ಕಮರದ ಕನಸು
ಹಾದಿಬದಿಯ ಗೂಡಿನಲಿ ಕುಳಿತು
ಬದುಕನರಸುತಿಹರು ಕಂದಮ್ಮಗಳು..!
ಬಟ್ಟಲು ಕಂಗಳ ನೋಟದಲಿ
ಮುಗ್ಧತನದ ನೂರೆಂಟು ಭಾವಗಳು!!
ಸೂರು ಜಾರಿದ ಗೂಡು ತಲೆಗಾಸರೆಯಾಗಿ
ಅತಿವೃಷ್ಠಿಯಲಿ ಕಮರಿದ ಕನಸನ್ನು
ಮತ್ತೆ ನನಸಾಗಿಸುವ ಆಸೆ
ಮುದುಡಿ ಅರಳುವ ಪುಷ್ಪದೋಪಾದಿಯಲಿ!!
ರಣಬಿಸಿಲಲಿ ದುಡಿಮೆಗೈವ ಅಪ್ಪ
ಜೊತೆಗೆ ಬಾಳಬಂಡಿ ಎಳೆದಿಹ ಅಮ್ಮ..!
ಉಂಡ ನೋವನು ಮರೆತು..
ಕಂದಮ್ಮಗಳ ಬೆಚ್ಚಗಿರಿಸುವ ಗುರಿ!!
ಕಾದಿವೆ ಮರಿಹಕ್ಕಿಗಳಂತೆ
ಗುಟುಕ ತರುವ ಹೆತ್ತವರಿಗಾಗಿ..!
ಆಸೆಯ ನೋಟದಲಿ ಕುಳಿತು
ಅರಸಿಹರು ದಿನದ ಕೂಳಿಗಾಗಿ!!
ಯಾವ ಕನಸನು ಹೊತ್ತಿವೆಯೋ!?
ಏನು ಸಾಧನೆಯ ಮಾಡಿಹರೋ ಬಲ್ಲವರಾರು!!!
ಮುಗ್ದ ಮಂದಹಾಸದ ನೋಟದಲಿ
ಸಾಧನೆಯ ಛಲವಿರಲಿ,ಗೆಲುವಿರಲಿ
ನೆಮ್ಮದಿಯ ನಾಳೆ ನಿಮ್ಮದಾಗಲಿ!!
ಸುಮನಾ ರಮಾನಂದ
1 Comment
👌👍🙏