ಕುಟುಂಬ ಎಂದರೆ ಹೇಗಿರಬೇಕು? ತಾಯಿತಂದೆ ಯರಲ್ಲಿ ಸಾಮರಸ್ಯ, ಮನೆಯಲ್ಲಿರುವ ಹಿರಿಯ ಸದಸ್ಯರಿಗೆ ತೋರುವ ಗೌರವ, ಮಕ್ಕಳ ಬಗ್ಗೆ ಪ್ರೀತಿ, ಅತಿಥಿಯರನ್ನು ಸತ್ಕರಿಸುವ ರೀತಿ ಇತ್ಯಾದಿ ಇತ್ಯಾದಿ…
ಇಂತಹ ಎಷ್ಟೋ ವಿಷಯಗಳನ್ನು ನಮ್ಮ ಪೂರ್ವಿಕರು ಹಾಗು ಹಿರಿಯರು ತಲತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.
ಯಾಕೆ ಪಾಲಿಸಲಾಗಿದೆ ಎಂದು ಕೆಲವನ್ನು ವಿಮರ್ಶಿಸೋಣ
ಸಾಮರಸ್ಯ
ಮನೆಯಲ್ಲಿ ಗಂಡ ಹೆಂಡಿರು ಸಣ್ಣ ಪುಟ್ಟ ವಿರಸಗಳನ್ನು ದೊಡ್ಡ ಸಮಸ್ಯೆಯಾಗಲು ಬಿಡದೆ ಸಮಬಾಳ್ವೆ ನೆಡೆಸಿದರೆ ಸಂಸಾರ ತೂಗಿಕೊಂಡು ಹೋಗುತದ್ದೆ. ಮನೆಯ ಇತರೆ ಸದಸ್ಯರು ಇದರಿಂದಾಗಿ ವಿಚಲಿತರಾಗದೆ ತಮ್ಮ ಪಾಡಿಗೆ ನೆಮ್ಮದಿಯಿಂದ ಇರಬಹುದು. ತಾಯಿಯಾಗಲಿ ತಂದೆಯಾಗಲಿ ಎಂದಿಗೂ ಒಬ್ಬರ ಅನುಪಸ್ಥಿತಿಯಲ್ಲಿ ಇನ್ನೊಬ್ಬರನ್ನು ಮಕ್ಕಳ ಮುಂದೆ ಹಳಿಯಬಾರದು. ತಾಯಿ ತಂದೆಯರ ಬಗ್ಗೆ ಮಕ್ಕಳಲ್ಲಿ ಸಮನಾದ ಗೌರವವಿರುತ್ತದೆ ಅದು ಇದರಿಂದ ಮಕ್ಕಳ ಮುಗ್ದ ಮನಸಿನಲ್ಲಿ ಗೊಂದಲಕೀಡು ಮಾಡಬಹುದು.
ಹಿರಿಯರನ್ನು ಗೌರವಿಸುವುದು
ಮನೆಯಲ್ಲಿನ ವಯಸಾದ ಹಿರಿಯರನ್ನು ಗೌರವಿಸಿ ಪ್ರೀತಿಯಿಂದ ನೋಡಿಕೊಂಡರೆ ಮಕ್ಕಳ ಮನಸಿನಲ್ಲಿ ತಾವು ಕೂಡ ತಮ್ಮ ಹೆತ್ತವರನ್ನು ಮಮತೆಯಿಂದ ಗೌರವದಿಂದ ನೋಡಿಕೊಳ್ಳಬೇಕೆನ್ನುವ ಪರಿಜ್ಞಾನ ಮೂಡುತ್ತದೆ. ತಂದೆ ತಾಯಿಯರು ಹಿರಿಯರಿಗೆ ಸೇವೆ ಮಾಡುವುದ್ದನ್ನು ನೋಡಿ ಮಕ್ಕಳು ದೊಡ್ಡವರ ಸೇವೆ ಮಾಡುವುದ್ದನ್ನು ಕಲಿಯುತ್ತವೆ.
ಆಸಕ್ತಿಕರವಾದ ವಿಷಯಗಳು
ಆದರ್ಶ ಕುಟುಂಬದ ಮತ್ತೊಂದು ಗುಣವೆಂದರೆ ಮಕ್ಕಳಿಗೆ ಒಳ್ಳೆಯ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸುವುದು ಅದು ಸಂಗೀತದಲ್ಲಿ ಭಕ್ತಿಗೀತೆಯಿರಬಹುದು ಅಥವಾ ಒಳ್ಳೆಯ ಪುಸ್ತಕ (ದೇಶಭಕ್ತಿ, ಪರಿಸರ ಪ್ರೀತಿ, ಮಾನವೀಯತೆ ಇತ್ಯಾದಿ) ಓದುವುದು ಅಥವಾ ಕಗ್ಗ ವಾಚನ, ವಚನ ಗಾಯನ ಮಾಡುವುದು ಹೇಳಿಕೊಟ್ಟರೆ ಮಕ್ಕಳು ಚಿಕ್ಕಂದಿನಿಂದಲೇ ಇವುಗಳನ್ನು ರೂಡಿಸಿಕೊಳ್ಳುತ್ತವೆ. ಎಲ್ಲರ ಪ್ರಮುಖ ಆಕರ್ಷಣೆಯಾದ ದೂರದರ್ಶನ ವಿಬ್ಬಿನ್ನ ವಾಹಿನಿಗಳ ಮಿತ ವೀಕ್ಷಣೆ ಹಾಗು ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳಿಂದ ದೂರವಿರಿಸಬೇಕು.
ಮನೆಯಲ್ಲಿನ ಕೆಲಸ ಕಾರ್ಯಗಳು
ಸಣ್ಣ ವಯಸ್ಸಿನಲ್ಲಿಯೇ ಮಕ್ಕಳಿಗೆ ಚಿಕ್ಕ ಪುಟ್ಟ ಕೆಲಸ ಮಾಡಲು ಬಿಡಬೇಕು. ಇದರಿಂದ ಅವರ ಬದುಕಿನಲ್ಲಿ ಸ್ವಲ್ಪ ಮಟ್ಟಿನ ಶಿಸ್ತು ಬರುತ್ತದೆ. ಗಿಡಗಳಿಗೆ ನೀರು ಹಾಕುವುದು ಪರಿಸರ ಪ್ರೀತಿಯ ಬಗ್ಗೆ ಮೊಳಕೆ ಬಂದರೆ, ಕಸ ಗುಡಿಸುವುದು, ಮನೆ ಸಾರಿಸುವುದು ಸ್ವಚ್ಛತೆಯ ಪಾಠವಾಗುತದ್ದೆ.
ಅತಿಥಿ ಸತ್ಕಾರ:
ಮನೆಗೆ ಬರುವ ಅತಿಥಿಗಳನ್ನು ಪ್ರೀತಿ ಆದರಗಳಿಂದ ನೋಡಿಕೊಂಡರೆ ಮಕ್ಕಳು ಹಾಗೆ ಮಾಡುತ್ತಾರೆ. ಹಿರಿಯರು ಬೇರೆಯವರನ್ನು ಹೀನಾಯವಾಗಿ ಕಾಣುವುದಾಗಲೀ ಮಾತಿನಿಂದ ನೋಯಿಸುವುದಾಗಲಿ ಎಂದಿಗೂ ಮಾಡದೆ ಇದ್ದಾರೆ. ಅತಿಥಿದೇವೋಭವ ಎಂಬುವ ವಾಕ್ಯವು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಬೇರೂರುತ್ತದೆ.
ಗುರುಗಳು ಹಾಗು ಸಹ ವಿದ್ಯಾರ್ಥಿಗಳು
ಮನೆಯಲ್ಲಿ ತಂದೆ ತಾಯಿಯರು ತಮ್ಮ ಚಿಕ್ಕಂದಿನ ಗುರುಗಳ ಬಗ್ಗೆ ಬಿಡುವಾಗಿದಾಗ ಗೌರವದಿಂದ ಮಾತನಾಡಿದರೆ ಮುಂದೆ ಮಕ್ಕಳು ತಮ್ಮ ಗುರುಗಳನ್ನು ಗೌರವಿಸುವುದನ್ನು ಕಲಿಯುತ್ತವೆ. ಹಾಗೆ ಸಹ ವಿದ್ಯಾರ್ಥಿಗಳ ಜೊತೆ ಸಹಬಾಳ್ವೆ ಮಾಡುವುದನ್ನು ಬೋಧಿಸಿದರೆ ಮಕ್ಕಳಿಗೆ ಚಿಕ್ಕಂದಿನಿಂದಲೇ ವಿಶ್ವ ಮಾನವ ಪ್ರೀತಿಯನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಮುಂದೆ ಅವು ದ್ವೇಷದ ಜೀವನವನ್ನು ಹತ್ತಿರ ಕೂಡ ಬಿಟ್ಟಿಕೊಳ್ಳುವುದಿಲ್ಲ.
ಉತ್ತಮ ಚಿಂತನೆ
ಕುಟುಂಬದಲ್ಲಿ ಉತ್ತಮ ಚಿಂತನೆ ಯಾವ ಸದಸ್ಯರದ್ದೇ ಆಗಿದ್ದರೂ ಅದಕ್ಕೆ ಪ್ರತಿಸ್ಪಂದಿಸುವ ಮನೋಭಾವ, ಸಹಕಾರ, ನಡವಳಿಕೆ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯನಿಗೂ ಇರಬೇಕು. ತಾಳ್ಮೆ, ಶಾಂತಿ, ಕ್ಷಮಾಗುಣ, ಇತರರನ್ನು ಪ್ರೀತಿಯ ಕಾಣುವುದು, ಸ್ವಾರ್ಥಾಭಿಲಾಷೆಗಾಗಿ ಇತರರ ಮನ ನೋಯಿಸದಿರುವುದು, ಪ್ರತಿಯೊಬ್ಬರ ಅವಶ್ಯಕತೆಗಳನ್ನು ಮನಗೊಂಡು ಅಗತ್ಯಕ್ಕೆ ತಕ್ಕಂತೆ ಪೂರೈಸಲು ಪ್ರಯತ್ನಿಸುವುದು, ಅನಗತ್ಯ ವಾಗ್ದಾಳಿಗಳಿಗೆ ಅವಕಾಶ ನೀಡದೆ ಕೌಟುಂಬಿಕ ಶಾಂತಿಯನ್ನು ಕಾಪಾಡುವುದು ಇವುಗಳು ಬಹು ಮುಖ್ಯ.
ಕುಟುಂಬ ಜೊತೆಗೂಡುವಿಕೆ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಪಾಲ್ಗೊಳ್ಳುವುದು. ಪರಸ್ಪರ ಹೊಂದಾಣಿಕೆ, ಸಹನಾಭಾವನೆ, ಸಹಿಷ್ಣುತೆ, ಶಾಂತಿ ಸಮಾಧಾನಗಳೇ ಆದರ್ಶ ಕುಟುಂಬದ ಮೂಲ ಮಂತ್ರಗಳು. ಕುಟುಂಬದ ಸದಸ್ಯರೆಲ್ಲರೂ ಸಾಧ್ಯವಾದ ಮಟ್ಟಿಗೆ ಒಟ್ಟಿಗೆ ಕುಳಿತು ಮನೆಯಲ್ಲಿಯೇ ತಯಾರಿಸಿದ ಹಿತಮಿತವಾದ ಭೋಜನ ಮಾಡುವುದು, ಸನ್ನಡತೆ, ಸದ್ವಿಚಾರಗಳನ್ನುಕುರಿತು ಚರ್ಚಿಸುವುದು, ಕುಟುಂಬದ ಸದಸ್ಯರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿರುತ್ತದೆ. ಕುಟುಂಬದ ಸದಸ್ಯರೆಲ್ಲರೂ ಸೇರಿ ವರ್ಷಕೊಮ್ಮೆಯಾದರು ಪ್ರವಾಸ ಮಾಡುವುದು ಜ್ಞಾನಾಭಿವೃದ್ದಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕ.
ಕುಮಾರಸ್ವಾಮಿ
ಹಿರಿಯ ಚಿಂತಕರು ಹಾಗು ಲೇಖಕರು