ಕುಂಚದಲ್ಲಿ ಕನ್ನಡ ಸಾಹಿತಿಗಳು

ಕುಂಚದಲ್ಲಿ ಕನ್ನಡ ಸಾಹಿತಿಗಳು

ಕನ್ನಡದ ಸಾಹಿತ್ಯ ಲೋಕದ ದಿಗ್ಗಜರಾದ ಅ ನ ಕೃ, ಕುವೆಂಪು, ತ ರಾ ಸು, ಎಸ್ ಎಲ್ ಭೈರಪ್ಪ, ತ್ರಿವೇಣಿ, ತೇಜಸ್ವಿ ಇನ್ನೂ ಮುಂತಾದವರು ಒಂದೇ ಮನೆಯಲ್ಲಿ ನೋಡಲು ಸಿಕ್ಕರೆ? ಆಹಾ ಎಂತಹ ಅದ್ಬುತ ದೃಶ್ಯ ಕಲ್ಪನೆ. ಕನ್ನಡದ ಖ್ಯಾತ ವ್ಯಂಗ್ಯ ಚಿತ್ರಕಾರರಾದ ವೈ. ಎಸ್. ನಂಜುಂಡಸ್ವಾಮಿಯವರು ಈ ತರಹದ ವಿಭಿನ್ನ ಅದ್ಭುತ ಕಲಾತ್ಮಕ ಕೊಡುಗೆಯನ್ನು ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಲಾಪ್ರಿಯರಿಗೆ ಒದಗಿಸಿದ್ದಾರೆ.

ಬೆಂಗಳೂರಿನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಸಬಾಂಗಣದಲ್ಲಿ ವೈ. ಎಸ್. ನಂಜುಂಡಸ್ವಾಮಿಯವರು ತಾವು ಕುಂಚದಲ್ಲಿ ಅರಳಿಸಿದ ಕನ್ನಡ ಸಾಹಿತಿಗಳ ವಿಶಿಷ್ಟ ವ್ಯಂಗ್ಯ ಚಿತ್ರ ಗಳ ಪ್ರದರ್ಶನವೊಂದನ್ನು ಉಚಿತವಾಗಿ ಏರ್ಪಡಿಸಿದ್ದಾರೆ. ಬಹುಷಃ ಪ್ರದರ್ಶನದಲ್ಲಿ ಇಲ್ಲದಿರುವ ಸಾಹಿತಿಗಳೇ ಇಲ್ಲಾ ಎನ್ನಬಹುದು. ಆಗಿನ ಡಿ. ವಿ. ಗುಂಡಪ್ಪ, ಕುವೆಂಪು, ಅವರಿಂದ ಈಗಿನ ಸಾಹಿತಿಗಳಾದ ಜೋಗಿ, ವಸುದೇಂದ್ರ, ಆಶಾ ರಘು ತನಕ ಎಲ್ಲಾ ಸಾಹಿತಿಗಳ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶನದಲ್ಲಿ ವಿಶಿಷ್ಟವಾಗಿ ಕಾಣಬಹುದಾಗಿದೆ.

ವೈ. ಎಸ್. ನಂಜುಂಡಸ್ವಾಮಿಯವರ ಹಿನ್ನೆಲೆ

ಮೂಲತಃ ಶಿವಮೊಗ್ಗದವರಾದ ಶ್ರೀ ವೈ. ಎಸ್. ನಂಜುಂಡಸ್ವಾಮಿಯವರು ಖ್ಯಾತ ವರ್ಣ ಚಿತ್ರಕಾರರಾದ ವೈ. ಕೆ. ಶ್ರೀಕಂಠಯ್ಯನವರ ಪುತ್ರ. ಕಲಾತ್ಮಕ ಆವರಣದಲ್ಲಿ ಬೆಳೆದ ನಂಜುಂಡಸ್ವಾಮಿಯವರಿಗೆ ಅವರ ತಂದೆಯವರೇ ಮನೆಯ ಮೊದಲ ಗುರು ಎನ್ನಬಹುದು. ಅವರ ಮನೆಗೆ ಬರುತ್ತಿದ್ದವರೆಲ್ಲಾ ಸಂಗೀತ ಹಾಗೂ ಕಲಾಲೋಕದ ದಿಗ್ಗಜರುಗಳೇ ಆಗಿರುತ್ತಿದ್ದರು ಹಾಗಾಗಿ ಸ್ವಾಮಿಯವರಿಗೆ ಬಾಲ್ಯದಲ್ಲಿಯೇ ಚಿತ್ರಕಲೆ ಒಲಿಸಿತು. ಪ್ರಸಿದ್ಧ ಚಿತ್ರಕಲಾವಿದರೂ, ಶಿಲ್ಪಿಗಳೂ ಆದ ಕೆ. ಜ್ಞಾನೇಶ್ವರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಮುಂದಿನ ಕಲಾಭ್ಯಾಸ ನೆಡೆಸಿ ತಮ್ಮ ಐವತ್ತನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಪ್ರಿಂಟ್‍ಮೀಡಿಯಾದಲ್ಲಿ ಕೆಲಸ ಮಾಡುತ್ತಾ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಾವು ರಚಿಸುತ್ತಿದ್ದ ವ್ಯಂಗ್ಯ ಚಿತ್ರಗಳನ್ನು ಹಂಚುತ್ತಾ ಬಂದರು. ಅವುಗಳನ್ನು ಮೊದಲು ಗುರುತಿಸಿದವರು ಮೇಗರವಳ್ಳಿ ಸುಬ್ರಹ್ಮಣ್ಯರವರು ಅನಂತರ ಗುಜ್ಜಾರ್ ಅವರ ನಿಟಕ ಸಂಪರ್ಕವಾಯ್ತು. ಚಿತ್ರ ರಚನೆಯ ಸಮಯದಲ್ಲಿ ಅವರಿಂದ ಕರಾರುವಕ್ಕಾದ ಮಾಹಿತಿಗಳನ್ನು ಸಲಹೆಗಳನ್ನು ಪಡೆಯುತ್ತಾ ತಮ್ಮ ಚಿತ್ರ ರಚನೆಗಳನ್ನು ಮುಂದುವರಿಸಿದರು ಜೊತೆಗೆ ಖ್ಯಾತ ವ್ಯಂಗ್ಯಚಿತ್ರಕಲಾವಿದರಾದ ವಿಆರ್‍ಸಿ ಶೇಖರ್, ಪ್ರಕಾಶ್ ಶೆಟ್ಟಿ, ನಾಗನಾಥ್ ಹಾಗೂ ಇನ್ನೂ ಅನೇಕ ವ್ಯಂಗ್ಯಚಿತ್ರಕಾರರ ಸಂಗದಲ್ಲಿ ತಮ್ಮ ಚಿತ್ರಕಲೆಯಲ್ಲಿ ಪ್ರಬುದ್ಧತೆ ಪಡೆದರು. ಖ್ಯಾತ ಕಲಾವಿದರಾದ ಜೇಮ್ಸ್ ವಾಜ಼್ ಇವರ ಚಿತ್ರಗಳನ್ನು ತರಿಸಿಕೊಂಡು ತಮ್ಮ ತರಂಗ ವಾರಪತ್ರಿಕೆಯಲ್ಲಿ ಪ್ರಕಟಿಸುತ್ತ ಪ್ರೋತ್ಸಾಹವನ್ನು ತೋರಿದರು.

ನಂಜುಂಡ ಸ್ವಾಮಿ ಅವರ ವ್ಯಂಗ್ಯಚಿತ್ರಗಳು ತರಂಗ, ತುಷಾರ, ಉತ್ಥಾನ ಸೇರಿದಂತೆ ಅನೇಕ ನಿಯತಕಾಲಿಕಗಳಲ್ಲಿ ಮೂಡುತ್ತಿರುವುದರ ಜೊತೆ ಜೊತೆಗೆ ಇಂಟರ್ನ್ಯಾಶನಲ್ ಕ್ಯಾರಿಕೇಚರ್ ಆರ್ಟ್ ಕಂಟೆಸ್ಟ್, ಟ್ರೆಡಿಷನಲ್ ಕ್ಯಾರೆಕೇಚರ್ ಆರ್ಟ್ ಕಂಟೆಸ್ಟ್ ಮುಂತಾದ ಪ್ರತಿಷ್ಠಿತ ಸ್ಪರ್ಧಾ ವೇದಿಕೆಗಳಲ್ಲಿಯೂ ಬಹುಮಾನಿತಗೊಂಡಿದೆ. ಪ್ರಸಿದ್ಧ ಕಲಾಪ್ರದರ್ಶನಗಳಲ್ಲಿಯೂ ಅಪಾರ ಕಲಾಭಿಮಾನಗಳನ್ನು ಆಕರ್ಷಿಸಿದೆ.

ನಂಜುಂಡಸ್ವಾಮಿಯವರ ವ್ಯಂಗ್ಯ ಚಿತ್ರಗಳೆಂದರೆ ಅದು ಸರಕಾರದ ಆಡಳಿತಗಳನ್ನು ಕೆಲವೊಮ್ಮೆ ಬೆಚ್ಚಿ ಬೀಳಿಸಿದೆ ಅವುಗಳಲ್ಲಿ ರಸ್ತೆ ಗುಂಡಿಗಳ ಹಾಸ್ಯ ಚಿತ್ರಗಳ ಸರಣಿಯನ್ನು ನೆನೆಯಬಹುದು. ರಸ್ತೆ ಗುಂಡಿಗಳ ವ್ಯಂಗ್ಯ ಚಿತ್ರಗಳು ನೋಡಿದ ತಕ್ಷಣ ನಗು ಬರಿಸಿದರೆ ಆಡಳಿತ ವ್ಯವಸ್ಥೆಗಳ ನಿರ್ಲಕ್ಷವನ್ನು ನಿರ್ಭಿಡೆಯಿಂದ ತೋರುತ್ತಿದ್ದವು.

ಈಗ ಎಲ್ಲಾ ಸಾಹಿತಿಗಳ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶನವನ್ನು ಉಚಿತವಾಗಿ ಏರ್ಪಡಿಸಿ ಕನ್ನಡ ಸಾಹಿತ್ಯಲೋಕಕ್ಕೆ ಕೊಡುಗೆಯನ್ನು ನೀಡಿದ್ದಾರೆ. ದಿನೇ ದಿನೇ ಚಿತ್ರ ಪ್ರದರ್ಶನಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವುದು ಗಮನಾರ್ಹ ವಿಷಯ. ಈ ಪ್ರದರ್ಶನವು ನವೆಂಬರ್ 15 ರವರೆಗೂ ಇರುತ್ತದೆ ನೋಡಿಕೊಂಡು ಬನ್ನಿ.

ಚಿತ್ರ ಪ್ರದರ್ಶನವು ಜನಮನ ಸೆಳೆದು ನಂ ಸ್ವಾಮಿಯವರ ಹೆಸರು ಇನ್ನೂ ಹೆಚ್ಚು ಪ್ರವರ್ತನಕ್ಕೆ ಬರಲಿ ಎಂದು ಸಾಹಿತ್ಯಮೈತ್ರಿ ತಂಡವು ಆಶಿಸುತ್ತದೆ.

ಸಾಹಿತ್ಯಮೈತ್ರಿ ತಂಡ

Related post

Leave a Reply

Your email address will not be published. Required fields are marked *