ಕಾಸ್ಕ್ವೆರ್ ಗುಹೆ
ಇದು ವಿಶ್ವದ ಏಕೈಕ ಇತಿಹಾಸಪೂರ್ವ ನೀರೊಳಗಿನ ಗುಹೆ !!
ಫ್ರಾನ್ಸ್ ನ ಕ್ಯಾಲಂಕ್ ಡೆ ಮೊರ್ಗಿಯೋದಲ್ಲಿರುವ ಈ ಗುಹೆಯನ್ನು 1991 ರಲ್ಲಿ ಕಂಡುಹಿಡಿಯಲಾಯಿತು. ಈ ಗುಹೆಯ ಪ್ರವೇಶದ್ವಾರವು ಸಮುದ್ರ ಮಟ್ಟಕ್ಕಿಂತ ಸುಮಾರು 37 ಮೀಟರ್(121ಅಡಿ) ಕೆಳಗಿದೆ,175 ಮೀ (574 ಅಡಿ ) ಉದ್ದವಿದೆ.
ಮಾನವ ವಾಸಿಸುತ್ತಿದ್ದ ಸಮಯದಲ್ಲಿ ಈ ಗುಹೆಯು ಸಮುದ್ರ ತೀರದಿಂದ 6-10 ಕಿಲೋಮೀಟರ್ ಗಳಷ್ಟು ದೂರದಲ್ಲಿತ್ತು ಎಂದು ಅಂದಾಜು ಮಾಡಲಾಗಿದೆ.
ಸುಮಾರು 30,000 ವರ್ಷಗಳಷ್ಟು ಹಳೆಯದಾದ ಈ ಗುಹೆಯಲ್ಲಿ ಇತಿಹಾಸ ಪೂರ್ವ ಮಾನವರು ವಾಸಿಸುತ್ತಿದ್ದ ಸಮಯದಲ್ಲಿ ಸಮುದ್ರ ಮಟ್ಟವು ಗಮನಾರ್ಹವಾಗಿ ಕಡಿಮೆಯಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಸಮುದ್ರಮಟ್ಟದ ಏರಿಕೆಯಿಂದಾಗಿ ಇಂದು ಈ ಗುಹೆಯ ಪ್ರವೇಶದ್ವಾರವು ನೀರಿನೊಳಗೆ 120 ಅಡಿ ಆಳದಲ್ಲಿದೆ.
1985 ರಲ್ಲಿ ಮೊಟ್ಟ ಮೊದಲ ಬಾರಿಗೆ ಹೆನ್ರಿ ಕಾಸ್ಕ್ವೆರ್ ಎನ್ನುವ ಡೈವರ್ ಈ ಗುಹೆಯನ್ನು ಕಂಡುಹಿಡಿದರು, ನಂತರ ಹಂತ ಹಂತವಾಗಿ ಸಂಶೋಧನೆ ಮಾಡುತ್ತ 1991ರಲ್ಲಿ ಗುಹೆಯ ಮುಳುಗದ ಭಾಗವನ್ನು ಪತ್ತೆ ಮಾಡಿ ಅಲ್ಲಿಗೆ ತಲುಪಿದರು.
ಗುಹೆಯಲ್ಲಿ ಆದಿಮಾನವರು ಬಿಡಿಸಿದ 500ಕ್ಕೂ ಹೆಚ್ಚು ವರ್ಣಚಿತ್ರಗಳು ಹಾಗು ಕೆತ್ತನೆಗಳಿವೆ, ಕುದುರೆ ಕಾಡೆಮ್ಮೆ ಐಬೆಕ್ಸ್ ಸೀಲ್ ಗಳಂತಹ ಪ್ರಾಣಿಗಳು ಮತ್ತು ಮನುಷ್ಯರ ಹಸ್ತದ ಗುರುತುಗಳನ್ನು ಸಹ ಕೆತ್ತಲಾಗಿದೆ. 30,000 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರ ಜೀವನ ಮತ್ತು ನಂಬಿಕೆಗಳ ಬಗ್ಗೆ ಈ ಗುಹೆ ಅಮೂಲ್ಯ ಮಾಹಿತಿಗಳನ್ನು ನೀಡುತ್ತದೆ, ಗುಹೆಯ ದಾರಿಯುದ್ಧಕ್ಕೂ ನೀರಿನಲ್ಲಿ ಮುಳುಗಿದ ಭಾಗದಲ್ಲಿರುವ ಅನೇಕ ಮಾಹಿತಿಗಳನ್ನು ಸಂಶೋಧಕರು ಇನ್ನೂ ಕಲೆಹಾಕುತ್ತಿದ್ದಾರೆ.
ಫ್ರಾನ್ಸ್ ಸರ್ಕಾರ ಈ ಗುಹೆಯನ್ನು ಈಗಾಗಲೇ ರಾಷ್ಮೀಯ ಸ್ಮಾರಕವನ್ನಾಗಿ ಘೋಷಿಸಿದೆ. ಸಾರ್ವಜನಿಕರ ಪ್ರವೇಶಕ್ಕೆ ಇಲ್ಲಿ ನಿಷೇಧವಿದೆ.
ಏರುತ್ತಿರುವ ಸಮುದ್ರ ಮಟ್ಟದಿಂದ ಗುಹೆಯ ಪ್ರವೇಶ ದ್ವಾರವು ಇಂದು ಶಿಥಿಲಾವಸ್ಥೆ ತಲುಪುತ್ತಿದೆ. ಅದನ್ನು ಹೇಗೆ ಸಂರಕ್ಷಿಸುತ್ತಾರೋ! ನಿಜಕ್ಕೂ ಅಲ್ಲಿನ ಸರಕಾರಕ್ಕೆ ಸವಾಲಿನ ಕೆಲಸ.
✍️ನಾಗರಾಜ್ ಬೆಳ್ಳೂರು
Nisarga Conservation Trust