ನಮ್ಮ ಸುಂದರ ಹಕ್ಕಿಗಳಲ್ಲಿ ಒಂದಾದ ನೆಲಸಿಳ್ಳಾರಗಳು ನೆಲದ ಮೇಲೆ ಆಹಾರ ಅರಸುವ ಪ್ರಭೇದ. ಇದರ ಹೆಸರಿನಲ್ಲರಿವ “ನೆಲ” ಅದನ್ನೇ ಸೂಚಿಸುತ್ತದೆ. ಹೀಗೆಯೇ ಬಂಡೆ ಇಲ್ಲವೆ ಕಲ್ಲು ಸಿಳ್ಳಾರಗಳೂ ಇವೆ. ಅವು ಬಂಡೆಗಳ ನಡುವೆ ಹೆಚ್ಚು ಕಾಣಸಿಗುತ್ತವೆ. ನೆಲಸಿಳ್ಳಾರಗಳು ಕಾಡಿನ ನೆಲಹಾಸಿನಲ್ಲಿ ಒಣ ಎಲೆಗಳನ್ನು ತಲಕೆಳಗು ಮಾಡುತ್ತಾ ಹುಳ, ಜೇಡ ಇತ್ಯಾದಿಗಳನ್ನು ಹುಡುಕಿ, ಹಿಡಿದು ತಿನ್ನುತ್ತವೆ.
ಒಟ್ಟಾರೆಯಾಗಿ ಸಿಳ್ಳಾರಗಳನ್ನು ತೆಗೆದುಕೊಂಡರೆ ದಕ್ಷಿಣ ಏಷ್ಯಾದಲ್ಲಿ ಇಪ್ಪತ್ತೆಂಟು ಇಲ್ಲವೆ ಇಪ್ಪತ್ತೊಂಬತ್ತು ಪ್ರಭೇದಗಳ ಸಿಳ್ಳಾರಗಳು ಕಂಡುಬರುತ್ತವೆ. ಜೊತೆಗೆ ನಾಲ್ಕು ಅಲೆಮಾರಿ ಹಾಗೂ ಎರಡು ಹೆಚ್ಚುವರಿಯಾಗಿ ಇರಬಹುದು ಎಂಬ ಊಹಾತ್ಮಕ ಪ್ರಭೇದಗಳಿವೆ. ಜಗತ್ತಿನಾದ್ಯಂತ ಸುಮಾರು ನೂರ ಎಂಬತ್ತೆರೆಡು ಪ್ರಭೇದಗಳ ಸಿಳ್ಳಾರಗಳು ಕಂಡುಬರುತ್ತವೆ. ನೆಲಸಿಳ್ಳಾರಗಳು ಹೆಚ್ಚು ಹೊರಗೆ ಕಾಣದಂತಹ (ಹುದುಗಿಕೊಳ್ಳುವಂತಹ) ನೆಲವಾಸಿ ಹಕ್ಕಿಗಳು.
ಕಿತ್ತಲೆ ನೆಲಸಿಳ್ಳಾರ (Orange-headed Thrush, Geokichla citrina) ಕಿರೀಟಭಾಗ ಹೊಳೆಯುವ ಕಿತ್ತಲೆ ಬಣ್ಣವನ್ನು ಹೊಂದಿರುತ್ತದೆ. ದೇಹದ ಮೇಲ್ಭಾಗ ಬೂದುನೀಲಿ. ಹೆಗಲ ಮೇಲೆ ಬಿಳಿಯ ಮಚ್ಚೆಯಿರುತ್ತದೆ. ತಲೆಯ ಮೇಲೆ ಗುರುತಿರುವ ಹಾಗೂ ಇಲ್ಲದಿರುವ ಪ್ರಭೇದಗಳಿವೆ. ಕೆಲವು ಕುಕ್ಕೂ ಹಕ್ಕಿಗಳು ಇದರ ಗೂಡಿನಲ್ಲಿ ಮೊಟ್ಟೆಯಿಡುವುದು ಕಂಡುಬಂದಿದೆ. ಚಿತ್ರದಲ್ಲಿ ತೋರಿಸಿರುವುದು ಬಿಳಿಯ ಉದ್ದಗೆರೆಗಳಿರುವ, ಗಂಟಲು ಬೆಳ್ಳಗಿರುವ ಪ್ರಭೇದ. ಕಿತ್ತಳೆ ನೆಲಸಿಳ್ಳಾರಗಳಲ್ಲಿ ಹನ್ನೆರೆಡು ಉಪಪ್ರಭೇದಗಳನ್ನು ಪತ್ತೆಮಾಡಲಾಗಿದೆ. ಕೆಲವು ಪ್ರಭೇದಗಳು ಪ್ರಣಯಸಂದರ್ಭಗಳಲ್ಲಿ ಹಾಗೂ ಮರಿಗಳ ಪಾಲನೆ ಸಂದರ್ಭಗಳಲ್ಲಿ ಕೆಲವು ವಿಶೇಷ ನಡವಳಿಕೆಗಳನ್ನು ತೋರುತ್ತವೆ.
ಗುಜರಾತ್, ಮಧ್ಯಪ್ರದೇಶ, ಒಡಿಶ್ಶಾ ಹಾಗೂ ದಕ್ಷಿಣಭಾರತದಲ್ಲಿ ಕಂಡುಬರುತ್ತದೆ. ಶ್ರೀಲಂಕಾದಲ್ಲಿ ಇಲ್ಲ. ಇಂತಹ ಉಪಪ್ರಭೇದಗಳಿಂದ ಕೂಡಿದ ಹಕ್ಕಿಗಳು ಪರಿಸರದ ಸೂಕ್ಷ್ಮಬಲೆಯಲ್ಲಿನ ಕೊಂಡಿಗಳು.
ಕಲ್ಗುಂಡಿ ನವೀನ್
ksn.bird@gmail.com; kalgundi.naveen@yahoo.com
ಚಿತ್ರಗಳು: ಜಿ. ಎಸ್. ಶ್ರೀನಾಥ
ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ