ಕನ್ನಡ ಸಾರಸ್ವತ ಲೋಕವು ಕಥೆ, ಕಾದಂಬರಿ,ನಾಟಕ,ಮಹಾಕಾವ್ಯ,ಕವನ, ಸಣ್ಣ ಕಥೆ, ಹನಿಗವನ ಇನ್ನೂ ಹಲವಾರು ಪ್ರಕಾರಗಳಿಂದ ಶ್ರೀಮಂತವಾಗಿದೆ.ಈ ಶ್ರೀಮಂತ ಪರಂಪರೆಗೆ ಇತ್ತಿಚಿನ ಸೇರ್ಪಡೆ ಎಂದರೆ ಕನ್ನಡ ಶಾಯಿರಿಗಳು.
ಬದುಕಿನ ಸಾರವನ್ನು ಕೆಲವೇ ಸಾಲುಗಳಲ್ಲಿ ತೆರೆದಿಡುವ ಪರಿಯನ್ನು ಶಾಯಿರಿ ಎನ್ನಬಹುದು.ಇದನ್ನು ಓದಿಯೇ ಸವಿಯಬೇಕು! ಶಾಯಿರಿ ಎಂಬ ಪದವು ಅರೇಬಿಕ್ ಭಾಷೆಯ “ ಶೇರ್” ಎಂಬ ಪದದ ರೂಪಾಂತರವಾಗಿದೆ.ಶೇರ್ ಪದದ ಅರ್ಥ ಎರಡು ಸಾಲಿನ ಪದ್ಯ ಎಂದಾಗುತ್ತದೆ. ನಮಗೆ ಬಹಳ ಸಂತೋಷವಾದಾಗ, ಮತ್ತು ಬಹಳ ದುಃಖವಾದಾಗ ಮನಸ್ಸಿನ ಭಾವನೆಗಳನ್ನು ಹೊರ ಹಾಕುವ ಸಾಧನವೇ ಶಾಯಿರಿ ಎಂದರೆ ತಪ್ಪಾಗಲಾರದು.ಶಾಯಿರಿಗಳಲ್ಲಿ ಭಾವನೆಗಳದೇ ಅಧಿಪತ್ಯ ಶಾಯರ್ ಎಂದರೆ ಕವಿ, ಶಾಯರಿ ಎಂದರೆ ಕವಿತೆ. ನವೋದಯ ಕಾವ್ಯ ಪ್ರಚಲಿತಕ್ಕೆ ಬಂದ ಮೇಲೆ ಕನ್ನಡದಲ್ಲಿ ಶಾಯಿರಿಗಳು ಕಂಡು ಬಂದವು. ಸಾಹಿತ್ಯದ ವಿಷಯ ವೈವಿಧ್ಯತೆ, ವೈಶಾಲ್ಯಕ್ಕೆ ಎಲ್ಲೆ ಎಂಬುದಿಲ್ಲ.ಜೀವನದ ಬಹುತೇಕ ಎಲ್ಲ ಮುಖಗಳು, ಆಗು ಹೋಗುಗಳನ್ನು ಕಾವ್ಯ ರೂಪದಲ್ಲಿ ಹೇಳಿವೆ ಈ ಶಾಯಿರಿಗಳು. ಒಲವಿನ ಬಗೆಯನ್ನಂತೂ ಶಾಯಿರಿಗಳು ಇನ್ನಿಲ್ಲದ ವೈವಿಧ್ಯತೆಯಲ್ಲಿ ತೆರೆದಿಟ್ಟಿವೆ!
ಇಟಗಿ ಈರಣ್ಣ , ಪ್ರೊಫೆಸರ್ ಎಚ್.ಎ.ಭಿಕ್ಷಾವರ್ತಿಮಠ್, ಅಸಾದುಲ್ಲಾ ಬೇಗ್. , ಪರಮೇಶ್ವರಪ್ಪ ಕುದರಿ,ಡಾ.ಸದಾಶಿವ ದೊಡ್ಡಮನಿ,ಮರುಳ ಸಿದ್ದಪ್ಪ,ಹಸೀನಾ ಬೇಗಂ,ಮಕಾನದಾರ್,ನರಸಿಂಗರಾವ್, ಮುಂತಾದವರು ಕನ್ನಡದಲ್ಲಿ ಶಾಯಿರಿಗಳನ್ನು ಬರೆದು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.ಸಾಹಿತ್ಯದ ಬೇರೆ ಪ್ರಕಾರಕ್ಕೆ ಹೋಲಿಸಿದರೆ ಕನ್ನಡದಲ್ಲಿ ಶಾಯಿರಿ ಬರೆಯುವವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಬಿಜಾಪುರ,ಗುಲ್ಬರ್ಗ,ಯಾದಗಿರಿ ಹಾಗೂ ಹೈದ್ರಾಬಾದ್ ಕರ್ನಾಟಕದಲ್ಲಿ ಹೆಚ್ಚು ಶಾಯಿರಿ ಕವಿಗಳು ಕಂಡು ಬರುತ್ತಾರೆ.
ಶಾಯಿರಿ ಹೇಳುವ ಶೈಲಿಯು ವಿಭಿನ್ನವಾಗಿರುತ್ತದೆ.ಎರಡೆರಡು ಸಲ ಮೊದಲಿನ ಸಾಲು ರಹಸ್ಯವನ್ನಿಟ್ಟು ಹೇಳಿದ ನಂತರ, ಎರಡನೇ ಸಾಲಿನಲ್ಲಿ ರಹಸ್ಯವು ಸ್ಫೋಟವಾಗುವುದು. ಆಗ ವಾವಾ, ಕ್ಯಾ ಬಾತ್ ಹೈ, ಎಂಬ ಉದ್ಘಾರ ಕೇಳುಗರಿಂದ ಹೊರಡುತ್ತದೆ. ಶಾಯಿರಿಗಳಲ್ಲಿ ಅದ್ಭುತ ಕಲ್ಪನೆ, ತತ್ವಜ್ಞಾನ ಅಡಕವಾಗಿರುತ್ತದೆ. ಸತ್ವ ಮತ್ತು ತತ್ವ ಶಾಯಿರಿಯಲ್ಲಿ ಉಳಿಯಬೇಕು. ಪ್ರೀತಿಯೇ ಮುಖ್ಯವಾದ ವಸ್ತುವಾಗಿರುವ, ಕಡಿಮೆ ಶಬ್ದಗಳ ಉಪಯೋಗದಿಂದ ಬರೆದ ಶಾಯಿರಿಗಳನ್ನು ಕೇಳಿಯೇ ಅನುಭವ ಪಡೆಯಬೇಕು, ಆನಂದಿಸಬೇಕು. ಶಾಯಿರಿಗಳು ನಮ್ಮ ಮನಸ್ಸನ್ನು ಸಂತೋಷಗೊಳಿಸುತ್ತವೆ, ಮುಖದಲ್ಲಿ ಮಂದಹಾಸವನ್ನು ತರುತ್ತವೆ. ಶಾಯಿರಿಯ ಹರಹು ಕೂಡ ಪ್ರೀತಿಯಷ್ಟೇ ವಿಶಾಲ. ಅದರ ಸೊಬಗನ್ನು ಸವಿಯಲು ಹತ್ತಾರು ಪಂಕ್ತಿಗಳು ಸಾಕಾಗಲಾರವು. ಅಗೆದಷ್ಟೂ ಆಳ…ಬಗೆದಷ್ಟೂ ಸಾರ…
ಇಟಗಿ ಈರಣ್ಣನವರ ಕನ್ನಡ ಶಾಯಿರಿಗಳು
ಕಾವ್ಯ ಎನ್ನುವುದು ನೇರವಾಗಿ ಹೃದಯದಿಂದ ಬರಬೇಕು, ಆಗ ಮಾತ್ರ ಅದು ಹೃದಯವನ್ನು ಮುಟ್ಟುತ್ತದೆ ಎಂಬುದು ಇಟಗಿ ಈರಣ್ಣನವರ ಅಭಿಪ್ರಾಯವಾಗಿತ್ತು. ಬದುಕಿನ ವಿವಿಧ ಮಜಲುಗಳನ್ನು ನೇವರಿಸುತ್ತ, ಮನುಷ್ಯ ಸ್ವಭಾವಗಳಿಗೆ ಕಚಗುಳಿ ಕೊಡುವಂತಹ ನೂರಾರು ಶಾಯಿರಿಗಳನ್ನು ಇಟಗಿ ಈರಣ್ಣ ಬರೆದಿದ್ದಾರೆ. ಬಳ್ಳಾರಿ ಜಿಲ್ಲೆ ಹಿರೇ ಹಡಲಿಯವರಾದ ಈರಣ್ಣನವರು ಬಳ್ಳಾರಿ, ಹೊಸಪೇಟೆ, ಹೂವಿನ ಹಡಗಲಿಯಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕವಿಯಾಗಿ, ನಾಟಕಕಾರರಾಗಿ ಹೆಸರುವಾಸಿಯಾಗಿದ್ದರು. ಕನ್ನಡ ಸಾಹಿತ್ಯಕ್ಕೆ “ ವಚನಾಚಲ” ಕಬೀರನ ದೋಹೆಗಳು “ ಪೋಲೀಸ್ ಸೂಕ್ತಿಗಳು” ರಾಮಧಾನ್ಯ” ” ನಾನು ನೀನು ರಾಜಿ..ಏನ್ ಮಾಡ್ತಾನ ಖಾಜಿ”, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್,ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿದ ಈರಣ್ಣ , ಕನ್ನಡಕ್ಕೆ ಶಾಯಿರಿ ಪ್ರಕಾರವನ್ನು ಪರಿಚಯಿಸಿದ ಹೆಗ್ಗಳಿಕೆಯನ್ನು ಹೊಂದಿ, ಕನ್ನಡದ ಮೊದಲ ಶಾಯಿರಿ ಕವಿ ಎನಿಸಿಕೊಂಡಿದ್ದಾರೆ!
ಶಾಯಿರಿ ಸಾಹಿತ್ಯದ ಮೂಲಕ ಈರಣ್ಣ ಕನ್ನಡ ಸಾರಸ್ವತ ಲೋಕದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಉತ್ತರ ಕರ್ನಾಟಕದ ಗಂಡುಮೆಟ್ಟಿನ ಭಾಷೆಯನ್ನುಚನ್ನಾಗಿ ಬಳಸುವುದರ ಮೂಲಕ ಈರಣ್ಣನವರು ಕನ್ನಡ ಲೋಕಕ್ಕೆ ಶಾಯಿರಿಗಳನ್ನು ನೀಡಿದರು. ಇವರ ಶಾಯಿರಿಗಳನ್ನು ಕಿಚ್ಚಸುದೀಪ ಅಭಿನಯದ “ ಸ್ಪರ್ಶ “ ಚಿತ್ರದಲ್ಲಿ ಸಾಂದರ್ಭಿಕವಾಗಿ ಬಳಸಿಕೊಳ್ಳಲಾಗಿದೆ. ಪ್ರೇಯಸಿಯ ಅಂದ – ಚಂದವನ್ನು ವರ್ಣಿಸುವ “ ಚಂದಕಿಂತ ಚಂದ ನೀನೆ ಸುಂದರ…ನಿನ್ನ ನೋಡ ಬಂದ ಬಾನ ಚಂದಿರ ಅಂದ – ಚಂದವು ನೀನೇ ಅಂದೆನು..ಚಂದ – ಅಂದ ಅಂದ – ಚಂದ ಚಂದುಳ್ಳಿ ಚಲುವೆ..ಓ ನನ್ನ ಒಲವೇ “ ಈ ಶಾಯಿರಿ ಗೀತೆಯನ್ನು ಮರೆಯಲಾದೀತೆ! “ ಕನ್ನಡದೊಳಗ ಶಾಯಿರಿನಂತೂ ಯಾರೂ ಬರೆದಿಲ್ಲ ಇವತ್ತಿನ ತನಕ, ನನಗಂತೂ ಬರೀಬೇಕನ್ನಸತೈತಿ ಸಾಯೂತನಕ” ಎಂದು ಹೇಳಿಕೊಂಡಿದ್ದ ಈರಣ್ಣನವರು, ಕೊನೆಯವರೆಗೂ ಬರೆದೇ ಬದುಕಿದರು ಎಂದರೆ ಅತಿಶಯೋಕ್ತಿಯೇನಲ್ಲ. ಶಾಯಿರಿಗಳನ್ನು ಗಟ್ಟಿಯಾಗಿ, ಲಯ ಬದ್ಧವಾಗಿ, ಭಾವ ತುಂಬಿ, ವಿಶಿಷ್ಠ ರೀತಿಯಲ್ಲಿ ವಾಚಿಸಿದಾಗ ಮಾತ್ರ ರಸಾನುಭವ ಪಡೆಯಬಹುದು. ಕೆಳಗಿನವು ಅವರ ಕೆಲವು ಶಾಯರಿಗಳು.
ಮುಚ್ಚಿದ ತುಟಿ ನೀ ಬಿಚ್ಚಿ ನಕ್ಕೆಂದ್ರ
ಹುಣವಿ ಬೆಳದಿಂಗಳು ಹರಿತೈತಿ !!
ಕಟ್ಟಿದ ಮುಡಿ ನೀ ಬಿಚ್ಚಿ ಸವರಿದೆಂದ್ರ
ಅಮಾಸಿ ಕತ್ತಲು ಕವೀತೈತಿ !
ಈ ಕತ್ತಲ ರಾತ್ರಿ ನಿನ್ನ ದಾರಿ ಕಾದೂ ಕಾದೂ
ನನ್ನೆದೀ ಒಂದ ಅಳತಿ ಸುಡಾಕ ಹತ್ತೇತಿ !!
ಕತ್ತಲಾಗೇತಂತ ಹೆದರಿ ಕುಂದರಬ್ಯಾಡ
ನನ್ನ ಸುಡೂ ಎದಿ ನಿನ್ನ ದಾರ್ಯಾಗ ಬೆಳಕು ಚಲ್ಲತೈತಿ!
ಮಾತಾಡುವಾಗ ಮುತ್ತು ಕೊಡಾಕ ಬರಾಂಗಿಲ್ಲ
ಮುತ್ತು ಕೊಡುವಾಗ ಮಾತಾಡಾಕ ಬರಾಂಗಿಲ್ಲ !!
ಮುತ್ತಿನಂತಾ ಪ್ರೀತಿ ಮಾತಿನಾಕಿ ಆಕಿ
ಬರೇ ಮಾತಿನ್ಯಾಗ ಮುತ್ತು ಕೊಡತಾಳಲ್ಲ !
ನೆಂದೂ ನೆಂದೂ ನೀರಾಗ ಇದ್ದು
ಯಾವ ಕಲ್ಲೂ ಮೆತ್ತಗಾಗಲಿಲ್ಲ !!
ಒಂದ ದಿನಾ ನಿನ್ನ ನೆನದು ನಾನೆಷ್ಟ ಮೆತ್ತಗಾದೆ
ಅವನೌನ ನಾನೂ ಯಾಕಾರ ಕಲ್ಲಾಗಲಿಲ್ಲ !
ಎಚ್.ಎ.ಭಿಕ್ಷಾವರ್ತಿಮಠ ರ ಕನ್ನಡ ಶಾಯಿರಿಗಳು
ಪ್ರೊ. ಎಚ್.ಎ. ಭಿಕ್ಷಾವರ್ತಿಮಠ ಸರ್ ಕೂಡಾ ಕನ್ನಡದಲ್ಲಿ ಶಾಯಿರಿಗಳನ್ನು ಬರೆಯುತ್ತಿದ್ದು, ಅವರ “ ಕನ್ನಡ ಶಾಯಿರಿ ಲೋಕ” ಎಂಬ ಕೃತಿಯು ಈ ವರೆಗೆ ಆರು ಮುದ್ರಣವನ್ನು ಕಂಡಿದೆ. “ ಕನ್ನಡ ಕಾವ್ಯದಲ್ಲಿ ತ್ರಿಪದಿ, ಚೌಪದಿ ಮತ್ತು ಚುಟುಕುಗಳಂತಹ ರಚನಾ ಪ್ರಕಾರಗಳಿದ್ದರೂ, ಶಾಯಿರಿಯಲ್ಲಿ ಅಭಿವ್ಯಕ್ತಿಗೊಳ್ಳುವ ವಸ್ತು, ಭಾವ ಮತ್ತು ಭಾಷೆಗಳು ವಿಶಿಷ್ಠ ರೀತಿಯಲ್ಲಿ ಸಮ್ಮಿಳಿತವಾಗಿರುತ್ತವೆ. ಕವಿಯು ತನ್ನ ಅಭಿವ್ಯಕ್ತಿಯ ಭಾವ ತೀವ್ರತೆಯಲ್ಲಿ ಸಹೃದಯಿಗಳನ್ನು ತನ್ನತ್ತ ಸೆಳೆದುಕೊಳ್ಳಬಲ್ಲ ವಿಶಿಷ್ಠ ಗುಣ ಶಾಯಿರಿಗಳಿಗಿವೆ “ ಎಂದು ಭಿಕ್ಷಾವರ್ತಿಮಠ ಸರ್ ಅಭಿಪ್ರಾಯ ಪಡುತ್ತಾರೆ. ಕೆಳಗಿನವು ಅವರ ಕೆಲವು ಶಾಯರಿಗಳು.
ಮನಸಿನ್ಯಾಗ ಜಾತಿ ಇಟಗೊಂಡು
ಪ್ರೀತಿ ಮಾಡ್ತೇನಿ ಅಂದ್ರ
ನಿಜವಾದ ಪ್ರೀತಿ ಆಗಂಗಿಲ್ಲ!!
ಮನಸ ತುಂಬ ಪ್ರೀತಿ ಇತ್ತು ಅಂದ್ರ
ಜಾತಿ ಮಾತ ಅಲ್ಲಿ ಇರಾಂಗಿಲ್ಲ!
ಗುಡಿಯಾಗ ಚರ್ಚಿನ್ಯಾಗ ಮಸೀದ್ಯಾಗ
ದೇವ್ರ ಕಾಣಾಕ ಹೋಗ್ತಾರ ನನ್ನ ಜನಾ
ದೇವ್ರ ಅಲ್ಲಿ ಇಲ್ಲ ಇಲ್ಲ!!
ಪ್ರೀತೀನ ದೇವ್ರ ಅನ್ನೋದು ತಿಳೀತಂದ್ರ
ಅವರು ಅಲ್ಲಿಗೆ ಹೋಗಂಗ ಇಲ್ಲ!
ಜೇನು ಹ್ಯಾಂಗಿರತೈತಿ ಅಂತ ಕೇಳಿದ್ರ
ಹೇಳಾಕ ಬರಾಂಗಿಲ್ಲ
ತಿಂದ ನೋಡಬೇಕು!!
ಪ್ರೀತಿ ಅಂದ್ರ ಏನು ಅಂತ ಕೇಳಿದ್ರ
ಹೇಳಾಕ ಬರಾಂಗಿಲ್ಲ
ಮಾಡೇ ನೋಡಬೇಕು!
ಅಸಾದುಲ್ಲಾ ಬೇಗ್ ರ ಕನ್ನಡ ಶಾಯಿರಿಗಳು
ಕನ್ನಡದಲ್ಲಿ ಅರ್ಥಬದ್ಧವಾದ ಶಾಯಿರಿಗಳನ್ನು ರಚಿಸುವುದರ ಮೂಲಕ ಹೊಸದೊಂದು ಪ್ರಯತ್ನ ಮಾಡಿದವರು ಕವಿ ಅಸಾದುಲ್ಲಾ ಬೇಗ್. ತಮ್ಮ ಶಾಯಿರಿಗಳನ್ನು “ ಶಾಯಿರಿಗಳು “ ಎನ್ನುವ ಹೆಸರಿನಿಂದ ಪ್ರಕಟಿಸಿದ್ದಾರೆ. ಇವರು ಜೀವನದ ಆಗು ಹೋಗುಗಳ ಬಗ್ಗೆ ಸರಳವಾಗಿ, ಮನ ಮುಟ್ಟುವ ಹಾಗೆ ತಮ್ಮ ಶಾಯಿರಿಗಳನ್ನು ರಚಿಸಿದ್ದಾರೆ. ಕೆಳಗಿನವು ಅವರ ಕೆಲವು ಶಾಯರಿಗಳು.
ಜಗಳವಾಡದಿರಲು
ನನ್ನ ಅವಳ
ಒಪ್ಪಂದ!
ಅವಳು ರೇಗಿದಾಗ
ನಾ ಮಾತನಾಡುವುದಿಲ್ಲ
ಅವಳು ಎದುರಿಗಿದ್ದಾಗ
ನಾ ರೇಗುವುದಿಲ್ಲ!
ಆತ್ಮೀಯರೊಂದಿಗೆ
ಸಮಯ
ಹೋದದ್ದೇ ತಿಳಿಯುವುದಿಲ್ಲ!
ಸಮಯದೊಂದಿಗೆ
ಆತ್ಮೀಯರ ಬಣ್ಣ
ಬಯಲಾಗದೇ ಇರುವುದಿಲ್ಲ!!
ನಕ್ಷತ್ರ ಹಣೆ ಬರಹ
ಹಸ್ತ ರೇಖೆ
ನಂಬುವವರಿದ್ದರೆ ನಂಬಲಿ!!
ಹಸ್ತವೇ ಇಲ್ಲದವರಿಗೆ
ಬದುಕಿದೆ ಭವಿಷ್ಯವಿದೆ
ಸತ್ಯ ಅರಿಯಲಿ!!
ಪರಮೇಶ್ವರಪ್ಪ ಕುದರಿ ಯವರ ಕನ್ನಡ ಶಾಯಿರಿಗಳು
ವೃತ್ತಿಯಿಂದ ಶಿಕ್ಷಕರಾಗಿರುವ ಪರಮೇಶ್ವರಪ್ಪ ಕುದರಿಯವರು, ಈ ವರೆಗೆ ಕನ್ನಡ ಸಾರಸ್ವತ ಲೋಕಕ್ಕೆ ಮಕ್ಕಳ ಕವನಗಳು, ಮಕ್ಕಳ ಕತೆಗಳು, ಹನಿಗವನ ಸಂಕಲನ, ಕಥಾ ಸಂಕಲ, ಸಂದರ್ಶನ ಸಂಕಲನಗಳನ್ನು ಹೊರ ತಂದಿದ್ದಾರೆ. ಇವರು ಕನ್ನಡ ಶಾಯಿರಿ ಬರಹಗಾರರು ಆಗಿದ್ದು, ಇವರ ಶಾಯಿರಿಗಳು ಕನ್ನದದ ಪ್ರಸಿದ್ಧ ಪತ್ರಿಕೆಗಳಾದ ತುಷಾರ, ಹಾಯ್ ಬೆಂಗಳೂರು, ವಿಜಯ ವಾಣಿ, ವಿಜಯ ಕರ್ನಾಟಕ, ವಿಶ್ವವಾಣಿ ಯಲ್ಲಿ ಆಗಾಗ ಪ್ರಕಟಗೊಳ್ಳುತ್ತಿವೆ.
ಇಟಗಿ ಈರಣ್ಣ, ಭಿಕ್ಷಾವರ್ತಿ ಮಠ ರನ್ನು ತಮ್ಮ ಶಾಯಿರಿ ಗುರುಗಳು ಎನ್ನುವ ಇವರು ಸಧ್ಯದಲ್ಲೇ ತಮ್ಮ ಶಾಯಿರಿ ಸಂಕಲನವನ್ನು ಪ್ರಕಟಿಸುವವರಿದ್ದಾರೆ. ಪ್ರೀತಿ ಮತ್ತು ಹಾಸ್ಯ ಇವರ ಶಾಯಿರಿಗಳ ವಿಷಯ ವಸ್ತು. ಕೆಳಗಿನವು ಅವರ ಕೆಲವು ಶಾಯರಿಗಳು.
ಹುಡುಗಿ, ನೀ ನಕ್ಕಾಗೆಲ್ಲ
ನಿನ್ನ ಗಲ್ಲದ ಮ್ಯಾಗ ಬೀಳೋ ಗುಳಿ
ಇರಬಹುದು ನಿನ್ನ
ಪೂರ್ವಜರ ಬಳುವಳಿ!!
ಅದನ್ನ ಕಂಡಾಗೆಲ್ಲಾ
ನನಗಿಟ್ಟಂತಾಗುವುದು ಕಚಗುಳಿ!
ಮೊದಲ ಬಾರಿಗೆ ಅವಳು
ನನ್ನ ವಾರೆಗಣ್ಣಿನಿಂದ ನೋಡಿದಾಗ
ನಾನು ಪ್ರೀತಿಯಿಂದ ಮದೋನ್ಮತ್ತನಾಗಿದ್ದೆ!!
ನಂತರ ಅವಳ ಕಣ್ಣೇ ವಾರೆಗಣ್ಣು
ಎಂದು ತಿಳಿದಾಗ ಕ್ಷಣಕಾಲ
ಭಯದಿಂದ ಮೂರ್ಚೆ ಹೋಗಿದ್ದೆ!
ನೀ ನಕ್ಕಾಗೆಲ್ಲ ನಿನ್ನ ಮಾರ್ಯಾಗ
ಪೂರ್ಣ ಚಂದ್ರ ದರ್ಶನ ಆಗತೈತಿ ನನಗ!!
ಹುಣ್ಣವಿಗೊಮ್ಮೆ ತನ್ನ ಮಾರಿ ತೋರ್ಸೋ
ಆ ಪೂರ್ಣ ಚಂದ್ರನ್ನ ತಗೊಂದ ನಾ ಏನ್ಮಾಡ್ಲಿ!
ನಿನ್ನ ಕೆಂಪನ್ನ ತುಟಿಯಾಗ ಜೇನೈತಿ
ಅದರ ಸವಿ ನನಗೊಬ್ಬಂವಗ ಗೊತ್ತಾಗತೈತಿ!!
ನನ್ನ ಎರಡೂ ಕಣ್ಣಾಗ ಪ್ರೀತಿ ಬೆಳಕೈತಿ
ಅದು, ಬರಿ ನಿನಗೊಬ್ಬಕಿಗೇ ಗೊತ್ತಾಗತೈತಿ!
ರಾತ್ರಿಯಾಗಿದೆ ಎಂದ ಮೇಲೆ
ಹಗಲು ಆಗಲೇಬೇಕು ಗೆಳೆಯ
ಬೇಸರಗೊಳ್ಳಬೇಡ
ಸ್ನೇಹಿತರಾಗಿದ್ದೆವೆ ಎಂದ ಮೇಲೆ
ಎಂದಾದರೊಂದು ದಿನ
ಭೇಟಿಯಾಗಲೇ ಬೇಕು ಗೆಳೆಯ
ಖುಷಿ ಖುಷಿಯಾಗಿರು
ಮೊದಲು ಜೀವಂತವಾಗಿರೋಣ!
ಹೀಗೆ ಕನ್ನಡ ಶಾಯಿರಿಗಳು ಇತ್ತೀಚೆಗೆ ಬಹಳ ಬೆಳಕು ಕಾಣುತ್ತಿದ್ದು, ಅನೇಕರು ಈ ಪ್ರಕಾರಕ್ಕೆ ಮಾರು ಹೋಗಿದ್ದು, ಹೆಚ್ಚು- ಹೆಚ್ಚು ಬರೆಯುತ್ತಿದ್ದಾರೆ. ಅನೇಕ ಪತ್ರಿಕೆಗಳು, ಮೀಡಿಯಾಗಳು ಈ ವಿಶಿಷ್ಠ ಸಾಹಿತ್ಯ ಪ್ರಕಾರಕ್ಕೆ ಪುಟ ನೀಡಿ, ಜಾಗ ನೀಡಿ ಸಹಕರಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಬನ್ನಿ ಬರೆಯೋಣ….ಶಾಯಿರಿ ಸಾಹಿತ್ಯ ಬೆಳೆಸೋಣ.
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಅಥವಾ ಕೆಳಗಿನ ದೂರವಾಣಿ ಸಂಖ್ಯೆಗೆ ವಾಟ್ಸಪ್ ಮಾಡಿದರೆ ಧನ್ಯ.
ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ ದೂರವಾಣಿ ಸಂಖ್ಯೆ: 9916277217
2 Comments
Very interesting information about legendry poets
Sir shaayri lokadalli tumba olle information kottideera Thanks