ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್

ಕಳ್ಳ ಖದೀಮ ಕಡಲ ಹಕ್ಕಿ – ಫ್ರಿಗೇಟ್

ಅಟ್ಲಾಂಟಿಕ್ ಮಹಾಸಾಗರ ಹಾಗು ಪೆಸಿಫಿಕ್ ಸಾಗರದ ತೀರದಲ್ಲಿ ಪೆಂಗ್ವಿನ್ ತರಹದ ಬೂಬಿ ಎಂಬ ಸಣ್ಣ ಗಾತ್ರದ ಹಕ್ಕಿಗಳು ಕಾಣಸಿಗುತ್ತವೆ, ಈ ಆಕರ್ಷಕ ಹಕ್ಕಿಗಳ ಮುಖ್ಯ ಆಹಾರ ಸಾಗರದ ಮೀನುಗಳು. ಬೂಬಿ ಹಕ್ಕಿಗಳು ದಿನದಲ್ಲಿ ಸಾಕಷ್ಟು ಮೀನು ಹಿಡಿಯುತ್ತವಾದರೂ ಅವುಗಳ ಹೊಟ್ಟೆಗೆ ಸೇರುವುದು ಅದರಲ್ಲಿನ ಶೇಕಡ 40 ರಷ್ಟು ಮಾತ್ರ.

ಮೀನನ್ನು ಹಿಡಿದ ಖುಷಿಯಲ್ಲಿ ಬೂಬಿ ಹಕ್ಕಿಗಳು ತನ್ನ ಸಂಗಾತಿಯತ್ತ ತಿರುಗುವಷ್ಟರಲ್ಲಿ ಅದೆಲ್ಲಿರುತ್ತದೋ ಕಳ್ಳ ಖದೀಮ ಫ್ರಿಗೇಟ್ ಹಕ್ಕಿ ಯುದ್ಧ ವಿಮಾನದಂತೆ ಬಂದು ಆ ಬೂಬಿ ಹಕ್ಕಿಯನ್ನೇ ತನ್ನ ಕಾಲಲ್ಲಿ ಹಿಡಿದು ಮೇಲಕ್ಕೆ ಹಾರಿ ಕೊಂಡೊಯ್ದು ಗಿರಿಗಿಟ್ಟಲೆ ಆಡಿಸಿಬಿಡುತ್ತದೆ. ಬೂಬಿ ಹಕ್ಕಿಗಳು ಪಾಪ ಪ್ರಾಣ ಭಯದಿಂದ ತನ್ನ ಬಾಯಲ್ಲಿದ್ದ ಮೀನನ್ನು ಕೆಳಗೆ ಬಿಟ್ಟೊಡನೆ ಫ್ರಿಗೇಟ್ ಹಕ್ಕಿಯು ಬೂಬಿ ಹಕ್ಕಿಯನ್ನು ತನ್ನ ಕಾಲಿನಿಂದ ಬಂದ ಮುಕ್ತಗೊಳಿಸಿ ತತಕ್ಷಣವೇ ಕೆಳಗೆ ಬೀಳುತ್ತಲಿರುವ ಮೀನನ್ನು ಗಬ್ಬಕ್ಕನೇ ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡು ಹಾರಿಹೋಗುತ್ತವೆ. ಕೆಳಗೆ ನಿದಾನವಾಗಿ ಹಾರಿ ದಡ ಸೇರುವ ಬೂಬಿ ಹಕ್ಕಿಗಳ ಜೀವ ಅಷ್ಟರಲ್ಲಿ ಬಾಯಿಗೇ ಬಂದುಬಿಟ್ಟಿರುತ್ತದೆ. ಈ ತರಹದ ಘಟನೆಗಳು ದಿನದಲ್ಲಿ ಅನೇಕ ಬಾರಿ ಘಟಿಸುತ್ತವಾದರಿಂದ ಬೂಬಿ ಹಕ್ಕಿಗಳ ಬಾಯಿಗೆ ಆಹಾರ ಸೇರುವುದು ಅವು ಹಿಡಿದಿದ್ದರಲ್ಲಿ ಶೇಕಡಾವಾರು ನಲವತ್ತರಷ್ಟು ಮಾತ್ರ.

ಫ್ರಿಗೇಟ್ ಹಕ್ಕಿಗಳು ಸಾಗರದ ಹಕ್ಕಿಗಳಲ್ಲೇ ಮಾಹಾ ಗಾತ್ರದವು, ೪ ಅಡಿಗಳಷ್ಟು ಬೆಳೆಯುವ ಇವುಗಳ ತೆರೆದುಕೊಂಡ ರೆಕ್ಕೆಗಳನ್ನು ಸೇರಿಸಿದರೆ ಒಟ್ಟು 8 ಅಡ್ಡಿಗಳಷ್ಟು ಎಂದು ಅಂದಾಜಿಸಬಹುದು. ಇವುಗಳ ಉದ್ದ ಕೊಕ್ಕಿನ ಮುಂಬಾಗ ಹದ್ದಿನಂತೆ ಬಾಗಿಕೊಂಡಿರುತ್ತವಾದರಿಂದ ಗಾಳಿಯಲ್ಲಿ ಬೀಳುವ ಆಹಾರವನ್ನು ಬೆನ್ನಟ್ಟಿ ಹಿಡಿಯುತ್ತವೆ. ಕಡಲ ಹಕ್ಕಿಗಳಲ್ಲೇ ಫ್ರಿಗೇಟ್ ಹಕ್ಕಿಗಳು ಗಂಡು ಹಾಗು ಹೆಣ್ಣು ಎರಡರಲ್ಲೂ ವಿಭಿನ್ನ ಸಾಮ್ಯತೆ ಇರುತ್ತವೆ. ಎರಡೂ ಹಕ್ಕಿಗಳ ಬಣ್ಣ ಕಪ್ಪು ಆದರೆ ಗಂಡಿಗೆ ತನ್ನ ಕುತ್ತಿಗೆಯಲ್ಲಿ ಹಿಗ್ಗಿಸಿದಾಗ ಮಾತ್ರ ಹೊರಬರುವ ಕೆಂಪು ಬಣ್ಣದಿಂದ ಕೂಡಿದ ಚೀಲವಿರುತ್ತದೆ ಆದರೆ ಹೆಣ್ಣು ಹಕ್ಕಿಗಳಿಗೆ ಚೀಲವಿರುವುದಿಲ್ಲವಾದರೂ ಎದೆಯ ಭಾಗವು ಬಿಳಿಯ ಬಣ್ಣದಿಂದ ಕೂಡಿರುತ್ತವೆ. ಹೆಣ್ಣು ಹಕ್ಕಿ ಗಂಡು ಹಕ್ಕಿಗಳಿಗಿಂತ ತುಸು ದೊಡ್ಡದು. ಇವೆರಡರ ಕಪ್ಪು ರೆಕ್ಕೆಯು ನೇರಳೆ ಬಣ್ಣದಿಂದ ಮಿರಮಿರುಗುತ್ತಿರುತ್ತವೆ.

ಮಾರ್ಚ್ ಹಾಗು ಏಪ್ರಿಲ್ ಇವುಗಳ ಮಿಲನದ ಋತು. ಗಂಡು ಫ್ರಿಗೇಟ್ ಹಕ್ಕಿಯು ತನ್ನ ಕತ್ತಿನಲ್ಲಿರುವ ಕೆಂಪು ಚೀಲವನ್ನು ಬಲೂನಿನಂತೆ ಹುಬ್ಬಿಸುತ್ತವೆ ಇದರ ಆಕರ್ಷಣೆಯಾಗಿ ಹೆಣ್ಣು ಹಕ್ಕಿಗಳು ಸಂಗಾತಿಗಳಾಗಿ ಗಂಡು ಹಕ್ಕಿಗಳನ್ನು ಸೇರಿ ಗೂಡು ಕಟ್ಟಿ ಸಂಸಾರ ಆರಂಭಿಸುತ್ತವೆ. ಗಂಡು ಹಕ್ಕಿಯು ದಿನಗಟ್ಟಲೆ ಸಂಚರಿಸಿ ಹುಡುಕಿ ಗೂಡು ಕಟ್ಟಲು ಬಹಳ ಗಟ್ಟಿಮುಟ್ಟಾದ ಒಣಗಿದ ಮರದ ಸಣ್ಣ ಆದರೆ ಉದ್ದ ಕೊಂಬೆಗಳನ್ನು ತಂದು ಹೆಣ್ಣು ಹಕ್ಕಿಗೆ ನೀಡಲು ಹೆಣ್ಣು ಹಕ್ಕಿಯು 13 ದಿನಗಳ ಕಾಲ ಶ್ರಮಿಸಿ ಅಗಲವಾದ ಗೂಡನ್ನು ಸಾಗರದಂಚಿನ ಪೊದೆಗಳಲ್ಲಿ ಅಥವಾ ಹತ್ತಿರದ ಮರಗಳಲ್ಲಿ ಕಟ್ಟುತದೆ. ವರ್ಷಕ್ಕೆ ಒಂದು ಮೊಟ್ಟೆಯನ್ನು ಅಪರೂಪಕ್ಕೆ ಎರಡು ಮೊಟ್ಟೆಗಳನ್ನು ಹೆಣ್ಣು ಹಕ್ಕಿ ಹಡೆಯುತ್ತವೆ. ಗಂಡು ಹಾಗು ಹೆಣ್ಣು ಹಕ್ಕಿಗಳೆರಡೂ ಸೇರಿ ಎರಡೂ ತಿಂಗಳವರೆಗೆ ಕಾವು ಕೊಟ್ಟ ನಂತರ ಮರಿಯು ಮೊಟ್ಟೆಯಿಂದ ಆಚೆ ಬರುತ್ತದೆ. ಗಂಡು ಹಕ್ಕಿಯು ಮೂರು ತಿಂಗಳವರೆಗೂ ಸಂಸಾರ ನಿಭಾಯಿಸಿ ತಾಯಿ ಹಾಗು ಮರಿಯ ಸಂರಕ್ಷಣೆ ಮಾಡಿ ಹಾರಿಹೋಗಿಬಿಡುತ್ತವೆ. ಮರಿಗಳೋ ಮಹಾ ಸೋಮಾರಿಗಳು ಒಂದು ವರ್ಷದವರೆಗೂ ತಾಯಿ ಹಕ್ಕಿಯ ಆಸರೆಯಲ್ಲಿ ಇದ್ದು ಆನಂತರ ಸ್ವತಂತ್ರರಾಗುತ್ತವೆ. ಒಂದು ವರ್ಷ ಪೂರ್ತಿ ತಾಯಿ ಹಕ್ಕಿಯು ಮರಿಗಳಿಗೆ ಆಹಾರ ಉಣಿಸಿ ಹಾರಲು ತರಬೇತಿ ಕೊಡುತ್ತಿರುತ್ತದೆ.

ಫ್ರಿಗೇಟ್ ಎಂಬ ಹೆಸರು ಫ್ರೆಂಚ್ ಮೂಲದಿಂದ ಬಂದಂತಹುದು 1667 ರಂದು ಫ್ರೆಂಚ್ ನಾವಿಕರ ಕಣ್ಣಿಗೆ ಕಂಡ ಈ ಹಕ್ಕಿಗೆ ಅಲ್ಲಿನ “ಜೀನ್-ಬ್ಯಾಪ್ಟಿಸ್ಟ್ ಡು ಟೆರ್ಟ್ರೆ” ಎಂಬ ಪರಿಸರವಾದಿ ಇವುಗಳ ಆಕ್ರಮಣಕಾರಿ ಸ್ವಭಾವ ಕಂಡು “ಫ್ರಿಗೇಟ್” ಎಂದು ನಾಮಕರಣ ಮಾಡಿದ. ಬೇರೆ ಹಕ್ಕಿಗಳಿಂದ ಇವುಗಳು ಆಹಾರವನ್ನು ಆಕ್ರಮಿಸಿ ಕಿತ್ತಿಕೊಳ್ಳುವ ಸ್ವಭಾವದಿಂದಾಗಿ ಬ್ರಿಟಿಷ್ ನಾವಿಕರು ಇದನ್ನು “ಮ್ಯಾನ್-ಆಫ್-ವಾರ್ ಬರ್ಡ್ಸ್” ಎಂದರೆ ಯುದ್ಧ ಮನಸ್ಥಿತಿಯ ಹಕ್ಕಿಗಳು ಎಂದು ಕರೆದರು. ಎಷ್ಟೋ ಬಾರಿ ಬೇರೆ ಹಕ್ಕಿಗಳು ಅವುಗಳ ಮರಿಗಳಿಗೆ ಆಹಾರ ಉಣಿಸುತ್ತಿರುವಾಗ ಇವು ಅದನ್ನು ಸಹ ಬಿಡದೆ ಮರಿಗಳ ಅಥವಾ ತಾಯಿಯ ಬಾಯಿಯಿಂದ ಕಿತ್ತುಕೊಂಡು ಹೋಗುವುದರಿಂದ ಇದನ್ನು ಕಳ್ಳ ಖದೀಮ ಹಕ್ಕಿ ಎಂದು ನಾವು ಕರೆಯಬಹುದು! ಇವುಗಳ ಸೋಮಾರಿ ಮರಿಗಳು ಸಹ ಹಾರಲು ಕಲಿತಾಕ್ಷಣ ಅಭ್ಯಾಸ ಮಾಡುವುದು ಕಳ್ಳತನವನ್ನೇ, ಇತರೆ ಸಮಾನ ಮರಿಗಳೊಡನೆ ಅಥವಾ ತಮ್ಮ ಸೋದರ ಮರಿಗಳೊಡನೆ ಸಣ್ಣ ಕಟ್ಟಿಗೆಯ ಚೂರುಗಳನ್ನು ಆಕಾಶದಲ್ಲಿ ಹಾರಾಡುತ್ತ ಕೆಳಗೆ ಬೀಳಿಸಿದರೆ ಇನ್ನೊಂದು ಮರಿ ಹಕ್ಕಿಯು ಅದನ್ನು ಹಿಡಿಯುವ ಅಭ್ಯಾಸವನ್ನು ಮಾಡುತ್ತವೆ.

ಫ್ರಿಗೇಟ್ ಹಕ್ಕಿಯ ಇನ್ನೊಂದು ವಿಶೇಷತೆ ಏನೆಂದರೆ ಇವುಗಳು ಆಕಾಶದಲ್ಲೇ ಹಾರಾಡುತ್ತ ನಿದ್ರಿಸುತ್ತವೆ. ಪಕ್ಷಿ ತಜ್ಞರು ಇದನ್ನು ಅನೇಕ ಬಗೆಯಲ್ಲಿ ಅಧ್ಯಯಿನಿಸಿ ಇದು ನಿಜ ಎಂದು ತೀರ್ಮಾನಕ್ಕೆ ಬಂದಿದ್ದಾರೆ. ಹಕ್ಕಿಗಳನ್ನು ಹಿಡಿದು ಅವುಗಳಲ್ಲಿ “ಎಲೆಕ್ಟ್ರೋಎನ್ಸೆಫಾಲೋಗ್ರಾಮ್” ಎಂಬ ಉಪಕರಣವನ್ನು ಇಟ್ಟು ಎಷ್ಟೋ ವರುಷಗಳು ಅವುಗಳ ಚಲನೆಯನ್ನು ಅಭ್ಯಸಿಸುತ್ತಾ ತೆಗೆದುಕೊಂಡಂತಹ ತೀರ್ಮಾನವಿದು. ಪಕ್ಷಿ ಸಂಕುಲದಲ್ಲಿ ಇವು ದೀರ್ಘಾಯಿಷಿಗಳು, 30 ವರ್ಷಗಳ ಕಾಲ ಜೀವಿಸಿದ ದಾಖಲೆ ಈ ಪಕ್ಷಿಯ ಹೆಸರಿನಲ್ಲಿದೆ. ಇವುಗಳು ಕಡಲ ಹಕ್ಕಿಗಳಾದರು ಇವುಗಳ ರೆಕ್ಕೆಗಳು ಜಲನಿರೋಧಕದಿಂದ ಕೂಡಿರದ ಕಾರಣ ಸಾಗರಕ್ಕೆ ಇಳಿಯುವುದಿಲ್ಲ. ಯಾಕೆ ಇಳಿಯಬೇಕು ? ಆಹಾರವನ್ನು ಬೇರೆ ಹಕ್ಕಿಗಳಿಂದ ಕಸಿದುಬಿಡುತ್ತದೆಯಲ್ಲವೇ……

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *