ಕೆಂಪು ಬಸ್ಸಿನ ನೀಲಿ ಸೀಟು ಮತ್ತು ಹಸಿರು ಸೀರೆಯ ಹುಡುಗಿ

ಕೆಂಪು ಬಸ್ಸಿನ ನೀಲಿ ಸೀಟು ಮತ್ತು ಹಸಿರು ಸೀರೆಯ ಹುಡುಗಿ

ವಿಜಯದಶಮಿ ಹಬ್ಬದ ಮಾರನೆಯ ದಿನ. ಹಳ್ಳಿಯಿಂದ ಬೆಂಗಳೂರಿಗೆ ಹೊರಡಲು ಒಂದಷ್ಟು ಜನ ಕೆಂಪು ಬಸ್ಸಿಗಾಗಿ ಕಾಯುತ್ತಿದ್ದರು. ಹಾಗೆ ಕಾಯುತ್ತಿದ್ದವರಲ್ಲಿ ನಾನೂ ಒಬ್ಬ. ಒಂದು ಗಂಟೆಯ ಮುಂಚೆಯೇ ನಾನು ನಿಲ್ದಾಣಕ್ಕೆ ಬಂದಿದ್ದರೂ ಕೂಡ, ಬರಬೇಕಿದ್ದ ಬಸ್ ಬರದೆ ಇನ್ನೊಂದು ಬಸ್ಸಿಗಾಗಿ ಕಾದು ಕೂತಿದ್ದೆ. ಬಸ್ ಬಂದ ತಕ್ಷಣ ಅದುವರೆಗೂ ನನ್ನ ಕಣ್ಣಿಗೆ ಬೀಳದ ಹಸಿರು ಸೀರೆ ಉಟ್ಟ ಹುಡುಗಿಯೊಬ್ಬಳು ನನ್ನ ಕಣ್ಮುಂದೆ ರಪ್ ಅಂತ ಓಡಿಹೋಗಿ ಬಸ್ಸಿನ ಕೊನೆ ಸೀಟಿನಲ್ಲಿ ಕೂತುಕೊಂಡಳು. ಕಣ್ಮುಚ್ಚಿ ಬಿಡುವಷ್ಟರಲ್ಲಿ ಇಡೀ ಬಸ್ಸಿನ ಸೀಟುಗಳೆಲ್ಲ ತುಂಬಿಹೋದವು. ಹುಡುಗಿಯ ಪಕ್ಕದ ಸೀಟು ಮಾತ್ರ ಖಾಲಿ ಇತ್ತು. ಆದರೆ ಆ ಸೀಟಿಗೆ ಕರ್ಚೀಪು ಬಿದ್ದಿದ್ದನ್ನು ನೋಡಿ ಆ ಸೀಟಿನ ಸಹವಾಸಕ್ಕೆ ಹೋಗದೆ, ಭರ್ತಿಯಾಗಿದ್ದ ಸೀಟುಗಳ ಗೋಡೆಯನ್ನೊರಗಿ ನಿಂತೆ. ಒಂದು ಕೈಯಲ್ಲಿ ಪುಸ್ತಕ, ಇನ್ನೊಂದು ಕೈಯಲ್ಲಿ ಮೊಬೈಲು. ನನ್ನನ್ನು ಮಾತಿಗೆಳೆದು ತಿವಿಯುವ ಆಸಕ್ತಿ ಅಲ್ಲಿ ಒಬ್ಬರಿಗೂ ಇರಲಿಲ್ಲ. ಯಾಕೆಂದರೆ ನನ್ನ ಊರಿಗೆ ನಾನೇ ನೆಂಟನಾಗಿದ್ದೆ. ರಾತ್ರಿ ಊರಿಗೆ ಹೋಗಿ ಬೆಳಗ್ಗೆ ವಾಪಾಸ್ಸು ಬಂದುಬಿಡುತ್ತಿದ್ದ ನನ್ನನ್ನು ನನ್ನೂರಿನಲ್ಲಿ ನೋಡಿದವರೇ ಕಮ್ಮಿ. ಹಾಗಾಗಿ ಎಲ್ಲರ ಕಣ್ಣಿಗೆ ನಾನು ಎಲೆಮರೆಕಾಯಿ.

ಜನಗಳಿಂದ ತುಂಬಿದ ಬಸ್ಸು ಮಾತುಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಮುಂದಿನ ಊರಿನಲ್ಲಿ ಒಬ್ಬ ಅಜ್ಜ ಬಸ್ ಹತ್ತಿಕೊಂಡ. ಸೀಟಿಗಾಗಿ ಹುಡುಕಾಡಿ ಹಸಿರು ತೊಡುಗೆಯ ಹುಡುಗಿ ಬಳಿ ಹೋದ.
“ಯಾರಾದ್ರು ಬರ್ತಾರೇನವ್ವಾ?”
“ಹೂ.. ತಾತ. ನೆಕ್ಸ್ಟ್ ಸ್ಟಾಪಲ್ಲಿ ನನ್ ಫ್ರೆಂಡ್ ಹತ್ಕೋತಾರೆ. ನಾನಾಗ್ಲೆ ಈ ಸೀಟಿಗೂ ಟಿಕೆಟ್ ತಕೊಂಡಿದೀನಿ..” ಎನ್ನುತ್ತಾ ಚೀಟಿ ತೋರಿಸಿದಳು.
“ಅಲ್ಲಿವರೆಗೂ ಕೂತ್ಕೋತೀನಿ ಕರ್ಚೀಪು ತಕ್ಕಳವ” ವಿನಯದಿಂದಲೇ ತಾತ ಕೇಳಿಕೊಂಡ. ಇರಿಟೇಟ್ ಆದರೂ ತೋರಿಸಿಕೊಳ್ಳದೆ, ಆ ಹುಡ್ಗಿ ಕರ್ಚೀಪು ತೆಗೆದುಕೊಂಡಳು. ತಾತನಿಗೆ ಸೀಟು ಸಿಕ್ಕಿತು. ನನಗೇನೋ ಒಂದು ರೀತಿಯ ಸಮಾಧಾನ. ನನ್ನ ಪಾಡಿಗೆ ನಾನು ಪುಸ್ತಕ ಓದುತ್ತಾ, ಆಗಾಗ ಮೊಬೈಲ್ ನೋಡುತ್ತಾ ನಿಂತಿದ್ದೆ.

“ಏನಯ್ಯಾ ಮಾಡಾವ್ನೆ ಆ ನಿಮ್ ಮೋದಿ? ಸುಮ್ನೆ ಮೈಕ್ ಮುಂದೆ ಅಷ್ಟೇ ಅವ್ನ್ ಪೌರುಸ” ಬಸ್ಸಿನಲ್ಲಿರುವವರಿಗೆಲ್ಲಾ ಕೇಳಿಸುವಂತೆ ತಾತ ಜೋರಾಗಿ ಕೂಗಿದ್ದ. ಪುಸ್ತಕ ಓದುತ್ತಾ ಮೈಮರೆತಿದ್ದರಿಂದ ಈ ರಾಜಕಾರಣದ ಪರ ವಿರೋಧ ಚರ್ಚೆಗಳು ಯಾವಾಗ ಪ್ರಾರಂಭವಾದವು ಅಂತ ನನಗೆ ಸರಿಯಾಗಿ ತಿಳಿಯಲಿಲ್ಲ. ಹುಡ್ಗಿ ಪಕ್ಕ ಕೂತಿದ್ದ ತಾತ, ಇನ್ನೊಂದು ಬದಿಯಲ್ಲಿ ಕೂತಿದ್ದ ಒಬ್ಬ ಅಂಕಲ್ ವಯಸ್ಸಿನವನ ಜೊತೆ ಮಾತಿಗೆ ಬಿದ್ದಿದ್ದ.
“ಹೋ.. ಹಂಗಾದ್ರೆ 70 ವರ್ಷದಿಂದ ಗಾಂಧಿ ವಂಶದವರು ಏನ್ ಮಾಡಾವ್ರೆ ತೋರ್ಸು ತಾತ? ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿರೋದು ನಿಂಗ್ ಗೊತ್ತಿಲ್ವಾ? ನಮ್ ಆರ್ಮಿ ಅಷ್ಟು ಸ್ಟ್ರಾಂಗ್ ಆಗಿದೆ..” ಅಂಕಲ್ ಕೂಡ ರೊಚ್ಚಿಗೆದ್ದು ಮಾತುಗಳನ್ನು ಬೀಸಿದರು.
“ಲೇ ಹುಚ್ಚಾ.. ಆರ್ಮಿ ಕಟ್ಟಿದ್ದೇ ಕಾಂಗ್ರೆಸ್ ಸರ್ಕಾರ ಕಣೋ..” ತಾತ ನಗುತ್ತಾ ಹೇಳಿದ್ದ. ಕಂಡಕ್ಟರ್ ಏನೂ ತಿಳಿಯದವನಂತೆ ಇಬ್ಬರ ಮಾತಿನ ಜಗಳವನ್ನು ಉತ್ಸಾಹದಿಂದ ನೋಡುತ್ತಾ ಮುಂದಿನ ನಿಲ್ದಾಣ ಬಂದರೂ ಸೀಟಿ ಊದದೆ ಮೈಮರೆತಿದ್ದ. ಮೂರು ಸೀಟುಗಳಿರುವ ಕಡೆ ಅಂಕಲ್ ಗ್ಲಾಸಿನ ಪಕ್ಕದ ಸೀಟಿನಲ್ಲಿ ಕೂತಿದ್ದರು. ಅವರ ಪಕ್ಕ ಹಸಿರು ತೊಟ್ಟ ಹುಡುಗಿ ಮತ್ತು ಅವಳ ಪಕ್ಕ ತಾತ ಕೂತಿದ್ದ. ಇಬ್ಬರ ಮಧ್ಯದಲ್ಲಿ ಕೂತಿದ್ದ ಹುಡುಗಿ, ಅವರಿಬ್ಬರ ಮಾತುಗಳ ಭರಾಟೆಯಲ್ಲಿ ಅವರ ಬಾಯಿಂದ ಚಿಮ್ಮುತ್ತಿದ್ದ ಎಂಜಿಲು ಗುಳ್ಳೆಗಳನ್ನು ಒರೆಸಿಕೊಳ್ಳಲು ಕರ್ಚೀಪನ್ನು ಮುಖದ ಸಮೀಪವೇ ಹಿಡಿಕೊಂಡು ಕೂತಿದ್ದಳು.

ಒಂದು ಕಡೆ ಬಸ್ ನಿಂತಿತು. ತಾತ ಹಾಗೂ ಅಂಕಲ್ ಇಬ್ಬರೂ ಸೌತೇಕಾಯಿ ತಿನ್ನುತ್ತಿದ್ದರು. ಈ ಬಾರಿ ನಾನು ಮೊಬೈಲಿನಲ್ಲಿ ಮುಳುಗಿದ್ದರಿಂದ ಇಬ್ಬರಲ್ಲಿ ಯಾರು ಸೋತಿರಬಹುದೆಂಬ ಅಂದಾಜು ನನಗೆ ಸಿಗಲಿಲ್ಲ. ಒಬ್ಬ ಹುಡುಗ ಬಸ್ ಹತ್ತಿಕೊಂಡ ಸೀದ ಹುಡುಗಿಯ ಹತ್ತಿರ ಹೋಗಿ ನಿಂತ.
“ತಾತ ನನ್ ಫ್ರೆಂಡ್ ಬಂದ್ರು ಜಾಗ ಬಿಡಿ” ಅಂತ ಹುಡುಗಿ ತಾತನಲ್ಲಿ ಕೇಳಿಕೊಂಡಳು. ತಾತ ಕೇಳಿಸಿದರೂ ಕೇಳಿಸದಂತೆ ನಿದ್ದೆ ಹೋಗಿದ್ದ. ಹುಡುಗಿ ತಾತನನ್ನು ಎಚ್ಚರಿಸಿ ಮತ್ತೆ ಕೇಳಿದಳು.
“ಬೆಂಗಳೂರ್ ಬತ್ತೇನವ್ವಾ?” ತಾತ ಕೇಳಿದ.
“ಇಲ್ಲ ತಾತ ಫ್ರೆಂಡ್ ಬಂದ್ರು..”
“ಅದ್ಕೆ ನನ್ ನಿದ್ದೆ ಯಾಕವ್ವ ಹಾಳ್ ಮಾಡ್ದೆ?”
“ಸೀಟ್ ಬಿಡಿ ತಾತಾ..”
“ಸೀಟು.. ಯಾವ್ ಸೀಟು?”
“ನೀವು ಕೂತೀರೋ ಸೀಟು ಬಿಡಿ ತಾತ. ನಾನು ಬಸ್ ಹತ್ತಿದಾಗ್ಲೆ ಟಿಕೇಟ್ ತಕೊಂಡಿದೀನಿ..” ಹುಡುಗಿ ಮತ್ತೆ ಟಿಕೇಟ್ ತೋರಿಸಿದಳು. ತಾತ ಸೀಟಿನಿಂದ ಎದ್ದು, ತನ್ನ ಜೀಬಿಗೆ ಕೈಹಾಕಿ ಟಿಕೇಟ್ ತೆಗೆದು ತೋರಿಸುತ್ತಾ..
“ನನ್ನೇನ್ ಕಂಡಕ್ಟ್ರು ಪುಕ್ಸಟ್ಟೆ ಕರ್ಕೊಂಡ್ ಹೋಗ್ತಾವ್ನೆ ಅಂದ್ಕೊಂಡಾ? ನಾನು ಟಿಕೇಟ್ ತಕ್ಕೊಂಡೀವ್ನಿ ಕಣವ್ವಾ.. ನೋಡಿಲ್ಲಿ..”
ಹುಡುಗಿಗೆ ಮಾತೇ ಬರಲಿಲ್ಲ. ತಾತ ಅದೇ ಸೀಟಿನ ಮೇಲೆ ಕೂತು ಮತ್ತೆ ನಿದ್ದೆ ಹೋದ. ಹುಡಗ ನಿಂತೇ ಇದ್ದ. ಹುಡುಗ ನಿಂತಿದ್ದನ್ನು ನೋಡಿ, ಹುಡುಗಿ ತಾನು ಕೂತಿದ್ದ ಸೀಟು ಬಿಟ್ಟು ಎದ್ದು ನಿಂತಳು. ನಾನು ಹೋಗಿ ಆ ಖಾಲಿ ಸೀಟಿನಲ್ಲಿ ಕೂತೆ. ಹುಡುಗ ಹುಡುಗಿ ಇಬ್ಬರೂ ಏನೇನೋ ಮಾತಾಡಿಕೊಳ್ಳುತ್ತಿದ್ದರು. ಮುಂದಿನ ನಿಲ್ದಾಣದಲ್ಲಿ ಬಸ್ ನಿಂತ ತಕ್ಷಣ ಇಬ್ಬರೂ ಇಳಿದುಕೊಂಡು ಮತ್ತೊಂದು ಬಸ್ಸಿಗಾಗಿ ಕಾಯಲು ಮುಂದಾದರು.

ಬಸ್ ಸಾಗುತ್ತಿತ್ತು. ಹಳ್ಳ-ಹಂಪು ಎನ್ನದೆ ಡ್ರೈವರ್ ಬಸ್ಸನ್ನು ಏರೋಪ್ಲೇನಿನಂತೆ ಓಡಿಸುತ್ತಿದ್ದ. ಒಂದು ದೊಡ್ಡ ಹಳ್ಳಕ್ಕೆ ಚಕ್ರ ಸಿಕ್ಕಿ, ಬಸ್ಸು ಜಗ್ಗಿದಾಗ..
“ಥೂ.. ಬೋಳಿಮಗ ಅದೇನ್ ರೋಡು ಅಂತ ಮಾಡ್ಸಾವ್ನೋ.. ಈ ನನ್ಮಕ್ಳಿಗೆಲ್ಲ ಓಟು ಒತ್ತಿ ನಾವ್ ಹಾಳಾದೋ..” ನಿದ್ದೆಯಿಂದ ಎಚ್ಚರವಾದ ತಾತನ ಮಾತು ನನ್ನನ್ನೂ ಎಚ್ಚರಿಸಿತು.
“ಈ ಪಾಟಿ ಮಳೆ ಊಯ್ದ್ರೆ ಸರ್ಕಾರ ಏನ್ ಮಾಡೋಕ್ ಆಯ್ತದೆ ತಾತ?” ಅಂಕಲ್ ಕೂಡ ಎಚ್ಚರವಾದರೆಂದು ಇಡೀ ಬಸ್ಸಿಗೆ ತಿಳಿಯಿತು.
“ಈ ಕಳ್ ನನ್ಮಕ್ಳು ಕುರ್ಚಿ ಮೇಲೆ ಕೂತಾಗೆಲ್ಲ ಹಿಂಗೆಯಾ.. ಮಳೆ ಬಂದ್ರೆ ಊರನ್ನೇ ಕೊಚ್ಕೊಂಡ್ ಓಯ್ತದೆ. ಇಲ್ಲಾಂದ್ರೆ ಮಳೆ ಇಲ್ದೆ ಬರ ಬಂದು ಊರೇ ಸುಟ್ಟೋಯ್ತದೆ..” ತಾತನ ಮಾತು ನಿಜ ಎನ್ನುವಂತೆ ಎಲ್ಲರೂ ತಾತನ ಕಡೆಯೇ ನೋಡಿದರು. ನನಗೆ ಇದರಿಂದ ಸ್ವಲ್ಪ ನೆಮ್ಮದಿ ಬೇಕಿತ್ತು. ಹೆಡ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ನಿದ್ದೆ ಹೋದೆ. ಬೆಂಗಳೂರು ಬಂದಿದ್ದೇ ಗೂತ್ತಾಗಲಿಲ್ಲ. ನಾನು ಸೀಟು ಬಿಡುವ ಹೊತ್ತಿಗೆ ನನ್ನ ಪಕ್ಕ ಯಾರೂ ಇರಲಿಲ್ಲ. ಆಗ ಬೆಂಗಳೂರಿನಲ್ಲಿ ಸಣ್ಣದಾಗಿ ಮಳೆ ಶುರುವಾಗಿತ್ತು.

ಅನಂತ್ ಕುಣಿಗಲ್

Related post

Leave a Reply

Your email address will not be published. Required fields are marked *