ಕಾಮನಬಿಲ್ಲು
ಮುಗಿಲಿನಲ್ಲಿ ಮೂಡುತಿದೆ ವಿಸ್ಮಯ
ನೆರಳು ಬೆಳಕಿನ ಸಂಯೋಜನೆಯಲಿ
ಅತ್ತ ಮಳೆಯೂ ಅಲ್ಲ ಇತ್ತ ಬಿಸಿಲೂ ಅಲ್ಲ
ಸೂರ್ಯದೇವನ ಪ್ರಭೆಯ ಪ್ರಭಾವವೆಂತು
ಮಾರನು ಇದ ತನ್ನ ಅಂಬನ್ನಾಗಿಸಿಕೊಂಡ
ಏಳುಬಣ್ಣಗಳ ವಸ್ತ್ರಗಳ ಇದಕೆ ಸುತ್ತಿಹನು
ಅಂಬನ್ನೇ ಹಿಡಿದ ಮನ್ಮಥನು ಮರೆತ ಶರವನು
ಪುಷ್ಪಮಾಲೆಯಿಂದಲೇ ಶರಾಘಾತ ಮಾಡುವನು
ಕಂಡಳು ಮಾರನ ಸತಿ ಈ ಶೃಂಗಾರದ ಅಂಬನು
ಮೋಹದಾ ಪಾಶದಲಿ ಮೈಮರೆಯಲು ಮಾರನು
ಫಾಲನೇತ್ರನ ಅವಕೃಪೆಗೆ ಪಾತ್ರನಾದವನು
ಕ್ಷಣಾರ್ಧದಲೇ ಬೂದಿಯ ಗುಡ್ಡೆಯಾದ ಮಾರನು
ಒಮ್ಮೊಮ್ಮೆ ಅರ್ಧ ಚಂದ್ರನಂತೆ ಕಾಣುವುದಿದು
ಅಪರೂಪಕ್ಕೆ ಸಂಪೂರ್ಣ ವೃತ್ತಾಕಾರದಲಿ
ಎಷ್ಟು ಸುಂದರ ಸುಮನೋಹರ ಈ ಸೋಜಿಗ
ನೋಡಲು ಈ ವರ್ಣಚಿತ್ತಾರ ಅದೇನೋ ಧನ್ಯತಾ ಭಾವ
ನಿಸರ್ಗದ ಕೌತುಕವ ಕಾಣಲು ಹವಣಿಸಿಹ ನಾವು
ಬಿಳಿಯ ಬಣ್ಣದ ವಿಭಜನೆಯ ಸುಂದರತೆಯಲಿ
ಏಳು ಬಣ್ಣಗಳ ಅಂಬಿನಲಿ ಕುಣಿದಾಡಿಹ ಶಿವನು
ಕಣ್ತುಂಬಿಕೊಳ್ಳಿ ನಿಸರ್ಗದ ಈ ವೈಭವವನ್ನು
ಸಿ.ಎನ್. ಮಹೇಶ್