ಎಲ್ಲೋ ಹುಟ್ಟಿದೆವು…
ಇನ್ನೆಲ್ಲೋ ಮೇಯಿದೆವು…
ಮತ್ತೆಲ್ಲೋ ಬೆಳೆದೆವು…
ಹೀಗಿದ್ದ ನಮ್ಮನ್ನ, ನಮ್ಮ ಬಂಧು-ಬಂದವರನ್ನೆಲ್ಲಾ ..
ಹಿಡಿ ಹಿಡಿದು ಲಾರಿಗೆ ತುಂಬಿ
ಸಿಟಿಗೆ ತಂದರು…
ಒಂದೆಡೆ ದೂಡಿ…
ನಮ್ಮ ಬೆನ್ನ ಮೇಲೆಲ್ಲ
ಬಣ್ಣ ಬಣ್ಣದ ಪುಡಿಯ ಹಾಕಿ
ಮೋಡಿಯ ಮಾಡಿ…
ಎಂದೂ ಇಲ್ಲದ..
ಹಸಿ ಹಸಿಯ ಹುಲ್ಲ ಹಾಕಿ
ಬೆನ್ನ ಚಪ್ಪರಿಸಿ…
ಬಂದ ಬಂದವರಿಗೆಲ್ಲ
ನಮ್ಮ ಪುಷ್ಠಿಯ ಪರಿಚಯಿಸಿ..
ಮಾರಾಟ ಮಾಡುವರಲ್ಲ…
ಕೊಂಡವರು ನಮ್ಮ ಕೊಂಡಾಡಿ…
ಎತ್ತಾಡಿ… ಮುದ್ದಾಡಿ…
ಆನಂತರ…
ಕತ್ತಿಯಲ್ಲಿ ಕತ್ತ ಕತ್ತರಿಸಿ…
ತುತ್ತು ಅನ್ನದಿ ಬೆರೆಸಿ
ತಿಂದು ಮುಗಿಸುವರಲ್ಲ!
ನಾವು ಕೆಲರು ‘ದುರ್ಬಲರು…
ನರಪೇತಲರು… ಮಾರಾಟವಾಗಲೇ ಇಲ್ಲ!’
ಎಂದೆಲ್ಲ ಹರ್ಷಿಸುತ್ತಿರೆ…
ಬಡಿಯಿತು ಬರ ಸಿಡಿಲು
ಮನಕೆ ಮನದಾಳಕೆ…
ನಿನ್ನೆಯಷ್ಟೇ ಮಾರಾಟವಾಗಿದ್ದ..
ನಮ್ಮ ಅಣ್ಣ, ಅಮ್ಮ, ಅಪ್ಪ, ದೊಡ್ಡಪ್ಪರಾದಿಯಾಗಿ
ಎಲ್ಲ ಹಿರಿಯರ ತೊಗಲು ಬಂದು ಬೀಳುತ್ತಿವೆ…
ಕುಪ್ಪೆ ಕುಪ್ಪೆಯಾಗಿ…
ತೊಗಲ ಮಾರಾಟಕೆ…
ನೋಡು ನೋಡುತ್ತಿದ್ದಂತೆ ನಮ್ಮ ಕಣ್ಣ ಮುಂದೆಯೇ
ಅವು ಕೂಡ ಮಾರಾಟವಾಯ್ತಲ್ಲ!
ಅಮ್ಮನ ತೊಗಲ ಮೇಲೊಮ್ಮೆ…
ಅಪ್ಪನ ಹೆಗಲ ಮೇಲೊಮ್ಮೆ…
ಒದ್ದಾಡಿ ಬರಲೂ ಆಗಲಿಲ್ಲ…
ಇದ್ದರು….
ನಿನ್ನೆಯವರಿಗೂ ನಮ್ಮೊಂದಿಗೇ..
ಉಜ್ಜಾಡುತ್ತಾ… ಮುದ್ದಾಡುತ್ತಾ…
ಈಗ ನೋಡಲೆಲ್ಲಿ ಅಪ್ಪ, ಅಮ್ಮ, ಒಡ ಹುಟ್ಟಿದವರ, ಬಂಧು-ಬಾಂಧವರ…
ಅವರಿಗೇನು ಒಂದು ಗೋರಿಯೇ, ಸಮಾಧಿಯೇ..
ಹೋಗಿ ಕೂತು, ಅತ್ತು, ಪೂಜಿಸಿ.. ಪ್ರಾರ್ಥಿಸಿ ಬರಲು!
ನಿರ್ಭಾಗ್ಯರು ನಾವು-ನಮ್ಮ ಹಿರಿಯರು!
ಅದಕೇ ನಾವು ನಮಿಪೆವೆವು..
ತಲೆ ಬಾಗುವೆವು ಕಂಡ ಕಂಡವರಿಗೆಲ್ಲ…
ನಮ್ಮ ಕಣ್ಣಿಗೆ ಅವರೆಲ್ಲ ನಡೆದಾಡುವ ಸಮಾಧಿಗಳು!
ಇರುವರಲ್ಲ ನಮ್ಮ ಹಿರಿಯರು ಅವರೊಳಗೆ!
ತುಂಕೂರ್ ಸಂಕೇತ್
1 Comment
Nice