ಕಮಲಾತ್ತಲ್ ಎಂಬ ಇಡ್ಲಿ ಅಮ್ಮನ ಕಥೆ
ಇತ್ತೀಚಿನ ದಿನಗಳಲ್ಲಿ ನಿವೇನಾದರೂ ಹೋಟೆಲ್‌ಗೆ ಹೋದರೆ ಐವತ್ತು ರೂಪಾಯಿಗೆ ಕಡಿಮೆ ಏನೂ ಸಿಗುವುದಿಲ್ಲ, ಹೊಟ್ಟೇನೂ ತುಂಬಲ್ಲ. ಈಗಿನ ದಿನಗಳಲ್ಲಿ ಒಂದು ರೂಪಾಯಿಗೆ ಒಂದರ್ಧ ಲೋಟ ಟೀ ಸಿಗುವುದು ಸಹ ದುರ್ಲಬ. ಅಂಥಹುದರಲ್ಲಿ ಇಲ್ಲೊಬ್ಬರು ಅಜ್ಜಿ ಕಳೆದ ಮುವತ್ತು ವರ್ಷಗಳಿಂದ ಕೇವಲ ಒಂದು ರೂಗೆ ಒಂದು ಇಡ್ಲಿ ಜೊತೆಗೆ ಚಟ್ನಿ ಸಾಂಬಾರ್ ಕೊಡುವ ಮೂಲಕ ಸಾವಿರಾರು ಬಡವರ ಬಾಳಿನ ಅನ್ನಪೂರ್ಣೆಯಾಗಿದ್ದಾರೆ. ಹೌದು ತಮಿಳುನಾಡಿನ ಕೊಯಮತ್ತೂರಿನ ವಡಿವೇಲಮ್‌ಪಾಳ್ಯಮ್‌ನ ಸುಮಾರು 80 ವರ್ಷ ವಯಸ್ಸಿನ ಅಜ್ಜಿ ಕಳೆದ ಮೂವತ್ತು ವರ್ಷಗಳಿಂದ ಇದೇ ಕಾಯಕ ಮಾಡಿಕೊಂಡಿದ್ದಾರೆ.
ರೈತಾಪಿ ಕುಟುಂಬದಿಂದ ಬಂದ ಕಮಲಾತ್ತಲ್ ಮನೆಯಲ್ಲಿ ಎಲ್ಲರೂ ಬುತ್ತಿ ತೆಗೆದುಕೊಂದು ಗದ್ದೆ ಕಡೆ ಹೋದರೆ ಇವರು ಮನೆಯಲ್ಲಿ ಒಬ್ಬರೆ ಇರುತ್ತಿದ್ದರು. ಸಮಯ ಕಳೆಯುವುದು ಕಷ್ಟವಾಗುತ್ತಿತ್ತು. ಆಗ ಇವರು ಏನಾದರೂ ಮಾಡಬೇಕೆಂದುಕೊಂಡಾಗ ಹೊಳೆದದ್ದೇ ಈ ಇಡ್ಲಿ ಮಾಡುವ ಯೋಚನೆ. ಅವರ ಮನೆಯ ಸುತ್ತ ಸಾವಿರಾರು ಕೂಲಿ ಕಾರ್ಮಿಕರು ಇದ್ದು ಅವರಿಗೆ ಬರುವ ದುಡಿಮೆಯಲ್ಲಿ ಎರಡು ಇಡ್ಲಿಗೆ ಇಪ್ಪತ್ತು ರೂಪಾಯಿ ಹೊರಗೆ ತಿನ್ನುವುದು ಎಂದರೆ ಬಹಳ ಕಷ್ಟಕರವಾದ ಕೆಲಸ. ಹೀಗೆ ಆಲೋಚಿಸಿ ಕಳೆದ ಮೂವತ್ತು ವರ್ಷಗಳಿಂದ ಇವರು ನೆರೆಹೊರೆಯಲ್ಲಿ ಇರುವ ಸಾವಿರಾರು ಬಡ ಕೂಲಿಕಾರ್ಮಿಕರಿಗೆ ಸ್ವಾದಿಷ್ಟವಾದ ಇಡ್ಲಿ ಮಾಡಿ ಕೊಡುವ ಮೂಲಕ ಇಡ್ಲಿ ಪಾಟಿ( ಅಜ್ಜಿ) ಎಂದೇ ಖ್ಯಾತರಾಗಿದ್ದಾರೆ.
ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆಯೇ ಕಮಲಾತ್ತಲ್ ಎದ್ದು ಇಡ್ಲಿ ಮಾಡಲು ಪ್ರಾರಂಭಿಸುತ್ತಾರೆ. ಎಂಟು ಗಂಟೆಗೆಲ್ಲಾ ಕೆಲಸಕ್ಕೆ ಹೋಗುವು ಕೂಲಿ ಕಾರ್ಮಿಕರು, ದಿನಗೂಲಿ ಕೆಲಸಕ್ಕೆ ಹೋಗುವವರು ಮುಂತಾದವರು ಇವರ ಮನೆಯ ಹತ್ತಿರ ಹಾಜರ್. ತಮಗೆಷ್ಟು ಬೇಕೋ ಅಷ್ಟು ಇಡ್ಲಿ ತಿಂದು ಕಟ್ಟಿಸಿಕೊಂಡು ಹೋಗುತ್ತಾರೆ. ಅಲ್ಲೇ ತಿನ್ನುವವರಿಗೆ ಬಿಸಿ ಬಿಸಿ ಇಡ್ಲಿ ಚಟ್ನಿ ಸಾಂಬಾರನ್ನು ಬಾಳೆ ಎಲೆಯ ಮೇಲೆ ಅಜ್ಜಿಯೇ ಸ್ವತಃ ಬಡಿಸುತ್ತಾರೆ. ಅವಿಭಕ್ತ ಕುಟುಂಬದಿಂದ ಬಂದ ಅಜ್ಜಿಗೆ ಬಹಳ ಜನರಿಗೆ ಅಡುಗೆ ಮಾಡುವುದೇನು ಕಷ್ಟವಿಲ್ಲವೆಂದು ಹೇಳುತ್ತಾರೆ. ದಿನವೂ ಇಡ್ಲಿಗೆ ಬೇಕಾಗುವ ಆರು ಕೆ ಜಿ ಯಷ್ಟು ಉದ್ದಿನಬೇಳೆ ಮತ್ತು ಅಕ್ಕಿಯನ್ನು ತೊಳೆದು ಹಿಂದಿನ ದಿನವೇ ನೆನೆ ಹಾಕಿ ತಾವೇ ಸ್ವತಃ ರುಬ್ಬುತ್ತಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ಪ್ರತಿದಿನ ಸಂಜೆ ಇದನ್ನು ರುಬ್ಬಲು ಅವರಿಗೆ ನಾಲ್ಕು ಘಂಟೆಗಳಷ್ಟು ಸಮಯ ಹಿಡಿಯುತ್ತದೆ. ರಾತ್ರಿ ಹುದುಗು ಬರಿಸಿ ಬೆಳಗ್ಗೆ ಅದರಿಂದ ಇಡ್ಲಿ ಮಾಡುತ್ತಾರಲ್ಲದೇ ಪ್ರತಿ ದಿನ ತಾಜಾ ಇಡ್ಲಿ ಹಿಟ್ಟನ್ನೇ ಬಳಸುತ್ತಾರಲ್ಲದೆ ಒಂದು ದಿನವೂ ಹಿಂದಿನ ದಿನ ಮಿಕ್ಕಿದ ಹಿಟ್ಟನ್ನು ಉಪಯೋಗಿಸುವುದಿಲ್ಲ. ಇವರ ಬಳಿ ಇರುವ ಅಲ್ಯೂಮಿನಿಯಂ ಇಡ್ಲಿ ಕುಕ್ಕರಿನಿಂದ ಒಂದುಬಾರಿಗೆ ಸುಮಾರು 37 ಇಡ್ಲಿಗಳನ್ನು ಮಾಡುತ್ತಾರೆ. ಪ್ರತಿದಿನ ಎನಿಲ್ಲವೆಂದರೂ ಸುಮಾರು ಸಾವಿರ ಇಡ್ಲಿಗಳನ್ನು ಇವರು ಮಾಡುತ್ತಾರೆ. ಮೊದಲು ಐವತ್ತು ಪೈಸೆಗೆ ಒಂದು ಇಡ್ಲಿಯನ್ನು ಕೊಡುತ್ತಿದ್ದರು. ಕೆಲವರ್ಷಗಳ ಹಿಂದೆ ಅದನ್ನು ಒಂದು ರೂಪಾಯಿಗೆ ಏರಿಸಿದ್ದಾರೆ. ಗ್ರಾಹಕರಿಂದ ದುಪ್ಪಟ್ಟು ಹಣ ಕೀಳುವ ಹೋಟೆಲ್‌ಗಳು ಇಂಥವರಿAದ ಕಲಿಯಬೇಕಾದ್ದು ಬಹಳ ಇದೆ.
ಹೋಟೆಲ್‌ಗಳಲ್ಲಿ ಇಪ್ಪತ್ತು ರೂಪಾಯಿಗೆ ಎರಡು ಹೆಚ್ಚೆಂದರೆ ಮೂರು ಇಡ್ಲಿ ಕೊಡುತ್ತಾರೆ. ಕಷ್ಟ ಪಟ್ಟು ದುಡಿಯುವ ಕೂಲಿ ಕಾರ್ಮಿಕರಿಗೆ ಎರಡು ಇಡ್ಲಿ ಯಾವುದಕ್ಕೂ ಸಾಲುವುದಿಲ್ಲ ಹಾಗೂ ಕೆಲಸ ಮಾಡಲು ಬೇಕಾದ ಶಕ್ತಿಯೂ ಸಿಗುವುದಿಲ್ಲ. ಹಾಗಾಗಿ ನಾನು ಕಡಿಮೆ ಬೆಲೆಯಲ್ಲಿ ಅವರ ಹಸಿವನ್ನು ನಿಗಿಸಿ ಕಸುವನ್ನು ಹೆಚ್ಚಿಸುವ ಕೆಲಸ ಮಾಡುತ್ತಿರುವೆ ಎನ್ನುವ ಕಮಲಾತ್ತಲ್ ಅಜ್ಜಿಯ ನಿಸ್ವರ್ಥ ಸೇವೆಯನ್ನು ಮೆಚ್ಚಬೇಕಾದದ್ದೆ. ಪ್ರತಿದಿನ ಚಟ್ನಿ ಮಾತ್ರ ಬದಲಾಗುತ್ತದೆ. ತಮ್ಮ ತೋಟದಲ್ಲೇ ಬೆಳೆದ ಬಾಳೆ ಎಲೆಯ ಮೇಲೆ ಇವರು ಇಡ್ಲಿಯನ್ನು ಕೊಡುತ್ತಾರೆ. ಬೆಳಗ್ಗೆ ಎಂಟು ಘಂಟೆಗೆಲ್ಲಾ ಇವರ ಮನೆಯ ಮುಂದೆ ಗ್ರಾಹಕರು ಬಂದು ನಿಲ್ಲುತ್ತಾರೆ. ತಮ್ಮ ಸಣ್ಣ ಶೀಟ್ ಮನೆಯೇ ಇವರ ಹೋಟೆಲ್. ಬೆಳಗ್ಗೆ ಸೂರ್ಯ ಹುಟ್ಟುವ ಮುಂಚೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಮಗನ ಜೊತೆ ಹೊಲಕ್ಕೆ ಹೋಗಿ ತರಕಾರಿ ತರುತ್ತಾರೆ. ದಿನವೂ ಇವರು ಮಿಶ್ರ ತರಕಾರಿ ಸಾಂಬಾರ್ ಮಾಡಿ ಗ್ರಾಹಕರಿಗೆ ಕೊಡುತ್ತಾರೆ. ಇದುವರೆಗೂ ಬರಿ ಇಡ್ಲಿಗಳನ್ನು ಮಾತ್ರ ಮಾಡುತ್ತಿದ್ದರು. ಆದರೆ ಗ್ರಾಹಕರ ಒತ್ತಾಯದ ಮೇರೆಗೆ ಇತ್ತೀಚೆಗೆ ತಮ್ಮ ಮೆನುವಿನಲ್ಲಿ ಬೊಂಡವನ್ನು ಮಾತ್ರ ಸೇರಿಸಿದ್ದಾರೆ.
ಪ್ರತಿದಿನ ಇವರಿಗೆ ಇನ್ನೂರು ರೂಪಾಯಿ ಲಾಭ ಸಿಗುತ್ತದೆ. ಹಲವಾರು ಜನ ಗ್ರಾಹಕರು ಇಡ್ಲಿಯ ಬೆಲೆಯನ್ನು ಏರಿಸಿ ಎಂದರೂ ನಾನು ಇದನ್ನು ಹಸಿದವರಿಗೆ ಹಾಗೂ ಅವಶ್ಯಕತೆ ಇದ್ದವರಿಗೆ ಮಾಡುತ್ತಿದ್ದೇನೆ, ಅದೇ ನನಗೆ ತೃಪ್ತಿ ಕೊಡುತ್ತದೆ ಹಾಗಾಗಿ ನಾನು ಬೆಲೆ ಏರಿಸುವುದಿಲ್ಲ ಎನ್ನುತ್ತಾರೆ. ಇವರ ಈ ಒಂದು ರೂಪಾಯಿ ಇಡ್ಲಿ ಬಗ್ಗೆ ಸುದ್ದಿ ಹರಡುತ್ತಲೇ ಸುತ್ತ ಮುತ್ತಲ ಹಳ್ಳಿಯಿಂದಲೂ ಜನ ಬರಲಾರಂಭಿಸಿದ್ದಾರೆ. ಅವರ ಮೊಮ್ಮಕ್ಕಳು ನಿನಗೆ ವಯಸ್ಸಾಗುತ್ತಿದ್ದು ಈ ಇಡ್ಲಿ ಹೋಟೆಲ್ ಬಿಟ್ಟು ನಿನ್ನ ಆರೋಗ್ಯದ ಕಡೆ ಗಮನ ಕೊಡು ಎಂದರೆ, ನನಗೆ ಜನರ ಹಸಿವು ನೀಗಿಸುವುದು ಖುಷಿ ಕೊಡುತ್ತದೆ ಹಾಗೂ ನಾನು ಲವಲವಿಕೆ ಇಂದ ಇರಲು ಸಾಧ್ಯ ಎನ್ನುತ್ತಾರೆ ಎಂಭತ್ತು ವರ್ಷದ ಅಜ್ಜಿ. ಸಾಂಪ್ರದಾಯಿಕವಾಗಿ ಒರಳುಕಲ್ಲಿನಲ್ಲಿ ರುಬ್ಬಿ ಕಟ್ಟಿಗೆ ಒಲೆಯಲ್ಲಿ ಬೆಂದ, ಬಾಳೆ ಎಲೆಯಲ್ಲಿ ಬಡಿಸುವ ಇಡ್ಲಿಯ ರುಚಿಯನ್ನು ಸವಿಯಲು ಈಗ ಜನ ಅಜ್ಜಿಯ ಮನೆ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಎಕೆ ಇಷ್ಟು ಕಡಿಮೆ ಬೆಲೆಗೆ ಇಡ್ಲಿ ಮಾರುತ್ತಿರಾ ಎಂದರೆ ಬಡ ಮಕ್ಕಳು ತಿಂದು ಹಸಿವು ನೀಗಿಸಿಕೊಳ್ಳಲಿ ಬಿಡಿ ಎನ್ನುತ್ತಾರೆ. ಎಂಥಹ ಉದಾತ್ತ ಮನೋಭಾವ ಅಲ್ಲವೇ? ಈ ಅಜ್ಜಿಯ ಇಡ್ಲಿ ದಾಸೋಹವನ್ನು ಸಾಮಾಜಿಕ ಜಾಲತಾಣದಲ್ಲಿ ವಿಕ್ಷೀಸಿದ್ದ ಉದ್ಯಮಿ ಆನಂದ್ ಮಹೀಂದ್ರಾ ಅವರು ಮನೆ ಕಟ್ಟಿಸಿಕೊಡಲು ಮುಂದಾಗಿದ್ದಾರೆ, ಇಂದಿನ ಯುವ ಪೀಳಿಗೆಗೆ ಮಾದರಿ ಈ ಅಜ್ಜಿ ಎಂದರೆ ತಪ್ಪಾಗಲಾರದು. ಇಂಥಹವರ ಸಂತತಿ ಸಾವಿರವಾಗಲಿ. ಹಸಿದವರ ಹಸಿವು ನೀಗಿಸುತ್ತಿರುವ ಕಮಲಾತ್ತಲ್ ಅಜ್ಜಿ ನೂರ್ಕಾಲ ಚೆನ್ನಾಗಿರಲಿ ಎಂದು ಹಾರೈಸುವ.
ಡಾ. ಪ್ರಕಾಶ್ ಕೆ ನಾಡಿಗ್