ಆಶಾ ರಘು ರವರ ‘ಆವರ್ತ’ ಮತ್ತು ಇನ್ನೆರಡು ಕೃತಿಗಳ ಬಿಡುಗಡೆ

ಆವರ್ತ (ಮೂರನೇ ಮುದ್ರಣ) – ಆವರ್ತ ಮಂಥನ – ಪೂತನಿ (ನಾಟಕ ಸಂಕಲನ) ಬಿಡುಗಡೆ

ಲೇಖಕಿ ಶ್ರೀಮತಿ ಆಶಾ ರಘು ರವರ “ಆವರ್ತ” ತನ್ನ ಅಭೂತಪೂರ್ವ ಯಶಸ್ಸಿನೊಂದಿಗೆ ಮೂರನೇ ಮುದ್ರಣ ಕಂಡಿದೆ. ಇಂದು ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣ ದಲ್ಲಿ ಶ್ರೀಮತಿ ಆಶಾ ರಘು ರವರ “ಆವರ್ತ, ಆವರ್ತ ಮಂಥನ, ಪೂತನಿ” ಕೃತಿಗಳು ಓದುಗರಿಗೆ ಲೋಕಾರ್ಪಣೆಯಾಯಿತು.

ಶ್ರೀಮತಿ ಪ್ರತಿಮಾ ಪ್ರಶಾಂತ್ ರವರ ದೇವರ ನಾಮ ದಿಂದ ಆರಂಭಗೊಂಡು ಶ್ರೀಮತಿ ಶ್ವೇತ ಅವರ ಸುಂದರವಾದ ನಿರೂಪಣೆಯಲ್ಲಿ ನೆಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶ್ರೀ ಡಾ|| ಎಚ್. ಎಸ್. ಸತ್ಯನಾರಾಯಣ, ಶ್ರೀ ಬಿ. ಆರ್. ಲಕ್ಷ್ಮಣ್ ರಾವ್, ಶ್ರೀ ಡಿ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಹಾಗು ಶ್ರೀ ದೀಪು ಶೆಟ್ಟಿ ದೊಡ್ಡ ಮನೆ, ಶ್ರೀಮತಿ ಆಶಾ ರಘು ಉಪಸ್ಥಿತರಿದ್ದರು.

ಪುಸ್ತಕ ಬಿಡುಗಡೆಯ ನಂತರ ಮಾತನಾಡಿದ ಡಾ|| ಎಚ್. ಎಸ್. ಸತ್ಯನಾರಾಯಣ ರವರು ಕಾದಂಬರಿಯಲ್ಲಿ ಅರಿಷಡ್ವರ್ಗಗಳನ್ನು ಹಾಗು ಅದಕ್ಕೆ ಜೋಡಿಸಿರುವ ಪಾತ್ರಗಳು ಕನ್ನಡ ಸಾಹಿತ್ಯಲೋಕದಲ್ಲೇ ವಿಭಿನ್ನ ಪ್ರಯತ್ನ ಮತ್ತು ಪುರಾಣ ಕಾಲದ ಪಾತ್ರಗಳೋ ಎನ್ನುವ ರೀತಿಯಲ್ಲಿ ಪಾತ್ರಗಳನ್ನು ವರ್ಣಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಡಿ. ಬಿ. ಮಲ್ಲಿಕಾರ್ಜುನಸ್ವಾಮಿ ಮಹಾಮನೆ ಯವರು ತಮ್ಮ ಸುಧೀರ್ಘ ಮಾತುಗಳಲ್ಲಿ ಪೂತನಿ ನಾಟಕ ಸಂಕಲನದ ಬಗ್ಗೆ ಮಾತನಾಡಿದರು. ಸಂಕಲನದ ನಾಟಕಗಳ ಪ್ರಮುಖ ಪಾತ್ರಗಳು ಹಾಗು ಅದನ್ನು ಸೃಷ್ಟಿಸಿರುವ ಪರಿಯನ್ನು ಶ್ಲಾಘಿಸಿದರು. ಪುರಾಣ ಪಾತ್ರಗಳ ಜೊತೆಗೆ ಇಂದಿನ ಮಾಧ್ಯಮ, ನ್ಯಾಯಾಲಯಗಳ ವಿಚಾರಗಳನ್ನು ಆಶಾ ರಘು ಅವರು ನಾಟಕದಲ್ಲಿ ಬಳಸಿಕೊಂಡಿರುವುದು ವಿಭಿನ್ನವಾಗಿದೆ. ಆಶಾ ರಘು ರವರ ನಾಟಕಗಳನ್ನು ರಂಗರೂಪಕ್ಕೆ ತಾವು ತರುತ್ತಿರುವುದಾಗಿ ಹೇಳಿಕೊಂಡರು.

ಲೇಖಕಿ ಶ್ರೀಮತಿ ಆಶಾ ರಘು ರವರು ‘ಆವರ್ತ’ ಹೇಗೆ ತಮ್ಮ ಬರಹ ಶಕ್ತಿಯನ್ನು ದೀರ್ಘ ಕಾಲ ಹೀರಿಕೊಂಡು ಮುಂದಿನ ಕೃತಿಗಳಿಗಾಗಿ ತಾವು ‘ಆವರ್ತ’ ದ ಯಶಸ್ಸಿನಿಂದ ಹೊರಬರುವುದಕ್ಕೆ ಮಾಡಿದ ಪ್ರಯತ್ನಗಳನ್ನೂ ನಿಸ್ಸಂಕೋಚವಾಗಿ ಹಂಚಿಕೊಂಡರು. ಓದುಗರ ಅಭಿಪ್ರಾಯಗಳನ್ನು ಕೃತಜ್ಞತೆಯಿಂದ ‘ಆವರ್ತ ಮಂಥನ’ ಪುಸ್ತಕದಲ್ಲಿ ಪ್ರಕಟಿಸಿರುವುದಾಗಿ ಅಭಿಪ್ರಾಯಿಸಿದ ಎಲ್ಲರ ಹೆಸರುಗಳನ್ನೂ ಖುಷಿಯಿಂದ ಸ್ಮರಿಸಿದರು ಹಾಗು ಆವರ್ತ ಕೃತಿಯ ಯಶಸ್ಸಿಗಾಗಿ ಅಭಿಪ್ರಾಯಗಳನ್ನು ವಿಮರ್ಶೆಗಳನ್ನು ವರದಿ ಮಾಡಿದ ಎಲ್ಲ ಪತ್ರಿಕೆವಾಹಿನಿಗಳಿಗೆ ಸಂತಸದಿಂದ ಕೃತಜ್ಞತೆ ಸಲ್ಲಿಸಿದರು.

ಖ್ಯಾತ ಕವಿಗಳಾದ ಶ್ರೀ ಬಿ. ಆರ್. ಲಕ್ಷ್ಮಣ್ ರಾವ್ ಆಶಾ ರಘು ರವರು ವಿಭಿನ್ನ ಕಥೆಗಾರ್ತಿಯೆಂದು ಮತ್ತು ಅವರು ಕಥೆ ನಿರೂಪಿಸುವ ಶೈಲಿಯಿಂದ ತಾನು ಪ್ರಭಾವಿತನಾಗಿದ್ದೇನೆ, ಮುಂದಿನ ದಿನಗಳಲ್ಲಿ ಇನ್ನಷ್ಟ್ಟು ನಾಟಕಗಳು ಹಾಗು ಕಾದಂಬರಿಗಳು ಅವರಿಂದ ಮೂಡಿಬರಲಿ ಎಂದು ಹಾರೈಸಿದರು.

ಶ್ರೀ ದೀಪು ಶೆಟ್ಟಿ ದೊಡ್ಡಮನೆ ಯವರು ‘ಆವರ್ತ’ ಪಾತ್ರಗಳ ಶಕ್ತಿಯನ್ನು ಹಾಗು ಕಾದಂಬರಿಯನ್ನು ಕೊನೆಯ ತನಕ ಎಡೆಬಿಡದೆ ಓದಿಸಿಕೊಂಡು ಹೋಗುವ ಆಶಾ ರಘುರವರ ನಿರೂಪಣಾ ಶೈಲಿಯನ್ನು ಮೆಚ್ಚಿಕೊಂಡರು. ತಾನು ಕೃತಿಯಿಂದ ಪ್ರಭಾವಿತನಾಗಿ ಎಲ್ಲರ ಅಭಿಪ್ರಾಯಗಳನ್ನು ‘ಆವರ್ತ ಮಂಥನ’ ಕ್ಕಾಗಿ ಸಂಗ್ರಹಿಸಿದನ್ನು ಸ್ಮರಿಸಿಕೊಂಡರು.

ಆವರ್ತ ಮೂರನೇ ಮುದ್ರಣದ ಪ್ರಕಾಶಕರಾದ ಸಾಹಿತ್ಯಲೋಕ ಪಬ್ಲಿಕೇಷನ್ ನ ಶ್ರೀ ರಘುವೀರ್ ಸಮರ್ಥ್ ಆಶಾ ರಘು ರವರ ಆರು ಕೃತಿಗಳನ್ನು ಹೊರತಂದಿದ್ದಕ್ಕೆ ಅವರ ಶಕ್ತಿಶಾಲಿ ಬರವಣಿಗೆಯೇ ಕಾರಣ ಎಂದು ಅಭಿಪ್ರಾಯಪಟ್ಟರು ಹಾಗು ಮುಂಬರುವ ದಿನಗಳಲ್ಲಿ ತಾವು ಅವರ ಇನ್ನಷ್ಟು ಕೃತಿಗಳನ್ನು ಹೊರತರಲು ಸಿದ್ದವಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಂದನಾರ್ಪಣೆ ಮಾಡಿದ ಶ್ರೀ ಅನಂತ್ ಕುಣಿಗಲ್ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗು ವಂದನೆಗಳನ್ನು ತಿಳಿಸಿದರು.

ಆಸಕ್ತರು ಪುಸ್ತಕ ಬೇಕಾದಲ್ಲಿ ರಘುವೀರ್ ಸಮರ್ಥ್ ರವರನ್ನು 9945939436 ಕ್ಕೆ ಸಂಪರ್ಕಿಸಿ. ಅಂಚೆ ವೆಚ್ಚ ಉಚಿತ.

ಸಾಹಿತ್ಯಮೈತ್ರಿ ತಂಡ
ಫೋಟೋಗಳು : ವಸಂತ್ ಶೆಟ್ಟಿ

Related post

Leave a Reply

Your email address will not be published. Required fields are marked *