ಕಾಲನ ಕರೆ
ಕಾಲವೆಂಬೊ ಕಾಳಿಂಗಸರ್ಪವು ಕಚ್ಚಲು
ಕಾಯುತಿದೆ ಬದುಕು ಕಸಿಯಲು..!
ಹಾವಾಡಿಗನಂತೆ ಯಾರಿಲ್ಲ
ಅದನು ಹಿಡಿದು ಸದೆಬಡಿಯಲು
ತಯಾರಾಗಿದೆ ಬಾಳು ನಿರ್ಗಮಿಸಲು!!
ಕಾಲವೆಂಬೊ ಚಕ್ರವು ಶತಪಥ ಓಡಿದೆ
ಯಾರ ಅಪ್ಪಣೆಗೂ ತಾ ಕಾಯದೆ..!
ಅದನು ತಡೆಯುವವರಾರಿಲ್ಲ
ಸಿಕ್ಕಸಿಕ್ಕ ಎಡರುಗಳಲಿ ನಿಲ್ಲದೆ
ಮನಬಂದತ್ತ ತಾ ಅವಸರದಿ ಚಲಿಸಿದೆ!!
ಕಾಲವೆಂಬೊ ಕುಡುಗೋಲದು ಬೀಸಿದೆ
ತಪ್ಪಿಸಿ ಓಡುವವರ ಕ್ಷಣದಿ ಹಿಡಿದಿದೆ!
ಅದನು ಮೆಟ್ಟಿ ತುಳಿಯುವವರಾರಿಲ್ಲ
ಗಾಳಿಯಲಿ ತೂರಿಯೂ ತಾಕದೆ
ತಾಕಿದರೀ ಬಗ್ಗದೆ ನಡೆದಿದೆ!!
ಕಾಲವೆಂಬೊ ಕಹಿಸತ್ಯವು ಆಗಮಿಸಿದೆ
ಯಾರೂ ನುಂಗದ ಕಹಿಬೇವಿನಂತಿದೆ..!
ತನ್ನನರಿತು ನಿಯಂತ್ರಿಸುವವರಾರಿಲ್ಲ..
ಆಸರೆ ತಪ್ಪಿದ ಬಾಳು ಸೊರಗಿದೆ
ಬಾಳಿನ ಆಸರೆಯು ಮರುಗಿದೆ!!
ಸುಮನಾ ರಮಾನಂದ