ಅದೇನದು?
ಇತ್ತೀಚೆಗೆ ಎಲ್ಲರೂ..
ಗೀಚಲು ಶುರುಮಾಡಿದ್ದಾರಲ್ಲ!!
ಕಾವ್ಯವಿರಬೇಕು ಇಲ್ಲಾ ಕವನವಿರಬೇಕು
ಅದೂ ಅಲ್ಲದಿದ್ದರೆ ಕವಿತೆಯಿರಬೇಕು
ಕಾವ್ಯವೆಂದರೆ,
ಪದಗಳನ್ನು ಒಂದರ ವಕ್ಕಳಕ್ಕೆ
ಮತ್ತೊಂದನ್ನು ಪೋಣಿಸುವುದೇ?
ಪ್ರಾಸಗಳನ್ನು ಆಯ್ದು ಮನೆ ಕಟ್ಟುವುದೇ?
ಎಲ್ಲಿಗೆ ಬೇಕು ಅಲ್ಲಿಗೆ
ಸಾಲುಗಳನ್ನು ತುಂಡರಿಸುವುದೇ?
ನಾಲ್ಕೈದು ಪ್ಯಾರ ಅನಿಸಿಕೆ ಬರೆಯುವುದೇ?
ಇದೊಂದು ಗೊಂದಲದ ಪ್ರಶ್ನೆ
ಇಂತದ್ದೇ ನಿಯಮಗಳೆಂಬುದಿದ್ದರೆ
ಅದನ್ನು ಅನುಸರಿಸಬಹುದಿತ್ತು
ಓದಿದರೆ ಕಾವ್ಯವಾಗಬಲ್ಲುದು
ಮತ್ತೆ ಓದಿದರೆ ಗದ್ಯವಾಗಬಹುದು
ಎಲ್ಲಿಲ್ಲದ ಮಾಂತ್ರಿಕ ಶಕ್ತಿ ಈ ಕಾವ್ಯಕ್ಕೆ
ಅರ್ಥೈಸಿಕೊಳ್ಳದಿದ್ದರೆ ಗೊಚ್ಚೆ
ತಲೆಹಾಕದಿದ್ದರೆ ಪುಚ್ಚೆ
ಕೆಲವರಿಗೆ ನೇರ ಚಾಟಿ ಏಟು
ಮತ್ತೆ ತಳ ಸುಟ್ಟ ಹಾಗೆ
ಇಲ್ಲಿ ಎಲ್ಲವೂ ಸಂಧಿಸಲಿದೆ
ಪುಟಪುಟಗಳಲ್ಲಿ ಹೇಳುವುದನ್ನು
ಕೇವಲ ಎರಡು ಪದಗಳಲ್ಲಿಯೇ ಮುಗಿಸಹುದು!
ನಾಲ್ಕು ಸಾಲಿನಲ್ಲಿ ಪ್ರಪಂಚವೇ ಕಾಂಬುದು
ಅಳುವವರಿಗೆ ನಗುವುದನ್ನೂ
ನಗುವವರಿಗೆ ಸೈರಿಸುವುದನ್ನು
ಹಸಿದವರಿಗೆ ಅನ್ನವನ್ನೂ
ಹೆಚ್ಚಾದವರಿಗೆ ತಲೆತೂಗುವುದನ್ನೂ
ಹೇಳಿಕೊಡುವ ಅದ್ಭುತ ಕಲೆಯಿದು
ಒಬ್ಬೊಬ್ಬರದು ಒಂದೊಂದು ಶೈಲಿ
ಮಹನೀಯರಿಂದ ಇಲ್ಲಿಯವರೆಗೆ
ಎಲ್ಲವೂ ಬಂದುಹೋಗಿದೆ
ಹನಿಗವನ, ಕಿರುಗವನ, ಖಂಡಕಾವ್ಯ
ಜಾನಪದ, ತತ್ವಪದ, ಗೀಗೀ ಪದ
ಕವಿತೆ, ಕವನಗಳು ಇಲ್ಲೇ ಹುಟ್ಟಿ
ಇಲ್ಲೇ ಸತ್ತುಹೋಗಿವೆ
ಹಾಗಾದರೆ ಇದು ಗದ್ಯಕವಿತೆ ಯಾಕಾಗಬಾರದು??
ಒಪ್ಪಿಕೊಳ್ಳಲು ಕಷ್ಟವಾದೀತು
ಹೊಸತೆಂಬುದು ಅಂಕುಶವಿದ್ದಂತೆ!
ಇಲ್ಲಿಂದ ಗಮನಹರಿಸಬೇಕಿದೆ
ಭಾವವಿರದ, ವಿಚಾರವಿರದ
ರೂಪಕವಿರದ ಅಥವಾ
ಇವುಗಳ ಪ್ರಯೋಗವಿರದೆ
ಸಾಲುಗಳು ಸಪ್ಪೆಯಾಗುವವು
ಆದರೂ..
ಕವಿತೆಯಲ್ಲಿ ಎಲ್ಲವನ್ನೂ ಅಪೇಕ್ಷಿಸುವುದು
ಹೆಣ್ಣಿನಲ್ಲಿ ಎಲ್ಲಾ ವಿದ್ಯೆಗಳನ್ನು ಹುಡುಕಿದಂತೆ!
ಚೆಂದವಿಲ್ಲದಿದ್ದರೂ ಹೆಣ್ಣು ಹೆಣ್ಣೇ..
ನಾಟಕದಲ್ಲಿರಬೇಕಾದ ಸಂಭಾಷಣೆಗಳು
ಕಥೆ, ಕಾದಂಬರಿಗಳಲ್ಲಿ ಮೂಡುವುದಾದರೆ,
ಕವಿತೆಯಲ್ಲಿ ಯಾಕೆ ಗದ್ಯವಿರಬಾರದು??
ಅಡಿಗರು, ಕುವೆಂಪು ಅವರನ್ನೇ ಕೇಳಬೇಕಿದೆ!!
ಅನಂತ ಕುಣಿಗಲ್