ಕೆಮ್ಮೀಸೆ ಪಿಕಳಾರ ಮರಿಗಳು
ಸಂಜೆಯ ಐದರ ಸಮಯ, ನಮ್ಮ ಮನೆಯ ಮುಂದಿರುವ ಕ್ರಿಸ್ಮಸ್ ಟ್ರೀ ಒಂದರಿಂದ ಎರಡು ಕೆಮ್ಮೀಸೆಯ ಪಿಕಳಾರ (Red Whiskered Bul Bul) ಜೋಡಿ ಹಕ್ಕಿಗಳು ಒಂದೇ ಸಮನೆ ಅರಚಾಟ ನೆಡೆಸುತ್ತಿದ್ದವು. ಏನೆಂದು ಹತ್ತಿರ ಹೋಗಿ ನೋಡಿದರೆ ಅವುಗಳ ಎರಡು ಪುಟ್ಟ ಹಕ್ಕಿ ಮರಿಗಳು ಕೆಳಗೆ ಬಂದು ಕಡಿದ ಕೊಂಬೆಗಳ ಮೇಲೆ ಕುಳಿತುಬಿಟ್ಟಿದ್ದವು. ಬಹುಷಃ ಆ ಮರಿಗಳು ಸ್ವತಂತ್ರವಾಗಿ ಹಾರಲು ಕಲಿಯುತ್ತಿದ್ದವೋ ಏನೋ!
ಸುಮಾರು ಅರ್ಧ ಗಂಟೆ ಹಾಗೆ ಅವುಗಳನ್ನು ಗಮನಿಸುತಿದ್ದೆ. ತಾಯಿಯೋ ತಂದೆ ಹಕ್ಕಿಯೋ ಎಲ್ಲಿಂದಲೋ ಅವುಗಳಿಗೆ ಆಹಾರ ಸರಬರಾಜು ಮಾಡತೊಡಗಿ ಅವುಗಳ ಸುತ್ತಾ ಹಾರುತ್ತಾ ಕಾಯುತ್ತಿದ್ದವು. ಆ ಪುಟ್ಟ ಮರಿಗಳು ಹಾರಲು ಪ್ರಯತ್ನ ಪಡುತ್ತಾ ಮುಂದಿನ ಬೀದಿಯ ಸಮೀಪ ಇದ್ದ ಮುಖ್ಯರಸ್ತೆಯ ಹತ್ತಿರ ಬಂದುಬಿಟ್ಟವು. ಅವುಗಳ ತಂದೆ ತಾಯಿ ಆದಷ್ಟು ಅವುಗಳ ಸಮೀಪವೇ ಹಾರಾಡುತ್ತ ನಿಗವಹಿಸಿ ಅವುಗಳನ್ನು ಮರಳಿ ಮರದ ಮೇಲೆ ಹತ್ತಿಸಲು ಉತ್ತೇಜಸುತ್ತ ಬಹಳ ಪ್ರಯತ್ನ ಪಟ್ಟವು.
ಏಳರ ಕತ್ತಲೆ ಸಮಯ ಅವುಗಳ ಪ್ರಯತ್ನಕ್ಕೆ ಭಂಗ ತಂದು ವಿಫಲವಾಗಿ ಹೊರಟು ಹೋದವು. ಆ ಪುಟ್ಟ ಮರಿಗಳು ಮುಖ್ಯರಸ್ತೆ ಗೆ ಹೊಂದುಕೊಂಡಿದ್ದ ಒಂದು ಮನೆಯ ಹೊರಗಡೆಯ ಪೀವೀಸಿ ಪೈಪಿನ ದಂಡೆಗೆ ಒಂದಕ್ಕೊಂದು ಅಂಟಿ ಕೂತವು. ಅಲ್ಲಿಯವರೆಗೂ ಅವುಗಳನ್ನು ದೂರದಲ್ಲೇ ಗಮನಿಸುತ್ತ ಇದ್ದ ನನಗೆ ಗಾಬರಿಯಾಗಿ, ನಮ್ಮ ಪಕ್ಷಿ ತಜ್ಞ ಲೇಖಕ ಮಿತ್ರರಾದ ಕಲ್ಗುಂಡಿ ನವೀನ್ ಹಾಗೂ ವನ್ಯ ಜೀವಿಗಳ ಸಂರಕ್ಷಕ ಕಿರಣ್ ರವರ ಸಲಹೆ ಮೇರೆಗೆ PFA ವನ್ಯಜೀವಿ ಸಂರಕ್ಷಣ ಕೇಂದ್ರ ಕ್ಕೆ ಕರೆ ಮಾಡಿ ತಿಳಿಸಿದೆ. ಅವರ ಸಲಹೆ ಮೇರೆಗೆ ಅವುಗಳನ್ನು ಒಂದು ರಟ್ಟಿನ ಡಬ್ಬಿಯ ಒಳಗೆ ಸಾಗಿಸಿ ಅವರು ಬರುವವರೆಗೂ ಕಾದಿದ್ದು ಅವುಗಳನ್ನು ಹಸ್ತಾಂತರಿಸಿದ ಮೇಲೆಯೇ ನೆಮ್ಮದಿಯಾಗಿದ್ದು.
ಆದರೆ ಮರಿಗಳನ್ನು ತೆಗೆದುಕೊಂಡು ಹೋಗಲು ಬಂದ ವ್ಯಕ್ತಿ “ಸರ್ ಅವುಗಳು ಹಾರಲು ಕಲಿಯುತ್ತಿದ್ದವು ನೀವು ಮುಟ್ಟಬಾರದಿತ್ತು, ಡಬ್ಬದ ಒಳಗೆ ತಂದುಬಿಟ್ಟಿದ್ದೀರಾ, ಇವುಗಳನ್ನು ತೆಗೆದುಕೊಂಡು ಹೋಗಿ ಮೂರು ದಿನಗಳು ಆಹಾರ ಕೊಟ್ಟು ನಿಗಾ ವಹಿಸಿ ಮತ್ತೂ ಮೂರು ದಿನಗಳ ಪುನರ್ವಸತಿ ಗೆ ಏರ್ಪಡಿಸಿ ಆನಂತರ ಇಲ್ಲೇ ಸುತ್ತಾ ಮುತ್ತಾ ತಂದು ಹಾರಲು ಬಿಡುತ್ತೇವೆ” ಅಂದರು. ಆ ಮಾತುಗಳನ್ನು ಕೇಳಿ ನನ್ನ ಮಡದಿ ಹಾಗೂ ನನ್ನ ಮಗಳು ” ಸುಮ್ಮನಿರಲಾಗದೆ ಮರಿಗಳನ್ನು ಅವುಗಳ ತಂದೆ ತಾಯಿಯಿಂದ ಬೇರೆ ಮಾಡಿಬಿಟ್ಟಿರಿ ನೀವು ಎಂದು ಶುರುಮಾಡಿದರು, ಅದಕ್ಕೆ ಆ ವ್ಯಕ್ತಿ ಕೂಡ ಸರ್ ನೀವು ಮುಟ್ಟಿಬಿಟ್ಟಿರಿ ಆದರು ಸರಿ ಬಿಡಿ ಎಂದು ಹೇಳಿ ಗೋಡೆಯ ಮೇಲೆ ದೀಪವಿಟ್ಟ.
ಸರಿ, ನಾನು ಕೇಳಿದೆ 8 : 30 ರ ಸಮಯ, ಕತ್ತಲೆ, ಪೋಷಕರು ಇಲ್ಲದೆ ಅವುಗಳನ್ನು ಹಾಗೆ ಬಿಟ್ಟು ಅವುಗಳು ಬೀದಿ ನಾಯಿಗಳಿಗೋ ಅಥವಾ ಮತ್ಯಾವುದೋ ವಾಹನಕ್ಕೋ ಬಲಿಯಾಗಿದ್ದರೆ ಏನು ಮಾಡಬೇಕಿತ್ತು ಅಂಥ ಕೇಳಿದರೆ ಮೂವರಲ್ಲೂ ಉತ್ತರವಿಲ್ಲ. ನನ್ನ ಮಾಡದಿಯಂತೂ ಅವುಗಳ ತಂದೆ ತಾಯಿ ಹೇಗೋ ಬಂದು ಕರೆದುಕೊಂಡು ಹೋಗುತ್ತಿದ್ದವು ಎಂಬ ಊಹೆಯ ಮರು ಉತ್ತರ ಕೊಟ್ಟಳು.
ಆ ಮರಿಗಳನ್ನು ದೂರದಿಂದಲೇ ನಿಗಾವಹಿಸತೊಡಗಿದಾಗ ಸಮಯ ಐದು, ಎಂಟರವರೆಗೂ ಅವುಗಳು ಬಯಲಲ್ಲೇ ಸಮಯ ಕಳೆದವೇ ಹೊರತು ಯಾವುದೇ ಅಪಾಯವಿಲ್ಲದ ಪೊದೆಗಳಲ್ಲಿ ಅಲ್ಲಾ. ಮೊದಲೇ ಎಂಟರಿಂದ ಹತ್ತು ಬೀದಿ ನಾಯಿಗಳು ನಮ್ಮ ಸುತ್ತಲಿನ ಬೀದಿಗಳನ್ನು ಗಸ್ತು ತಿರುಗುತ್ತಿರುತ್ತವೆ ಹಾಗೂ ಒಂದೆರಡು ಬೆಕ್ಕುಗಳು ಇಂತವಕ್ಕೆ ಕಾಯ್ದು ಕುಳಿತಿರುತ್ತವೆ. ಅವುಗಳ ಮದ್ಯೆ ಹೇಗೆ ತಾನೇ ಇಡೀ ರಾತ್ರಿ ಆ ಪುಟ್ಟ ಪಿಕಳಾರ ಮರಿಗಳನ್ನು ಬಿಡಲಾಗುತ್ತದೆ. ಏನೋ ನನಗೆ ಸಿಕ್ಕ ಸಲಹೆ ಹಾಗೂ ತೊಚ್ಚಿದ್ದನ್ನು ಮಾಡಿದೆ ಅಷ್ಟೇ.
ತಲೆ ಎತ್ತದೆ ತಗ್ಗಿಸಿ ನೆಡೆದರೆ ಎಷ್ಟೋ ಪ್ರಾಣಿ ಪಕ್ಷಿಗಳು ತೊಂದರೆಯಲ್ಲಿರಬಹುದನ್ನು ಕಾಣಬಹುದು ಆಗ ಅವುಗಳ ಫೋಟೋ ಹಾಗೂ ಸಣ್ಣ ವಿಡಿಯೋ ಮಾಡಿ 91-9900025370 PFA Wildlife Hospital ಗೆ ಕರೆ ಮಾಡಿ ಮಿಕ್ಕಿದ್ದನ್ನು ಅವರೇ ನೋಡಿಕೊಳ್ಳುತ್ತಾರೆ.
ಕು ಶಿ ಚಂದ್ರಶೇಖರ್