ಕವಿತೆಗೆ ಸಾವಿಲ್ಲ
ನನ್ನ ಕವಿತೆ ನನ್ನದೇ ಕವಿತೆ
ಮಾತು ಬರದ ಮಗು ಇದ್ದಂತೆ
ಪದೇ ಪದೇ ಮುದ್ದು ಮಾಡಿ
ಆಗಾಗ ಬುದ್ದಿ ಹೇಳಿ
ತಿದ್ದಿ ತೀಡಿ ಕಟ್ಟಿದ ಕವಿತೆ
ಇದು ಕದ್ದ ಕವಿತೆಯಲ್ಲ
ಅನುವಾದ ಮಾಡಿಲ್ಲ
ಎಲ್ಲಿಂದಲೂ ಪ್ರೇರಣೆಯಾಗಿಲ್ಲ
ಎಲ್ಲೂ ಪ್ರಕಟವಾಗಿಲ್ಲ
ಸ್ವತಃ ನಾನೇ ಮೆಚ್ಚಿಕೊಂಡಿಲ್ಲ
ಓದಿದರೆ ಕೆಮ್ಮು ಬರುತ್ತದೆ
ಇದು ಕವಿತೆಯೇ ಅಲ್ಲವೆಂಬ ದೂರು ಬೇರೆ!
ಭರವಸೆ ಕಿತ್ತುಕೊಳ್ಳುವಂತೆ
ಕವಿತೆ ಬರಿಯೋಕೆ ನೀನ್ಯಾರೆಂಬ ಪ್ರಶ್ನೆ?
ಎಲ್ಲರೂ ಒಟ್ಟಿಗೆ ಮುತ್ತಿಗೆ ಹಾಕುತ್ತಾರೆ
ನನ್ನ ಕವಿತೆ ಹೆದರಿ
ಮತ್ತೆ ನನ್ನಂತರಾಳವ ಸೇರುತ್ತದೆ
ಕೊಂಚ ಪ್ರಾಣ ಭಯ, ಅಲ್ಪ ನಾಚಿಕೆ
ಚೂರೇ ಚೂರು ಹಿಂಜರಿಕೆ
ಪತ್ರಿಕೆಗಳು ಸ್ವೀಕರಿಸಲಿಲ್ಲ
ರೇಡಿಯೋದಲ್ಲಿ ಓದಲಿಲ್ಲ
ಹತ್ತಿರದವರು ಒಡೆದು ಬೈದರು
ಹಿರಿಯರು ಉಗಿದು ಹೇಳಿದರು
“ನಿನ್ನ ಕವಿತೆಗೆ ಜೀವವಿಲ್ಲ..”
ನನ್ನ ಕವಿತೆ ಉಸಿರಿಲ್ಲದೆ ಸೃಷ್ಠಿಯಾಯ್ತೇ?
ಅರ್ಥ ಮಾಡಿಕೊಳ್ಳುವ ಮನಸ್ಸುಗಳೇ ಇಲ್ಲ..
ನನ್ನ ಕವಿತೆ ಸುಳ್ಳು ಹೇಳುವವರಿಗೆ ಸುಡುತ್ತದೆ
ನ್ಯಾಯದ ಪರ ದನಿ ಎತ್ತಿ ನಿಲ್ಲುತ್ತದೆ
ದಿನವೂ ವಿಮರ್ಶಕರ ಚಡಿ ಏಟು ತಿಂದು
ಚಿಕಿತ್ಸೆಗಾಗಿ ನನ್ನ ಬೇಡುತ್ತದೆ
ನನ್ನ ಕರಳು ಹಿಂಡಿದಂತಾಗಿ
ಕವಿತೆ ಬರೆದಿದ್ದಕ್ಕೆ ಅಸಹ್ಯವಾಗುತ್ತದೆ
ಕವಿತೆ ಬರೆಯುವ ಮುಂಚೆ ಯೋಚಿಸಲಿಲ್ಲ
ಈಗ ನನಗಿಂತಲೂ ಹೆಚ್ಚು ಕವಿತೆಯೇ ಬೇಯುತ್ತಿದೆ
ಕವಿತೆ ಬರೆದದ್ದಾಗಿದೆ
ಧೈರ್ಯ ತುಂಬಿ ಮತ್ತೆ ಹೊರಗೆಳೆಯುತ್ತೇನೆ
ಸುಳಿಗೆ ಸಿಗಬೇಡಿ ದಯವಿಟ್ಟು..
ಸಿಕ್ಕವರು ಇನ್ನೆಂದೂ ಸಿಗಲಾರಿರಿ
ನನ್ನ ಕವಿತೆಯ ತಂಟೆಗೆ ಬರಬೇಡಿರಿ!
ಇದು ನನ್ನ ಕವಿತೆ
ಅಂಜಿಕೆ ಬಿಟ್ಟು, ನುಗ್ಗುವ ಕವಿತೆ
ಕತ್ತಿ, ಗುರಾಣಿ, ಬಂದೂಕು ಬಾಂಬುಗಳೆಲ್ಲ
ಕವಿತೆಯ ಹರಿತಕ್ಕೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡಿವೆ
ಇನ್ನೊಂದು ಕವಿತೆ ಬರೆಯುವ ಮುನ್ನ
“ಈ ಕವಿತೆಗೆ ಸಾವಿಲ್ಲ” ಎಂಬುದನ್ನು ಅರಿತುಕೊಳ್ಳಿ
ಎರಡೆರಡು ದಾಳಿಗೆ ಸಿಗುವ ಆತುರ ಬೇಡ
ನನ್ನ ಕವಿತೆಗೆ ಚೂರು ದಾರಿ ಕೊಡಿ..
ಅನಂತ ಕುಣಿಗಲ್