ಕುಲ್ದಾರ್ – ಊರು ಒಂದು ಕಥೆ ನೂರಾರು
“ಕುಲ್ದಾರ್” ಇದು ರಾಜಸ್ಥಾನದಲ್ಲಿನ ಒಂದು ವಿಚಿತ್ರವಾದ ಐತಿಹ್ಯವಿರುವ, ನಂಬಲು ಆಧಾರವಿಲ್ಲದ, ಊರಿಗೂರೇ ಸಂಪೂರ್ಣವಾಗಿ ಮಾಯವಾದ ಒಂದು ಗ್ರಾಮದ ಹೆಸರು. ಗ್ರಾಮದ ಜನರೆಲ್ಲರೂ ಸಂಪೂರ್ಣವಾಗಿ ತೊರೆದಾದ ಮೇಲೆ ವಾಸ್ತವದಲ್ಲಿ ಊರು ಎಂಬ ಪದಕ್ಕೆ ಅರ್ಥವೇ ಇರದಿರುವುದರಿಂದ “ಕುಲ್ದಾರ್” ಮಾಯವಾಯಿತೆಂದೇ ಹೇಳಬಹುದು.
ರಾಜಸ್ಥಾನದಲ್ಲಿನ ಪಾಲಿ ಎಂಬ ಪ್ರದೇಶದ ಜನರು (ಪಾಲಿವಾಲ್ ಬ್ರಾಹ್ಮಣರು) ಈ ಗ್ರಾಮವನ್ನು 13 ನೇ ಶತಮಾನದಲ್ಲಿ ನಿರ್ಮಿಸಿ ಅಲ್ಲಿ ನೆಲೆಸಿದ್ದರೆಂದು ಹೇಳಲಾಗಿದೆ. ಆಗ ಕುಲ್ದಾರ್, ಕೃಷಿಕರು, ವ್ಯಾಪಾರಸ್ಥರು, ಮೇಧಾವಿಗಳು ತುಂಬಿದ್ದ ಗ್ರಾಮವಾಗಿತ್ತೆಂದು, ಕಡಿಮೆ ನೀರಿನ ವಾತಾವರಣದಲ್ಲಿಯೂ ಸಹ ಅಲ್ಲಿನ ಜನರು ತಮ್ಮ ಬುದ್ಧಿಮತ್ತೆಯಿಂದ ಗೋದಿ ಹಾಗು ಜೋಳದ ಬೆಳೆ ಹೆಚ್ಚು ಬೆಳೆದು ಸಂಪದ್ಭರಿತವಾಗಿದ್ದರೆಂದು ನಂಬಲಾಗಿದೆ, ಮತ್ತು ಅಲ್ಲಿನ ಜನರು ತಮ್ಮ ಕರಕುಶಲತೆಯಿಂದ ಮಾಡುತ್ತಿದ್ದ ಅಲಂಕಾರದ ಮಣ್ಣಿನ ಮಡಿಕೆಗಳಿಗೆ ಬಹಳ ಬೇಡಿಕೆಯಿತ್ತಂತೆ.
ಹಾಗಾದರೆ 19 ನೇ ಶತಮಾನದಿಂದಾಚೆ ಇಡೀ ಗ್ರಾಮ ಹಾಗು ಸುತ್ತಲೂ ಇದ್ದ 85 ರಷ್ಟು ಹಳ್ಳಿಗಳ ಜನರು ಮನೆಗಳನ್ನು ತೊರೆದಿದ್ದಾದರೂ ಏಕೆ? ಇಡೀ ಗ್ರಾಮ ಶಾಪಗ್ರಸ್ತವಾಗಿದ್ದು ಈಗ ಅಲ್ಲಿ ಒಂದು ನರಪಿಳ್ಳೆಯೂ ವಾಸಿಸುತ್ತಿಲ್ಲ. ವಿಚಿತ್ರವೆಂದರೆ 19 ನೇ ಶತಮಾನದವರೆಗೂ ಈ ಗ್ರಾಮದ ಬಗ್ಗೆ ಇತಿಹಾಸದಲ್ಲಿ ದಾಖಲಾಗಿದ್ದ ಸಂಗತಿಗಳೇ ಬಹಳ ಕಡಿಮೆ ಅಥವಾ ಇಲ್ಲವೆಂದೇ ಹೇಳಬಹುದು. ಜನರು ಗ್ರಾಮವನ್ನು ತೊರೆದಾದ ಮೇಲೆ ಸಿಗುವ ಸಂಗತಿಗಳೆಂದರೆ ಬರಿ ಭೂತ – ಪ್ರೇತ ಅಥವಾ ಅಂತೆ ಕಂತೆ ಸುದ್ದಿಗಳಷ್ಟೇ.
ಕೆಲವು ಮೂಲದ ಪ್ರಕಾರ ಸಲೀಮ್ ಸಿಂಗ್ ಅಥವಾ ಝಲಿಮ್ ಸಿಂಗ್ ಎಂಬಾತ ಜೈಸಲ್ಮೇರ್ ಪ್ರದೇಶದ ದಿವಾನನಾಗಿದ್ದ. ಆತ ಇಲ್ಲಿನ ಗ್ರಾಮದ ಮುಖ್ಯಸ್ಥರ ಮಗಳ ಚೆಲುವಿಗೆ ಮನಸೋತು ಅವಳನ್ನು ಪಡೆಯಲು ಗ್ರಾಮದ ಜನರಿಗೆ ಇನ್ನಿಲ್ಲದಂತೆ ಬೆಂಬಿದಿದ್ದ. ಅವಳನ್ನು ತನಗೆ ಕೊಟ್ಟು ಮದುವೆ ಮಾಡದಿದ್ದರೆ ಗ್ರಾಮಕ್ಕೆ ತೊಂದರೆ ಕೊಡುವುದಾಗಿ ಎಚ್ಚರಿಸಿದ್ದ. ಇಲ್ಲಿನ ಸ್ವಾಭಿಮಾನವುಳ್ಳ ಜನರು ಇದಕ್ಕೆ ಒಪ್ಪದೇ ರಾತ್ರೋ ರಾತ್ರಿ ವಲಸೆ ಹೋಗಿ ಕುಲ್ದಾರ್ ಗ್ರಾಮವನ್ನೇ ಪಾಳು ಬಿಟ್ಟರು ಎಂಬ ಒಂದು ಕಥೆಯಿದೆ. ರಕ್ಷಾಬಂಧನದ ದಿನದಂದು ಗ್ರಾಮವನ್ನು ತೊರೆದಿದ್ದರಿಂದ ಅಲ್ಲಿಂದ ವಲಸೆ ಬಂದ ಜನರು ಈಗಲೂ ರಕ್ಷಾಬಂಧನ ಹಬ್ಬವನ್ನು ಆಚರಿಸುವುದಿಲ್ಲವೆಂದು ಹೇಳಲಾಗಿದೆ.
ಊರು ತೊರೆದ ಸಮಯದಲ್ಲಿ ಅಲ್ಲಿನ ಜನಸಂಖ್ಯೆ ಸುಮಾರು 1500 ಕ್ಕೂ ಹೆಚ್ಚು ಇತ್ತಂತೆ. ಇಂದು ಕುಲ್ದಾರ್ ಗ್ರಾಮವು ಭಾರತೀಯ ಪುರಾತತ್ವ ಸಮೀಕ್ಷೆಯ ವ್ಯಾಪ್ತಿಗೆ ಒಳಪಟ್ಟಿದೆ. ಅಲ್ಲಿ ವಾಸವಿದ್ದ ಜನರು ತಮ್ಮ ಬುದ್ದಿವಂತಿಕೆಯಿಂದ ಮಳೆ ನೀರು ಸಂಗ್ರಹಣೆಗೆ ವಿಶೇಷ ವ್ಯವಸ್ಥೆಯನ್ನು ಸಹ ಮಾಡಿಕೊಂಡಿದ್ದಕ್ಕೆ ಸಾಕ್ಷಿಯಾಗಿ ಅಲ್ಲಿ ಅನೇಕ ಭಾವಿಗಳನ್ನು ಸಹ ಕಾಣಬಹುದಾಗಿದೆ. ಅಲ್ಲಿನ ಮನೆಗಳನ್ನು ಆಗ ಕಟ್ಟಿರುವುದು ಇಟ್ಟಿಗೆ ಮತ್ತು ಜೇಡಿಮಣ್ಣಿನಿಂದ. ಹೊರಗೆ ಸುಡುವ ವಾತಾವರಣವಿದ್ದರೂ ಸಹ ಇಲ್ಲಿನ ಮನೆಗಳ ಒಳಗೆ ತಂಪಾದ ತಾಪಮಾನವಿದ್ದು ನಮ್ಮ ಪುರಾತನ ವಾಸ್ತು ರಚನೆಯನ್ನು ಇಲ್ಲಿನ ಮನೆಗಳು ಪ್ರತಿನಿಧಿಸುತ್ತವೆ.
ಭೂವಿಜ್ಞಾನ ತಜ್ಞರಾದ ಎ.ಬಿ. ರಾಯ್ ರ ರವರು ಕುಲ್ದಾರ್ ಹಾಗು ಸುತ್ತಮುತ್ತಲಿನ ಗ್ರಾಮದ ಈ ಅವಸ್ಥೆಗೆ ಬಹಳ ಹಿಂದೆ ಸಂಭವಿಸಿರಬಹುದಾದ ಭೂಕಂಪವೇ ಕಾರಣ ಎಂದು ಕರೆಂಟ್ ಸೈನ್ಸ್ ಪತ್ರಿಕೆಯ ಲೇಖನದಲ್ಲಿ ಬೆಳಕು ಚೆಲ್ಲಿದ್ದಾರೆ ( ಕೆಳಗೆ ಕೊಟ್ಟಿರುವ ಲಿಂಕ್ ಉಪಯೋಗಿಸಿ ಲೇಖನ ಓದಬಹುದು). ಶತಮಾನಗಳ ಹಿಂದೆ ಸಂಭವಿಸಿರುವ ಭೂಕಂಪನಗಳಿಗೆ ಆಧುನಿಕ ಉಪಕರಣಗಳಿಂದ ನಿಖರವಾದ ಸಾಕ್ಷಿ ಒದಗಿಸುವುದು ಕಷ್ಟದ ವಿಷಯ ಆದರೆ ಅಲ್ಲಿ ಉಳಿದಿರುವ ಅವಶೇಷಗಳಿಂದ ಈ ಗ್ರಾಮದ ಅವಸ್ಥೆಗೆ ಭೂಕಂಪನವೇ ಪ್ರಭಲವಾದ ಕಾರಣ ಎಂದು ಲೇಖನದಲ್ಲಿ ಹೇಳಿದ್ದಾರೆ.
ಇಲ್ಲಿನ ಗ್ರಾಮದ ಪ್ರದೇಶಗಳಿಗೆ ಪ್ರವಾಸಿಗರು ಹಾಗು ಅನ್ವೇಷಿಗರು ಭೇಟಿ ಮಾಡಬಹುದಾಗಿದ್ದು ಸಂಜೆ 6 ರ ಮೇಲೆ ಪ್ರವೇಶ ನಿಷಿದ್ಧ ಹಾಗು ಕತ್ತಲಾಗುವುದರೊಳಗೆ ಆಚೆ ಬಂದು ಬಿಡಬೇಕೆಂಬ ಕಠಿಣವಾದ ಷರತ್ತು ಇದೆ. ಇಲ್ಲಿನ ಸುತ್ತಮುತ್ತಲಿನ ಸ್ಥಳೀಯರ ಪ್ರಕಾರ ದಿವಾನ್ ಸಲೀಮ್ ಸಿಂಗ್ ಕೋಟಲೆಯನ್ನು ತಾಳಲಾಗದೆ ಅಲ್ಲಿನ ಜನರು ಬಹಳ ಬೇಸರದಿಂದ ವಲಸೆ ಹೋಗುವ ಮುನ್ನ ಇಲ್ಲಿ ತಮ್ಮ ನಂತರ ಯಾರು ವಾಸ ಮಾಡಬಾರದು ಎಂದು ಶಾಪವನ್ನಾಕಿ ಹೋಗಿರುವವರೆಂದು ಅಭಿಪ್ರಾಯಪಡುತ್ತಾರೆ. ಇಲ್ಲಿ ವಾಸ ಮಾಡಲು ಬಂದ ಎಷ್ಟೋ ಜನರಿಗೆ ಭೂತ ಪ್ರೇತಗಳ ಇರುವಿಕೆಯ ಅನುಭವವಾಗಿರುವುದೆಂದು ರಾತ್ರಿಯ ವೇಳೆ ಇಲ್ಲಿ ವಿಕಾರ ಸ್ವರದಲ್ಲಿ ಕೂಗುವಿಕೆ ಅರುಚುವಿಕೆ ಕೇಳುವುದೆಂದು ಅಭಿಪ್ರಾಯಪಡುತ್ತಾರೆ. ಆದರೆ ವಾಸ್ತವವಾಗಿ ರಾಜಸ್ಥಾನ ಸರ್ಕಾರ ಹಿಂದೆ ಇಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಅನುಮತಿಯನ್ನು ಕೊಟ್ಟಿತ್ತು. ನಮ್ಮ ಪ್ರತಿಭಾನ್ವಿತ ಸಿನೆಮಾ ತಂಡಗಳು ಅಲ್ಲಿನ ಪರಿಸರವನ್ನು ತಾಲಿಬಾನ್ ಪ್ರದೇಶ ಎಂದೆಲ್ಲ ತೋರಿಸಿ ಅಲ್ಲಿನ ಮನೆಗಳಿಗೆ ಚಿತ್ರ ವಿಚಿತ್ರವಾದ ಬಣ್ಣಗಳನ್ನು ಕೊಟ್ಟು ಸಾಧ್ಯವಾದಷ್ಟು ಇನ್ನಿಲದಂತೆ ಹಾಳು ಮಾಡಿ ಪುರಾತನ ಅವಶೇಷಗಳಿಗೆ ಮಾರಕ ತಂದಿದ್ದರು ಆದರಿಂದ ಅಲ್ಲಿನ ಸರಕಾರವು ಚಿತ್ರೀಕರಣ ತಂಡಗಳಿಗೆ ದಂಡ ವಿಧಿಸಿ ಅನುಮತಿಯನ್ನು ಹಿಂದೆ ತಗೆದುಕೊಂಡಿದೆ.
ಕುಲ್ದಾರ್ ಗ್ರಾಮದ ಈ ಅವಸ್ಥೆ ರಾಜಸ್ಥಾನ ಸರಕಾರಕ್ಕೆ ಪ್ರವಾಸೋದ್ಯಮದ ಮೂಲಕ ಒಳ್ಳೆಯ ಆದಾಯ ತರುತ್ತಿದ್ದು ಆದರಿಂದ ಇಲ್ಲಿನ ಅವಸ್ಥೆಗೆ ನಿಜವಾದ ಕಾರಣ ಹುಡುಕುವುದು ಅಲ್ಲಿನ ಸರಕಾರಕ್ಕೂ ಬೇಡವಾಗಿದೆ ಎಂಬ ಮಾತು ಸಹ ಇದೆ.