ಕನ್ನಡ ಸಾಹಿತ್ಯ ಲೋಕದಲ್ಲಿ ಹೀಗೇಕೆ?!

ಕನ್ನಡ ಸಾಹಿತ್ಯ ಲೋಕದಲ್ಲಿ ಹೀಗೇಕೆ?!

ಕನ್ನಡ ಸಾಹಿತ್ಯ ಲೋಕ ಬೆಳೆದುಬಂದುದಕ್ಕೆ ಅಗಾಧವಾದ ಇತಿಹಾಸವಿದೆ. ಮೊದಲೆಲ್ಲ ಯಾವುದೇ ಸಾಮಾಜಿಕ ಜಾಲತಾಣಗಳ ಬಳಕೆ ಇಲ್ಲದಿದ್ದರೂ ಒಂದು ಕೃತಿಗಾಗಿ ಜನ ಕಾಯುತ್ತಿದ್ದರು. ಕೃತಿಯ ಬಗ್ಗೆ ಒಳಹೊಕ್ಕು ಮಾತನಾಡುತ್ತಿದ್ದರು. ಕೃತಿಗಳು ಹತ್ತು ಹದಿನೈದು ಮುದ್ರಣ ಕಾಣುತ್ತಿದ್ದವು. ಆದರೆ ಇತ್ತೀಚಿಗೆ ಪುಸ್ತಕ ಪ್ರಕಟಿಸುವುದು ಸುಲಭವಾಗಿದೆ. ತಂತ್ರಜ್ಞಾನ ಎಷ್ಟೆಲ್ಲ ಬೆಳೆದರೂ ಪುಸ್ತಕವನ್ನು ಜನರಿಗೆ ತಲುಪಿಸುವಲ್ಲಿ ಸೋಲುತ್ತಿದ್ದೇವೆ. ಎಷ್ಟೋ ಜನ ಪುಸ್ತಕ ಪ್ರಕಟಿಸಿ, ಅದನ್ನು ಜನರಿಗೆ ತಲುಪಿಸಲಾಗದೆ, ಗ್ರಂಥಾಲಯಗಳಿಗೂ ಆಯ್ಕೆಯಾಗದೆ ಪ್ರತಿಗಳನ್ನು ಏನು ಮಾಡುವುದು? ಎಂಬ ಗೊಂದಲಕ್ಕೆ ಸಿಕ್ಕಿ, ಒದ್ದಾಡಿ, ಸಾಕಾಗಿಹೋಗಿದ್ದಾರೆ. ಅದು ಅವರ ಕೊನೆಯ ಪುಸ್ತಕವೂ ಆಗಿರಬಹುದು.

ಓದುಗರು ಆ ಕಾಲಕ್ಕೂ ಇದ್ದರು, ಈ ಕಾಲಕ್ಕೂ ಇದ್ದಾರೆ, ಮುಂದಿನ ಕಾಲಕ್ಕೂ ಇರುತ್ತಾರೆ. ಯಾಕೆಂದರೆ ಪುಸ್ತಕ ಸಂಸ್ಕೃತಿ ಎಂದಿಗೂ ಮರೆಯಾಗುವಂಥದ್ದಲ್ಲ. ಅದು ಆಯಾ ಕಾಲದ ದಾಖಲೆ. ಹಾಗೆಂದಮೇಲೆ ಪುಸ್ತಕ ಓದುವವರು ಮರೆಯಾಗುವುದಾದರೂ ಹೇಗೆ? ಕೆಲವು ಇತಿಹಾಸ ಕೆದುಕಲಿಕ್ಕಾದರೂ ಪುಸ್ತಕಗಳು ಬೇಕು. ಗೂಗಲ್ ತನ್ನಲ್ಲಿ ಎಷ್ಟೇ ವಿಷಯಗಳನ್ನು ಸಂಗ್ರಹಿಸಿದರೂ… ಪುಸ್ತಕದಲ್ಲಿ ಒಂದು ವಿಷಯದ ಬಗ್ಗೆ ಒಂದೇ ಕಡೆ ಸಿಗುವಷ್ಟು ಸಮಗ್ರ ಮಾಹಿತಿ ಇನ್ಯಾವ ಮಾಧ್ಯಮಗಳಲ್ಲೂ ಸಿಗಲಾರವು. ಹಾಗಾಗಿ ಪುಸ್ತಕ ಎಂದೆಂದಿಗೂ ಜೀವಂತ. ಓದುಗರೂ ಕೂಡ.

ಆದರೆ ನಾನು ಕಂಡಹಾಗೆ ಕೆಲವು ವರ್ಷಗಳಿಂದ ಕನ್ನಡ ಸಾಹಿತ್ಯದಲ್ಲಿ ಹಿತವಾದ ಬೆಳವಣಿಗೆಗಳು ಆಗುತ್ತಿದ್ದರೂ ಕೂಡ ಇನ್ನಷ್ಟು ಅನುಚಿತ ಅಭಿವೃದ್ಧಿಗಳು ಬೇಸರ ತರಿಸಿವೆ. ಐದೋ ಹತ್ತೋ ಸಾವಿರ ಇದ್ದ ಸಾಹಿತ್ಯ ಸ್ಪರ್ಧೆಗಳ ಬಹುಮಾನದ ಹಣ ಇವತ್ತು ಒಂದೇ ಬಾರಿಗೆ ಐವತ್ತು ಸಾವಿರ ಮೀರಿದೆ. ಇದರಿಂದ ಬರೆಯುವವರಿಗೆ ಹುಮ್ಮಸ್ಸು ತುಂಬಿದಂತಾಗಿದೆ. ಬಹಳಷ್ಟು ಹೊಸ ಪ್ರಕಾಶನಗಳು ತಲೆದೂರಿವೆ. ಓದುಗ ಇದ್ದಲ್ಲಿಗೆ ಪುಸ್ತಕ ತಲುಪಿಸುವ ಕೆಲಸ ನಡೆಯುತ್ತಿವೆ. ಒಳ್ಳೆಯ ಹಾಗೂ ಸಮರ್ಥ ಕೃತಿಗಳೂ ಸೇರ್ಪಡೆಯಾಗುತ್ತಿವೆ. ಅದರ ಜೊತೆಗೆ ಪಕ್ಷಪಾತೀಯ ಬೆಳವಣಿಗೆಗಳೂ ಕೂಡ ಜೋರಾಗಿ ನಡೆದಿವೆ. ಕಿರಿಯರ ಕೃತಿಗಳನ್ನು ಓದಿ ದಾರಿ ತೋರಿಸುವ ಹಿರಿಯರು ಒಂದುಕಡೆಯಾದರೆ, ಕಿರಿಯರಿಗೂ ನಮಗೂ ಸಂಬಂಧವೇ ಇಲ್ಲ ಎನ್ನುವಹಾಗೆ ಇನ್ನಷ್ಟು ಹಿರಿಯರು ತಮ್ಮನ್ನು ತಾವು ಕಿರಿಯರ ಸಂಪರ್ಕದಿಂದಲೇ ದೂರ ಇರಿಸಿಕೊಂಡಿದ್ದಾರೆ. ಪ್ರಶಸ್ತಿಗಳು ಮಾತ್ರವೇ ಕೃತಿಯ ಮೌಲ್ಯ ಹೆಚ್ಚಿಸುತ್ತದೆಂಬ ಭ್ರಮೆಯಲ್ಲಿ ಹಲವು ಕಿರಿಯರು ಮುಳುಗಿಹೋಗಿದ್ದಾರೆ. ಕೆಲವು ಹಿರಿಯರಿಗೂ ಈ ಪ್ರಶಸ್ತಿ ಹುಚ್ಚು ಹೋಗಿಲ್ಲ. ಇನ್ನು ಕೆಲವು ಪ್ರಕಾಶನಗಳು ಗ್ರಂಥಾಲಯಗಳಿಗೆಂದು ಒಂದೇ ಪುಸ್ತಕವನ್ನು ಬೇರೆ ಬೇರೆ ಹೆಸರಿನಲ್ಲಿ ಪ್ರಕಟಿಸುತ್ತಿವೆ. ವ್ಯವಹಾರವೇ ತಿಳಿಯದ ಲೇಖಕರಿಂದ ಹಣ ವಸೂಲಿ ಮಾಡುವ ಮೋಸದಾಟಗಳೂ ನಡೆಯುತ್ತಿವೆ.

ಕೆಲವು ಲೇಖಕರು ಬೇರೆ ಭಾಷೆಯ ಸಿನೆಮಾ ನೋಡಿ, ಬೇರೆ ಭಾಷೆಯ ಪುಸ್ತಕ ಓದಿ ಅದರ ಕಥಾವಸ್ತುವನ್ನು ಕದ್ದು, ಕನ್ನಡಕ್ಕೆ ಬರೆದು ಹೆಸರು ಮಾಡುತ್ತಿದ್ದಾರೆ. ಇನ್ನು ಕೆಲವು ಪ್ರಕಾಶನಗಳು ಫೇವರಿಸಂ ನಡೆಸುತ್ತಿವೆ. ಹುರುಳೇ ಇಲ್ಲದ ಪುಸ್ತಕಗಳನ್ನು ಪ್ರಕಟಿಸಿ, ಆ ಲೇಖಕ/ಲೇಖಕಿಗಿರುವ ಜನಪ್ರಿಯತೆಯನ್ನು ಬಳಸಿಕೊಂಡು ಹಣ ಮಾಡುತ್ತಿವೆ. ಕೆಲವು ಪ್ರಶಸ್ತಿಗಳು, ಸರ್ಕಾರಿ ಸಮ್ಮೇಳನಗಳು ಮತ್ತು ಸಾಹಿತ್ಯ ಕಮ್ಮಟಗಳು ಮಾರಾಟವಾಗಿವೆ. ಕೆಲವು ಓದುಗರೂ ಕೂಡ ತಾವು ಓದುವ ಪುಸ್ತಕವನ್ನು ಲೆಫ್ಟು, ರೈಟು ಎಂದು ವರ್ಗೀಕರಿಸುತ್ತಿದ್ದಾರೆ. ಪುಸ್ತಕದ ಬೆಲೆಗಳು ಗಗನಕ್ಕೇರುತ್ತಿವೆ. ಪುಟಕ್ಕೆ ಎರಡು ರೂಪಾಯಿ ದಾಟಿದೆ. ಒಂದಷ್ಟು ಸಾಹಿತ್ಯ ತಂಡಗಳು ಒಂದಷ್ಟು ಲೇಖಕರಿಗೆಂದೇ ಸೀಮಿತವಾಗಿವೆ. ಇನ್ನಷ್ಟು ಜಾಲತಾಣಗಳು ಮತ್ತಷ್ಟು ಲೇಖಕರಿಗಾಗಿಯೇ ಉಳಿದಿವೆ. ಎಲ್ಲೋ ಕೂತು, ಯಾವುದೋ ಪುಸ್ತಕ ಓದುತ್ತಿದ್ದ ಓದುಗ ಈ ಎಲ್ಲ ಬದಲಾವಣೆಗಳನ್ನು ಕಂಡು ಮಾತನಾಡಲು ಬಾಯಿ ಬರದೆ, ಒಳ್ಳೆಯ ಕೃತಿಗಾಗಿ ಕಾದು ಕೂತಿದ್ದಾನೆ.

ಮೂರು ದಿನದಲ್ಲಿ ಅಷ್ಟು ಸೇಲಾಯಿತು, ಟಾಪ್ ಟೆನ್ ಲಿಸ್ಟು ಸೇರಿತು, ಗಮನ ಸೆಳೆದ ಹೊತ್ತಿಗೆಗಳು, ಭರ್ಜರಿ ಮುದ್ರಣ ಕಾಣುತ್ತಿದೆ ಇಂಥಹ ಶೀರ್ಷಿಕೆಗಳು ಕೆಲವೊಮ್ಮೆ ಓದುಗನ ದಿಕ್ಕು ತಪ್ಪಿಸುತ್ತಿವೆ. ಇಂಥಹ ಟೈಟಲ್ ಕಾರ್ಡುಗಳ ಮೇಲೆ ಆಸಕ್ತಿ ಹಾಗೂ ಕುತೂಹಲವೇ ಹಿಂಗಿಹೋಗಿದೆ. ಈಗ ಮುದ್ರಣ ವ್ಯವಸ್ಥೆ ಡಿಜಿಟಲ್ ಆದ್ದರಿಂದ ಎಷ್ಟು ಪ್ರತಿಗಳನ್ನಾದರೂ ಮುದ್ರಣ ಮಾಡಿಸಿಕೊಳ್ಳಬಹುದು. ಹಾಗಾಗಿ ಕೆಲವರು ನೂರು-ಇನ್ನೂರು ಪ್ರತಿ ಮುದ್ರಣ ಮಾಡಿಸಿ ಒಂದು ಅಥವಾ ಎರಡು ದಿನಗಳಲ್ಲೇ ಖಾಲಿ ಮಾಡಿ, ಮೂರನೆ ದಿನಕ್ಕೆ ಎರಡನೆ ಮುದ್ರಣಕ್ಕೆ ಹೋಗುವವರಿದ್ದಾರೆ. ಇಷ್ಟೆಲ್ಲಾ ನಡೆದರೂ ಆ ಪುಸ್ತಕವನ್ನು ಓದಿದ ಪ್ರಾಮಾಣಿಕ ಓದುಗನಿಗೆ ಮಾತ್ರ ಗೊತ್ತು ಆ ಕೃತಿ ಎಷ್ಟು ಮೌಲ್ಯಯುತವಾದದ್ದು ಎಂದು! ಯಾವ ಸಂಘ ಸಂಸ್ಥೆಗಳೂ ಕೊಡಲಾಗದ ಪ್ರಶಸ್ತಿಗಳನ್ನು ಒಬ್ಬ ಪ್ರಾಮಾಣಿಕ ಓದುಗ ತನ್ನ ನೇರ ಅಭಿಪ್ರಾಯ ಅನಿಸಿಕೆಗಳ ಮುಖಾಂತರ ಚಿಟಿಕೆ ಹೊಡೆದ ಹಾಗೆ ಚುಟುಕಾಗಿ ಬರೆಯುತ್ತಾನೆ. ಅದು ಮಾತ್ರವೇ ಸತ್ಯ! ಇದರಾಚೆಗೆ ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ತಮ್ಮ ಕೆಲಸಗಳ ಮೂಲಕ ಮಾದರಿಯಾಗುವವರಿದ್ದಾರೆ. ಅಂಥವರ ಮೇಲೆ ನನಗೆ ಗೌರವವಿದೆ.

ಕಾಲ ಸರಿದ ಹಾಗೆ ಎಲ್ಲ ಕ್ಷೇತ್ರಗಳಲ್ಲೂ ಈ ರೀತಿಯ ಬದಲಾವಣೆಗಳಾಗಿವೆ. ಆದರೆ ಪರಸ್ಪರ ಅನುಭೂತಿಯಿಂದ, ಅವರಿವರೆನ್ನದೆ ಸಮರ್ಥ ಕೃತಿಗಳನ್ನು ಗುರುತಿಸುವ ಹಾಗೂ ಕಿರಿಯರನ್ನು ಬೆನ್ನುತಟ್ಟಿ ಇನ್ನಷ್ಟು ಸಮರ್ಥವಾಗಿ ಬರೆಸುವ ಕಾರ್ಯ ಇಲ್ಲಿ ಹೆಚ್ಚಾಗಿ ನಡೆಯಬೇಕಿದೆ. ಲೋಭಕ್ಕಾಗಿ, ಹೆಸರಿಗಾಗಿ ತಮ್ಮನ್ನು ತಾವು ಮಾರಿಕೊಳ್ಳುವುದನ್ನು ತಡೆಯಬೇಕಾಗಿದೆ. ಫೇವರಿಸಂ ಅನ್ನೋದು ಸರ್ಕಾರ ಬದಲಾಗುವತನಕ ಅಥವ ಲೇಖಕನ ಆಯಸ್ಸು ಮುಗಿಯುವತನಕ ಮಾತ್ರ. ಮೌಲ್ಯಯುತ ಕೃತಿಯೊಂದನ್ನು ನಾಲ್ಕು ಜನ ಓದಿ ಮೆಚ್ಚಿಕೊಂಡರೂ ಅದು ಸಾರ್ಥಕತೆಯೇ.. ನಾವೆಲ್ಲ ಮನುಷ್ಯರು.. ಸಾಹಿತ್ಯ ನೊಂದವರ ನೋವಾಗುವದನ್ನು ಬಿಟ್ಟು ನೊಂದವರ ದನಿಯಾಗಲಿ. ದಿಕ್ಕು ತಪ್ಪಿಸುವುದನ್ನು ಬಿಟ್ಟು ಸತ್ಯ ತಿಳಿಸುವ ಸಾಧನವಾಗಲಿ.

ಜೈ ಕನ್ನಡಾಂಬೆ…

ಅನಂತ ಕುಣಿಗಲ್
ಯುವಬರಹಗಾರ & ರಂಗಕಲಾವಿದ

Related post

Leave a Reply

Your email address will not be published. Required fields are marked *