ಕೂಡು-ಕುಟುಂಬ

ನಮ್ಮ ಮನೆಯ ಕೆಳ ಪಾರ್ಶ್ವದಲ್ಲಿ ನನ್ನ ಸ್ನೇಹಿತನ ಕುಟುಂಬ ವಾಸವಾಗಿತ್ತು. ಆತನ ತಂದೆಗೆ ಇವನು ಸೇರಿ ಒಟ್ಟು ಏಳು ಮಕ್ಕಳು. ತಂದೆ ತೀರಿಕೊಂಡ್ದಿದರು. ಆರು ಗಂಡು ಮಕ್ಕಳು ಕೊನೆಯವಳು ಹೆಣ್ಣು. ಮೊದಲನೆಯ ಇಬ್ಬರಿಗೆ  ಮದುವೆಯಾಗಿತ್ತು. ಮೊದಲನೆಯವರಿಗೆ ಇಬ್ಬರು ಪುಟ್ಟ  ಹೆಣ್ಣು ಮಕ್ಕಳು. ವಯಸ್ಸಾದ ಅಜ್ಜ-ಅಜ್ಜಿ, ಸ್ನೇಹಿತನ ತಾಯಿ, ಆರು ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು, ಇಬ್ಬರು ಸೊಸೆಯಂದಿರು,ಇಬ್ಬರು ಪುಟಾಣಿಗಳು ಒಟ್ಟು ಹದಿನಾಲ್ಕು ಮಂದಿಯ ಅವಿಭಕ್ತ ಕುಟುಂಬ. ನನ್ನ ಸ್ನೇಹಿತ ಬೆಳಿಗ್ಗೆ ಆರಕ್ಕೆ ಹಲ್ಲುಜ್ಜಿ ಮುಖ ತೊಳೆದು ಕಾಲೇಜಿಗೆ ಹೊರಟರೆ ಅವನ ಸ್ನಾನವೇನಿದ್ದರೂ ಮಧ್ಯಾಹ್ನ ಒಂದರ ನಂತರವೇ.

ಮನೆಯ ಮೇಲಿನ ಹೊಗೆಗೂಡು ಆರರಿಂದ ಹತ್ತರವರೆಗೂ ಹೊಗೆ ಕಾರುತ್ತಲೇ ಇರುತಿತ್ತು. ಭಾನುವಾರದ ರಜೆಯಲ್ಲಿ ಇನ್ನೂ ಇತರೆ  ಕುಟುಂಬದ ನೆಂಟರ ಆಗಮನ, ಒಟ್ಟಿನಲ್ಲಿ ಮನೆಯು ಸದಾ ಮಕ್ಕಳ ನಗು, ಗಲಾಟೆ, ಹಿರಿಯರ ಗದರುವಿಕೆ, ಹೆಣ್ಣು ಮಕ್ಕಳ ಪಾಕ ವ್ಯವಿಧ್ಯತೆಯಿಂದ ತುಂಬಿರುತ್ತಿತ್ತು. ಅವರೆಲ್ಲಾ ಪ್ರವಾಸಕ್ಕೆ ಹೊರಟರೆ ನನ್ನನು ಕೂಡ ಕರೆದೊಯುತ್ತಿದರು. ಮನೆಯು ಅಷ್ಟೂ ಜನಕ್ಕೆ ಚಿಕ್ಕದಾಗಿದುದ್ದರಿಂದ ಮಳೆಗಾಲದ ಹೊರತು ಹೆಣ್ಣು ಮಕ್ಕಳ ಹಾಗೂ ಅಜ್ಜನ ಹೊರತು ಎಲ್ಲರೂ ಮಲಗುತ್ತಿದುದ್ದು ಮನೆಯ ಮಾಳಿಗೆಯ ಮೇಲೆಯೇ. ಅವರ ಕುಟುಂಬದಲ್ಲಿ ಸುಖ ದುಃಖಗಳು ಸಮಾನವಾಗಿದ್ದವು. ಅಜ್ಜ ನಮ್ಮ ಮನೆಯಲ್ಲಿರುವಾಗಲೇ ತೀರಿಹೋದರೆ, ಎರಡನೇ ಅಣ್ಣನಿಗೆ ಆ ಅವಧಿಯಲ್ಲಿಯೇ ಗಂಡು ಮಗುವಾಯಿತು ಹಾಗೂ ಸದಸ್ಯರ ಸಂಖ್ಯೆ ಹಾಗೆ ಉಳಿಯಿತು. ಮೂರು ವರ್ಷಗಳ ನಂತರ ಮನೆ ಭೋಗ್ಯದ ಅವಧಿ ಮುಗಿದಿದ್ದರಿಂದ ಸ್ನೇಹಿತನ ಆ ಅವಿಭಕ್ತ ಕುಟುಂಬ ಬೇರೆ ಮನೆ ಹುಡುಕಿಕೊಂಡಿತು. ಆ ನಂತರ ಕೊನೆಯ ಹೆಣ್ಣುಮಗಳ ಮದುವೆಯಾಗಿ  ಕೇವಲ ಆರು ತಿಂಗಳ ಅವಧಿಯಲ್ಲಿ ಮನೆಯ ಸದಸ್ಯರೆಲ್ಲರೂ ಪಾಲಾದರು. ಅಜ್ಜಿ ಎರಡನೇ ಮೊಮ್ಮಗನ ಜೊತೆ, ತಾಯಿ ಕೊನೆಯ ಮಗನ ಜೊತೆ ಮೂರು ಸಹೋದರರು ಮದುವೆಯಾಗಿ  ಎಲ್ಲರು ಬೇರೆಯಾದರು. ಕುಟುಂಬ ಪಾಲಾದರು ಸಹ ಈಗಲೂ ತಿಂಗಳಿಗೊಮ್ಮೆಯೋ, ಹಬ್ಬ ಹರಿದಿನಗಳಲ್ಲಿ ಒಂದಾಗುತ್ತಾ ಆ ಅವಿಭಕ್ತ ಕುಟುಂಬವು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ವರ್ಷಕ್ಕೊಮ್ಮೆ ಕ್ರಿಕೆಟ್ ಟೂರ್ನಿಯನ್ನು ಕೂಡ ಆಯೋಜಿಸುತ್ತಾರೆ.

ಸುಂದರಕುಪ್ಪೆಯ ತುಂಬು ಸಂಸಾರ

ರಕ್ತಸಂಬಂಧ,ಹೊಂದಾಣಿಕೆ ಅಥವಾ ಸಹವಾಸದಿಂದ ಒಟ್ಟಾಗಿರುವ ಮಾನವರ ಗುಂಪು “ಕುಟುಂಬ” ಎಂದು ಕರೆಯಲ್ಪಡುತ್ತದೆ. ಕುಟುಂಬ ಸಮಾಜದ ಬಹುಮುಖ್ಯ ಅಂಗವಾದರಿಂದ ಸದಸ್ಯರೆಲ್ಲರೂ ಪರಸ್ಪರ ಬೆರೆತು ಸಾಮಾಜಿಕವಾಗಿ ಸಮರ್ಥರಾಗುತ್ತಾರೆ. ಗ್ರಾಮೀಣ ಹಿನ್ನಲೆಯಲ್ಲಿ ಕೂಡು ಕುಟುಂಬಗಳು ಭಾರತಾದ್ಯಂತ ಎಲ್ಲೆಡೆಯಲ್ಲಿಯೂ ಒಂದೇ ಸೂರಿನಲ್ಲಿ ವಾಸಿಸುತ್ತಿದ್ದು ಈಗ ಅತೀ ವಿರಳ. ಆದರೆ ಕುಣಿಗಲ್ ತಾಲ್ಲೂಕಿನ “ಸುಂದರಕುಪ್ಪೆ” ಎಂಬ ಊರಿನಲ್ಲಿ ಒಂದು ಕುಟುಂಬ ಇದೆ, ಆ ಅವಿಭಕ್ತ ಕುಟುಂಬದ ಸಂಖ್ಯೆ ಬರೋಬರಿ ನೂರ ಐವತ್ತು. ಈ ಕುಟುಂಬಕ್ಕೆ ನಾನೂರು ವರ್ಷದ ಹಿನ್ನಲೆಯಿದೆ. ಶ್ರೀ ಗುಂಡೇಗೌಡ ಎಂಬುವವರು ತನ್ನ ಏಳನೇ ತಲೆಮಾರಿನಲ್ಲಿ ಮಕ್ಕಳ್ಳಿಲದೆ ವೀರಣ್ಣಗೌಡ ಎಂಬುವವರನ್ನು ದತ್ತು ತಗೆದುಕೊಳ್ಳುತ್ತಾರೆ, ಆನಂತರ ವೀರಣ್ಣಗೌಡರಿಗೆ ಹುಟ್ಟಿದ ಮಕ್ಕಳಿಂದ ಪ್ರಾರಂಭವಾದ ಪೀಳಿಗೆ ಈಗ ನೂರೈವತ್ತು ಕುಟುಂಬದ ಸದಸ್ಯರನ್ನು ಹೊಂದಿದೆ. ಪ್ರಸ್ತುತ  ಶ್ರೀ ರಾಜಶೇಖರ್ ಈ ಅಗಾಧ ಕುಟುಂಬದ ಮೇಲ್ವಿಚಾರಣೆಯ ಹೊಣೆಯನ್ನು ಹೊತ್ತಿದ್ದಾರೆ. ಈ ಕುಟುಂಬದಲ್ಲಿ ಹಲವಾರು ವೈದ್ಯರು, ಇಂಜಿನಿಯರ್, ಹಾಗೂ ಹಲವಾರು ಪದವೀಧರರಿದ್ದು ಸದಸ್ಯರು ವಿವಿಧ ನಗರಗಳಲ್ಲಿ ಉದ್ಯೋಗ ನಿಮಿತ್ತ ವಾಸಿಸುತ್ತಿದು ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಒಂದಾಗುತ್ತಾರೆ. ಈ ಕುಟುಂಬದ ವಿಶೇಷತೆ ಎಂದರೆ ಇದುವರೆಗೂ ಆಸ್ತಿ ಪಾಲಾಗದಿರುವುದು ಹಾಗೂ ಯಾವುದೇ ವ್ಯಾಜ್ಯವಿರಲಿ ಪೊಲೀಸ್  ಠಾಣೆಯ ಮೆಟ್ಟಲೇರದಿರುವುದು.

ನಮ್ಮ ಕುಟುಂಬದಲ್ಲೇ ನಮ್ಮ ಚಿಕ್ಕಮನ ಮಗಳನ್ನು ಮೈಸೂರು ಹತ್ತಿರ ಪಾಂಡುಪುರ ಎಂಬ ಊರಿಗೆ ವಿವಾಹ ಮಾಡಿಕೊಟ್ಟಿದ್ದು ಆ ಕುಟುಂಬ ಸುಮಾರು ಇಪ್ಪತೈದು ಸದಸ್ಯರನ್ನು ಒಳಗೊಂಡ ಅವಿಭಕ್ತ ಕುಟುಂಬವಾಗಿದೆ. ಆ ಕುಟುಂಬದಲ್ಲಿ ಎಲ್ಲಾ ನಿರ್ಧಾರ ಹಿರಿಯ ಸದಸ್ಯರೇ ನಿರ್ಧರಿಸುತ್ತಾರೆ. ಅವರ ಮನೆಯಲ್ಲಿ ಮಿಕ್ಸಿ, ಗ್ರೈಂಡರ್ ಇದ್ದರು ಎಲ್ಲಾ ಹೆಂಗಸರು ಹೊಳಕಲ್ಲಿನಲ್ಲಿಯೇ ರುಬ್ಬುವುದು, ಮೋಟಾರ್ ಇದ್ದರು ಬಾವಿಯಲ್ಲಿನ ನೀರನ್ನು ರಾಟೆ ಮೂಲಕ ಸೇದಿಯೇ ಮೇಲಕ್ಕೆತ್ತುವುದು. ಇದು ಆ ಮನೆಯ ಹಿರಿಯ ವೃದ್ಧ ಯಜಮಾನ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವ ನಿಯಮಗಳು. ಆ ಮನೆಗೆ ಯಾವಾಗ ಹೋದರು ತುಂಬಿದ ವಾತಾವರಣದಿಂದ ಹಬ್ಬದ ಕಳೆ ಇರುವುದು.

ಕೂಡು ಕುಟುಂಬದಲ್ಲಿ ವಾಸಿಸುವುದರಿಂದ ಅನೇಕ ಪ್ರಯೋಜನಗಳಿವೆ. ಮೊದಲನೆಯದಾಗಿ ಒಗ್ಗಟ್ಟು, ಪ್ರಬುದ್ಧ ಏಕಮುಖ ನಿರ್ಧಾರ, ಸಂಸ್ಕಾರ, ಮಕ್ಕಳ ಸ್ಪರ್ದಾತ್ಮಕ ಬೆಳವಣಿಗೆ, ಕಷ್ಟಗಳಲ್ಲಿ ಪರಸ್ಪರ ನೆರವು ಇನ್ನು ಅನೇಕ. ಅನುಕೂಲಗಳ ಪಟ್ಟಿಯನ್ನು ನೋಡಿದರೆ ಅನಾನುಕೂಲಗಳು ತುಂಬಾ ಚಿಕ್ಕವು.

ಮಕ್ಕಳನ್ನೇ ತೆಗೆದುಕೊಳ್ಳಿ ವಿಭಕ್ತ ಕುಟುಂಬದಲ್ಲಿ ಅದೂ ಈ ಸಾಫ್ಟ್ ವೆರ್ ಪ್ರಪಂಚದಲ್ಲಿ ಒಬ್ಬಂಟಿ ಕೀಳರಿಮೆಯಿಂದ ಬೆಳೆಯುವುದೇ ಹೆಚ್ಚು ಹಾಗೂ ಮಕ್ಕಳಲ್ಲಿ ಸ್ಪರ್ದಾತ್ಮಕ ಮನೋಬಾವ ತುಂಬಾ ಕಡಿಮೆ ಇರುತದ್ದೇ. ತಾತ, ಅಜ್ಜಿ, ದೊಡ್ಡಪ್ಪ – ಚಿಕ್ಕಪ್ಪ,ಅಣ್ಣ ತಮ್ಮಂದಿರ ಮದ್ಯೆ ಬೆಳೆಯುವ ಮಕ್ಕಳು ಸಮಾಜಕ್ಕೆ ಸಮರ್ಥರಾಗಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಾರೆ. ದೊಡ್ಡವರಲ್ಲಿ ಯಾರದರೊಬ್ಬರು ಆರ್ಥಿಕವಾಗಿ ಕುಸಿದರೆ ಮಿಕ್ಕೆಲ್ಲಾ ಸದಸ್ಯರು ಮೇಲೆತ್ತುತ್ತಾರೆ. ಈ ಮನೋಬಾವ ಈಗಲೂ ಸೇಟು ಹಾಗೂ ಮಾರ್ವಾಡಿ ಕುಟುಂಬದಲ್ಲಿ ಕಾಣಬಹುದು. ಕೇಂದ್ರ ಸರಕಾರದ ಆದಾಯ ತೆರಿಗೆ ಕಾಯ್ದೆಯಲ್ಲಿ ಹಿಂದೂ ಅವಿಭಾಜ್ಯ ಕುಟುಂಬದಡಿಯಲ್ಲಿ (HUF) ತೆರಿಗೆ ವಿನಾಯಿತಿಯು ಈಗಲೂ ಇದೆ.

 ಹಳ್ಳಿ- ನಗರಗಳಲ್ಲಿನ ಅವಿಭಕ್ತ ಕುಟುಂಬಗಳ ಮದ್ಯೆ ಇರುವ ಗೋಡೆಯನ್ನು ಮನುಷ್ಯ ತನ್ನ ಅಹಂವಿಕೆಯನ್ನು ತೊರೆದು ಹೊಡೆದುಹಾಕಿ “ವಸುದೈವ ಕುಟುಂಬಂ” ಎಂದು  ಪರಮಾತ್ಮನ ಕೃಪೆಯಲ್ಲಿ ಬಾಳಿದರೆ ಎಷ್ಟು ಚೆನ್ನ.

ಕು ಶಿ ಚಂದ್ರಶೇಖರ್

ಚಿತ್ರಗಳ ಕೃಪೆ : ಕೆ ಪಿ ಕುಮಾರ್ ಹಾಗು ನಿಕಿತಾ ಮತ್ತು https://www.sentinelassam.com

Related post

Leave a Reply

Your email address will not be published. Required fields are marked *