ನಮ್ಮಲ್ಲಿ ಹಕ್ಕಿಗಳಿಗೆ ಹೆಸರಿಡುವಾಗ ಎಷ್ಟು ಯೋಚಿಸಿರುತ್ತಾರೆ ನಮ್ಮ ಜನರು/ಜನಪದರು ಎಂಬುದು ಆ ಗೌರವ ತರುವ ವಿಷಯ. ಮಟಪಕ್ಷಿ ಎಂದೂ ಕರೆಯಲಾಗುವ ಈ ಕಳ್ಳಹಕ್ಕಿಗಳ ಇಂಗ್ಲಿಷ್ ಹೆಸರು ಟ್ರೀ ಪೈ ಎಂದು. ಇದು ಇತರ ಹಕ್ಕಿಗಳ ಮೊಟ್ಟೆ, ಮರಿಗಳನ್ನು ಕದ್ದು ತಿನ್ನುತ್ತದೆಯಾದ್ದರಿಂದ ಇದು ಕಳ್ಳಹಕ್ಕಿ.
ಕರ್ನಾಟಕದಲ್ಲಿ ಎರಡು ಬಗೆಯ ಕಳ್ಳಹಕ್ಕಿಗಳು ಕಂಡುಬರುತ್ತವೆ. ಒಂದು ಕೆಂಗಂದು ಕಳ್ಳಹಕ್ಕಿ (Rufous Treepie Dendrocitta vagabunda) ಉದ್ದಬಾಲದ (ಸುಮಾರು ಮುವ್ವತ್ತು ಸೆಂಟಿಮೀಟರ್) ಚಿಕ್ಕ, ಆದರೆ ಗಟ್ಟಿಯಾದ ಕೊಕ್ಕನ್ನು ಹೊಂದಿರುವ ಹಕ್ಕಿ. ಬೂದು, ತೆಳುಹಳದಿ/ಕೆಂಗಂದು ವಿಶ್ರಿತ ಹಳದಿ, ಬಿಳಿ ಬಣ್ಣದ ಛಾಯೆ ಇದರ ಸಾಮಾನ್ಯ ವರ್ಣವೈಭವ. ಹೆಚ್ಚು ಮರಗಿಡಗಳಿರುವಲ್ಲಿ, ಕುರುಚಲು ಪ್ರದೇಶಗಳಲ್ಲಿ ಕಂಡುಬರುತ್ತದೆ. ಜನರಿಗೆ ಹೆದರದ ಇದು ಮನೆಯ ಕಾಂಪೌಂಡ್, ತೋಟಗಳನ್ನು ಯಾವ ಅಳುಕು ಇಲ್ಲದೆ ಪ್ರವೇಶಿಸುತ್ತದೆ. ಕಾಡಿನಲ್ಲಿ ಸಫಾರಿ ವಾಹನದ ಮೇಲೆ ಬಂದು ಕೂರುವುದೂ ಉಂಟು. ಇದನ್ನು ವನ್ಯಛಾಯಾ ಗ್ರಾಹಕ ಜಿ ಎಸ್ ಶ್ರೀನಾಥ ದಾಖಲಿಸಿದ್ದಾರೆ (ಮೇಲಿನ ಚಿತ್ರ ನೋಡಿ).
ಇನ್ನೊಂದು ಬಿಳಿಹೊಟ್ಟೆಯ ಕಳ್ಳಹಕ್ಕಿ. (White-bellied Treepie Dendrocitta leucogastra) ಇದರ ಹೊಟ್ಟೆಯ ಭಾಗ ಬೆಳ್ಳಗಿದ್ದು ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಂಡುಬರುತ್ತದೆ.
ಕಾಗೆಯಂತೆಯೇ ಸರ್ವಭಕ್ಷಕವಾದ ಇದು ಕೀಟ, ಹಲ್ಲಿ, ಕಪ್ಪೆ, ಹಕ್ಕಿಯ ಮೊಟ್ಟೆ, ಮರಿಗಳು ಹಾಗೂ ಮೂಷಿಕಗಳನ್ನು ತಿನ್ನುತ್ತದೆ. ಹಾಗೆಯೇ, ಸತ್ತ ಪ್ರಾಣಿಗಳನ್ನು ಸಹ ತಿನ್ನುತ್ತದೆ. ಹಾಗಾಗಿ, ಪರಿಸರ ಸ್ನೇಹಿ ಎಂದು ಹೇಳಬಹುದು. ಆಹಾರ ಸರಪಳಿಯಲ್ಲಿ ಒಂದು ಪ್ರಮುಖ ಕೊಂಡಿ ಎನ್ನುವುದರಲ್ಲಿ ಸಂದೇಹವಿಲ್ಲ.
ಭಾರತ ಉಪಖಂಡದಲ್ಲಿ ಐದು ಬಗೆಯ ಮಟಪಕ್ಷಿಗಳು ಕಂಡುಬರುತ್ತದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಮಾಯನ್ಮಾರ್‍ಗಳಲ್ಲಿ ಕಾಣುವ ಇದು, ಶ್ರೀಲಂಕಾದಲ್ಲಿ ಇಲ್ಲ.
ಏಕಾಂಗಿಯಾಗಿ ಕಂಡುಬರುವುದಕ್ಕಿಂತಲೂ ಜೊತೆಯಾಗಿ ಇಲ್ಲವೆ ಗುಂಪಿನಲ್ಲಿ ಹೆಚ್ಚು ಕಂಡುಬರುತ್ತದೆ. ಹಕ್ಕಿಗಳ ಗುಂಪಿನನಲ್ಲಿ ಸೇರಿ ಆಹಾರ ಅರಸುವುದೂ ಉಂಟು.
ಸಾಮಾನ್ಯವಾಗಿ ಗಲಾಟೆಯ ಹಕ್ಕಿಯಾದ ಇದು ನಿಮಗೆ ಕಂಡರೆ ksn.bird@gmail.com ಗೆ ಬರೆದು ತಿಳಿಸಿ.
ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ
ಕಲ್ಗುಂಡಿ ನವೀನ್
ಚಿತ್ರ ಕೃಪೆ: ಜಿ ಎಸ್ ಶ್ರೀನಾಥ ಹಾಗು ಸೆಂಥಿಲ್ ಕುಮಾರ್ ದುರೈಸ್ವಾಮಿ