ಕವಡೆಯಲ್ಲಿ ಕೈಕಾಯಿಸುವ ಆಟ -ಗಚ್ಚಿ ಆಟ

ಕವಡೆಯಲ್ಲಿ ಕೈಕಾಸುವ ಆಟ – ಗಚ್ಚಿ ಆಟ

ಇದು ಕವಡೆಯಲ್ಲಿ ಆಡುವ ಇನ್ನೊಂದು ಆಟವಾಗಿದ್ದು ಇದು ಒಳಾಂಗಣ ಕ್ರೀಡೆಯ ಜನಪ್ರಿಯ ಆಟವಾಗಿತ್ತು!! ಇತ್ತೀಚಿನ ದಿನಗಳಲ್ಲಿ ಇದು ಮರೆಯಾಗುತ್ತಿದೆ ಎಂದರೆ ತಪ್ಪೇನಿಲ್ಲ! ಹಿಂದಿನ ಕಾಲದಲ್ಲಿ ಮನೆಯ ಪಡಸಾಲೆಯಲ್ಲಿ ಕುಳಿತು ಕಿರಿಯರಿಂದ ಹಿರಿಯರಾದಿಯಾಗಿ ಆಡುತ್ತಿದ್ದ ಆಟ ಇದು. ಕಾಲ ಕ್ರಮೇಣ ಮರೆಯಾಗುತ್ತಿದ್ದ ಈ ಆಟ ಕೊವಿಡ್ ನ ದೆಸೆಯಿಂದಾಗಿ ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಮತ್ತೆ ಎಲ್ಲರೂ ಆಡುವಂತಾಗಿದ್ದು ವಿಶೇಷ. ಇದನ್ನು “ಗಚ್ಚಿ” ಆಟ ಎಂದು ಸಹ ಕರೆಯುತ್ತಾರೆ.

ಈ ಆಟವನ್ನು ಆಡಲು ಇಬ್ಬರು ಬೇಕೇಬೇಕು. ಇಬ್ಬರಿಗಿಂತ ಹೆಚ್ಚು ಎಷ್ಟು ಜನಬೇಕಾದರೂ ಆಡಬಹುದು.
ಆಟದ ಸಾಮಗ್ರಿಗಳು: ಈ ಆಟ ಆಡಲು ಬೇಕಾಗಿರುವುದು ನಾಲ್ಕು ಕವಡೆಗಳು ಮಾತ್ರ.
ಆಟ ಆಡುವುದು ಹೇಗೆ?: ಮೊದಲು ಯಾರು ಆಡುವುದೆಂದು ನಿರ್ಧರಿಸಬೇಕು. ಹಾಗೂ ಎಷ್ಟು ಅಂಕಗಳಿಗೆ ಒಂದು ಗೇಮ್ ಎಂದು ನಿರ್ಧರಿಸಬೇಕು. ಸಾಮಾನ್ಯವಾಗಿ ಐದು, ಹತ್ತು, ಹದಿನೈದು ಹಾಗೂ ಇಪ್ಪತ್ತು ಅಂಕಗಳಿಗೆ ಒಂದು “ಗಿಚ್ಚಿ” ಎಂದು ನಿರ್ಧರಿಸಲಾಗುತ್ತದೆ. ಆಟ ಪ್ರಾರಂಭಿಸುವವರು ಮೊದಲಿಗೆ ನಾಲ್ಕು ಕವಡೆಗಳನ್ನು ಅಂಗೈನಿಂದ ಮೇಲಕ್ಕೆ ಚಿಮ್ಮಿ ಅದನ್ನು ಮುಂಗೈ ಮೇಲೆ ಹಿಡಿದಿಟ್ಟುಕೊಳ್ಳಬೇಕು ಹೀಗೆ ನಾಲ್ಕು ಕವಡೆಗಳನ್ನು ಮುಂಗೈ ಬೆರಳ ಮೇಲೆ ಹಿಡಿದರೆ 16 ಅಂಕ, 3 ಕವಡೆಗಳನ್ನು ಹಿಡಿದರೆ 12 ಅಂಕ, 2ನ್ನು ಹಿಡಿದಿಟ್ಟುಕೊಂಡರೆ 8 ಅಂಕ. ಒಂದು ಕವಡೆ ಮಾತ್ರ ಮುಂಗೈ ಮೇಲೆ ನಿಂತರೆ 4 ಅಂಕ. ಯಾವುದೇ ಕವಡೆ ನಿಲ್ಲದೆ ಹೋದರೆ ಆಟ ಆಡುವ ಸರದಿ ಎದುರಾಳಿಗೆ ಹೋಗುತ್ತದೆ.

ನಂತರ ಕವಡೆಯನ್ನು ಕುಲುಕಿ ನೆಲದ ಮೇಲೆ ಹಾಕಬೇಕು. ಹೀಗೆ ಹಾಕಿದಾಗ ಎರಡು ಕವಡೆ ಮೇಲ್ಮುಖ ಎರಡು ಕವಡೆ ಕೆಳಮುಖ ಅಥವಾ 1 ಕವಡೆ ಮೇಲ್ಮುಖ ಹಾಗೂ ಉಳಿದ 3 ಕವಡೆ ಕೆಳಮುಖವಾಗಿದ್ದರೆ ಆಟ ಮುಂದುವರೆಸಬೇಕು. ಹೀಗೆ ವಿರುದ್ಧ ಮುಖವಾಗಿ ಬಿದ್ದ ಕವಡೆಗಳನ್ನು ತೋರು ಬೆರಳಿನ ಸಹಾಯದಿಂದ ಒಂದಕ್ಕೊಂದು ತಾಗಿಸಬೇಕು. ಹೀಗೆ ತಾಗಿಸುವಾಗ ಯಾವ ಕವಡೆಗೆ ತಾಗಿಸಬೇಕೆಂದು ಗುರಿ ಇಟ್ಟಿರುತ್ತೀರೊ ಅದೇ ಕವಡೆಗೆ ತಾಗಿಸಬೇಕು. ಹೀಗೆ ತಾಗಿಸಿದ ಕವಡೆ ಇನ್ನೊಂದು ಕವಡೆಗೆ ತಾಗಬಾರದು ಇನ್ನೊಂದು ಕವಡೆಗೆ ತಾಗಿಸಿದರೆ ಆಟ ಆಡುವ ಸರದಿ ಎದುರಾಳಿಗೆ ಹೋಗುತ್ತದೆ. ಪ್ರತಿಬಾರಿ ಕವಡೆ ತಾಗಿಸಿದಾಗ 1 ಅಂಕ

ಉದಾಹರಣೆಗೆ ಆಟದ ಪ್ರಾರಂಭದಲ್ಲಿ ಸ್ಪರ್ಧಿ 4 ಕವಡೆಗಳನ್ನು ತನ್ನ ಮುಂಗೈ ಮೇಲೆ ಹಿಡಿದಿದ್ದರೆ 16 ಅಂಕ ಆಗಲೇ ಗಳಿಸಿರುತ್ತಾನೆ. 1 ಗಿಚ್ಚಿ ಮಾಡಲು 20 ಅಂಕ ಗಳಿಸಬೇಕು. ಪ್ರತಿ ಬಾರಿ ಕವಡೆಗಳನ್ನು ಹಾಕಿ ಒಂದಕ್ಕೊಂದು ಕವಡೆಗಳನ್ನು ತಾಗಿಸಿದಾಗ 1 ಅಂಕ ಗಳಿಸುತ್ತಾನೆ. ಹೀಗೆ ಕವಡೆ ಕುಲುಕುವುದು ಹಾಕುವುದು ಮೇಲೆ ಹೇಳಿದ ರೀತಿಯಲ್ಲಿ ಬಿದ್ದ ಕವಡೆಗಳನ್ನು ತಾಗಿಸುತ್ತಾ ಹೋದಾಗ ಬರುವ ಒಂದೊಂದು ಅಂಕಗಳನ್ನು ಸೇರಿಸಿ 20 ಆದ ಮೇಲೆ 1 ಗಿಚ್ಚಿ ಎಂದು ನಿರ್ಧರಿಸಿ ಮತ್ತೆ ಮುಂಗೈ ಮೇಲೆ ಕವಡೆ ಹಿಡಿಯುವ ಮೂಲಕ ಆಟ ಪ್ರಾರಂಭಿಸಬೇಕು.

ಆಟದ ಕೆಲವೊಂದು ನಿಯಮಗಳು: – ಮುಂಗೈ ಮೇಲೆ ಕವಡೆ ಹಿಡಿದಾಗ ಒಂದಾದರೂ ಕವಡೆ ನಿಲ್ಲಬೇಕು. ನಾಲ್ಕು ಕವಡೆಗಳು ಕೆಳಗೆ ಬಿದ್ದರೆ ಆಟದ ಸರದಿ ಮುಂದಿನವರಿಗೆ ಹೋಗುತ್ತದೆ.
• ಕವಡೆ ಕುಲಕಿ ಹಾಕಿ ಒಂದಕ್ಕೊಂದು ಕವಡೆ ತಾಗಿಸುವಾಗ ಆ ಕವಡೆ ಬೇರೆ ಕವಡೆಗೆ ತಾಗಿದರೆ ಆಟದ ಸರದಿ ಮುಂದಿನವರಿಗೆ ಹೋಗುತ್ತದೆ.
• ಕವಡೆ ಕುಲಕಿ ಹಾಕಿದಾಗ ಮೂರು ಕವಡೆಗಳು (ಬಾಯಿ ತೆರೆದ ಭಾಗ) ಮೇಲ್ಮುಖವಾಗಿ ಬಿದ್ದರೆ ಆಟ ಆಡುವ ಸರದಿ ಮುಂದಿನವರಿಗೆ ಹೋಗುತ್ತದೆ. ಇದನ್ನು “ಮುಷ್ಯ ” ಬೀಳುವುದು ಎನ್ನುತ್ತಾರೆ.
• ಕವಡೆ ಹಾಕಿದಾಗ ಬಾಯಿ ತೆರೆದ ಭಾಗ ಮೇಲ್ಮುಖವಾಗುವಂತೆ (ನಾಲ್ಕು ಕವಡೆಗಳು) ಬೀಳುತ್ತದೆ. ಆಗ ತಕ್ಷಣ ನಾಲ್ಕು ಕವಡೆಗಳನ್ನು ಯಾವ ಸ್ಪರ್ಧಿ ಬೇಕಾದರೂ ಬಾಚಿಕೊಳ್ಳಬಹುದು. ಇದನ್ನು “ಗಿಚ್ಚಿ” ಬಾಚುವುದು ಎನ್ನುತ್ತಾರೆ. ನಾಲ್ಕು ಕವಡೆಗಳನ್ನು ಯಾರಾದರೂ ಬಾಚಿದರೆ ಅವರಿಗೆ 16 ಗಿಚ್ಚಿ ಬಂದುಬಿಡುತ್ತದೆ. ಇನ್ನು 4 ಗಿಚ್ಚಿ ಮಾಡಿದರೆ ಒಂದು ಗೇಮ್ ಮುಗಿಯುತ್ತದೆ. ಒಂದು ಕವಡೆ ಬಾಚಿದ್ದರೆ 4 ಗಿಚ್ಚಿ, 2 ಕವಡೆಗೆ 8 ಗಿಚ್ಚಿ, 3 ಕವಡೆಗೆ 12 ಗಿಚ್ಚಿ, 4 ಕವಡೆಗೆ 16 ಗಿಚ್ಚಿ, ಯಾರು ಬೇಗ 20 ಗಿಚ್ಚಿ ಮಾಡುತ್ತಾರೋ ಅವರು ಗೆದ್ದಂತೆ.

ಸೋತವರು ಕೈ ಕಾಸಬೇಕು; ಅಂದರೆ ನಾಲ್ಕು ಕವಡೆಗಳನ್ನು ನೆಲದ ಮೇಲೆ ಇಡಬೇಕು. ಅದರ ಮೇಲೆ ಸೋತವರು ಎರಡು ಕೈಗಳನ್ನು ಅಂಗೈಯನ್ನು ಪರಸ್ಪರ ಉಜ್ಜುತ್ತ ಕುಳಿತುಕೊಳ್ಳಬೇಕು (ಬೆಂಕಿಯ ಮೇಲೆ ಕೈ ಕಾಸುತ್ತಾರಲ್ಲ ಹಾಗೆ!!) ಗೆದ್ದವರು ಅವರ ಕೈಗೆ ಹೊಡೆಯುತ್ತಿರಬೇಕು. ಹೀಗೆ ಹೊಡೆದಾಗ ಸೋತವರು ತಪ್ಪಿಸಿಕೊಂಡರೆ ಕೆಳಗಿರುವ 4 ಕವಡೆಗಳಲ್ಲಿ 1 ಕವಡೆ ಅವರದಾಗುತ್ತದೆ. ಹೀಗೆ ನಾಲ್ಕು ಕವಡೆಗಳನ್ನು ಸೋತವರು ಹೊಡೆತ ತಪ್ಪಿಸಿಕೊಂಡು ತಮ್ಮದಾಗಿಸಿಕೊಂಡರೆ ಆಟ ಮುಗಿದಂತೆ.

ಡಾ|| ಪ್ರಕಾಶ್ ಕೆ ನಾಡಿಗ್

Related post

Leave a Reply

Your email address will not be published. Required fields are marked *