ಕನ್ನಡ ಮಾಣಿಕ್ಯ – ಗುಂಡ್ಲು ಪಂಡಿತ ರಾಜರತ್ನಂ

ಕನ್ನಡ ಮಾಣಿಕ್ಯ – ಗುಂಡ್ಲು ಪಂಡಿತ ರಾಜರತ್ನಂ

ಚಿಕ್ಕಂದಿನ ನಮ್ಮ ಶಾಲೆಯ ದಿನಗಳಲ್ಲಿ ನಮ್ಮ ಪಠ್ಯ ಪುಸ್ತಕದಲ್ಲಿದ್ದ ‘ಒಂದು ಎರಡು ಬಾಳೆಲೆ ಹರಡು’, ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು’, ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’, ‘ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ’, ಮುಂತಾದ ಪದ್ಯಗಳು ಇನ್ನೂ ಸಹ ನೆನಪಿನಲ್ಲಿ ಇವೆ. ಕಾಲೇಜಿನ ದಿನಗಳಲ್ಲಿ ಕೇಳಿದ ‘ಬೆಳದಿಂಗಳ್ ರಾತ್ರಿಲಿ’, ‘ಹೆಂಡ ಹೆಂಡ್ತಿ ಕನ್ನಡ್ ಪದಗೋಳ್’ ಈಗಲೂ ಕೇಳುತ್ತಲೇ ಇರುತ್ತೀವಿ. ಇಂತಹ ಪದಗಳ ಸೃಷ್ಟಿಕರ್ತ ನಮ್ಮ ಕನ್ನಡ ನಾಡಿನ “ಜಿ. ಪಿ. ರಾಜರತ್ನಂ”.

ರಾಜರತ್ನಂ ಹುಟ್ಟಿದ್ದು ಡಿಸೆಂಬರ್ ೫ ೧೯೦೮ ಅವರ ತಾಯಿಯ ಊರಾದ ರಾಮನಗರದಲ್ಲಿ. ಜಿ.ಪಿ.ರಾಜಯ್ಯಂಗಾರ್ ಎಂಬುದು ಅವರ ಮೂಲ ಹೆಸರು. ಜಿ.ಪಿ. ಎಂದರೆ ಗುಂಡ್ಲುಪಂಡಿತ ಎಂದು. ರಾಜರತ್ನಂ ಅವರ ವಂಶಸ್ಥರಾದ ಹಿರಿಯರೊಬ್ಬರು ಹಿಂದೆ ತಮಿಳುನಾಡಿನಿಂದ ವಲಸೆ ಬಂದು ಗುಂಡ್ಲು ಎಂಬ ಊರಿನಲ್ಲಿ ಆಯುರ್ವೇದ ಪಂಡಿತರಾಗಿದ್ದರೆಂದೂ, ಅವರನ್ನು ಜನ ಗುಂಡ್ಲುಪಂಡಿತ ಎಂಬುದಾಗಿ ಕರೆಯುತ್ತಿದ್ದರಂತೆ ಹಾಗಾಗಿ ಅದೇ ಜಿ. ಪಿ. ಎಂಬುದರ ಸಂಕ್ಷಿಪ್ತ ರೂಪ.

ರಾಜರತ್ನಂ ರವರು ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದಾಗ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಇವರ ಸಾಹಿತ್ಯ ಚಟುವಟಿಕೆಗಳನ್ನು ಗಮನಿಸಿ ಅದನ್ನೇ ಮುಂದುವರೆಸುವಂತೆಯೂ ಹಣಕಾಸಿನ ನೆರವನ್ನು ತಾನು ನೋಡಿಕೊಳ್ಳುವುದಾಗಿ ಭರವಸೆ ಕೊಟ್ಟಿದರ ಫಲವಾಗಿ ‘ಚೀನಾದೇಶದ ಬೌದ್ಧ ಯಾತ್ರಿಕರು’, ‘ಧರ್ಮದಾನಿ ಬುದ್ಧ’, ‘ಬುದ್ಧನ ಜಾತಕಗಳು’ ಮುಂತಾದ ಬೌದ್ಧಕೃತಿಗಳ ರಚನೆಗೆ ಕಾರಣವಾಯಿತು. ‘ಭಗವಾನ್ ಮಹಾವೀರ’, ‘ಶ್ರೀ ಗೋಮಟೇಶ್ವರ ‘, ‘ಮಹಾವೀರರ ಮಾತುಕತೆ’, ‘ಭಗವಾನ್ ಪಾರ್ಶ್ವನಾಥ’, ‘ಜೈನರ ಅರವತ್ತು ಮೂವರು’ ಮೊದಲಾದ ಜೈನ ಸಾಹಿತ್ಯದ ರಚನೆಗೂ ರಾಜರತ್ನಂ ಕಾರಣರಾದರು. ಮಕ್ಕಳ ಸಾಹಿತ್ಯವಾಗಿ ‘ತುತ್ತೂರಿ’, ‘ಕಡಲೆಪುರಿ’, ‘ಗುಲಗಂಜಿ’, ‘ಕಂದನ ಕಾವ್ಯಮಾಲೆ’ ರಚಿತವಾಯಿತು. ಶಿಶುಸಾಹಿತ್ಯ ಪ್ರಕಾರವನ್ನು ಕನ್ನಡದಲ್ಲಿ ರಾಜರತ್ನಂ ಪೋಷಿಸಿ ಬೆಳೆಸಿದರು.

ಕುಡಿತದ ಅಭ್ಯಾಸವೇ ಇರದಿದ್ದ ರಾಜರತ್ನಂ ಮೈಸೂರಿನ ಹೆಂಡದಂಗಡಿಗಳಿಗೆ ಹೋಗಿ ಅಲ್ಲಿ ಕುಡಿಯಲು ಬರುತ್ತಿದ್ದ ಸಾಮಾನ್ಯ ಬಡವರ ಮಾತುಕತೆಗೆ ಕಿವಿಕೊಟ್ಟಿದರ ಪರಿಣಾಮ ‘ಎಂಡಕುಡುಕ ರತ್ನ’ ಎಂಬ ಅನನ್ಯ ಕೃತಿಯನ್ನು ರಚಿಸಿದರು. ಇದರಲ್ಲಿನ ಪದಗಳು ಆಗಿನ ಮಡಿವಂತ ಸಾಹಿತ್ಯಕರನ್ನು ಬೆಚ್ಚಿ ಬೀಳಿಸಿತು. ಆ ಪುಸ್ತಿಕೆಯ ಪ್ರಕಟಣೆಗೆ ಹಣ ಇಲ್ಲದೆ, ತಮ್ಮ ‘ತಾರೆ’ ಕವನಕ್ಕೆ ಕೊಟ್ಟಿದ್ದ ಬಿ.ಎಂ.ಶ್ರೀ ಚಿನ್ನದ ಪದಕವನ್ನೇ ಒತ್ತೆ ಇಟ್ಟು ಸಾಲ ಪಡೆದರು. 14 ಪದ್ಯಗಳ ‘ಎಂಡಕುಡುಕ ರತ್ನ’ ಕೃತಿಗೆ ಪುಟ್ನಂಜಿ ಪದಗಳು, ಮುನಿಯನ ಪದಗಳು ಸೇರಿಕೊಂಡು 77 ಪದಗಳ ‘ರತ್ನನ ಪದಗಳು’ ಕೃತಿ ಆಯಿತು. ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಆ ಪದಗಳು ಎಬ್ಬಿಸಿದ ಕೋಲಾಹಲ, ಪಡೆದ ಪ್ರಚಾರ, ಜನಪ್ರಿಯತೆಗಳು ಅಸೂಯೆ ಹುಟ್ಟಿಸುವ ಹಾಗಿದ್ದವು. ‘ರತ್ನನ ಪದಗಳು’ ಅಂದಿನ ದಿನದಲ್ಲೇ ಸತತವಾಗಿ ಏಳೆಂಟು ಮುದ್ರಣ ಕಂಡು, ಇಂದಿಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿರುವ ಹತ್ತಾರು ಕನ್ನಡ ಪುಸ್ತಕಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ.

ರಾಜರತ್ನಂ ರವರ ರತ್ನನ್ ಪದಗಳು ಕೃತಿಯಲ್ಲಿನ ಕನ್ನಡ ಭಾಷೆಯ ಪೊಗರು, ಭಾವದ ನವಿರು, ಕಲ್ಪನೆಯ ಸೊಗಸು, ಛಂದಸ್ಸಿನ ವೈವಿಧ್ಯ ಎಲ್ಲವೂ ಸೇರಿ ಒಂದು ಅಮೂಲ್ಯ ಪಾಕವಾಗಿದೆ. ಅದರಲ್ಲಿರುವ ಜೀವನ ದರ್ಶನ, ಕುಡುಕನೆಂಬ ಹೀಯಾಳಿಕೆಗೆ ಒಳಗಾದ ಬಡವನೊಬ್ಬನ ಕಾಣ್ಕೆ, ಆತನ ನೋವು, ನಲಿವು, ಒಲವು, ಗೆಲವು, ಸೋಲು, ಜೊತೆಗೆ ಆರ್ಥಿಕ ವಿಷಮತೆ, ಶೋಷಣೆಗಳ ಬಗ್ಗೆ ಆಕ್ರೋಶದ ಪ್ರತಿಭಟನೆಯ ದನಿ, ಬದುಕಿನ ಬಗ್ಗೆ ನಲ್ಮೆಯ ನೋಟ, ಬಡವನ ಶೃಂಗಾರ, ಹಾಸ್ಯ ರಸಪ್ರಜ್ಞೆ, ಆ ಧಾಟಿ! ಕನ್ನಡದಲ್ಲೇ ಅಸಮಾನ!

೧೯೩೮ರಲ್ಲಿ ರಾಜರತ್ನಂ ರಿಗೆ ಕಾಲೇಜು ಕನ್ನಡ ಪಂಡಿತ ಹುದ್ದೆ ದೊರೆತು ನಿವೃತ್ತರಾಗುವವರೆಗೆ ಮೈಸೂರು, ಶಿವಮೊಗ್ಗ, ತುಮಕೂರು ಮುಂತಾದ ಊರುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದರು. ಯು.ಜಿ.ಸಿ. ಅಧ್ಯಾಪಕರಾಗಿಯು ಸಹ ಒಂದೆರಡು ವರ್ಷ ಕೆಲಸ ಮಾಡಿದರು. ಕಾಲೇಜಿನ ಕೆಲಸದಲ್ಲಿದ್ದಾಗ ಹಲವು ವಿದ್ಯಾರ್ಥಿಗಳು ರಚಿಸಿದ ‘ನಮ್ಮ ನಮ್ಮವರು’, ‘ವಿದ್ಯಾರ್ಥಿ ವಿಚಾರ ವಿಲಾಸ’, ‘ಗಂಧದ ಹುಡಿ’, ‘ನಮ್ಮ ಬೇಂದ್ರೆಯವರು’, ‘ಬಾಲ ಸರಸ್ವತಿ’, ‘ಹೂವಿನ ಪೂಜೆ’ ಕೃತಿಗಳನ್ನು ಅಚ್ಚು ಹಾಕಿಸಿದರು.ಹಲವು ಕವಿ ಸಮ್ಮೇಳನಗಳ ಅಧ್ಯಕ್ಷತೆ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್, ಮಲ್ಲೇಶ್ವರದ ನಾಗರೀಕರಿಂದ ಪುಸ್ತಕ ಮಾರಾಟದ ನಿಧಿಯ ಅರ್ಪಣೆಯ ವಿಶಿಷ್ಟ ಸನ್ಮಾನ, ಎಲ್ಲಕ್ಕೂ ಕಿರೀಟ ಪ್ರಾಯವಾಗಿ 1978ರಲ್ಲಿ ದೆಹಲಿಯಲ್ಲಿ ಸುವರ್ಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ – ಇವು ರಾಜರತ್ನಂ ಅವರಿಗೆ ಸಂದ ಗೌರವಗಳು.

ಇಂತಹ ಕನ್ನಡ ರತ್ನವನ್ನು ಕನ್ನಡ ಮಾಸದಲ್ಲಿ ನೆನೆಯೋಣ. ಜೈ ಕನ್ನಡಾಂಬೆ.

ಮಾಹಿತಿ ಕೃಪೆ : ನುಡಿಸಾಹಿತ್ಯಪರಿಷತ್ತು

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *