ಕವಿತೆ ಬೇಕಿತ್ತು!
ಬೇಕಿತ್ತು ನಿಮ್ಮದೊಂದೆರಡು
ಕವಿತೆಗಳು ಸಾಲವಾಗಿ
ಯೋಚಿಸಬೇಡಿ ಹಿಂತಿರುಗಿಸುತ್ತೇನೆ
ಪಡೆದೆರಡನ್ನು ನಾಲ್ಕಾಗಿಸಿ
ನಾಲ್ಕೇಕೆ ಆರಾಗಿಸುತ್ತೇನೆ
ಬಡ್ಡಿ ಅಷ್ಟೇ ಏನು
ಚಕ್ರಬಡ್ಡಿಯನ್ನೂ ಸೇರಿಸಿಕೊಡುತ್ತೇನೆ
ಬೇಕಿತ್ತು ನಿಮ್ಮದೊಂದೆರಡು
ಕವಿತೆಗಳು ಸಾಲವಾಗಿ
ಯೋಚಿಸಿನೋಡಿ ಹಿಂತಿರುಗಿಸುತ್ತೇನೆ
ಪದಗಳೊಡನೆ ಆಡುವುದು
ನನಗೂ ಅಷ್ಟಿಷ್ಟು ತಿಳಿದಿದೆ
ಅದೇ ನೀವು ಮಾಡಿದ ಹಾಗೆಯೇ
ಅಲ್ಲಷ್ಟು ಇಲ್ಲಿಷ್ಟು ಬದಲಾಯಿಸುವುದು
ಬೇಕಿತ್ತು ನಿಮ್ಮದೊಂದೆರಡು
ಕವಿತೆಗಳು ಸಾಲವಾಗಿ
ಒಮ್ಮೆ ಕೊಟ್ಟು ನೋಡಿ
ನನ್ನ ಕೈಚಳಕ ತೋರಿಸುತ್ತೇನೆ
ನಿಮ್ಮದೇ ಕವನಗಳ
ಛಂದಸ್ಸು ಬದಲಿಸುತ್ತೇನೆ
ನಗುವಿನ ಅಳುವಿನ
ಅಲಂಕಾರ ಮಾಡುತ್ತೇನೆ
ಬೇಕಿತ್ತು ನಿಮ್ಮದೊಂದೆರಡು
ಕವಿತೆಗಳು ಸಾಲವಾಗಿ
ಯೋಚಿಸಲೇನಿದೆ ಒಮ್ಮೆ ಒಪ್ಪಿಬಿಡಿ
ನಿಮ್ಮದೇ ಅಂಕಿತದೊಂದಿಗೆ
ಹೊಸರಾಗ ಹೊಸೆಯುತ್ತೇನೆ
ನಿಮಗರ್ಪಣೆ ಎಂದು ಹೇಳುತ್ತಲೇ
ಎಲ್ಲರನೂ ಯಾಮಾರಿಸುತ್ತೇನೆ
ನೀವು ಒಪ್ಪಿ ಅಥವಾ ಬಿಡಿ
ಸೌಜನ್ಯಕ್ಕಾಗಿ ಕೇಳಿದ್ದೇನೆ
ನಿಮ್ಮ ಮೌನವೇ ಸಮ್ಮತಿಯೆಂದು
ನಾನಾಗಲೇ ಬೀಗುತ್ತಿದ್ದೇನೆ.
ಸೌಜನ್ಯ ದತ್ತರಾಜ
1 Comment
ಕಾವ್ಯ ತುಂಗೆಗೆ ಕವನ ಕಡ ನೀಡಲಾದೀತೇ.
ಕಾವ್ಯಾಂಬುಧಿಯ ಆಸರು ತಣಿಸಲಾದೀತೇ. ನೀರುಣಿಸಲಾದೀತೇ.
ಎಲ್ಲ ನಿನ್ನಲ್ಲೇ !!
ತಾಯಿ ಎಲ್ಲ ನಿನ್ನಲ್ಲೇ.!!!
(ಈಗಷ್ಟೇ ಆಯತನವಾನ್ ಭವತಿ ಹೇಳಿಕೊಳ್ಳುತ್ತಿದ್ದೆ. – ಅಲ್ಲೂ ಇದನೇ ಹೇಳುತ್ತಿದೆ.
“ಗಾಳಿ ನೀರಿನ ನೆಲೆಯು ;
ನೀರು ಅನಿಲದ ನೆಲೆಯೇ ;
ವಾಯು ವಾರಿಗಳ ನೆಲೆಗಳೇನೆಂದು ನೀ ಬಲ್ಲೆಯೇನು?
– ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಸೂರ್ಯ ನೀರಿನ ನೆಲೆಯು ;
ನೀರೂ ತಪನನ ನೆಲೆಯೇ ;
ಭಾನು ಸಲಿಲಗಳ ನೆಲೆಗಳೇನೆಂದು ನೀ ಬಲ್ಲೆಯೇನು?
– ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಚಂದ್ರ ನೀರಿನ ನೆಲೆಯು ;
ನೀರೂ ತಿಂಗಳ ನೆಲೆಯೇ ;
ಇಂದು ಉದಕಗಳ ನೆಲೆಗಳೇನೆಂದು ನೀ ಬಲ್ಲೆಯೇನು ?
– ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಚುಕ್ಕೆ ನೀರಿನ ನೆಲೆಯು;
ನೀರೂ ತಾರೆಯ ನೆಲೆಯೇ ;
ನಕ್ಷತ್ರ ತೋಯಗಳ ನೆಲೆಗಳೇನೆಂದು ನೀ ಬಲ್ಲೆಯೇನು?
– ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !
ಮುಗಿಲು ನೀರಿನ ನೆಲೆಯು ;
ನೀರೂ ಮೋಡದ ನೆಲೆಯೇ ;
ಮೇಘ ಘನರಸದ ನೆಲೆಗಳೇನೆಂದು ನೀ ಬಲ್ಲೆಯೇನು?
– ಇದ ತಿಳಿದು, ನೀ ನೀರಲಿರುವುದೆಲ್ಲವ ಗ್ರಹಿಸೆ,
ಎಲ್ಲ ನಿನ್ನಲ್ಲೆ !”