ಕಲ್ಲಂಗಡಿಯಲ್ಲಿ ಕಲಾವಿದನ ಕೈಚಳಕ

ಕಲ್ಲಂಗಡಿಯಲ್ಲಿ ಕಲಾವಿದನ ಕೈಚಳಕ

ಕಲಾವಿದ ನಿದ್ದೆಯಲ್ಲೂ ಕಲೆಯನ್ನು ಆರಾಧಿಸುವವನು. ಕಲೆ ಎಂಬುದು ಒಂದೇ ಕ್ಷೇತ್ರದ ಸೊತ್ತಲ್ಲ, ಯಾವುದೇ ಕ್ಷೇತ್ರವಿರಲಿ ಅಲ್ಲಿ ಆಸಕ್ತಿ ಮತ್ತು ಶ್ರದ್ಧೆಯಿಂದ ಕೌಶಲವನ್ನು ಧಾರೆಯೆರೆದರೆ ಸಾಧಕನ ಪಟ್ಟ ದೊರೆತು ಸಾಧನೆಯ ತೃಪ್ತಿಯೂ ಶೀಘ್ರವಾಗಿ ದೊರೆಯುತ್ತದೆ. ಇಂತಹ ಸಾಧನೆಯ ಹಾದಿಯಲ್ಲಿರುವವನು ಧಾರವಾಡ ಜಿಲ್ಲೆಯ ಕೇಲಗೇರಿಯ ಯುವಕ ಅಮೃತ್ ಗೌಡ ಭಾವಿಕಟ್ಟಿ.

ಹದಿನೆಂಟು ವರ್ಷದ ಯುವಕ ಅಮೃತ್ ಗೌಡ ಭಾವಿಕಟ್ಟಿ ಪ್ರಸ್ತುತ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಓದುತ್ತಿದ್ದಾನೆ. ಯುವಕ ಎಂದಾಕ್ಷಣ ನಮ್ಮ ಮುಂದೆ ಬರುವ ಚಿತ್ರಣ ಕೈಯಲ್ಲಿ ಮೊಬೈಲ್ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಯುವಕರದ್ದು. ಆದರೆ ಈ ಯುವಕನ ಕೈಯಲ್ಲಿ ಮೊಬೈಲ್ ಬದಲಿಗೆ ಕಲ್ಲಂಗಡಿ ಹಣ್ಣು ಇದೆ. ಇದೇನಪ್ಪಾ ಈತ ಇಷ್ಟೊಂದು ಕಲ್ಲಂಗಡಿ ಹಣ್ಣುಗಳನ್ನು ತಿನ್ನುತ್ತಾನೆಯೇ ಎಂಬ ಪ್ರಶ್ನೆಯು ಮನದಲ್ಲಿ ಮೂಡಬಹುದು. ಇಲ್ಲ ಈತ ಹಿಡಿಯುವ ಕಲ್ಲಂಗಡಿ ಹಣ್ಣುಗಳಲ್ಲಿ ವಿಭಿನ್ನವಾದ ಚಿತ್ರಗಳು ಮೂಡುತ್ತವೆ. ಅಂದರೆ ಈತ ಕಲ್ಲಂಗಡಿಯನ್ನು ಕತ್ತರಿಸಿ ತಿನ್ನುವ ತನ್ನ ಕೈಚಳಕದ ಮೂಲಕ ಕಲ್ಲಂಗಡಿಯ ಹೊರಮೈಯಲ್ಲಿ ಚಿತ್ತಾಕರ್ಷಕವಾದ ಚಿತ್ತಗಳನ್ನು ನಯಜವಾಗಿ ಕಾಣಿಸುವಂತೆ ಮೂಡಿಸುತ್ತಾನೆ.

ಅಮೃತ್, ಕಲ್ಲಂಗಡಿಯ ಹೊರಮೈಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಚಿತ್ರಗಳು, ದೇವರುಗಳ ಚಿತ್ರ, ಹೂವಿನ ಚಿತ್ರಗಳನ್ನು ಅತ್ಯಂತ ನಾಜೂಕಾಗಿ ತನ್ನ ಕೈಚಳಕದ ಮೂಲಕ ಕೆತ್ತುತ್ತಾನೆ. ಅಬ್ಬಬ್ಬಾ ಈತನ ಕೈಯಲ್ಲಿ ಅಡಗಿರುವ ಕಲೆಯೇ ಅಂಥದ್ದು. ನೋಡಲು ಅತ್ಯಂತ ಸುಂದರ ಹಾಗೂ ಅದ್ಭುತವಾದ ಇಂತಹ ವಿಭಿನ್ನ ಕಲೆಯನ್ನು ಮೈಗೂಡಿಸಿಕೊಂಡವರು ತೀರಾ ವಿರಳ ಎನ್ನಬಹುದು. ಇಂತಹ ವಿಭಿನ್ನವಾದ ಕಲ್ಲಂಗಡಿಯಲ್ಲಿ ಅರಳಿದ ಕಲೆಯ ಚಿತ್ರಗಳನ್ನು ನಾವು ಗೂಗಲ್‌ ಮತ್ತು ವಿವಿಧ ವೆಬ್’ಸೈಟ್‌ಗಳಲ್ಲಿ ನೋಡಿದಾಗ ವಾಹ್ ಅದ್ಬುತವಾಗಿದೆ ಎಂದು ಕಣ್ಣರಳಿಸುತ್ತೇವೆ. ಅದೇ ಕಲೆಯನ್ನು ನಮ್ಮ ಪಕ್ಕದಲ್ಲೇ ಇರುವ ಪ್ರತಿಭಿಯೊಂದು ಅರಳಿಸಿದಾಗ ಆ ಅನುಭವವೇ ಅತ್ಯದ್ಭುತ. ಮೂಲತಃ ಅಮೃತ್ ವಿವಿಧ ಕಲಾಕೃತಿಗಳು ಮತ್ತು ಕರಕುಶಲ ವಸ್ತುಗಳನ್ನು ತಯಾರಿಸುವ ಕುಟುಂಬದ ಹಿನ್ನೆಲೆಯಿಂದಲೇ ಬಂದವನಾಗಿದ್ದು, ಕರಕುಶಲ ವಸ್ತುಗಳನ್ನು ತಯಾರಿಸುವುದು ಇವನಿಗೆ ತನ್ನ ಹೆತ್ತವರ ಮೂಲಕ ರಕ್ತಗತವಾಗಿಯೇ ಬಂದಿದೆ. ಇವನ ತಂದೆ ಶ್ರೀ ಜಗದೀಶ್ ಭಾವಿಕಟ್ಟಿ, ಇವರು ತೆಂಗಿನಕಾಯಿಯ ಹೊರಮೈಯನ್ನು ಕೆತ್ತನೆ ಮಾಡುವ ಮೂಲಕ ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಾರೆ. ಹಾಗೂ ಈ ಕ್ಷೇತ್ರದಲ್ಲಿ ವಿಭಿನ್ನವಾದ ಸಾಧನೆಯನ್ನೂ ಮಾಡಿದ್ದಾರೆ. ಇವರ ಮಗನಾದ ಅಮೃತ್ ತನ್ನ ತಂದೆಯು ಮಾಡುವ ತೆಂಗಿನಕಾಯಿಯ ಕೆತ್ತನೆಯ ಕೆಲಸದಲ್ಲಿ ಸಹಾಯ ಮಾಡುತ್ತಾ, ತಾನು ಅದೇ ಕಲೆಯನ್ನು ಕಲ್ಲಂಗಡಿಯ ಹೊರಮೈಯಲ್ಲಿ ಮೂಡಿಸುವ ಕುರಿತು ವಿಭಿನ್ನವಾಗಿ ಯೋಚಿಸಿ ಸಾಧನೆಯ ಹಾದಿ ಹಿಡಿದದ್ದು ವಿಶೇಷ ಎನಿಸುತ್ತದೆ.

ಅಮೃತ್ ಗೌಡ ತನ್ನ ಸಾಧನೆಗೆ ಕಲ್ಲಂಗಡಿಯನ್ನು ಆಶ್ರಯಿಸಿದ್ದು ಒಂದು ರೀತಿ ರೋಚಕ ಎನ್ನಬಹುದು. ತಂದೆಯೊಂದಿಗೆ ತೆಂಗಿನಕಾಯಿಯಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಾ ಇದೇ ಕಲೆಯನ್ನು ಬೇರೆ ರೀತಿಯಲ್ಲಿ ಮತ್ತು ಇನ್ಯಾವುದಾದರೂ ವಸ್ತುಗಳಲ್ಲಿ ಮಾಡಬಹುದೇ ಎಂದು ದಿನಾ ಚಿಂತನೆ ಮಾಡುತ್ತಿದ್ದ ಸಂದರ್ಭದಲ್ಲಿ ಧಾರವಾಡದ ಕೃಷಿ ಮೇಳದಲ್ಲಿ ವಿವಿಧ ಫಲಪುಷ್ಪಗಳಲ್ಲಿ ಕಲಾವಿದರು ಕಲೆಗಳನ್ನು ಅರಳಿಸಿದ್ದನ್ನು ಕಣ್ಣುಂಬಿಕೊಂಡು ಹೊಸ ಯೋಚನೆಯೊಂದಿಗೆ ತನ್ನ ಮನೆಗೆ ಬಂದಿದ್ದ. ಕೃಷಿ ಮೇಳವು ಬೇಸಿಗೆ ದಿನಗಳಲ್ಲಿ ನಡೆಯುವುದರಿಂದ ಇಲ್ಲಿ ಹೇರಳವಾಗಿ ಕಲ್ಲಂಗಡಿ ಹಣ್ಣು ಲಭ್ಯವಾಗುತ್ತಿತ್ತು. ತಕ್ಷಣವೇ ಹೊಸ ಯೋಚನೆಯು ಹೊಳೆದು ಕಲ್ಲಂಗಡಿಯೇ ನನ್ನ ಕರಕುಶಲ ವಸ್ತು ತಯಾರಿಕೆ ಸೂಕ್ತವಾಗಿದೆ ನಿರ್ಧರಿಸಿ ತಡ ಮಾಡದೇ ಅಮೃತ್ ಮನೆಗೆ ಬಂದವನೇ ಕಲ್ಲಂಗಡಿಯಲ್ಲಿ ತನ್ನ ಕೈಚಳಕವನ್ನು ಅರಳಿಸಿದ್ದಾನೆ. ಕಲ್ಲಂಗಡಿಯಲ್ಲಿ ಅರಳಿದ ವಿಭಿನ್ನ ಕಲಾಕೃತಿಯನ್ನು ನೋಡಿದ ಮನೆಯವರೆಲ್ಲರೂ ಇತನ ಕೈಚಳಕಕ್ಕೆ ಶಹಬ್ಬಾಸ್ ಎಂದರು. ನಂತರ ತನ್ನ ಕೈಚಳಕದಲ್ಲಿ ಅರಳಿದ ವಿವಿಧ ಕಲಾಕೃತಿಗಳನ್ನು ವಿವಿಧ ದೇವಸ್ಥಾನಗಳಲ್ಲಿ, ಮೇಳಗಳಲ್ಲಿ ಪ್ರದರ್ಶನಗಳಲ್ಲಿ ಇಟ್ಟಿದ್ದಾನೆ.

ಈತ ಕೇವಲ ಕಲ್ಲಂಗಡಿ ಹಣ್ಣಿನಲ್ಲಿ ಮಾತ್ರವಲ್ಲ ತಂದೆಯ ಜೊತೆಗೆ ಮರದಲ್ಲಿ ವಿವಿಧ ರೀತಿಯ ಕಲಾಕೃತಿಗಳನ್ನು ತಯಾರಿಸಿ ತನ್ನ ಮನೆಯನ್ನು ವಿನೂತನವಾಗಿ ಅಲಂಕರಿಸಿದ್ದಾನೆ. ಇವರ ಮನೆಯೇ ಒಂದು ರೀತಿಯಲ್ಲಿ ವೈವಿಧ್ಯಮಯ ಕಲಾಕೃತಿಗಳ ಸಂಗ್ರಹಾಲಯ (ಮ್ಯೂಸಿಯಂ) ಆಗಿದೆ. ಕಟ್ಟಿಗೆಗಳಿಂದ ಕೀ ಚೈನ್, ಗೋಡೆಗಳಿಗೆ ಅಲಂಕಾರಿಕಾ ವಸ್ತುಗಳು ಹಾಗೂ ಗಡಿಯಾರಗಳನ್ನು ಈಗಾಗಲೇ ತಯಾರಿಸಿದ್ದಾನೆ. ಧಾರವಾಡದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೆ.ಎಸ್.ಎಸ್ ಕಾಲೇಜಿನಲ್ಲಿ ಪಿ.ಯು.ಸಿ ವಿಜ್ಞಾನ ವಿಭಾಗದ ಅಧ್ಯಯನ ಮಾಡುತ್ತಿರುವ ಅಮೃತ್ ಗೌಡ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್.ಡಿ.ಎ–National Defence Academy) ವಿಭಾಗ ಪರೀಕ್ಷೆಗೆ ನೋಂದಾವಣೆ ಮಾಡಿದ್ದು, ಮುಂದಿನ ದಿನಗಳಲ್ಲಿ ದೇಶಸೇವೆ ಮಾಡುವ ಗುರಿಯನ್ನು ಹೊಂದಿದ್ದಾನೆ. ತಂದೆಯ ಕರಕುಶಲ ಕಲೆಗೆ ಸಹಾಯ ಮಾಡಲೆಂದು ಹವ್ಯಾಸವಾಗಿ ತೊಡಗಿಕೊಂಡಿರುವ ಈ ಕೌಶಲವನ್ನು ಮುಂದುವರೆಸಿಕೊಂಡು ದೇಶ ವಿದೇಶದ ಜನರಿಗೆ ಪರಿಚಯಿಸುವ ಕನಸನ್ನು ಅಮೃತ್ ಹೊಂದಿದ್ದಾನೆ. ಈ ಕಲೆಯನ್ನು ಅಮೃತ್ ಆದಾಯಕ್ಕಾಗಿ ಮಾಡದೇ, ಈ ಕೌಶಲವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳಸುವ ಹೆಬ್ಬಯಕೆಯನ್ನು ಹೊಂದಿದ್ದಾನೆ. ಇನ್ನೂ ಸಣ್ಣ ಪ್ರಾಯದ ಈ ಯುವಕ ಸಾಧನೆ ಮಾಡಲು ಬೇಕಾದಷ್ಟು ಸಮಯವಿದ್ದು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಕಾತರದಲ್ಲಿದ್ದಾನೆ. ಏನೇ ಆಗಲಿ ವಿಶೇಷ ಸಾಧನೆ ಮಾಡುವ ಹಂಬಲ ಹೊಂದಿದ ಈ ಯುವಕನಿಗೆ ಪ್ರೋತ್ಸಾಹಿಸಿ ಬೆನ್ನು ತಟ್ಟಬೇಕಾದ್ದು ಕಲಾರಾಧಕರಾದ ನಮ್ಮ ಕರ್ತವ್ಯವಾಗಿದೆ.

ಸಂತೋಷ್ ರಾವ್ ಪೆರ್ಮುಡ

ಪಟ್ರಮೆ ಗ್ರಾಮ ಮತ್ತು ಅಂಚೆ,

ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198

ದೂ: 9742884160

Related post

Leave a Reply

Your email address will not be published. Required fields are marked *