ಪೊರೆ ಕಳಚಿದೆ
ಹೆಡೆಯೆತ್ತಿದೆ
ಖೂಳ ಕಾಯಕದಿ
ಭುಸುಗುಟ್ಟಿದೆ
ತಾಜಾ ಪಾಷಾಣದ ಹೊಗೆ!
ಮತ್ತೊಮ್ಮೆ
ಪೂರ ಶತಮಾನದ ಅನಂತರದಲಿ
ಮಸಣಗೀತೆ ಗುನುಗಿದೆ
ಸರ್ವವ್ಯಾಪಿ ಬಿರುಗಾಳಿ!

ಕಾಲ ಕೆಟ್ಟಿಲ್ಲ
ನಿಜ!
ಕರಿ ಬಣ್ಣದೊಳು ಯಥೇಚ್ಛ ಅದ್ದಿದ
ಕುಂಚದಿಂದ
ಕಾಲದ ದಿವ್ಯ ಮುಖದುದ್ದಗಲಕ್ಕು
ಕಾಳೋರಗನ ಚಿತ್ತಾರ ಗೀಚಲಾಗಿದೆ
ಅಗೋಚರ ಖಳರಿಂದ!
ಮತ್ತೊಂದು ಬಣ್ಣದ
ಯಕಃಶ್ಚಿತ್ ಗೆರೆಯೊಂದಕ್ಕೂ
ತಾವಿರದ ಹಾಗೆ ಕಿಂಚಿತ್ತೂ

ಹುತ್ತದಿಂದ ಹೊರ ಹರಿದು
ಬಂದದ್ದು
ವಿಷಪೂರಿತ ಉರಗಗಳಲ್ಲ
ಕ್ಷುಲ್ಲಕ ಇರುವೆ ಸೈನ್ಯ
ಅನಿಸಿದ್ದು
ಹಾಗೆ ಕಹಳೆ ಊದಿಸಿದ್ದು ಮಿಥ್ಯ
ಅನುಭವಿಸಿದ್ದು ಮಾತ್ರ ಅನೂಹ್ಯ
ಘನ ಘೋರ ವಿಪತ್ತು!

ಏನಿರಬಹುದು
ಏಕಿರಬಹುದು
ಕ್ಷಣ ಜಿಜ್ಞಾಸೆಗೂ
ಆಸ್ಪದವಿಲ್ಲದ ಹಾಗೆ
ಖಂಡಾಂತರ ವಿದ್ಯುತ್ವೇಗದಿ ಹರಿದು
ದೇಶ ವಿದೇಶಗಳಲಿ ಗುಡಿಸಿ ಗುಂಡಾಂತರ!
ಸ್ನೇಹ ಸಂಬಂಧಗಳ ಕಿತ್ತೊಗೆದು
ಹಾಳುಬಡಿದ ಬದುಕು
ದಕ್ಕಿದ ಸಿಕ್ಕಿದೆಲ್ಲರ ಕೊರಳು ಹಿಡಿವ
ಗಟ್ಟಿ ಹಿಸುಕುವ
ಈ ಅದೃಶ್ಯ ಅನಂತಪಾದಿ
ಮೃತ್ಯುಘಾತಕ!
ಬೀದಿ ಬೀದಿಗಳಲಿ ದಢಕ್ಕನುರುಳಿ
ಬಿದ್ದಳಿದ ಜನಜಂಗುಳಿ!
ಈ ಕ್ಷಣ ಸಬಲ ನಿಂತದ್ದವರು
ಮರು ಕ್ಷಣ ಉರುಳಿ ಬಿದ್ದರು
ಗುರುತಿನವರು ಖಾಲಿಯಾದರು
ಆತ್ಮೀಯರು ಕಾಣೆಯಾದರು…
ನರಕದ ಬ್ರಹ್ಮಾಂಡ ಬಾಯಿ
ಭೂಮಿಗುಂಟ ನೇರ ಇಳಿಬಿಟ್ಟಂತೆ
ಆಪೋಶಕ ಕ್ರೂರ ಗಜಹಸ್ತ!

ಲಾಕ್ ಡೌನ್ ತುರುಕಿದ ಊರೂರ
ಭಣಗುಟ್ಟುವ ಖಾಲಿ ರಸ್ತೆಗಳಲಿ
ಬೀದಿನಾಯಿಗಳ ದರ್ಬಾರುಗಳಲಿ
ಗಡಚಿಕ್ಕುವ ಬೊಗಳುಸಮರ!

ಒಟ್ಟು ಸಮಯವೆ ನಿಂತ ನೀರು
ಒಂದೇ ಒಂದಿಲ್ಲ ಸಣ್ಣ ಅಲೆ ಸುಳಿ…

ಕಿಟಕಿ ಹೊರಗೆ
ಎಲೆಗಳುದುರಿ ಮರಗಳು
ಬೋಳು ಬೋಳು
ರೆಂಬೆ ಕೊಂಬೆಗಳು
ಖಾಲಿ ಅಸ್ಥಿಪಂಜರ!

ಆದರೆ ಸಮಯದ ನೀರು
ಮತ್ತೆ ಹರಿವ ಹೊತ್ತು
ದೂರ ಇಲ್ಲ ಇನ್ನು…
ಮರಗಿಡಗಳೆಲ್ಲ
ಎಲೆ ಹೂಗಳ ಬಸಿರಾಗಿ ಮತ್ತೊಮ್ಮೆ
ತೂಗಿ ತೊನೆವ ಸಮಯ
ಇಲ್ಲೇ ಇದೆ ಹತ್ತಿರ…

ಡಾ. ಅರಕಲಗೂಡು ನೀಲಕಂಠ ಮೂರ್ತಿ

Related post

1 Comment

  • Very good poem

Leave a Reply

Your email address will not be published. Required fields are marked *