ಕರಾವಳಿ ಬಕ – Western Reef Heron or Wester Reef Egret

ಬಣ್ಣವೊಂದನ್ನು ಬಿಟ್ಟರೆ ಬೆಳ್ಳಕ್ಕಿಯ ದೊಡ್ಡಣ್ಣನೇ ಎನಿಸುವ ಈ ಬಕ, ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ನಮ್ಮ ಉಡುಪಿಯ ಸಮುದ್ರ ತಟದಲ್ಲಿಯೂ ಕಂಡುಬರುತ್ತದೆ. ಇಂಗ್ಲೀಷಿನಲ್ಲಿ Western Reef Heron ಅಥವಾ  Western Reef Egret ಎನ್ನಲಾಗುವ ಇದರ ವೈಜ್ಞಾನಿಕ ಹೆಸರು Egretta gularis. ಏನಿದು ವೈಜ್ಞಾನಿಕ ಹೆಸರು ಎಂಬ ಪ್ರಶ್ನೆ ಏಳಬಹುದು, ಕೆಲವರಿಗೆ. ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಒಂದೊಂದು ಅನನ್ಯವಾದ ಹೆಸರು ಬೇಕಲ್ಲವೆ? ಇಲ್ಲವಾದಲ್ಲಿ ಒಂದಕ್ಕೇ ಅನೇಕ ಕಡೆ ಅನೇಕ ಹೆಸರುಗಳು ಇದ್ದು ಅಧ್ಯಯನ, ಗುರುತುಹಚ್ಚುವಿಕೆಗೆ ತೊಂದರೆಯಾಗುತ್ತದೆ. ನಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳೋಣ ಒಂದೇ ಹೆಸರಿನ ಇಬ್ಬರಿದ್ದರೆ ಅವರಿಗೆ ಎ ಬಿ ಎಂದೋ ಏನೋ ಮಾಡುತ್ತಿದ್ದರಲ್ಲವೆ? ಇಲ್ಲಿ ತದ್ವಿರುದ್ಧ ಸಮಸ್ಯೆ ಬರುತ್ತದೆ. ಒಂದೇ ಜೀವಿಗೆ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರುಗಳು ಇರುತ್ತವೆ. ಆದ್ದರಿಂದ ಒಂದು ವೈಜ್ಞಾನಿಕವಾದ ನಾಮಕರಣ ಪದ್ಧತಿ ಜಾರಿಯಲ್ಲಿದೆ. ಪ್ರತಿ ಜೀವಿಗೂ ಒಂದೊಂದು ಅನನ್ಯವಾದ ವೈಜ್ಞಾನಿಕ ನಾಮದ್ವಯವಿರುತ್ತದೆ. ಹೌದು. ಹೆಸರಿಗೆ ಎರಡು ಭಾಗಗಳು ಜೀನಸ್ ಮತ್ತು ಸ್ಪೀಷೀಸ್‍. ಇನ್ನು ಮುಂದುವರೆಯುತ್ತದೆ, ಆದರೆ ನಮಗೆ ಇಷ್ಟು ಸಾಕು. ಹೆಸರಿನ ಎರಡು ಭಾಗಗಳಲ್ಲಿ  ಮೊದಲನೆಯದು ಕುಲ ಎನ್ನುತ್ತಾರೆ (ಜೀನಸ್‍), ಕುಲ ಎನ್ನುವ ಬದಲು ಪಂಗಡ ಎನ್ನೋಣ. ಉದಾಹರಣೆಗೆ ನಮ್ಮ ಕಾಗೆಯನ್ನೇ ತೆಗೆದುಕೊಳ್ಳೋಣ. ಸಾಮಾನ್ಯವಾಗಿ ನಾವು ಎರಡು ಬಗೆಯ ಕಾಗೆಗಳನ್ನು ನಾವು ನಮ್ಮ ಮನೆಯ ಸುತ್ತಮುತ್ತ ಕಾಣುತ್ತೇವೆ. ಬೂದುಕೊರಳಿನದು ಒಂದು ಪೂರ್ತಿ ಕಪ್ಪಾಗಿರುವ ಇನ್ನೊಂದು. ಇವನ್ನು ಕ್ರಮವಾಗಿ ಮನೆ ಕಾಗೆ ಮತ್ತು ಕಾಡು ಕಾಗೆ ಎಂದು ಕರೆಯುತ್ತೇವೆ. ಈ ಎರಡೂ ಕಾರ್ವಸ್ ಪಂಗಡಕ್ಕೆ ಸೇರಿದ್ದು. ಪ್ರಭೇದಗಳು ಮರ ಮಾತ್ರ ಬೇರೆ ಬೇರೆ. ಮನೆ ಕಾಗೆ ಕಾರ್ವೊಸ್ ಸ್ಪೆಂಡೆನ್ಸಿಸ್‍ ಆದರೆ ಪೂರ್ತಿ ಕಪ್ಪಗಿರುವ ಕಾಡುಕಾಗೆ ಕಾರ್ವಸ್ ಮಾಕ್ರೊರಿಂಛ. ಇವು ಲ್ಯಾತಿನ್‍ ಭಾಷೆಯ ಪದಗಳಾದ್ದರಿಂದ ನಮಗೆ ವಿಚಿತ್ರವಾಗಿ ಕಾಣಿಸುತ್ತವೆ. ಅವುಗಳ ಅರ್ಥ ಸರಳವಾಗಿಯೇ ಇರುತ್ತವೆ. ಮಾಕ್ರೊರಿಂಛ ಎಂದ ದೊಡ್ಡಕೊಕ್ಕು ಎಂದು ಅರ್ಥ, ಅಷ್ಟೆ! ಹಾಗೆಯೇ ನಮ್ಮ ಅರಳಿಮರ ಫೈಕಸ್ ರಿಲಿಜಿಯೋಸ. ಆಲ ಫೈಕಸ್ ಬೆಂಗಾಲೆನ್ಸಿಸ್‍. ಎರಡೂ ಒಂದೇ ಪಂಗಡ ಆದರೆ ಪ್ರಭೇದ ಬೇರೆ. ಇರಲಿ,  ಮನುಷ್ಯರಿಗೇ ಒಂದು ಹೆಸರಿದೆ, ಹೋಮೋ ಸೇಪಿಯನ್‍ ಎಂದು. ಇದರ ಅರ್ಥ ಬುದ್ಧಿವಂತ ಎಂದು (ಹೌದೇ?). ಇರಲಿ, ಒಟ್ಟಾರೆ, ಈ ಪ್ರಪಂಚದಲ್ಲಿರುವ ಎಲ್ಲ ಜೀವಿಗಳಿಗೂ ಒಂದೊಂದು ಅನನ್ಯವಾದ ಹೆಸರಿದೆ. ಬ್ಯಾಕ್ಟೀರಿಯಾ, ವೈರಸ್ಸುಗಳಿಗೂ ಇದೆ. ಅಕ್ಕಿ, ಬೇಳೆಗೂ ಇದೆ. ನಮ್ಮ ತುಳಸೀ ಗಿಡಕ್ಕೂ ಇದೆ. ಕುತೂಹಲಕ್ಕಾಗಿ ಗೂಗಲ್ ಮಾಡಿ ನೀಡಬಹುದು.  ಇಂಗ್ಲಿಷಿನಲ್ಲಿ ಇದನ್ನು ಬರೆಯಲೂ ಒಂದು ಕ್ರಮವಿದೆ. ಎರಡು ಭಾಗಗಳಲ್ಲಿ ಮೊದಲ ಭಾಗದ ಮೊದಲಕ್ಷರ ದೊಡ್ಡಕ್ಷರವಾಗಬೇಕು, ಎರಡನೆಯ ಪದ ಸಣ್ಣಕ್ಷರ. ಒಟ್ಟೂ ಹೆಸರನ್ನು ಓರೆ ಅಕ್ಷರಶೈಲಿಯಲ್ಲಿ ಬರೆಯಬೇಕು (ಐಟಲೈಸ್‍ ಮಾಡಬೇಕು). ಇರಲಿ, ಈಗ ನಮ್ಮ ಹಕ್ಕಿಗೆ ವಾಪಸು ಬರೋಣ.

ಈಗಾಗಲೇ ನಾವು ಗಮನಿಸುತ್ತಿರುವಂತೆ ಪ್ರತಿ ಆವಾಸದಲ್ಲಿ ಯಾವ ಯಾವ ಜೀವಿಗಳಿಗೆ ಅವಕಾಶವಿದೆಯೋ ಅಂತಹ ಜೀವಿಗಳು ಕಂಡುಬರುತ್ತವೆ. ಸಾಗರದ ಬಳಿಯ ಆವಾಸಕ್ಕೆ ಹೊಂದುವಂತಹ ಬಕಗಳು ನಮ್ಮ ಕರಾವಳಿಗಳಲ್ಲಿ ಕಂಡುಬರುತ್ತದೆ.  

ಇತರ ಬಕಗಳಂತೆ ಇದೂ ಸಹ ನೀಳವಾದ, ಉದ್ದಕತ್ತಿನ ಹಕ್ಕಿ. ವಿಶೇಷವೆಂದರೆ ಈ ಕರಾವಳಿ ಬಕಗಳಲ್ಲಿ ಪೂರ್ತಿ ಬಿಳಿ ಬಣ್ಣದವೂ ಹಾಗೂ ಬೂದು ಹಾಗೂ ಕಡುಬೂದು ಬಣ್ಣದವೂ ಕಂಡುಬರುತ್ತವೆ. ಕೆಲವು ಇವುಗಳ ಮಿಶ್ರಣವಾಗಿಯೂ ಕಂಡುಬರುತ್ತವೆ. ಇವುಗಳ ಬಣ್ಣವೈವಿಧ್ಯವನ್ನು ಕುರಿತಾಗಿ ಅನೇಕ ಚರ್ಚೆಗಳು ನಡೆದಿವೆ. ಅಷ್ಟೋಂದು ವಿವರಗಳು ನಮಗೆ ಬೇಡ. ಆದರೆ, ಹವ್ಯಾಸಿ ವನ್ಯಛಾಯಾಗ್ರಾಹಕರಾದ ಶ್ರೀ ಜಿ ಎಸ್ ಶ್ರೀನಾಥ ನಮಗೆ ಕಡುಬೂದು ಬಣ್ಣದ ಬಕದ ಸೊಗಸಾದ ಚಿತ್ರವನ್ನು ಒದಗಿಸಿದ್ದಾರೆ, ನೋಡಿ. ಹಳದಿಪಾದವನ್ನು ಗಮನಿಸಿ.

ಕರಾವಳಿ ಬಕ ಭಾರತ, ಶ್ರೀಲಂಕಾ ಆಫ್ರಿಕಾದ ಕರಾವಳಿಗಳಲ್ಲಿ ಕಂಡುಬರುತ್ತವೆ. ಭಾರತದ ಲಕ್ಷದ್ವೀಪದಲ್ಲಿಯೂ ಇವು ಕಂಡುಬಂದಿವೆ. ಕಾಂಡ್ಲಾ (ಮಾಂಗ್ರ್ಯೂವ್) ಹಾಗೂ ಇತರೆಡೆ ಮರಗಳ ಮೇಲೆ ಗೂಡುಕಟ್ಟುತ್ತವೆ. ಮೀನು, ಮೃದ್ವಂಗಿ ಹಾಗೂ ಕಂಟಕಚರ್ಮಿಗಳು ಇವುಗಳ ಮುಖ್ಯ ಆಹಾರ. ಮಡ್‍ಸ್ಕಿಪ್ಪರ್‍ ಮೀನನ್ನೂ ತಿನ್ನುತ್ತದೆ. ಈ ಹಕ್ಕಿಯ ಬಗ್ಗೆ ಇರುವ ಸಂತೋಷದ ಸಂಗತಿ ಎಂದರೆ ಇವುಗಳ ಸಂಖ್ಯೆ ಅರೋಗ್ಯಕರವಾಗಿದ್ದು ಅಳಿನತ್ತ ಸಾಗುತ್ತಿಲ್ಲ ಎಂಬುದು. ಇದು ಸಂತೋಷದ ವಿಷಯವಾದರೂ ತಪ್ಪು ಅಭಿವೃದ್ಧಿಯ ಹುಚ್ಚುಹೊಳೆಯಲ್ಲಿರುವ ನಮಗೆ ಇದೂ ಒಂದು ಎಚ್ಚರಿಕೆಯ ಗಂಟೆಯೇ ಆಗಬೇಕಿದೆ.

ಇದು ನಡೆಯುತ್ತಾ ಗೊತ್ತು ಗುರಿಯಿಲ್ಲದೆ ಓಡುವಂತಹ ನಡಿಗೆ ಪ್ರದರ್ಶಿಸುತ್ತಾ ಮತ್ತು ನೀರಿನ ಮೇಲೆ ರೆಕ್ಕೆ ಆಡಿಸಿ ಇದರ ಆಹಾರದ ಪ್ರಾಣಿಯನ್ನು ಮೇಲೆ ಬರುವಂತೆ ಮಾಡಿ ಹಿಡಿದು ತಿನ್ನುತ್ತದೆ. ಅಂದಹಾಗೆ, ಇದು ಬೆಳಕಿನ ವಕ್ರೀಭವನದ ಪರಿಣಾಮವನ್ನು ಗಣಿಸಿ (ರಿಫ್ರಾಕ್ಷನ್ ಆಫ್‍ ಲೈಟ್‍ ಪ್ರೌಢಶಾಲೆಯ ಭೌತವಿಜ್ಞಾನವನ್ನು ನೆನಪಿಸಿಕೊಳ್ಳಿ!) ಮಿಕವನ್ನು ಹಿಡಿಯುತ್ತದೆ. ಇದೊಂದು ವಿಶೇಷ (ನಮ್ಮ ಮೀಂಚುಳ್ಳಿಗಳೂ ಹೀಗೆ ವಕ್ರೀಭವನವನ್ನು ಗಣಿಸಿ ಆಹಾರ ಗಳಿಸುತ್ತವೆ).

ಇಷ್ಟು ವೈಶಿಷ್ಟ್ಯಗಳಿರುವ ಹಕ್ಕಿಯನ್ನು ಕಾಣುವ ಪ್ರಯತ್ನ ಮಾಡಿ. ಇದು ಕಂಡಾಂಗ ನಮಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ

  1. ಕಲ್ಗುಂಡಿ ನವೀನ್
  2. ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ

Related post

Leave a Reply

Your email address will not be published. Required fields are marked *