ಕಾಫಿ
ಅಮೃತದಂತೆ ಕಾಣುವೆ ನೀ ಬೆಳಗಿನ ಹೊತ್ತು
ಹಬೆಯಾಡುತಲಿ ನೀ ಕಂಡರೆ ನನಗದೇ ಸಂಪತ್ತು
ಏನಾದರೂ ಸರಿಯೇ ತಪ್ಪಿಸಲಾರೆ ಒಂದ್ಹೊತ್ತು
ದೂರದೂರದಾ ಊರುಗಳಲಿ ನಿನಗೇ ಹುಡುಕಾಟ
ಬಯಲು ಸೀಮೆಯಲಿ ನಿನಗಾಗಿ ಪರದಾಟ
ನಿನಗಾಗಿ ಮನದಲ್ಲಿ ಆಗಾಗ ಬಡಿದಾಟ
ಬಾಬಾ ಬುಡನ್ ತಂದ ವರವು ನೀನು
ಚೆನ್ನಾಗಿ ಹುರಿದು ಪುಡಿಮಾಡುವನು
ಉಷ್ಣೋದಕದಲ್ಲಿ ಬೆರಸಿ ಕುಡಿವೆ ನಾನು
ಇಲ್ಲಾರು ಇಲ್ಲ ನಿನಗೆ ಸರಿಸಾಟಿ
ನಿನ್ನದೇ ರೂಪದಿ ಮೆರೆಯುವ ಆಟದಿ
ಬಯಸಿದೆ ನಿನ್ನನೇ ಒಂದು ಭರ್ತಿ ಲೋಟದಿ
ಬೆಳಗೆದ್ದು ನೀ ಸಿಕ್ಕಿದರೆ ನನಗಷ್ಟು ಸಾಕು
ಮರೆಯುವುದು ಬೇಗ ಮನದ ನೋವು
ಒಡಲಾಗುವುದು ಮಲ್ಲಿಗೆ ಹೂವು…
ನೀನಾದೆ ನನ್ನ ಬಾಳಿಗೆ ಅನುದಿನವು ಅನಿವಾರ್ಯ
ನೀನಿಲ್ಲದ ದಿನವು ಮನ ಆವರಿಸಿತು ಶೂನ್ಯ
ಹೇ ಫಿಲ್ಟರ್ ಕಾಫಿ ನಿನಗೆ ನೀನೇ ಅನನ್ಯ..
ಸಿ.ಎನ್.ಮಹೇಶ್