ಕಾಜಾಣ-ಮಿಮಿಕ್ರಿ ಕೊತ್ವಾಲ – Drongo

ಸಹ್ಯಾದ್ರಿ ಮಲೆಗಳಲ್ಲೆಲ್ಲೋ ನೀವು ಪಕ್ಷಿ ವೀಕ್ಷಣೆ ಮಾಡುತ್ತಿದ್ದೀರೆಂದುಕೊಳ್ಳಿ. ಒಂದು ಹಕ್ಕಿಯ ಕೂಗು ಕೇಳುತ್ತಿದೆ, ಆದರೆ ಅದು ಕಾಣುತ್ತಿಲ್ಲ. ಪಕ್ಷಿ ವೀಕ್ಷಕರಿಗೆ ಇದು ಸಾಮಾನ್ಯ ಅನುಭವ, ಜೊತೆಗೆ ಅವರು ಆ ಪಕ್ಷಿಯನ್ನು ಹುಡುಕಿ ನೋಡುವ ಸಾಮರ್ಥ್ಯವನ್ನೂ ಹೊಂದಿರುತ್ತಾರೆ. ಹೊಸದಾಗಿ ಪಕ್ಷಿ ವೀಕ್ಷಣೆಗೆ ತೊಡಗಿರುವವರನ್ನು ದಾರಿ ತಪ್ಪಿಸುವ ಕೂಗು ಎಂದರೆ ಈ ಕಾಜಾಣಗಳದ್ದು! ಏಕೆಂದರೆ ಇವು ಇತರ ಹಕ್ಕಿಗಳ ಧ್ವನಿಯನ್ನು ಚೂರೂ ಸಂದೇಹ ಬರದಂತೆ ಅನುಕರಿಸುತ್ತವೆ! ಇವನ್ನು ಪಕ್ಷಿಲೋಕದ ಮಿಮಿಕ್ರಿ ಕಲಾವಿದರು‍ ಎನ್ನಬಹುದು! ಇವುಗಳ ಇನ್ನೊಂದು ಅಭ್ಯಾಸವೆಂದರೆ ಹಾರಿ ಮತ್ತೆ ಬಂದು ಅದೇ ಕೊಂಬೆಯ ಮೇಲೆ ಕುಳಿತುಕೊಳ್ಳುತ್ತವೆ. ಇವು ಬಹಳ ಧೈರ್ಯವಂತ ಹಕ್ಕಿಗಳೂ ಸಹ. ತಮಗಿಂತ ಎರಡು ಮೂರು ಪಟ್ಟು ದೊಡ್ಡದಿರುವ, ಬೇಟಗಾರ ಹಕ್ಕಿಗಳನ್ನು ಸಹ ಅಟ್ಟಿಸಿಕೊಂಡು ಹೋಗಿ ಓಡಿಸುತ್ತವೆ. ಈ ಸ್ವಭಾವ ಈ ಹಕ್ಕಿಗೆ ಕೆಲವೆಡೆ ಕೊತ್ವಾಲ ಎಂಬ ಹೆಸರನ್ನೂ ತಂದುಕೊಟ್ಟಿದೆ. ಈ ರಕ್ಷಣೆಯನ್ನು ಬಳಸಿಕೊಂಡು ಕೆಲವು ಪುಟ್ಟ ಹಕ್ಕಿಗಳು ಕಾಜಾಣಗಳು ಗೂಡು ನಿರ್ಮಿಸುವ ಸಮೀಪದಲ್ಲಿಯೇ ತಮ್ಮ ಗೂಡು ನಿರ್ಮಿಸಿ ಪುಕ್ಕಟೆ ರಕ್ಷಣೆ ಪಡೆದುಕೊಳ್ಳುತ್ತವೆ!

ಕಾಜಾಣಗಳು ಆಕಾಶದಲ್ಲಿ ಹಾರಿ ಹುಳುವನ್ನು ಹಿಡಿಯುವುದನ್ನು ನೋಡುವುದು ಕಣ್ಣಿಗೊಂದು ಹಬ್ಬ. ಅದೆಂಥಹ ಹಾರಾಟ ಪ್ರದರ್ಶನ! ಯಾವ ಯುದ್ಧವಿಮಾನಕ್ಕೂ ಇವುಗಳ ಹಾರಾಟ ಸಾಟಿಯಲ್ಲ. ಹೀಗೆ ಹಾರಿ, ಹಾಗೆ ತೇಲಿ, ಲಗಾಟಿ ಹೊಡೆದು, ಪಕ್ಕಕ್ಕೆ ತಿರುಗಿ ಹುಳುವಿಗೆ ಕಕಮಕ ಹಿಡಿಸಿ, ಹಿಡಿದ ಹುಳುವನ್ನು ಗಾಳಿಯಲ್ಲೇ ತಿನ್ನುತ್ತದೆ ಇಲ್ಲವೆ ತಾನು ಕೂತಿದ್ದ ಸ್ಥಳಕ್ಕೆ ಹಿಂದಿರುಗಿ ತಿನ್ನುತ್ತದೆ. ಇವುಗಳ ಪ್ರಧಾನ ಆಹಾರ ಕೀಟಗಳು. ಹೂವಿನ ಮಕರಂದ (ಹೂವಿನಲ್ಲಿರುವ ಸಿಹಿ ದ್ರವ್ಯ) ಸೇವಿಸುವುದು ಉಂಟು, ಅಪರೂಪವಾಗಿ ಹಕ್ಕಿಗಳನ್ನು ತಿನ್ನುವುದೂ ಉಂಟು. ಹಾರಾಡುವ ಕೀಟಗಳ ನಿಯಂತ್ರಣದಲ್ಲಿ ಇವುಗಳ ಪಾತ್ರ ಹಿರಿದು. ಆ ನಿಟ್ಟಿನಲ್ಲಿ ಇದು ರೈತನ ಮಿತ್ರ.

ದಕ್ಷಿಣ ಏಷ್ಯಾದಲ್ಲಿ ಹತ್ತು, ಪ್ರಪಂಚದಾದ್ಯಂತ ಸುಮಾರು 23 ಪ್ರಭೇದಗಳ ಕಾಜಾಣಗಳು ಕಂಡುಬರುತ್ತವೆ. ಇನ್ನು ಕರ್ನಾಟಕಕ್ಕೆ ಬಂದರೆ ಆರು ಬಗೆಯ ಕಾಜಾಣಗಳನ್ನು ನಮ್ಮಲ್ಲಿವೆ. ಕಪ್ಪು ಕಾಜಾಣ (Black Drongo Dicrurus macrocercus) ನಮ್ಮ ಸಾಮಾನ್ಯ ಕಾಜಾಣವಾದರೆ, ನಮ್ಮಲ್ಲಿ ಕಾಣುವ ಬೂದು ಕಾಜಾಣ (Ashy Drongo Dicrurus leucophaeus) ದಕ್ಷಿಣ ಭಾರತಕ್ಕೆ ವಲಸೆ ಹಕ್ಕಿ. ನಮ್ಮ ಸಹ್ಯಾದ್ರಿ ಶ‍್ರೇಣಿಯಲ್ಲಿ (ಪಶ್ಚಿಮಘಟ್ಟಗಳು) ಕಂಡುಬರುವ ವಿಶೇಷ ಕಾಜಾಣಕ್ಕೆ ಬಾಲದಿಂದ ಎರಡು ನೀಳವಾದ ಗರಿಗಳಿದ್ದು ಅವುಗಳ ತುದಿಯಲ್ಲಿ ತುಸು ನುಲಿದುಕೊಂಡಿರುವ ಎಲೆಯಂತಹ ಗರಿರಚನೆಯಿರುತ್ತದೆ. ಇದನ್ನು ಕನ್ನಡದಲ್ಲಿ ಭೀಮರಾಜ ಎನ್ನುತ್ತಾರೆ. (Greater Racket-tailed Drongo Dicrurus paradiseus) ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ನೀವು ಗಮನಿಸಬಹುದು.

ಮರದ ಮೇಲೆ ಬಹು ಎತ್ತರದ ಕವಲಿನಲ್ಲಿ ಗೂಡು ರಚಿಸಿ ಮೊಟ್ಟೆಯಿಡುತ್ತವೆ. ಮರಿ ಬೆಳೆದು ದೊಡ್ಡ ಹಕ್ಕಿಯ ಎಲ್ಲ ಲಕ್ಷಣ ಪಡೆದುಕೊಳ್ಳಲು ಸುಮಾರು ಎರಡು ವರ್ಷಗಳು ಬೇಕಾಗುತ್ತವೆ. ಮರಿ ಹಕ್ಕಿಗಳ ಹೊಟ್ಟೆಯ ಮೇಲೆ ಅಡ್ಡಗೀರುಗಳಿರುತ್ತವೆ. ಬಣ್ಣವೂ ಬೆಳ್ಳಗಿರಬಹುದು. ಪ್ರಧಾನವಾಗಿ ಕಪ್ಪುಬಣ್ಣದ ಹಕ್ಕಿಗಳಾದ ಇವುಗಳ ಹೊಳಪು ಸಹ ಕಡಿಮೆಯಿರುತ್ತದೆ. ಅಂಡಮಾನ್, ಶ್ರೀಲಂಕಗಳಲ್ಲಿ ಕಂಡುಬರುವ ಕಾಜಾಣಗಳ ಗಾತ್ರ ಮತ್ತು ತಲೆಯ ಮೇಲಿನ ಶಿಖೆಯಂತಹ ರಚನೆ ಚಿಕ್ಕದಾಗಿರುತ್ತದೆ.

ರೈತ ಮಿತ್ರನೂ ನಮ್ಮಲ್ಲಿನ ವಿಶಿಷ್ಟವಾದ ಹಕ್ಕಿಗಳಲ್ಲಿ ಒಂದಾದ ಇವನ್ನು ನೀವು ಕಂಡರೆ ನಮಗೆ ksn.bird@gmail.com ಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *