ಕಾಲಚಕ್ರ
ಬದಲಾಗುತಿದೆ ಕಾಲ ಬದಲಾಗುತಿದೆ
ಜಂಜಡದ ಜೀವನವು ಬದಲಾಗುತಿದೆ
ಎಲ್ಲೆಲ್ಲೂ ಹಣದ ಹೊಳೆಯು ಹರಿಯುತಿದೆ
ಹುಟ್ಟುವ ಮೊದಲೇ ಹಸುಗೂಸಿನ ಜೀವಕೆ
ಸಾವಿರಾರು ರೂಪಾಯಿಗಳ ಪ್ಯಾಕೇಜು
ಪ್ರತಿಷ್ಟೆಯ ಮನಕೆ ಇದೊಂದು ರಿವಾಜು
ಮಗು ಹುಟ್ಟಿದ ಸಂಭ್ರಮದಲಿ ಹುಡುಕಾಟ ಆರಂಭ
ಶಾಲೆಗಳ ಮುಂದೆ ಸರದಿ ನಿಲ್ಲಲು ಪ್ರಾರಂಭ
ಇದೇ ಶಾಲೆಯ ಸೀಟು ಬೇಕೆಂಬ ಒಣಜಂಭ
ಮುಂದೊಂದು ದಿನ ಮದುವೆಯ ಹುಡುಕಾಟ
ಲಗ್ನ ವರದಕ್ಷಿಣೆಗಳ ಜೊತೆ ಬೀಗರೂಟ
ನೋಡುವವರಿಗಂತೂ ಸುಂದರ ನೋಟ…
ಕೇಳಿದಷ್ಟು ಸಾಲಕೊಡುವ ಬ್ಯಾಂಕುಗಳು
ಗೃಹಸಾಲ, ಮದುವೆ ಸಾಲ, ಶಿಕ್ಷಣದ ಸಾಲಗಳು
ಬೆನ್ನತ್ತಿ ನಿಲ್ಲುವ ಅದೇ ಬ್ಯಾಂಕಿನ ಇಎಂಐಗಳು
ನಾವು ಮಾಡುವ ತಪ್ಪಿಗೆ ಮಾಡುವೆವು ಹೊಣೆ
ಕಾಲಕಾಲಕ್ಕೆ ಸುರಿವ ಮಳೆ, ಬೀಸುವ ಗಾಳಿ
ಎಲ್ಲ ಕೊಡುವ ಪ್ರಕೃತಿ ಮಾತೆಯನು
ಹೇಗಿದ್ದ ಜನ ಹೇಗಾದೆವು ನಾವು
ತುಂಬು ಕುಟುಂಬದ ಜೀವನದಿ ಇದ್ದ ಖುಷಿ
ಈಗಿಲ್ಲವೆಂಬ ನೋವು
ಮತ್ತೆ ಹೇಳುವೆವು ಬದಲಾಗಿದೆ ಕಾಲ
ದೂರುವೆವು ಎಂದೂ ಬದಲಾಗದ ಕಾಲವನು.
ಸಿ. ಎನ್. ಮಹೇಶ್