿಂಬ!!
ಮಾಮರದ ಕೋಗಿಲೆಯಂತೆ ಇಂಪು
ಹಿಮಾಲಯದ ಶಿಖರದಂತೆ ತಂಪು..
ಹಸಿರಿನ ದಟ್ಟ ಕಾನನದಂತೆ ಸೊಂಪು..
ಕಂಡಿದೆ ಪ್ರಭೆಯಲಿ ನಿನ್ನದೇ ನೆರಳಿನ ಬಿಂಬ!!
ಉಸಿರಾಡಿಹ ಜೀವಾತ್ಮಕೆ ಅದೇ ಆಧಾರಸ್ತಂಭ!!
ಸುಮನಾ ರಮಾನಂದ