ಕಾಡು ಬೆಳಸುವ ಮಂಗಟ್ಟೆ ಹಕ್ಕಿಗಳು (Hornbills)

ಅತಿ ಉದ್ದವಾದ ಕೊಕ್ಕು, ಎಷ್ಟೋ ಪಕ್ಷಿಗಳ ಕೊಕ್ಕಿನ ಮೇಲೆ ಒಂದು ಉದ್ದವಾದ ಗುಬುಟಿನಂತಹ ರಚನೆ, ದೊಡ್ಡಗಾತ್ರದ ಹಕ್ಕಿ ಒಮ್ಮೆ   ನೋಡಿದರೆ ಮರೆಯುವುದೇ ಇಲ್ಲ. ಅಂತಹ ಹಕ್ಕಿಯಿದು. ಇದನ್ನು ಕುರಿತಾಗಿ ಸಂತೋಷದ, ಆಶ‍್ಚರ್ಯದ ಹಾಗೂ ವಿಷಾದದ ವಿಷಯಗಳಿವೆ. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಮಂಗಟ್ಟೆ ಹಕ್ಕಿ ಹಾಗೂ ಇದರ ಸುಂದರ ರೂಪ ಸಂತೋಷ ತರುವ ವಿಷಯ.

ಇನ್ನು ಇದರ ಸಂತಾನೋತ್ಪತ್ತಿಯ ವಿಶಿಷ್ಟ ಕ್ರಮ ಆಶ್ಚರ್ಯವನ್ನು ತರುತ್ತದೆ. ಹಳೆಯ, ದೊಡ್ಡ ಮರಗಳ ಪೊಟರೆ ಇದರ ಗೂಡು. ಹೆಣ್ಣು ಹಕ್ಕಿ ಇದರ ಒಳಗೆ ಹೋಗಿ ಕೂತ ನಂತರ ಗಂಡು ಹೊರಗಿನಿಂದ ಗೂಡಿನ ಬಾಯನ್ನು ಸಣ್ಣ ಕಿಂಡಿಯೊಂದನ್ನು ಬಿಟ್ಟು ಪೂರ್ತಿ ಮುಚ್ಚಿಬಿಡುತ್ತದೆ. ಒಳಗೆ ಮೊಟ್ಟೆಗಳು ಮರಿಯಾಗಿ ಅವು ತುಸು ಬೆಳೆಯುವವರೆಗೂ ಗಂಡು, ಹೆಣ್ಣು ಹಾಗೂ ಮರಿಗಳಿಗೆ ಆಹಾರವನ್ನು ತಂದು ಒದಗಿಸುತ್ತದೆ. ಮರಿಗಳು ತುಸು ದೊಡ್ಡವಾದನಂತರ ಹೆಣ್ಣು ಗೂಡಿನ “ಬಾಗಿಲನ್ನು” ಒಡೆದುಕೊಂಡು,  ಹೊರಬರುತ್ತದೆ. ಮರಿಗಳು ತಮ್ಮ ಮಲದಿಂದ ಮತ್ತೆ ಗೂಡಿನ ಬಾಯಿಯನ್ನು ಒಂದು ಸಣ್ಣ ರಂದ್ರದಷ್ಟು ಬಿಟ್ಟು ಉಳಿದಂತೆ ಮುಚ್ಚಿಬಿಡುತ್ತವೆ. ಆನಂತರ ಗಂಡು ಹೆಣ್ಣು ಎರಡೂ ಸೇರಿ ಮರಿಗಳಿಗೆ ಆಹಾರ ಒದಗಿಸುತ್ತದೆ.

ಮರಿಗಳು ಹಾರುವಷ್ಟು ದೊಡ್ಡವಾದ ಮೇಲೆ ಬಾಗಿಲನ್ನು ಒಡೆದುಕೊಂಡು ಹೊರಬರುತ್ತದೆ! ಎಂತಹ ವಿಸ್ಮಯಕಾರಿ ವಿಷಯವಲ್ಲವೆ? ಜೀವಿವಿಕಾಸದ ಹಾದಿಯಲ್ಲಿ ಇವು ಈ ಹಾದಿ ಹಿಡಿಯಲು ಏನು ಕಾರಣವಿರಬಹುದು?

ಇತ್ತೀಚೆಗೆ ಈ ಹಕ್ಕಿಯ ಕುರಿತಾಗಿ ಕುತೂಹಲಕರ ಸಂಶೋಧನೆಗಳು ನಡೆಯುತ್ತಿವೆ. ಇಂದೂರಿನ ಶ್ರೀ ಆಜಯ್ ಗಡಿಕಾರ್ ಇವುಗಳ ಗೂಡಿನ ಬಳಿ ಪುಟ್ಟ ಕ್ಯಾಮರಾ ಇಟ್ಟು ಸುಮಾರು 900 ಗಂಟೆಗಳಷ್ಟು ವಿಡಿಯೋವನ್ನು ದಾಖಲಿಸಿದ್ದಾರೆ. ಇದರಲ್ಲಿ ಮಂಗಟ್ಟೆ ಹಕ್ಕಿಯ ಅನೇಕ ವಿಷಯಗಳು ದಾಖಲಾಗಿವೆ. ಆಧುನಿಕರು ಮಾತ್ರವಲ್ಲ ನಮ್ಮ ಆದಿವಾಸಿ ಜನಾಂಗಗಳಿಗೂ ಹಕ್ಕಿಗಳೇ ಕಾಡನ್ನು ಬೆಳಸುವುದು ಎಂಬ ಅರಿವು ಇದೆ.

ಭಾರತ ಉಪಖಂಡ (ಹಾಗೂ ದಕ್ಷಿಣ ಏಷ್ಯಾದಲ್ಲಿ ಸಹ) ಸುಮಾರು ಹನ್ನೊಂದು, ಪ್ರಪಂಚದಲ್ಲಿ ನಲವತ್ತೊಂಬತ್ತು ಬಗೆಯ ಮಂಗಟ್ಟೆ ಹಕ್ಕಿಗಳು ಕಂಡುಬರುತ್ತವೆ. ನಾರ್ಕೋಂಡಮ್ ಮಂಗಟ್ಟೆಹಕ್ಕಿ ಭಾರತದ ಅಂಡಮಾನ್‍ ದ್ವೀಪ ಸಮೂಹದ ನಾರ್ಕೋಂಡಮ್ ದ್ವೀಪದಲ್ಲಿ ಮಾತ್ರ ಕಂಡುಬರುವ ಮಂಗಟ್ಟೆಹಕ್ಕಿ. ಇದು ಇಂದು ಗಂಡಾಂತರದಂಚಿನಲ್ಲಿದೆ. ಅಂಡಮಾನಿಗೆ ಹೋದಾಗ ಈ ವಿಷಯ ನೆನಪಿರಲಿ.

ದುರಾದೃಷ್ಟವಾಶಾತ್ ಈ ಪ್ರಭೇದದ ಅನೇಕ ಹಕ್ಕಿಗಳು ಗಂಡಾಂತರದಂಚಿನಲ್ಲಿವೆ. ನಾಮಾವಶೇಷವಾಗಿ ಹೋಗುವ ಹಾದಿಯಲ್ಲಿವೆ. ಇವುಗಳು ವಂಶಾಭಿವೃದ್ಧಿ ಮಾಡಲು ಹಳೆಯದಾದ ಬಹುದೊಡ್ಡ ಮರಗಳು ಬೇಕು. ಆದರೆ, ಅವನ್ನು ಕಾಡಿನಲ್ಲಿಯೂ ಸಹ ಅನೇಕ ಕಾರಣಗಳಿಂದಾಗಿ ಕಡಿಯಲಾಗುತ್ತಿದೆ. ಇವುಗಳ ಉದ್ದನೆಯ ಕೊಕ್ಕು ಗುಬುಟುಗಳಿಗಾಗಿಯೂ ಇವನ್ನು ಕೊಲ್ಲಲಾಗುತ್ತದೆ. ಮಂಗಟ್ಟೆ ಹಕ್ಕಿಗಳು ಗಂಡಾಂತರದಂಚಿಗೆ ತಲುಪಿರುವುದಕ್ಕೆ ಇವು ಸಹ ಕಾರಣ. ಆವಾಸ ನಾಶ ಬಹುದೊಡ್ಡ ಕಾರಣ.

Andaman Narcondam Hornbills

ಕರ್ನಾಟಕದಲ್ಲಿ ಈ ಮಂಗಟ್ಟೆ ಹಕ್ಕಿಗಳು ಕಂಡುಬರುತ್ತವೆ: ದಾಸ ಮಂಗಟ್ಟೆಹಕ್ಕಿ (Malabar Pied-Hornbill Anthracoceros coronatus), ಮಲಬಾರ್ ಮಂಗಟ್ಟೆ (Great Hornbill (Great Pied Hornbill Buceros bicornis) ಹಾಗೂ ಸಾಮಾನ್ಯ ಮಂಗಟ್ಟೆ  ಹಕ್ಕಿಗಳನ್ನು (Indian Grey Hornbill Ocyceros birostris) ನೋಡಬಹುದು.

ಕಾಡು ಬೆಳಸುವಲ್ಲಿ ಮಹತ್ವದ ಪಾತ್ರ ವಹಿಸುವ, ಆಹಾರಕೊಂಡಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಈ ಹಕ್ಕಿಯ ಸಂತತಿಯನ್ನು ನಾವು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ನಾವು ವಿದ್ಯಾವಂತರು ಎನಿಸಿಕೊಳ್ಳುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ.

ಈ ಹಕ್ಕಿ ನಿಮಗೆ ಕಾಣಿಸಿದರೆ ನಮಗೆ ಬರೆದುತಿಳಿಸಿ.

  • ಕಲ್ಗುಂಡಿ ನವೀನ್
  • ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ

Related post

Leave a Reply

Your email address will not be published. Required fields are marked *